ಮೈಸೂರು: ದಸರಾ ಮಹೋತ್ಸವ ಉದ್ಘಾಟಿಸಿದ ಪ್ರಪ್ರಥಮ ರಾಷ್ಟ್ರಪತಿ ಎಂಬ ಗೌರವಕ್ಕೆ ಪಾತ್ರರಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರಿನಲ್ಲೇ ತಯಾರಾದ ಮೈಸೂರು ರೇಷ್ಮೆ ಸೀರೆ ಧರಿಸಿದ್ದರು ಎನ್ನುವುದು ವಿಶೇಷ. ಮೈಸೂರಿನಲ್ಲಿಯೇ ತಯಾರಿಸಿದ ವಸ್ತ್ರವನ್ನು ಪ್ರೀತಿಯಿಂದ ಧರಿಸಿ ಆಗಮಿಸಿ ಮೈಸೂರಿಗೆ ವಿಶೇಷ ಗೌರವ ನೀಡಿದ್ದಾರೆ.
ರಾಷ್ಟ್ರಪತಿ ಧರಿಸಿದ್ದು ವಿಶೇಷವಾಗಿ ನೇಯ್ದ ಮೈಸೂರು ರೇಷ್ಮೆ ಸೀರೆಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಜಿಲ್ಲಾಡಳಿತದ ಪರವಾಗಿ ರಾಷ್ಟ್ರಪತಿ ಅವರನ್ನು ಅಧಿಕೃತವಾಗಿ ಆಹ್ವಾನಿಸುವಾಗ ಗೌರವಸೂಚಕವಾಗಿ ಈ ಮೈಸೂರು ರೇಷ್ಮೆ ಸೀರೆ, ಫಲ ತಾಂಬೂಲ ನೀಡಿ ಗೌರವಿಸಿದ್ದರು.
ರಾಷ್ಟ್ರಪತಿಯವರು ಬಿಳಿ ಸೀರೆ ಇಷ್ಟಪಡುತ್ತಾರೆ ಎಂಬುದನ್ನು ಅರಿತು ಸರ್ಕಾರಿ ಸ್ವಾಮ್ಯದ ಕೆಎಸ್‌ಐಸಿಗೆ ಆದೇಶ ನೀಡಿ ಸೀರೆಯನ್ನು ಸಿದ್ಧಪಡಿಸಲಾಗಿತ್ತು. ರಾಷ್ಟ್ರಪತಿಯವರು ಪ್ರೀತಿಯಿಂದ ಇದೇ ಉಡುಪು ಧರಿಸಿ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿದ್ದು ಮೈಸೂರಿಗರಿಗೆ ಸಂತಸ ತಂದಿದೆ.
ಮೈಸೂರಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1912ರಲ್ಲಿ ನಿರ್ಮಿಸಿದ ರೇಷ್ಮೆ ಕಾರ್ಖಾನೆ ಎಂಬ ಹೆಮ್ಮೆ ಈ ಕಾರ್ಖಾನೆಗೆ ಇದೆ. ಮೈಸೂರು ಸಿಲ್ಕ್ ಸೀರೆ ಬ್ರಾಂಡ್ ವಿಶ್ವಪ್ರಸಿದ್ಧ ಬ್ರಾಂಡ್ ಆಗಿದೆ. ನೂರಾರು ವರ್ಷಗಳಿಂದ ಮಹಿಳೆಯರಿಗೆ ಮೈಸೂರು ಸಿಲ್ಕ್ ಸೀರೆ ಎಂದರೆ ಎಲ್ಲಿಲ್ಲದ ಅಚ್ಚುಮೆಚ್ಚು. ಹಾಗಾಗಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಷ್ಟಪಡುವ ನೈಸರ್ಗಿಕ ಬಿಳಿ ಬಣ್ಣದ ಅಪ್ಪಟ ರೇಶ್ಮೆ ಮತ್ತು ಅಪ್ಪಟ ಚಿನ್ನದ ಎಳೆಗಳನ್ನು ಬಳಸಿ ತಯಾರಿಸಿದ ಈ ಉಡುಪನ್ನು ಗೌರವಸೂಚಕವಾಗಿ ಅವರಿಗೆ ಸಮರ್ಪಿಸಲಾಗಿತ್ತು.
ಈ ಸೀರೆಯ ಬೆಲೆ ₹81,568 ಎಂದು ಕೆಎಸ್‌ಐಸಿ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಈ ಸೀರೆಯನ್ನು ಆನ್‌ಲೈನ್ ಮೂಲಕವೂ ಖರೀದಿ ಮಾಡಬಹುದು. ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಖರೀದಿ ಪೇಜ್‌ಗೆ ತೆರಳಬಹುದು.
ಬೆಳ್ಳಿ ವಿಗ್ರಹ ಉಡುಗೊರೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜ್ಯ ಸರ್ಕಾರದ ವತಿಯಿಂದ, ತಾಯಿ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹವನ್ನು ಉಡುಗೊರೆಯಾಗಿ ನೀಡಲಾಯಿತು. ವಿಗ್ರಹವನ್ನು ಮೈಸೂರಿನ ವೃತ್ತಗಳಲ್ಲಿರುವ ಬೃಹತ್ ಮಂಟಪದ ಮಾದರಿಯೊಳಗೆ ಸ್ಥಾಪಿಸಲಾಗಿತ್ತು.
ಇದನ್ನೂ ಓದಿ | Mysuru Dasara | ಭಾರತೀಯ ಸಂಸ್ಕೃತಿಯ ಪ್ರತೀಕ ಮೈಸೂರು ದಸರಾ: ಕನ್ನಡ ನುಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು