ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಚರಿತ್ರೆ, ಆಡಳಿತದ ಕುರಿತು ಆಡಿದ ಸ್ಪಷ್ಟ ಮಾತುಗಳು, ಚುನಾವಣೆ ವರ್ಷದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಅನೇಕ ಧನಾತ್ಮಕ ಸಂದೇಶಗಳನ್ನೂ ನೀಡಿದೆ.
ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕರಂತಹ ವೀರಾಂಗನೆಯರು ವಿದೇಶಿ ಆಡಳಿತಗಾರರ ವಿರುದ್ಧ ವೀರತ್ವ ತೋರಿದ್ದರು. ಓಬವ್ವನ ವೀರಗಾಥೆಯು ಮಹಿಳಾ ಸಶಕ್ತೀಕರಣದ ಯಾತ್ರೆಯನ್ನು ಮುಂದುವರಿಸಿದೆ ಎಂದ ದ್ರೌಪದಿ ಮುರ್ಮು ಅವರು ಹೆಚ್ಚಾಗಿ ಶರಣ ಸಾಹಿತ್ಯದ ಕುರಿತು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ ಪ್ರಭುಗಳು ಸಮತೆಯ ಸಂದೇಶ ನೀಡಿದ್ದಾರೆ. ಎಲ್ಲ ವರ್ಗಗಳನ್ನೂ ಒಂದೆಡೆ ತಂದು ಅನುಭವ ಮಂಟಪ ಸ್ಥಾಪನೆ ಮಾಡಿದರು. ಬಸವಣ್ಣನವರು ಲೋಕತಾಂತ್ರಿಕ ಪದ್ಧತಿಯನ್ನು ಸ್ಥಾಪಿಸಿದರು. ಅನುಭವ ಮಂಟಪದಲ್ಲಿ ಸಾಮಾಜಿಕ ವಿಚಾರಗಳನ್ನು ಚರ್ಚೆ ಮಾಡಲಾಯಿತು. ಈ ಸಂತರ ರಚನೆಯನ್ನು ವಚನ ಎನ್ನಲಾಗುತ್ತದೆ, ಮಹಿಳಾ ವಚನಕಾರರೂ ಇದರಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಇಂದಿಗೂ ವಚನ ಕರ್ನಾಟಕದ ದೈನಂದಿನ ಜೀವನದ ಭಾಗವಾಗಿದೆ. ಇದು ಸಮಾನತೆ, ಮಹಿಳಾ ಸ್ವಾತಂತ್ರ್ಯದ ಪ್ರತೀಕವಾಗಿದೆ ಎಂದು ಸುದೀರ್ಘವಾಗಿ ವಿವರಿಸಿದರು.
ಇದನ್ನೂ ಓದಿ | Mysuru Dasara | ಕರ್ನಾಟಕವನ್ನು ಸರ್ವಶ್ರೇಷ್ಠ ಮಾಡುವ ಸಂಕಲ್ಪ ಮಾಡೋಣ: ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಅತಿವೃಷ್ಟಿಯಿಂದ ರಾಜ್ಯದ ಕೆಲವು ಭಾಗಗಳಲ್ಲಿ ಕಷ್ಟ ಎದುರಾಗಿದೆ ಎಂದ ರಾಷ್ಟ್ರಪತಿ, ಸಮಸ್ಯೆಯ ಪರಿಹಾರಕ್ಕೆ ರಾಜ್ಯ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಶಹಬ್ಬಾಶ್‌ಗಿರಿ ನೀಡಿದರು.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯಲ್ಲಿ ಸಾಧನೆ ಮಾಡುತ್ತಿದೆ. ಕಳೆದ ವರ್ಷ ದೇಶದ ಅರ್ಧಕ್ಕೂ ಹೆಚ್ಚು ಎಫ್‌ಡಿಐ ಕರ್ನಾಟಕಕ್ಕೆ ಲಭಿಸಿದೆ. ಇದು ಕರ್ನಾಟಕದ ವಿಶ್ವವಿಖ್ಯಾತಿಯ ಪ್ರತೀಕವಾಗಿದೆ. ಬೆಂಗಳೂರನ್ನು ಸ್ಟಾರ್ಟಪ್ ಹಬ್ ಎನ್ನಲಾಗುತ್ತದೆ. ಇನೋವೇಷನ್ ಸೂಚ್ಯಂಕದಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಪ್ರಾಥಮಿಕ ಶಿಕ್ಷಣ ದಾಖಲಾತಿಯಲ್ಲಿ ಕರ್ನಾಟಕ 100% ಸೇರ್ಪಡೆ ಗುರಿ ಸಾಧಿಸಿದೆ, ಗ್ರಾಮ ಸಡಕ್ ಯೋಜನೆಯಲ್ಲಿ 100% ಸಾಧನೆ ಮಾಡಲಾಗಿದೆ. ಈ ರೀತಿಯಲ್ಲಿ ದೇಶವನ್ನು ಸಂಪದ್ಭರಿತ ಮಾರ್ಗದಲ್ಲಿ ಕೊಂಡೊಯ್ಯಲು ಎಲ್ಲರಿಗೂ ಶ್ಲಾಘನೆ ಹಾಗೂ ಆಶಯ ವ್ಯಕ್ತಪಡಿಸುತ್ತೇನೆ. ಮುಂದೆಯೂ ಇದೇ ಮಾರ್ಗದಲ್ಲಿ ನಡೆಯುತ್ತದೆ ಎಂಬ ವಿಶ್ವಾಸವಿದೆ ಎಂದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರದಲ್ಲಿ ಕೈಗೊಂಡ ಮೊದಲ ರಾಜ್ಯ ಪ್ರವಾಸ ಕರ್ನಾಟಕ. ಅದರಲ್ಲೂ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಆಗಮಿಸಿ ಕರ್ನಾಟಕದ ಸಂಸ್ಕೃತಿ, ಪರಂಪರೆ ಜತೆಗೆ ಸರ್ಕಾರಕ್ಕೂ ಶ್ಲಾಘನೆ ನೀಡಿದ್ದಾರೆ. ಇದು ಚುನಾವಣೆ ವರ್ಷದಲ್ಲಿ ರಾಜ್ಯ ಸರ್ಕಾರದ ವಿಶ್ವಾಸವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ | Mysuru Dasara | ಭಾರತೀಯ ಸಂಸ್ಕೃತಿಯ ಪ್ರತೀಕ ಮೈಸೂರು ದಸರಾ: ಕನ್ನಡ ನುಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು