Site icon Vistara News

ಮುಸಲ್ಮಾನರಿಗೆ ಅಬ್ದುಲ್‌ ಕಲಾಂ ಬೇಕಿಲ್ಲ; ಟಿಪ್ಪುವೇ ಅವರಿಗೆ ಹೀರೊ: ಡಾ. ಎಸ್‌. ಎಲ್‌. ಭೈರಪ್ಪ ಆಕ್ರೋಶ

tippu nija kanasugalu

ಮೈಸೂರು: ಭಾರತದಲ್ಲಿ ಮುಸ್ಲಿಂ ಸಮುದಾಯದ ಮಾನಸಿಕತೆಯು ಬದಲಾಗಿಲ್ಲ. ಅವರಿಗೆ ಅಬ್ದುಲ್‌ ಕಲಾಂ ಅವರಿಗಿಂತಲೂ ಟಿಪ್ಪುವನ್ನೇ ಹೀರೋ ಆಗಿಸುವುದು ಬೇಕಿದೆ ಎಂದು ಸರಸ್ವತಿ ಸಮ್ಮಾನ್‌ ಪುರಸ್ಕೃತ ಡಾ. ಎಸ್‌. ಎಲ್‌ ಭೈರಪ್ಪ ಆಕ್ರೋಶ ಹೊರಹಾಕಿದ್ದಾರೆ.

ರಂಗಾಯಣದ ಭೂಮಿಗೀತ ಸಭಾಂಗಣದಲ್ಲಿ ಆಯೋಜಿಸಿದ್ದ, ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚಿಸಿರುವ ʼಟಿಪ್ಪುವಿನ ನಿಜ ಕನಸುಗಳುʼ ಕೃತಿ ಲೋಕಾರ್ಪಣೆ ಕಾರ್ಯಕಮಕ್ಕೆ ಕಿಕ್ಕಿರಿದು ತುಂಬಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು.

ಟಿಪ್ಪು ಬಗ್ಗೆ ಚರ್ಚೆ ಶುರುವಾಗಿದ್ದು ಮಾಜಿ ಶಿಕ್ಷಣ ಸಚಿವ ಡಿ.ಎಚ್.ಶಂಕರಮೂರ್ತಿ ಅವರ ಹೇಳಿಕೆಯ ನಂತರ. ಟಿಪ್ಪು ಕನ್ನಡ ವಿರೋಧಿ ಆಗಿದ್ದ ಅಂತ ಡಿ.ಎಚ್. ಶಂಕರಮೂರ್ತಿ ಹೇಳಿದ್ದರು. ಒಡೆಯರ್ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು. ಆದರೆ ಟಿಪ್ಪು ಸುಲ್ತಾನ್ ಆಡಳಿತ ಭಾಷೆ ಪರ್ಷಿಯನ್ ಆಗಿತ್ತು. ಕಂದಾಯ ಇಲಾಖೆಗೆ ಸಂಬಂಧಪಟ್ಟ ಪದಗಳನ್ನು ಖಾತೆ, ಕಿರ್ದಿ, ತರಿ, ಖುಷ್ಕಿ, ತಹಸೀಲ್ದಾರ್, ಶಿರಸ್ತೇದಾರ್ ಅಂತ ಬದಲಿಸಿದ. ಬ್ರಹ್ಮಪುರಿ- ಸುಲ್ತಾನ್ ಪೇಟ್, ಕಾಳಿಕೋಟೆ(ಕಲ್ಲಿಕೋಟೆ)- ಫೂರಕಬಾದ್, ದೇವನಹಳ್ಳಿ- ಯೂಸುಫಾಖಾನ್, ಮೈಸೂರು- ನಜರ್‌ಬಾದ್,
ಸಂಕ್ರೀದುರ್ಗ- ಮುಜರಾಬಾದ್, ಸಕಲೇಶಪುರ- ಮಂಜರಾಬಾದ್ ಆಗಿ ಬದಲಾಗಿದೆ. ಇದೆಲ್ಲವೂ ಟಿಪ್ಪುವಿನ ಅನ್ಯಮತ ಸಹಿಷ್ಣುತೆಯನ್ನು ತೋರಿಸುತ್ತವೆ ಎಂದರು.

