ಚಾಮರಾಜನಗರ: ಏಪ್ರಿಲ್ 9ರಂದು ಬಂಡಿಪುರ ಹಾಗೂ ಮದುಮಲೈ ಕಾಡಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಆಸ್ಕರ್ ಪುರಸ್ಕೃತ ಸಾಕ್ಷ್ಯಚಿತ್ರ ʼದಿ ಎಲಿಫೆಂಟ್ ವ್ಹಿಸ್ಪರರ್ಸ್ʼನ (The Elephant Whisperers) ನಾಯಕ ನಾಯಕಿಯರಾದ ಬೊಮ್ಮ ಹಾಗೂ ಬೆಳ್ಳಿಯನ್ನು ಭೇಟಿಯಾಗಲಿದ್ದಾರೆ.
ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಕ್ಯಾಂಪ್‌ನಲ್ಲಿ ಈ ಡಾಕ್ಯುಮೆಂಟರಿಯ ಪಾತ್ರಧಾರಿಗಳು ಇದ್ದಾರೆ. ಏ.9ಕ್ಕೆ ಪ್ರಧಾನಿ ಮೋದಿಯವರಿಂದ ಇವರು ಸನ್ಮಾನಿತರಾಗಲಿದ್ದಾರೆ.
ಈ ಕುರಿತು ಡಾಕ್ಯುಮೆಂಟರಿ ಪ್ರಮುಖ ಪಾತ್ರಧಾರಿ ಬೊಮ್ಮ ಹೇಳಿಕೆ ನೀಡಿದ್ದಾರೆ. ʼʼಎಲ್ಲೋ ಇರುವ ಪ್ರಧಾನಿಗಳು ಕಾಡುಕುರುಬರನ್ನು ಮಾತಾಡಿಸೋಕೆ ಬರ್ತಿರೋದು ಸಾಕಷ್ಟು ಖುಷಿ ತಂದಿದೆ. ಮದುಮಲೆ, ಬಂಡಿಪುರಕ್ಕೆ ಇಲ್ಲಿವರೆಗೆ ಪ್ರಧಾನಿ ಬಂದಿಲ್ಲ. ಪ್ರಧಾನಿ ಜೊತೆಗೆ ತಮಿಳುನಾಡು ಸಿಎಂ, ಮಿನಿಸ್ಟರ್‌ಗಳು ಬರ್ತಿದ್ದಾರೆ. ಕಾಡುಜನಗಳಾದ ನಮಗೆ ಮನೆ ಕೊಡಬೇಕು, ಶಾಲಾ ಮಕ್ಕಳಿಗೆ ಲ್ಯಾಪ್‌ಟಾಪ್ ಬೇಕು. ಅವಕಾಶ ಸಿಕ್ಕರೆ ಪ್ರಧಾನಿ ಬಳಿ ಇದನ್ನೆಲ್ಲ ಕೇಳ್ತೀವಿʼʼ ಎಂದವರು ಹೇಳಿದ್ದಾರೆ.
ʼʼನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಆಸಕ್ತಿ ವಹಿಸಿ ಚಿತ್ರೀಕರಣ ಮಾಡಿದರು. ಡಾಕ್ಯುಮೆಂಟರಿ ಮಾಡ್ಬೇಕು ಅಂತ ಮನೆಗೆ ಬಂದು ನಟಿಸೋಕೆ ಹೇಳಿದರು. ಆಸ್ಕರ್ ಅಂದ್ರೆ ಏನಂತ ನನಗೆ ಗೊತ್ತಿಲ್ಲ. ಕಾಡೊಳಗೆ ಜೀವನ ಮಾಡುವ ನಮಗೆ ಈ ಡಾಕ್ಯುಮೆಂಟರಿ ಬಳಿಕ ಆಸ್ಕರ್‌ನ ಪವರ್ ತಿಳಿಯಿತು. ನಮ್ಮ ದೇಶ ಸಂತೋಷ ಪಡುವ ಸಂಗತಿ ಇದು. ನಾನು ಹೀರೋ ಅಂತ ಭಾವಿಸಿಲ್ಲ. ಕಾಡು ಕುರುಬರು ನಾವು ಹೀಗೇ ಇರೋದು, ಹೀಗೇ ಇರ್ತೀವಿʼʼ ಎಂದು ಬೊಮ್ಮ ನುಡಿದಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer: ಆಸ್ಕರ್ ಪಡೆದ The Elephant Whisperers: ಕಾಡು, ಆನೆ, ಮಾನವರ ಬಾಂಧವ್ಯದ ದೃಶ್ಯಕಾವ್ಯ