ಮೈಸೂರು: ಮೈಸೂರು ತಾಲೂಕಿನ ಕೆಆರ್‌ಎಸ್ ಹಿನ್ನೀರು ಪ್ರದೇಶದಲ್ಲಿರುವ ಮೀನಾಕ್ಷಿಪುರದ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ (Mysuru Rave Party) ಪೊಲೀಸರು ದಾಳಿ ನಡೆಸಿದ್ದಾರೆ. ಇಲವಾಲ ಪಿಎಸ್ಐ ಮಂಜುನಾಥ ನಾಯಕ್ ಅವರ ನೇತೃತ್ವದಲ್ಲಿ ನಡೆದ ಪೊಲೀಸರ ದಾಳಿಯಲ್ಲಿ ಐವತ್ತಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಯುವತಿಯರು ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಮಾದಕ ವಸ್ತುಗಳನ್ನು ಸೇವಿಸಿ ನಶೆಯಲ್ಲಿ ತೇಲಾಡುತ್ತಿದ್ದರು ಎನ್ನಲಾಗಿದೆ. ಜಮೀನಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ 15ಕ್ಕೂ ಹೆಚ್ಚು ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ.
ರೇವ್ ಪಾರ್ಟಿ ನಡೆದಿರುವುದು ನಿಜವೆಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸ್ಪಷ್ಟನೆ ನೀಡಿದ್ದಾರೆ. ರೇವ್ ಪಾರ್ಟಿ ನಡೆಯುತ್ತಿದ್ದಾಗ ದಾಳಿ ಮಾಡಿ, ಸುಮಾರು 50 ಜನರನ್ನು ಅರೆಸ್ಟ್ ಮಾಡಿದ್ದೇವೆ. ಪಾರ್ಟಿ ಜಾಗದಲ್ಲಿ ಹಾಗೂ ವಶಕ್ಕೆ ಪಡೆದವರ ಬಳಿ ಮಾದಕ ವಸ್ತುಗಳು ಕಂಡುಬಂದಿಲ್ಲ. ಈಗಲೂ ಶೋಧ ಕಾರ್ಯ ಮುಂದುವರಿಸಿದ್ದೇವೆ. ಬಂಧಿತರ ರಕ್ತ ಪರೀಕ್ಷೆ ಮಾಡಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದೇವೆ. ವಿದೇಶಿಯರು ಪಾಲ್ಗೊಂಡ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ. ಯಾರು ಪಾರ್ಟಿ ಆಯೋಜಿಸಿದ್ದರು, ಹೇಗೆ ಆಯೋಜಿಸಿದ್ದರು, ಮಾದಕ ವಸ್ತು ಬಳಸಿದ್ದರೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಮೈಸೂರು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಎಫ್‌ಐಆರ್ ದಾಖಲು
ಮೈಸೂರಲ್ಲಿ ರೇವ್ ಪಾರ್ಟಿ ನಡೆಸಿದ್ದವರ ಮೇಲೆ ಇಲವಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಠಾಣಾ ಮೊಕದ್ದಮೆ ಸಂಖ್ಯೆ 210/2024 ಅಡಿ ಕಲಂ 221,223,12(2) ಹಾಗೂ ಬಿಎನ್ ಎನ್ ಎಸ್ ಕಾಯ್ದೆ ಅಡಿ 15(a) 32,34,38(a)K.E. Act. ರೀತಿ ಪ್ರಕರಣ ದಾಖಲಾಗಿದೆ.
ಚೋಳೇನಹಳ್ಳಿ ಗ್ರಾಮದ ಶಂಕರ್ ಎಂಬುವರ ಜಮೀನಿನಲ್ಲಿ ಅರುಣ್, ವಿಷ್ಣು, ಭವಿಷ್ಯತ್, ಮದನ್, ಮಲ್ಲಿಕಾರ್ಜುನ, ಸಂತೋಷ್, ಸಾಗರ್, ಕರಣ್ ಎಂಬುವರಿಂದ ಪರವಾನಗಿ ಇಲ್ಲದೆ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ದಾಳಿ ವೇಳೆ ಪೊಲೀಸ್ ಉಪನಿರೀಕ್ಷಕ ಮಂಜುನಾಥ್ ನಾಯಕ್ ಮೇಲೆ ಹಲ್ಲೆ ನಡೆಸಲಾಗಿದೆ. ಮದ್ಯಪಾನ ಸೇವಿಸಿ ಅನೈತಿಕ ನೃತ್ಯಕೂಟ ಆಯೋಜನೆ ಮಾಡಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಕಾನೂನು ಕ್ರಮ ಜರುಗಿಸುವಂತೆ ಎಫ್‌ಐಆರ್ ದಾಖಲಿಸಲಾಗಿದೆ.