ಶ್ರೀರಂಗನ ಕಾರಣಕ್ಕೆ, ಅಲ್ಲಿನ ಸಂಸ್ಕೃತಿಗೆ ಶ್ರೀರಂಗಪಟ್ಟಣ ಅಂತ ಹೆಸರು ಬಂದಿದೆ. ಹೊಸ ಹೆಸರು ಇಟ್ಟರೆ ಹೊಸ ನಂಬಿಕೆ, ಧರ್ಮ ಸ್ಥಾಪನೆ ಮಾಡಿದಂತೆ. ಗಿರೀಶ್ ಕಾರ್ನಾಡ್ ವಿರುದ್ಧ ನಾನು ಲೇಖನ ಬರೆದಿದ್ದೆ. ಅವರು ನನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದರು.‌ ಲೇಖಕರು ಎಡಪಂಥೀಯರಾಗಿದ್ದರೆ ಅದು, ಇದು ಬರೆಯುತ್ತಲೇ ಇರುತ್ತಾರೆ. ಅವರು ಸಾತ್ವಿಕರಾಗಿದ್ದರೆ ಅವರು ಏನನ್ನೂ ಬರೆಯಲ್ಲ, ಸುಮ್ಮನೆ ಇರುತ್ತಾರೆ. ಇದು ಕನ್ನಡಕ್ಕೆ ಮಾತ್ರವಲ್ಲ, ಭಾರತಕ್ಕೆ ಎದುರಾಗಿರುವ ಸಮಸ್ಯೆ.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಬರೆದ ಮೇಲೆ ಸಂಸತ್ತಿನಲ್ಲಿ ಭಾಷಣ ಮಾಡಿದರು. ನಾವು ಬರೆದ ಸಂವಿಧಾನವನ್ನು ಯಾರು, ಹೇಗೆ ಜಾರಿಗೆ ತರುತ್ತಾರೆ ಎಂಬುದರ ಮೇಲೆ ನಿಂತಿದೆ ಅಂತ ಹೇಳಿದ್ದರು. ಹಿಂದೂಗಳು ರಾಷ್ಟ್ರ ಎಂದರೆ ಮಾತೃಭೂಮಿ ಅಂತಾರೆ. ಮುಸಲ್ಮಾನರ ರಾಷ್ಟ್ರದ ಪರಿಕಲ್ಪನೆ ಎಂಥದ್ದು ಎಂದು ಡಾ.ಅಂಬೇಡ್ಕರ್ ಭಾಷಣ ಮಾಡಿದ್ದರು. ಪಾಕಿಸ್ತಾನ ಕೊಟ್ಟುಬಿಡುವುದು ಸರಿ ಎಂದು ಹೇಳಿದ್ದಾರೆ. ಮಹಾತ್ಮ ಗಾಂಧಿ ನಾಯಕತ್ವದಲ್ಲಿ ದೇವರು ಒಬ್ಬನೆ ಎಂಬ ಆದರ್ಶದ ಕಲ್ಪನೆಯಲ್ಲಿ ನಾವು ವಿಭಜನೆ ಮಾಡಿಕೊಂಡೆವು. ನಮ್ಮಲ್ಲಿ ಇರುವ ಮುಸಲ್ಮಾನರ ಮನಸ್ಥಿತಿ ಬದಲಾಗಿಲ್ಲ. ಬಾಬ್ರಿ ಮಸೀದಿ, ಬನಾರಸ್ ವಿಚಾರದಲ್ಲಿ ಯಾಕೆ ವಿರೋಧ ಮಾಡುತ್ತಾರೆ ? ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್‌ ಅಂತ ಯಾಕೆ ಹೆಸರು ಇಟ್ಟರು? ಈಗ ತೆಗೆದಾಗ ಯಾಕೆ ವಿರೋಧ ಮಾಡುತ್ತಿದ್ದಾರೆ ? ಅಬ್ದುಲ್ ಕಲಾಂ ಹೆಸರು ಇಟ್ಟಿದ್ದರೆ ನಾವು ವಿರೋಧ ಮಾಡುತ್ತಿರಲಿಲ್ಲ. ಕಲಾಂ ಹೆಸರು ಇಡಲು ಅವರಿಗೆ ಇಷ್ಟ ಆಗುತ್ತಿರಲಿಲ್ಲ. ಟಿಪ್ಪು ನಮ್ಮ ಹೀರೋ ಎನ್ನುತ್ತಾರೆ. ಈ ಮಾನಸಿಕತೆ ಬದಲಾಗಿಲ್ಲ ಎಂಬುದಕ್ಕೆ ಇದು ಉದಾಹರಣೆ ಅಷ್ಟೆ ಎಂದರು.

