ಮೈಸೂರು: ನಾವೆಲ್ಲ ನರಹಂತಕ ಹುಲಿ, ನರಹಂತಕ ಸಿಂಹ, ನರಹಂತಕ ವೀರಪ್ಪನ್ ಎಂದೆಲ್ಲ ಕೇಳಿದ್ದೇವೆ. ಆದರೆ ಸಿದ್ದರಾಮಯ್ಯ ಅವರು ನರಹಂತಕ ಮುಖ್ಯಮಂತ್ರಿಯಾಗಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ನಡೆಯಲಿರುವ ಬಿಜೆಪಿ ಸಂಕಲ್ಪ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಶನಿವಾರ ಅವರು ಮಾತನಾಡಿದರು. ಭೂತಾಳ ಮೈದಾನದಲ್ಲಿ ನಡೆಯುತ್ತಿರುವ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ಖಳನಾಯಕ ಎಂದೂ ಹೇಳಿದರು. ಕೆ.ಆರ್ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ನಗರಾಧ್ಯಕ್ಷ ಶ್ರೀವತ್ಸ, ಮೈಸೂರು ಮೇಯರ್ ಶಿವಕುಮಾರ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ನರಹಂತಕ ಮುಖ್ಯಮಂತ್ರಿ
ʻʻಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಒಂದೇ ದಿನ ಸಿದ್ದರಾಮಯ್ಯ ಅವರ ಕಣ್ಣಲ್ಲಿ ನೀರು ಬರಲಿಲ್ಲ, ಪರಿಹಾರನ್ನೂ ಕೊಡಲಿಲ್ಲ. ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರುʼʼ ಎಂದು ಹೇಳಿದ ನಳಿನ್, ಸಿದ್ದರಾಮಯ್ಯ ಒಬ್ಬ ನರಹಂತಕ ಮುಖ್ಯಮಂತ್ರಿಯಾಗಿದ್ದರು ಎಂದು ಹೇಳಿದರು.
ʻʻಬಿಜೆಪಿ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿತ್ತು. ಆದರೆ, ಭಾರತ್ ಜೋಡೋ ಯಾತ್ರೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರೂ ಇದ್ದರುʼʼ ಎಂದು ಆಪಾದಿಸಿದ ನಳಿನ್ ಕುಮಾರ್ ಕಟೀಲ್, ʻʻನೀವು ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದೀರಾʼʼ ಎಂದು ಪ್ರಶ್ನಿಸಿದರು.
ʻʻಸಿದ್ದರಾಮಯ್ಯ ಅವರ ಕಾಲದಲ್ಲಿ ಅಭಿವೃದ್ಧಿ ಕಾರ್ಯ ನಡೆದೇ ಇಲ್ಲ. ಬೊಮ್ಮಾಯಿ ಸರ್ಕಾರ ಈಗ ಎಸ್‌ಸಿ-ಎಸ್‌ಟಿ ಮೀಸಲು ಹೆಚ್ಚಳ ಮಾಡಿದೆ. ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಏನು ಮಾಡಿದೆ?ʼʼ ಎಂದು ಅವರು ಪ್ರಶ್ನಿಸಿದರು. ʻʻಸಿದ್ದರಾಮಯ್ಯ ಕುರುಬ ಸಮುದಾಯಕ್ಕೂ ಮೋಸ ಮಾಡಿದರುʼʼ ಎಂದು ಆರೋಪಿಸಿದರು.
ಹುಲಿಯಾ ಕಾಡಿಗೆ ಹೋಗುತ್ತೆ!
ʻʻಈಗ ಕರ್ನಾಟಕದಲ್ಲಿ ಸಿದ್ದರಾಮಯ್ಯ ಆಟ ನಡೆಯುವುದಿಲ್ಲ. 150 ಸೀಟ್ ಪಡೆದು ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆʼʼ ಎಂದ ನಳಿನ್, ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕುವ ಸ್ಥಿತಿಗೆ ಬಂದಿದ್ದಾರೆ ಎಂದರು. ʻʻಮುಂದಿನ ಚುನಾವಣೆಯಲ್ಲಿ ಹುಲಿಯಾ ಇರುವುದಿಲ್ಲ. ಹುಲಿಯಾ ಕಾಡಿಗೆ ಹೋಗುತ್ತೆʼʼ ಎಂದು ಗೇಲಿ ಮಾಡಿದರು.
ಸಿದ್ದರಾಮಯ್ಯ ವಿಲನ್!
ʻʻಮೈಸೂರು ಮಹಾರಾಜರು ಆಳಿದ ನಗರ. ಶಿಕ್ಷಣ, ಒಳಚರಂಡಿ, ಕೈಗಾರಿಕಾ ಅಭಿವೃದ್ಧಿ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ. ಒಡೆಯರ್ ಆಡಳಿತ ದೇಶದ ಆಡಳಿತಕ್ಕೆ ಮುನ್ನೋಟವಾಗಿದೆ. ಇಂಥ ಮಹಾರಾಜರ ಬಗ್ಗೆ ಏಕವಚನದಲ್ಲಿ ಮಾತನಾಡುವ ಖಳನಾಯಕ ಇದ್ದಾನೆ. ಆ ಖಳ ನಾಯಕನ ಆಡಳಿತ ರಾಜ್ಯದಲ್ಲಿ ಮತ್ತೆ ಬರಲ್ಲʼʼ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ನಳಿನ್ ಕುಮಾರ್ ಕಟೀಲ್ ಹೇಳಿದರು.
ಭಾರತ್ ಜೋಡೋಗೆ ಜನ ಸೇರಿದ್ದಲ್ಲ, ತಂದದ್ದು!
ʻʻಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ಕಲ್ಯಾಣ ಕರ್ನಾಟಕದಿಂದ ಆರಂಭವಾಗಿದೆ. ನೇರವಾಗಿ ಕಾರ್ಯಕರ್ತರನ್ನು ಭೇಟಿ ಮಾಡುವ ಉದ್ದೇಶದಿಂದ ಈ ಯಾತ್ರೆ ಆರಂಭವಾಗಿದೆ. ಹೋದಲೆಲ್ಲ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆʼʼ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ʻʻರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಜನರು ಸೇರಿಲ್ಲ. ಬೇರೆ ಬೇರೆ ಜಿಲ್ಲೆಗಳಿಂದ ಜನರನ್ನು ಕರೆತಂದರುʼʼ ಎಂದು ಗೇಲಿ ಮಾಡಿದರು.
ʻʻಮುಂದಿನ ಚುನಾವಣೆಯಲ್ಲಿ 150 ಸ್ಥಾನ ಬಿಜೆಪಿ ಗೆಲ್ಲುತ್ತೆ. ಅಮ್ಮ- ಮಗನ ಪಾರ್ಟಿ ದೆಹಲಿಗೆ ಹೋಗುತ್ತೆ. ಅಪ್ಪ-ಮಗನ ಪಾರ್ಟಿ ಸಮುದ್ರಕ್ಕೆ ಹೋಗುತ್ತೆʼʼ ಎಂದು ಕಟೀಲ್ ಭವಿಷ್ಯ ನುಡಿದರು.
ಇದನ್ನೂ ಓದಿ | ಕಾರ್ಯಕರ್ತರ ಸಭೆಯಲ್ಲಿ ನಿದ್ದೆಗೆ ಜಾರಿದ ಕಟೀಲ್; ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆ ಎಂದು ಕಾಂಗ್ರೆಸ್ ವ್ಯಂಗ್ಯ