Site icon Vistara News

NAVIKA Summit: ಮತ್ತೆ ಬಂದ ನಾವಿಕ! ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ತಯಾರಿ, ಕ್ಷಣಗಣನೆ

navika1

:: ಬೆಂಕಿ ಬಸಣ್ಣ, ನ್ಯೂಯಾರ್ಕ್

ಇದೇ ಸಪ್ಟೆಂಬರ್ 1, 2 ಮತ್ತು 3ರಂದು ʼಆನಂದ- ಅನುಭವ- ಅನುಬಂಧ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಅಮೆರಿಕಾ (USA) ದೇಶದ ಟೆಕ್ಸಾಸ್ (Texas state) ರಾಜ್ಯದ ಆಸ್ಟಿನ್‌ನಲ್ಲಿ ನಡೆಯಲಿರುವ ʼ7ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2023ʼಕ್ಕೆ (NAVIKA world kannada summit) ಸಕಲ ಸಿದ್ಧತೆಗಳು ಮುಗಿದಿದ್ದು ಕ್ಷಣಗಣನೆ ಪ್ರಾರಂಭವಾಗಿದೆ.

ಕರುನಾಡ ಚಕ್ರವರ್ತಿ, ಸ್ಯಾಂಡಲ್‌ವುಡ್ ಕಿಂಗ್, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೊ ಡಾ. ಶಿವ ರಾಜ್‌ಕುಮಾರ್ (Shiva Rajkumar) ವಿಶೇಷ ಅತಿಥಿಯಾಗಿದ್ದಾರೆ. ಕನ್ನಡ ಸಿನಿಮಾ ರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (arjun janya) ಅವರ ತಂಡ ಪ್ರೈಮ್ ಟೈಮ್‌ನಲ್ಲಿ ಪ್ರದರ್ಶನ ಕೊಡಲಿದೆ. ಖ್ಯಾತ ಹಿನ್ನೆಲೆ ಗಾಯಕರಾದ ವ್ಯಾಸರಾಜ ಸಾಸೋಲೆ, ಕೀರ್ತನ್ ಹೊಳ್ಳ, ಇಂದು ನಾಗರಾಜ್, ಐಶ್ವರ್ಯ ರಂಗರಾಜನ್ ಮುಂತಾದ ಗಾಯಕರು ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕದ ಪ್ರಸಿದ್ಧ ಸಹೋದರರಾದ ಖಾನ್ ಬ್ರದರ್ಸ್ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ʼಬೀಟ್ ಗುರುಸ್ʼ ಮ್ಯೂಸಿಕ್ ಬ್ಯಾಂಡ್ ವಿನೂತನ ರೀತಿಯಲ್ಲಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿದೆ. ರಘು ದೀಕ್ಷಿತ್ (Raghu Dixit) ಈ ನಾವಿಕ ವಿಶ್ವಕನ್ನಡ ಸಮ್ಮೇಳನಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಕೊಡಲಿದ್ದಾರೆ.

ಈ ಸಮಾವೇಶದಲ್ಲಿ ಇನ್‌ವೆಸ್ಟ್‌ಮೆಂಟ್ ಫೋರಮ್, ವುಮೆನ್ಸ್ ಫೋರಮ್, ಸಾಹಿತ್ಯ ಗೋಷ್ಠಿ, ಆಧ್ಯಾತ್ಮಿಕ ವೇದಿಕೆ, ವೈದ್ಯರ ಫೋರಮ್, ಮೆರವಣಿಗೆ ಹೀಗೆ ಅನೇಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಸತತವಾಗಿ ನಡೆಯಲಿವೆ. ಈ ಸಮಾವೇಶದಲ್ಲಿ ಅನಿವಾಸಿಗಳು ಮಾತ್ರವಲ್ಲದೇ ಕರ್ನಾಟಕದ ಖ್ಯಾತನಾಮ ಕಲಾವಿದರಿಂದ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

“ಕೋವಿಡ್‌ ನಂತರ ಸಾವಿರಾರು ಅನಿವಾಸಿ ಕನ್ನಡಿಗರು ಮೊದಲ ಬಾರಿಗೆ ಒಂದು ಸೂರಿನಡಿ ಸೇರುತ್ತಿದ್ದಾರೆ. ಈ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ನೂರಾರು ಜನ ಸ್ವಯಂಸೇವಕರು ಕಳೆದ ಆರೇಳು ತಿಂಗಳಿಂದ ಹಗಲಿರುಳು ದುಡಿದಿದ್ದಾರೆ” ಎಂದು ನಾವಿಕ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ್ ರಾವ್ ತಿಳಿಸಿದ್ದಾರೆ.