ಕೆಂಪೇಗೌಡರ 108 ಅಡಿಯ ಪ್ರತಿಮೆ ಮಾಡಲಾಗಿದೆ. ಕೆಂಪೇಗೌಡರು ಸಣ್ಣ ರಾಜ್ಯವಾದರೂ ದೊಡ್ಡ ನಗರ ಆಗುತ್ತೆ ಅಂತ ಬೆಂಗಳೂರು ಬೆಳೆಸಿದರು. ಅವರದ್ದು ಮಾಡಿದ್ದಾರಲ್ಲ ‘ಹಮಾರ’ ಅಂತ ಅಷ್ಟೆ. ಟಿಪ್ಪು ಸುಲ್ತಾನ್ ೧೦೦ ಅಡಿ ಪ್ರತಿಮೆ ಮಾಡುತ್ತೇವೆ ಅಂತಾರೆ. ಇವರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಟಿಪ್ಪು ಸುಲ್ತಾನ್ ಆನೆ ಕಾಲಿಗೆ ಜನರನ್ನು ಎಳೆದುಕೊಂಡು ಬಂದ ಅಂತ ನೆನಪಿಸಿಕೊಂಡರೆ ಭಯ ಆಗುತ್ತೆ. ನಂದಿ ಬೆಟ್ಟದಲ್ಲಿ ಟಿಪ್ಪು ಡ್ರಾಪ್ ಅಂತ ಜಾಗ ಇದೆ. ಕೈ ಕಾಲು, ಗೋಣಿ ಚೀಲಕ್ಕೆ ಕಟ್ಟಿ ಬೆಟ್ಟದಿಂದ ಎಸೆಯುತ್ತಿದ್ದರು. ಟಿಪ್ಪು ಎಷ್ಟು ಕ್ರೂರಿ ಎಂದು ನೀವು ಅರ್ಥ ಮಾಡಿಕೊಳ್ಳಿ.
ಈ ನಾಟಕ ನೋಡೋದಲ್ಲ, ಬೇರೆಯವರಿಗೆ ಹೇಳಬೇಕು. ಸರ್ಕಾರ ಏನು ಮಾಡುತ್ತೋ ಅದೇ ಪತ್ರಿಕೆಯಲ್ಲಿ ಬರುತ್ತದೆ. ಕೀಟ್ಲೆ ಮಾಡಲು ಜಯಂತಿ ಅಂತ ಹೆಸರು ಇಟ್ಟಿದ್ದಾರೆ. ನಾವು ಶ್ರೀ ಕೃಷ್ಣ ಜಯಂತಿ ಮಾಡುತ್ತೇವೆ. ಟಿಪ್ಪು ಜಯಂತಿ ಯಾಕೆ ಮಾಡಬೇಕು? ಪ್ರಜಾಪ್ರಭುತ್ವ ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎಂದರೆ ವೋಟಿಗಾಗಿ ಹೆತ್ತ ತಾಯಿಯನ್ನು ಜುಟ್ಟು ಹಿಡಿದುಕೊಂಡು ಒಪ್ಪಿಸಿ ಬಿಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ | ನನ್ನ ದೇಶ ನನ್ನ ದನಿ | ಕನ್ನಡ ಸಂಸ್ಕೃತಿಯನ್ನು ಉಳಿಸಿದ- ಬೆಳೆಸಿದ ಮೈಸೂರು ಒಡೆಯರ್ ರಾಜವಂಶ

ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಾನು ಅದ್ಬುತ ಭಾಷಣಕಾರ ಅಲ್ಲ. ಆದರೆ ಕೆಲಸಕ್ಕೆ ಬನ್ನಿ ಯಾರಿಗೆ ಬೇಕಾದರೂ ಚಾಲೆಂಜ್ ಮಾಡುತ್ತೇನೆ.‌ ಸೋರ್ಡ್ ಆಫ್‌ ಟಿಪ್ಪು ಸುಲ್ತಾನ್ ಧಾರಾವಾಹಿ ಮಾಡುವಾಗ ಪ್ರೀಮಿಯರ್ ಸ್ಟೂಡಿಯೋದಲ್ಲಿ 89‌ ಜನ ಸತ್ತು ಹೋದರು. ಇದು ಕಾಲ್ಪನಿಕ ಅಂತ ತೋರಿಸುವಂತೆ ಸುಪ್ರೀಂಕೋರ್ಟ್ ಆದೇಶ ಮಾಡಿತ್ತು. ಬುದ್ದಿಜೀವಿಗಳು ವಿಚಾರ ನಪುಂಸಕರು. ಕೇವಲ ಮಾಧ್ಯಮಗಳ ಮುಂದೆ ಮಾತನಾಡುತ್ತಾರೆ, ಚರ್ಚೆಗೆ ಬರುವುದಿಲ್ಲ ಎಂದರು.

