Site icon Vistara News

ಮೆರವಣಿಗೆಗೆ ಅನುಮತಿ ನಿರಾಕರಣೆ ನಡುವೆಯೇ ಮಹಿಷ ದಸರಾ ಆಚರಣೆ: ಭಗವಾನ್‌ ಭಾಗಿ

mahishasura

ಮೈಸೂರು: ಮೆರವಣಿಗೆ ನಡೆಸಲು ಪೊಲೀಸರಿಂದ ಅನುಮತಿ ನಿರಾಕರಿಸಿದ ಬೆನ್ನಿಗೇ ಅಶೋಕಪುರಂನಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಪಾರ್ಕ್‌ನಲ್ಲಿ ಮಹಿಷ ದಸರಾ ಆಚರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಾಹಿತಿ ಕೆ.ಎಸ್‌. ಭಗವಾನ್‌, ಪ್ರೊ.ಮಹೇಶ್ ಚಂದ್ರಗುರು, ಪ್ರೊ. ನಂಜರಾಜೆ ಅರಸ್‌, ಮಾಜಿ ಮೇಯರ್‌ ಪುರುಷೋತ್ತಮ್‌ ಸೇರಿ ಅನೇಕರು ಭಾಗವಹಿಸಿದ್ದರು.

ಮಹಿಷ ದಸರಾ ಹೋರಾಟ ಸಮಿತಿ ವತಿಯಿಂದ ಮೆರವಣಿಗೆಗೆ ಅನುಮತಿ ಕೋರಲಾಗಿತ್ತು. ಆದರೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ, ಪಾರ್ಕ್‌ನಲ್ಲೆ ಆಚರಣೆ ಮಾಡಲು ಸಮಿತಿ ನಿರ್ಧಾರ ಮಾಡಿತ್ತು. ಪಾರ್ಕ್‌ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್‌ ಕಲ್ಪಿಸಿದ್ದರು.

ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮಹಿಷ ದಸರಾ ಶುಭಾಶಯ ಕೋರಿದ ಜ್ವಾನಪ್ರಕಾಶ್ ಸ್ವಾಮೀಜಿ, ಸೋಮವಾರ ದಸರಾ ಆಚರಣೆ ನಡೆಸಲಾಗುವುದು. ದಸರಾ ಉದ್ಘಾಟನೆಗೆ ಹೋಗಬೇಕಾದರೆ ಮುಖಮಂತ್ರಿಗಳು ಯಾವ ಮಾರ್ಗದಲ್ಲಿ ತೆರಳುತ್ತಾರೆ? ಮಹಿಷನ ದರ್ಶನ ಪಡೆದೇ ಹೋಗಬೇಕು. ಆದರೂ ಮಹಿಷ ದಸರಾ ಆಚರಣಗೆ ತಡೆವೊಡ್ಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾನುವಾರ ಸಂಜೆ ವೇಳೆಗೆ ಚಾಮುಂಡಿಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುತ್ತೇವೆ. ಬೆಟ್ಟಕ್ಕೆ ಅಸ್ಪೃಶ್ಯರು ಬರಬೇಡಿ ಎಂದು ಹೇಳಿಬಿಡಿ, ಮುಂದೆ ನಾವು ನೋಡಿಕೊಳ್ಳುತ್ತೇವೆ. ಪುತ್ಥಳಿ ಮುಚ್ಚಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಚಾಮುಂಡಿ ದರ್ಶನಕ್ಕೆ ನಾವು ಬರುತ್ತೇವೆ. ಒಂದು ವೇಳೆ ನಮ್ಮನ್ನ ಬಿಡದಿದ್ದರೆ ಅಸ್ಪೃಶ್ಯತೆ ಆಚರಣೆ ಮಾಡಿದಂತೆ ಆಗುತ್ತದೆ. ನಾವು ಈ ನೆಲದ ವಾರಸುದಾರರು ಎಂದರು.

ಪ್ರೊ. ನಂಜರಾಜೆ ಅರಸ್‌ ಮಾತನಾಡಿ, ಗಣೇಶನ ಮೆರವಣಿಗೆಯಲ್ಲಿ ಸಾವರ್ಕರ್‌, ಗೋಡ್ಸೆ ಫೋಟೊ ಇಡುತ್ತಾರೆ. ಆದರೆ ಮಹಿಷ ದಸರಾಕ್ಕೆ ಅನುಮತಿ ನೀಡುವುದಿಲ್ಲ. ಹಾಗಾದರೆ ಸಾವರ್ಕರ್‌, ಗೋಡ್ಸೆಗಿಂತಲೂ ಮಹಿಷಾಸುರ ಕೆಟ್ಟವನೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Mysore Dasara 2022 | ಮಹಿಷಾಸುರ ಪ್ರತಿಮೆ ಪೂಜೆಗೆ ಹೈಕೋರ್ಟ್ ನಕಾರ

Exit mobile version