ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣಲೇವಾದೇವಿ ಕೇಸಿನ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಬುಧವಾರ ಯಂಗ್ ಇಂಡಿಯನ್ ಕಚೇರಿಯ ಒಂದು ಭಾಗಕ್ಕೆ ಬೀಗ ಹಾಕಿದೆ. ಈ ಕಚೇರಿಯಲ್ಲಿ ಇನ್ನಷ್ಟು ಶೋಧ ಕಾರ್ಯಾಚರಣೆಗಳು ನಡೆಯಬೇಕಿದ್ದು, ಈ ಸಂದರ್ಭದಲ್ಲಿ ಹಾಜರಿರುವಂತೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮನ್ಸ್ ನೀಡಿದೆ.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಪ್ರಧಾನ ಪಾಲುದಾರರಾಗಿರುವ ಯಂಗ್ ಇಂಡಿಯನ್ ಕಂಪನಿಗೆ ಸೇರಿದ ನ್ಯಾಷನಲ್ ಹೆರಾಲ್ಡ್ ಪ್ರಧಾನ ಕಚೇರಿ ಸೇರಿದಂತೆ ೧೧ ಕಚೇರಿಗಳಿಗೆ ಇ.ಡಿ. ದಾಳಿ ನಡೆಸಿತ್ತು. ಬಳಿಕ ನ್ಯಾಷನಲ್ ಹೆರಾಲ್ಡ್ ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಯಂಗ್ ಇಂಡಿಯನ್ ಕಚೇರಿಗೆ ಬೀಗ ಹಾಕಿದೆ. ಯಂಗ್ ಇಂಡಿಯನ್ ಸಂಸ್ಥೆ ನ್ಯಾಷನಲ್ ಹೆರಾಲ್ಡ್ ಪತ್ರಿಕಾ ಬಳಗವನ್ನು ತನ್ನ ವಶಕ್ಕೆ ಪಡೆಯುವಲ್ಲಿ ನಡೆಸಿದೆ ಎನ್ನಲಾದ ಹಲವು ಹಣಕಾಸು ಅಕ್ರಮಗಳ ಬಗ್ಗೆ ಈಗ ಪ್ರಧಾನವಾಗಿ ತನಿಖೆ ನಡೆಯುತ್ತಿದೆ.
ಇ.ಡಿ ಅಧಿಕಾರಿಗಳ ತಂಡ ಯಂಗ್ ಇಂಡಿಯಾ ಕಚೇರಿಗೆ ಹೋಗಿ ತಪಾಸಣೆ ನಡೆಸಿದರೂ ಅದಕ್ಕೆ ಶೋಧ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕಚೇರಿಯಲ್ಲಿ ಯಾವುದೇ ಅಧಿಕೃತ ಪ್ರತಿನಿಧಿ ಇಲ್ಲದೆ ಇರುವುದೇ ಇದಕ್ಕೆ ಕಾರಣ. ಯಂಗ್ ಇಂಡಿಯಾದ ವ್ಯವಹಾರ ಮತ್ತು ಅದರ ಕಾರ್ಯಚಟುವಟಿಕೆಗಳ ಬಗ್ಗೆ ಪೂರ್ಣ ವಿಚಾರ ಗೊತ್ತಿದ್ದವರು ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಮಾತ್ರ. ಆದರೆ ಅವರಿಬ್ಬರೂ ಈಗ ಇಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಲಾ ೩೮% ಷೇರುಗಳನ್ನು ಹೊಂದಿದ್ದರೂ ಅವರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇವರನ್ನು ಉಳಿದಂತೆ ಈ ಬಗ್ಗೆ ತಿಳಿದಿರುವ ಇನ್ನಿಬ್ಬರು ವ್ಯಕ್ತಿಗಳೆಂದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಕುಮಾರ್ ಬನ್ಸಾಲ್. ಈ ಇಬ್ಬರನ್ನೂ ಈ ಹಿಂದೆಯೇ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.
ಇದೀಗ ಯಾವ ಅಧಿಕೃತ ಪ್ರತಿನಿಧಿಯೂ ಇಲ್ಲದೆ ತಪಾಸಣೆ ನಡೆಸುವುದು ಕಷ್ಟವಾಗುತ್ತಿದೆ ಎಂಬ ಕಾರಣಕ್ಕಾಗಿ ನಿರ್ದೇಶನಾಲಯವು ಖರ್ಗೆ ಅವರಿಗೆ ಸಮನ್ಸ್ ನೀಡಿದೆ. ಮುಂದಿನ ತಪಾಸಣೆಯ ಸಂದರ್ಭದಲ್ಲಿ ಹಾಜರಿದ್ದು ಸೂಕ್ತ ಮಾಹಿತಿ ಒದಗಿಸುವಂತೆ ಸೂಚಿಸಿದೆ.
ಅಸೋಸಿಯೇಟೆಡ್ ಜರ್ನಲ್ಸ್ ಕೈಯಲ್ಲಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕಾ ಸಮೂಹವನ್ನು ಖರೀದಿಸುವ ವೇಳೆ ಯಂಗ್ ಇಂಡಿಯನ್ ಕಂಪನಿ ೯೦ ಕೋಟಿ ರೂ. ನೀಡಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಆದರೆ, ಯಾವುದೇ ಮೊತ್ತವನ್ನು ಪಾವತಿಸದೆ ಕೇವಲ ದಾಖಲೆಗಳಲ್ಲಿ ಮಾತ್ರ ತೋರಿಸಿದೆ ಎನ್ನುವುದು ಎಲ್ಲರ ಸಂದೇಹ. ಆದರೆ, ಹೀಗೆ ಪಾವತಿಸಿದ ಹಣವನ್ನು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಉದ್ಯೋಗಿಗಳಿಗೆ ಬಾಕಿ ಇದ್ದ ವೇತನ ಮತ್ತು ಸ್ವಯಂ ನಿವೃತ್ತಿ ಸವಲತ್ತುಗಳಿಗೆ ವ್ಯಯಿಸಲಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ಈ ಲೆಕ್ಕಾಚಾರಗಳೆಲ್ಲ ತುಂಬ ಸಂಕೀರ್ಣವಾಗಿದ್ದು, ಅದರ ವಿವರ ತೋರಿಸುವ ಅಧಿಕೃತ ಪ್ರತಿನಿಧಿಗಳು ಸ್ಥಳದಲ್ಲಿರಬೇಕು ಎನ್ನುವುದು ಇ.ಡಿ. ಅಧಿಕಾರಿಗಳ ಬೇಡಿಕೆಯಾಗಿದೆ.
ಇದನ್ನೂ ಓದಿ| National Herald Case: ದೆಹಲಿಯಲ್ಲಿ ನ್ಯಾಷನಲ್ ಹೆರಾಲ್ಡ್ ಕಚೇರಿ ಸೀಲ್ ಮಾಡಿದ ಇಡಿ ಅಧಿಕಾರಿಗಳು