ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೆ (Mysuru News) ಅಮಾನವೀಯ ಘಟನೆಯೊಂದು (Inhuman Behaviour) ನಡೆದಿದೆ. ಗ್ರಾಮದಲ್ಲಿ ಗ್ರಾಮಸ್ಥರ ಬಹಿಷ್ಕಾರಕ್ಕೆ ಒಳಗಾದ ಕುಟುಂಬವೊಂದು ಮಗನ ಅಂತ್ಯ ಸಂಸ್ಕಾರಕ್ಕೆ ಪರದಾಡಿದೆ. ಮಾನವೀಯತೆ ಮರೆತ ಗ್ರಾಮಸ್ಥರು ಶವದ ಎದುರು ಮೃಗಗಳಂತೆ ವರ್ತಿಸಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜಾಣಕುರುಡಿಗೆ ಸಾಕ್ಷಿಯಾಗಿದೆ.
ಊರಿನ ಹಬ್ಬಗಳಿಗೆ ಪ್ರತಿ ಮನೆಯಿಂದಲೂ ಹಣ ವಸೂಲಿ ಮಾಡುತ್ತಾರೆ. ಕುಳ್ಳನಾಯಕ ʻವರಿ ದುಡ್ಡುʼ ಕೊಡುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಕಳೆದ ನಾಲ್ಕು ವರ್ಷಗಳ ಹಿಂದೆ ಗ್ರಾಮದ ಕುಳ್ಳನಾಯಕ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದರು. ಇತ್ತ ಬಹಿಷ್ಕಾರ ತೆರವು ಮಾಡುವಂತೆ ಕುಳ್ಳನಾಯಕ ಅವರು ನಿರಂತರವಾಗಿ ಹೋರಾಟವನ್ನು ನಡೆಸಿದ್ದರು. ಪೊಲೀಸ್ ಠಾಣೆ, ಜಿಲ್ಲಾಧಿಕಾರಿ ಕಚೇರಿ ಅಲೆದಾಡಿದರೂ ಪರಿಹಾರ ಸಿಗಲಿಲ್ಲ.
ಇದನ್ನೂ ಓದಿ: Road Accident : ಟಿಪ್ಪರ್ ಲಾರಿ ಹರಿದು 4 ವರ್ಷದ ಮಗು ಛಿದ್ರ ಛಿದ್ರ; ತಾಯಿ ಕಣ್ಣೇದುರಿಗೆ ನಡೆಯಿತು ದುರಂತ
ಈ ಹೋರಾಟದ ನಡುವೆ ಕುಳ್ಳನಾಯಕರ 15 ವರ್ಷದ ಮಗ ಮಾದೇಶ್ ವಿಕಲಾಂಗಚೇತನನಾಗಿದ್ದು, ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದರೆ ಗ್ರಾಮದಲ್ಲಿ ಮಗನ ಅಂತ್ಯ ಸಂಸ್ಕಾರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾವಿನ ಮನೆಯಲ್ಲಿ ಗ್ರಾಮಸ್ಥರು ಮೃಗಗಳಿಗೂ ಕಡೆಯಾಗಿ ವರ್ತಿಸಿದ್ದಾರೆ. ಬಹಿಷ್ಕಾರಕ್ಕೆ ಒಳಗಾದ ಕುಟುಂಬವೆಂದು ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಿಲ್ಲ.
ಕುಳ್ಳನಾಯಕ ಅವರು ಟಿವಿಎಸ್ ಸ್ಕೂಟರ್‌ನಲ್ಲಿ ಮುಂದೆ ಪತ್ನಿಯನ್ನು ಕೂರಿಸಿಕೊಂಡು, ಹಿಂದೆ ಕ್ಯಾರಿಯರ್‌ನಲ್ಲಿ ಮಗನ ಶವದೊಂದಿಗೆ ಬಂದಿದ್ದರು. ನ್ಯಾಯಕ್ಕಾಗಿ ಕರಳು ಕಿವುಚುವಂತೆ ಹೋರಾಟ ಮಾಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಧ್ಯಪ್ರವೇಶಿಸಿದರು. ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್ ಮತ್ತು ಆರ್‌ಐ ಪ್ರಕಾಶ್ ಅವರು ಗ್ರಾಮಸ್ಥರ ಮನವೊಲಿಸಿ ಶವಸಂಸ್ಕಾರ ಅವಕಾಶ ಮಾಡಿಕೊಟ್ಟರು. ಡಿಸಿ ಕಚೇರಿ ಭದ್ರತಾ ಸಿಬ್ಬಂದಿ ಮನವೊಲಿಕೆ ನಂತರ ಮೈಸೂರಿನಿಂದ ತರಗನಹಳ್ಳಿಗೆ ಮಗನ ಮೃತದೇಹವನ್ನು ಕೊಂಡೊಯ್ದು ಅಂತ್ಯ ಸಂಸ್ಕಾರ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