ಮೈಸೂರು: ಪತ್ನಿ ಶೀಲ ಶಂಕಿಸಿ ಕೊಲೆ (Murder Case) ಮಾಡಿದ (Mysuru News) ಆರೋಪಿಗೆ ಜೀವಾವಧಿ ಶಿಕ್ಷೆ (Life imprisonment) ವಿಧಿಸಿ ಮೈಸೂರಿನ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ರವಿ ಜೀವಾವಧಿ ಶಿಕ್ಷೆಗೆ ಒಳಗಾದವನು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇಬೂರು ಗ್ರಾಮದ ನಿವಾಸಿಯಾದ ರವಿ ಎಂಬಾತ ಪತ್ನಿ ಅಮುದಾಳ ಶೀಲ ಶಂಕಿಸಿ ಕೊಲೆ ಮಾಡಿದ್ದ.
ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ರವಿಗೆ ಐಪಿಸಿ ಸೆಕ್ಷನ್ 498(ಎ ) ಪ್ರಕಾರ 2 ವರ್ಷ ಕಠಿಣ ಶಿಕ್ಷೆ ಒಂದು ಸಾವಿರ ದಂಡ ಹಾಗೂ ಐಪಿಸಿ ಸೆಕ್ಷನ್ 302 ಪ್ರಕಾರ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ದಂಡ ಹಾಕಿ ಆದೇಶಿಸಿದೆ. ಮೈಸೂರು 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್ ತೀರ್ಪು ನೀಡಿದ್ದಾರೆ.
ಮಕ್ಕಳಿಬ್ಬರು ಅನಾಥ
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೇಬೂರು ಗ್ರಾಮದ ಸುಬ್ಬ ಅಲಿಯಾಸ್ ರವಿ 10 ವರ್ಷದ ಹಿಂದೆ ನಂಜನಗೂಡು ಪಟ್ಟಣದ ರಾಜಾಜಿ ಕಾಲೋನಿಯ ನಂಜುಂಡ ಅವರ ಮಗಳು ಅಮುದಾರವರನ್ನು ಮದುವೆ ಆಗಿದ್ದ. ಈ ದಂಪತಿಗೆ 9 ಹಾಗೂ 6 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದರು.
ಮದುವೆಯಾದ 2-3 ವರ್ಷಕ್ಕೆ ಆರೋಪಿ ರವಿ ತನ್ನ ವಾರೆಸೆ ಶುರು ಮಾಡಿದ್ದ. ಅಮುದಾಳಿಗೆ ನೀನು ಬೇರೆಯವರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಶೀಲ ಶಂಕಿಸಿ ಪ್ರತಿದಿನ ಕುಡಿದು ಬಂದು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ.
ಹೀಗೆ ಕಳೆದ 2020ರ ಡಿಸೆಂಬರ್ 6ರಂದು ಸಂಜೆ 4-30ರ ಸುಮಾರಿಗೆ ಕುಡಿದು ಬಂದ ರವಿ, ಅಮುದಾಳೊಂದಿಗೆ ಜಗಳ ತೆಗೆದಿದ್ದ. ಈ ವೇಳೆ ರವಿಗೆ ಊಟ ಬಡಿಸುತ್ತಿದ್ದಾಗ ಅಮುದಾ ಮೇಲೆ ಸ್ಯಾನಿಟೈಜರ್ ಸುರಿದು ಬೆಂಕಿ ಹಚ್ಚಿದ್ದ. ಸುಟ್ಟ ಗಾಯಗಳಿಂದ ನರಳುತ್ತಿದ್ದ ಆಮುದಾಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಮುದಾ ಮೃತಪಟ್ಟಿದ್ದಳು.
ಇದನ್ನೂ ಓದಿ: Hassan Shoot Out : ಹಾಸನದಲ್ಲಿ ಹಾಡಹಗಲೇ ಗುಂಡಿನ ದಾಳಿ; ಇಬ್ಬರ ಹತ್ಯೆಗೈದ ಪಾತಕಿಗಳು!
ಮೃತಳ ಸಹೋದರ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿ ರವಿ ವಿರುದ್ಧ ಕಲಂ 498(ಎ), 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ಮಾಡಿ ಅಂದಿನ ಪೊಲೀಸ್ ವೃತ್ತ ನಿರೀಕ್ಷಕರಾದ ಲಕ್ಷ್ಮೀಕಾಂತ ತಳವಾರ್‌ರವರು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಯು ಅಪರಾಧ ಎಸಗಿರುವುದು ಸಾಬೀತಾಗಿದೆ. ಹೀಗಾಗಿ ಆರೋಪಿಗೆ ಕಲಂ 498(ಎ) ಐಪಿಸಿ ಅಡಿಯ ಅಪರಾಧಕ್ಕೆ 2 ವರ್ಷ ಕಠಿಣ ಶಿಕ್ಷೆ ಮತ್ತು ರೂ.1.000/- ದಂಡವನ್ನು ವಿಧಿಸಿದ್ದು ಮತ್ತು ಕಲಂ 302 ಐಪಿಸಿ ಅಡಿಯ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು ರೂ.5,000/- ದಂಡವನ್ನು ವಿಧಿಸಿ ತೀರ್ಪು ನೀಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