ಗಿರೀಶ್ ಕಾರ್ನಾಡ್ ತಮ್ಮ ಟಿಪ್ಪು ಕನಸುಗಳು ನಾಟಕ ಕಾಲ್ಪನಿಕ ಎಂದು ಒಪ್ಪಿಕೊಂಡರು. ಈ ಕಾರ್ಯಕ್ರಮವನ್ನು ವಿರೋಧಿಸುವುದು ತನ್ವೀರ್ ಸೇಠ್‌ಗೆ ಅನಿವಾರ್ಯ. ಆದರೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್‌ಗೆ ಯಾಕೆ ಬೇಕು ಗೊತ್ತಿಲ್ಲ. ಟಿಪ್ಪು ಯಾವುದೇ ಯುದ್ಧ ಮಾಡಿದ ಇತಿಹಾಸ ಇಲ್ಲ, ಆದರೂ ಸುಲ್ತಾನ್ ಆದ. ಬರಿಗೈಯಲ್ಲಿ ಹುಲಿ ಜತೆ ಯುದ್ಧ ಮಾಡಲು ಯಾರಿಂದಲೂ ಸಾಧ್ಯವಿಲ್ಲ. 5.2 ಅಡಿ ಇರುವ ಟಿಪ್ಪು ಯಾವಾಗ ಹುಲಿ ಕೊಂದ? ಎಂದು ಪ್ರಶ್ನಿಸಿದರು.

ಮುಸಲ್ಮಾನರಲ್ಲಿ ಕ್ರೌರ್ಯ ಕಂಡಿದೆ ಹೊರತು, ಶೌರ್ಯ ಕಂಡಿಲ್ಲ. ಹೈದರಾಲಿ ಅಥವಾ ಟಿಪ್ಪು ನೇರವಾಗಿ ಖಡ್ಗ ಹಿಡಿದು ಯುದ್ಧ ಮಾಡಿಲ್ಲ. ಅವನು ಯಾವುದೇ ಯುದ್ಧವನ್ನೂ ಗೆದ್ದಿಲ್ಲ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಸ್ವತಂತ್ರ ಹೋರಾಟಗಾರ ಅಲ್ಲ. ನವಾಬರು, ಮರಾಠರು, ಕೊಡವರು, ಕರಾವಳಿ ಕ್ರಿಶ್ಚಿಯನ್ನರು ಸೇರಿ ಬ್ರಿಟಿಷರನ್ನು ಮುಂದೆ ಬಿಟ್ಟು ಹೋರಾಟ ಮಾಡಿದ್ದರು. 4 ನೇ ಆಂಗ್ಲೋ – ಮೈಸೂರು ಯುದ್ಧದಲ್ಲಿ ರಣರಂಗಕ್ಕೆ ಬಾರದೆ ಕೋಟೆಯಲ್ಲೇ ಸತ್ತು ಬಿದ್ದಿದ್ದ. ನೆಪೋಲಿಯನ್, ಅಫ್ಘಾನಿಸ್ತಾನ ರಾಜನಿಗೆ ಬರೆದ ಪತ್ರದಲ್ಲಿ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಇಂಗಿತವನ್ನು ಟಿಪ್ಪು ವ್ಯಕ್ತಪಡಿಸಿದ್ದ. ಹೈದರ್ ಹಾಗೂ ಟಿಪ್ಪು ಕಾಲದಲ್ಲಿ ದಸರಾ ನಿಂತಿತ್ತು. ದಿವಾನ್ ಎನ್ನುವ ಪದವೇ ಪರ್ಷಿಯನ್ ಪದ, ಇದು ಟಿಪ್ಪು ಕೊಡುಗೆ. ಎಂ.ಎಂ. ಕಲಬುರ್ಗಿ ಅವರು ಕನ್ನಡಿಗರ ಅಕನ್ನಡ ಪ್ರಜ್ಞೆ ಪುಸ್ತಕ ಬರೆದಿದ್ದಾರೆ. ಆದರೆ ನಿಜವಾಗಿಯೂ ಅಕನ್ನಡ ಪ್ರಜ್ಞೆ ಇಟ್ಟುಕೊಂಡಿದ್ದವನು ಟಿಪ್ಪು ಸುಲ್ತಾನ್. ಕೊಡಗಿನಲ್ಲಿ ನಾಯಿಗಳಿಗೆ ಟಿಪ್ಪುವಿನ ಹೆಸರು ಇಡುತ್ತಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲಾಗಿದೆ. ಕೇಂದ್ರದ ಒಪ್ಪಿಗೆ ಮಾತ್ರ ಬಾಕಿ‌ ಇದೆ. ರೈಲ್ವೆ ನಿಲ್ದಾಣಕ್ಕೂ ಹತ್ತನೇ ಚಾಮರಾಜ ಒಡೆಯರ್ ಹೆಸರಿಡಲಾಗುವುದು ಎಂದರು.