“ಈ ನಾವಿಕ ವಿಶ್ವಕನ್ನಡ ಸಮ್ಮೇಳನಕ್ಕೆ ಕರ್ನಾಟಕ ಮತ್ತು ಅಮೇರಿಕಾದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಸಾವಿರಾರು ಸಂಖ್ಯೆಯ ಕನ್ನಡಾಭಿಮಾನಿಗಳನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇವೆ” ಎಂದು ಈ ಸಮ್ಮೇಳನದ ಸಂಚಾಲಕರಾದ ಸದಾಶಿವ ಕಲ್ಲೂರ್ ತಿಳಿಸಿದ್ದಾರೆ. ಇವರ ಜೊತೆಗೆ ಸಹ-ಸಂಚಾಲಕರಾಗಿ ಹ್ಯೂಸ್ಟನ್ ಕನ್ನಡ ಸಂಘದ ಅನು ಅಯ್ಯಂಗಾರ್, ಸ್ಯಾನ್ ಅಂಟೋನಿಯೋ ಕುವೆಂಪು ಕನ್ನಡ ಸಂಘದ ಕಾರ್ತಿಕ್ ಹುಲಿಕುಂಟೆ, ಡಲ್ಲಾಸ್ ಕನ್ನಡ ಬಳಗದ ಗೌರಿಶಂಕರ್ ಮತ್ತು ಆಸ್ಟಿನ್ ಕನ್ನಡ ಸಂಘದ ಪ್ರಕಾಶ್ ಉಡುಪ ಸೇವೆ ಸಲ್ಲಿಸುತ್ತಿದ್ದಾರೆ.

“ಈ ಸಮಾವೇಶದಲ್ಲಿ ನೃತ್ಯ, ಸಂಗೀತ, ನಾಟಕ, ಫ್ಯಾಷನ್ ಶೋ, ಸ್ಟ್ಯಾಂಡ್-ಅಪ್ ಕಾಮಿಡಿ, ಮ್ಯಾಜಿಕ್ ಶೋ, ಗಾಲ್ಫ್ ಪಂದ್ಯಾವಳಿ, ಮೆರವಣಿಗೆ- ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಮತ್ತು ಕರ್ನಾಟಕದ ಪ್ರಾದೇಶಿಕ ವೈವಿಧ್ಯಮಯ ಭೋಜನವನ್ನು ಏರ್ಪಡಿಸಲಾಗಿದೆ. ಜನರ ಒತ್ತಾಯದ ಮೇರೆಗೆ ಈಗ ಸಿಂಗಲ್ ಡೇ ರೆಜಿಸ್ಟ್ರೇಷನ್ ಸಹ ಓಪನ್ ಮಾಡಿದ್ದೇವೆ” ಎಂದು ನಾವಿಕ ಸಂಸ್ಥೆಯ ಸಹ-ಸಂಸ್ಥಾಪಕ, ಮಾಜಿ ಅಧ್ಯಕ್ಷ ಮತ್ತು ಸಲಹೆಗಾರರಾದ ವಲ್ಲೀಶ ಶಾಸ್ತ್ರಿ ಹೇಳಿದ್ದಾರೆ.

ಕರ್ನಾಟಕದ ಪ್ರಖ್ಯಾತ ಯುವ ಸ್ಟಾಂಡ್‌ಅಪ್ ಕಾಮಿಡಿಯನ್‌ಗಳಾದ ರಾಘವೇಂದ್ರ ಆಚಾರ್, ಕಾರ್ತಿಕ್ ಪತ್ತಾರ್ ಮತ್ತು ನಿರೂಪ್ ಪ್ರೇಕ್ಷಕರನ್ನು ಹಾಸ್ಯಲೋಕಕ್ಕೆ ಕೊಂಡೊಯ್ಯಲಿದ್ದಾರೆ. ನಾವಿಕ ವಿಶ್ವ ಕನ್ನಡ ಸಮಾವೇಶ 2023ಕ್ಕೆ ಒರಿಯನ್ ರಿ-ಕ್ಯಾಪಿಟಲ್ ಡೈಮಂಡ್ ಪ್ರಾಯೋಜಕ ಮತ್ತು ಸೈಕಲ್ ಪ್ಯೂರ್ ಅಗರಬತ್ತಿ ರಜತ ಪ್ರಾಯೋಜಕರಾಗಿದ್ದಾರೆ.