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಮಾತನಾಡಿ, ಈ ಕಾರ್ಯಕ್ರಮ ನಡೆಯದಂತೆ ತಡೆಯಲು ಹಲವು ಮಾರ್ಗಗಳಿಂದ ಯತ್ನ‌ ನಡೆದಿತ್ತು. ನನಗೆ ಪುಸ್ತಕ ಓದಿ ರೋಮಾಂಚನ ಆಯಿತು. 80 ಪುಟಗಳು ಒಂದೇ ಬಾರಿಗೆ ಓದಿಸಿಕೊಂಡಿದೆ. ಸಶಕ್ತ ಕೃತಿಯಾಗಿದೆ ಈ ಪುಸ್ತಕ.

ಗಿರೀಶ್ ಕಾರ್ನಾಡ್ ರಚನೆಯ ಟಿಪ್ಪು ಕನಸುಗಳು ಓದಿದ ಮೇಲೆ ಅವರ ಮೇಲಿನ ಅಭಿಪ್ರಾಯ ಬದಲಾಯಿತು. ನಾಟಕ‌ ನಿಲ್ಲಿಸಬೇಕು ಎನ್ನುವವರು ಯಾರೂ ಪುಸ್ತಕ ಓದಿಲ್ಲ. ಟಿಪ್ಪು ಬಗ್ಗೆ ನಿಜವಾದ ವಿಮರ್ಶಕರಾಗಿದ್ದರೆ ಓದಿ ಮಾತನಾಡಲಿ. ಈ ಕೃತಿಯಲ್ಲಿ ನಿಜವಾದ ಇತಿಹಾಸ ಕೊಟ್ಟಿದ್ದಾರೆ. ಪುಸ್ತಕದಲ್ಲಿ ರಕ್ತ ಮಾಂಸ ತಂದಿದ್ದಾರೆ. ನಾಟಕಕ್ಕೆ ಬೇಕಾದ ಎಲ್ಲಾ ಅಂಶ ಅಡ್ಡಂಡ ಕಾರ್ಯಾಪ್ಪ ಸೇರಿಸಿದ್ದಾರೆ. ಟಿಪ್ಪು ಮೃತದೇಹದ ಹುಡುಕುವ ದೃಶ್ಯದಿಂದ ನಾಟಕ ಆರಂಭ ಆಗುತ್ತದೆ. ಇಬ್ಬರು ಲೇಖಕರ ಸಂಭಾಷಣೆ ಇಟ್ಟು ವಿಮರ್ಶೆಗೆ ಇಟ್ಟಿದ್ದಾರೆ. ಒಟ್ಟಾರೆ ಪ್ರತಿ ವಿಚಾರಕ್ಕೂ ಹಿನ್ನೆಲೆ ಕೊಟ್ಟು ಟಿಪ್ಪುವಿನ ಮನಸ್ಸಿನಲ್ಲಿ ಏನಿತ್ತು ಎಂಬುದನ್ನು ಕಟ್ಟಿಕೊಟ್ಟಿದ್ದಾರೆ.

ಕೊಡಗು, ಮೇಲುಕೋಟೆ ದುರಂತವನ್ನು ಕಣ್ಣಿಗೆ ಕಟ್ಟುವ ಹಾಗೆ ರಚಿಸಿದ್ದಾರೆ. ಟಿಪ್ಪು ಪತ್ನಿ ರುಕ್ಕಿಯಾ ಬಾನು ಟಿಪ್ಪುವಿನ ವಿಚಾರಗಳನ್ನು ವಿರೋಧಿಸುವುದು, ಭಾವನೆ, ಮೌಲ್ಯಗಳ ಸಂಘರ್ಷ ಈ ನಾಟಕದಲ್ಲಿ ಇದೆ. ಈ ನಾಟಕ ತೆರೆಯ ಮೇಲೆ ಬಂದರೆ ದೊಡ್ಡ ರಂಗಾಯಣವನ್ನೇ ಕಟ್ಟಬಹುದು. ಈ ನಾಟಕ ನಮ್ಮ ಒಳಗಿನ ಭಾವನೆಯನ್ನು ಎತ್ತಿ ನಿಲ್ಲಿಸುತ್ತದೆ. ತಮ್ಮ ಹೃದಯನ್ನೂ ಇಲ್ಲಿ ಇಟ್ಟು ಅಡ್ಡಂಡ ಕಾರ್ಯಪ್ಪ ಈ ಪುಸ್ತಕ ಬರೆದಿದ್ದಾರೆ. ಈ ಕೃತಿ ಚರಿತ್ರೆಯ ಒಂದು ಭಾಗವಾಗಿ ನಿಲ್ಲುತ್ತದೆ ಎಂದರು.

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ದಾಖಲೆ‌ ಇಲ್ಲದ ಟಿಪ್ಪು ಪಠ್ಯ ಕೈ ಬಿಟ್ಟಾಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ‌ ಸರಿಯಿದೆ ಎಂದ ಏಕೈಕ ಸಾಹಿತಿ ಎಸ್‌ಎಲ್.ಭೈರಪ್ಪ. ಒಬ್ಬ ರಾಜಕಾರಣಿಯಾಗಿ ನಮ್ಮ ಪರ ನಿಂತವರು ಸಂಸದ ಪ್ರತಾಪ್ ಸಿಂಹ ಎಂದು ರೋಹಿತ್ ಚಕ್ರತೀರ್ಥ ಭಾಷಣ ಮಾಡಿದರು.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣ ನಿವೃತ್ತ ಕಲಾವಿದರ ವಿರುದ್ಧ ಕೆಂಡಾಮಂಡಲವಾದರು. ಸಭಿಕರ ಮುಂದೆ ವಾಟ್ಸಪ್ ಸಂದೇಶ ಓದಿದ ಕಾರ್ಯಪ್ಪ, ʼಅಡ್ಡಂಡ ಕಾರ್ಯಪ್ಪ ಅನ್ನುವ ವಿಷ ಜಂತು ರಂಗಾಯಣಕ್ಕೆ ಹೊಕ್ಕಿದೆ. ಡಿಸೆಂಬರ್‌ನಲ್ಲಿ ತೊಲಗಲಿದ್ದಾರೆ. ನಾಟಕ ತಡೆಯಲು ಬಿಜೆಪಿ ಹೊರತುಪಡಿಸಿ ರಾಜಕೀಯ ಪಕ್ಷಗಳು, 60 ಚಿಂತಕರು ಸೇರಬೇಕುʼ ಎಂದು ಶೇರ್ ಮಾಡಿದ್ದಾರೆ. ಹೌದು, 60 ಇಂಟಲೆಕ್ಚ್ಯುವಲ್‌ಗಳಲ್ಲಿ ಗಿರೀಶ್ ಕಾರ್ನಾಡ್ ಸತ್ತಿದ್ದಾರೆ. ಇನ್ನು 54 ಜನ ಇದ್ದಾರೆ ಎಂದರು.

ಬೇರೆ ಯಾರಾದರೂ ಆಗಿದ್ದರೆ ಓಡಿ ಹೋಗುತ್ತಿದ್ದರು. ನಾನು ಕೊಡಗಿನ ಗಟ್ಟಿ ಮನುಷ್ಯ. ರಂಗಾಯಣದಲ್ಲಿ ಉಳಿದಿದ್ದೇನೆ. ರಾಷ್ಟ್ರೀಯ ಚಿಂತನೆಗಳ ಮೇಲೆ ರಂಗಾಯಣ ಕಟ್ಟಲು ಹೊರಟಿದ್ದೇನೆ. ಮುಂದೆಯೂ ಇದೇ ಕನಸಿನ ಮೇಲೆ ರಂಗಾಯಣ ನಡೆಯಬೇಕು ಎಂದರು.

ಇದನ್ನೂ ಓದಿ | Tippu drama | ವಿವಾದದ ಸುಳಿಯಲ್ಲಿ ಟಿಪ್ಪು ನಾಟಕ, ಎಚ್. ವಿಶ್ವನಾಥ್‌ ಅಡ್ಡಮಾತಿಗೆ ಅಡ್ಡಂಡ ಕಾರ್ಯಪ್ಪ ಕೆಂಡಾಮಂಡಲ

Exit mobile version