ನಾವಿಕ ಮೆರವಣಿಗೆ

ಈ ವರ್ಷ ನಾವಿಕ ಮೆರವಣಿಗೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುವ ಜವಾಬ್ದಾರಿಯನ್ನು ಅಶಿತಾ ಗೋವರ್ಧನ್ ಹೊತ್ತಿದ್ದಾರೆ. ಈ ನಾವಿಕ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲಾ ಊರುಗಳ ಕನ್ನಡ ಸಂಘಗಳ ಬ್ಯಾನರ್‌ಗಳು ರೆಡಿಯಾಗಿದ್ದು ಅಮೆರಿಕಾದ ಕನ್ನಡ ಸಂಘಗಳು ಕರ್ನಾಟಕದ ವಿವಿಧ ಪ್ರದೇಶಗಳ ಚರಿತ್ರೆಯನ್ನು, ಪರಂಪರೆಯನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಿವೆ.

ಶುಭಾ ಪ್ರಶಾಂತ್ ಅವರ ನೇತೃತ್ವದ ಡೆಕೋರೇಷನ್ ಸಮಿತಿಯು ಸಮ್ಮೇಳನಕ್ಕೆ, ಸಭಾ ಆವರಣಕ್ಕೆ ಮತ್ತು ವೇದಿಕೆಗೆ ಬೇಕಾಗುವ ಎಲ್ಲಾ ಆಲಂಕಾರಿಕ ವಸ್ತುಗಳನ್ನು ತಯಾರಿಸಲು ಕಳೆದ ಮೂರು ತಿಂಗಳಿಂದ ಹಗಲಿರಳು ಶ್ರಮಪಡುತ್ತಿವೆ.

ನಿರ್ಮಲ ಮಾಧವ ಮತ್ತು ಪಂಪ ನೃತ್ಯ ಅಕಾಡೆಮಿಯಿಂದ ಅದ್ಭುತ “ನಾದ ನೃತ್ಯ” ಪ್ರದರ್ಶನ ನಡೆಯಲಿದೆ. ಮರೆಯಲಾಗದ ಸಂಗೀತದ ಪ್ರದರ್ಶನವನ್ನು ನೀಡಲು ಪ್ರತಿಭಾವಂತ ಸ್ಯಾಕ್ಸೋಫೋನ್ ಕಲಾವಿದೆ ಅಂಜಲಿ ಶಾನ್‌ಬೋಗ್ ಅವರು ನಾವಿಕಗೆ ಬರುತ್ತಿದ್ದಾರೆ. ಯಕ್ಷಹೆಜ್ಜೆ – ಯಕ್ಷಗಾನ ಮತ್ತು ಕಲಾವಿದ್ಯಾ ಶಾಲೆಯವರು “ಚಂದ್ರಹಾಸ ಚರಿತ್ರೆ”ಯನ್ನು ಪ್ರದರ್ಶಿಸಲಿದ್ದಾರೆ. 8-15 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಇತ್ತೀಚಿನ ಜನರೇಟಿವ್ AI ಅನ್ನು ಬಳಸಿಕೊಂಡು ಕನ್ನಡದಲ್ಲಿ ಕಥೆ ಹೇಳುವ ಕಲೆಯನ್ನು ಕಲಿಸಲಾಗುತ್ತದೆ.

ಕನ್ನಡ ಬರಹಗಾರರಿಂದ ಲೇಖನ, ಕಥೆ, ಕವನ, ಪ್ರಬಂಧ, ನಗೆಹನಿ ಮತ್ತು ಹಾಸ್ಯ ಲೇಖನಗಳನ್ನುಆಹ್ವಾನಿಸಿ, ಅವುಗಳಲ್ಲಿ ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ಬರಹಗಳನ್ನು ಆಯ್ಕೆ ಮಾಡಿ “ಮಂದಾರ” ಹೆಸರಿನ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ. ಉತ್ತರ ಕರ್ನಾಟಕದ ಸೊಗಡಿನ ವೈವಿಧ್ಯಮಯ ಕಾರ್ಯಕ್ರಮವನ್ನು ನಾರ್ತ್ ಅಮೇರಿಕನ್ ಉತ್ತರ ಕರ್ನಾಟಕ ಅಸೋಸಿಯೇಷನ್ (NAUKA) ತಂಡದ ಸದಸ್ಯರು ಪ್ರಸ್ತುತಪಡಿಸಲಿದ್ದಾರೆ.

ನಾವಿಕ 2023 ಸಾಹಿತ್ಯ ವೇದಿಕೆಯು ಕನ್ನಡದ ಹೆಸರಾಂತ ಸಾಹಿತಿ ಡಾ. ಗಜಾನನ ಶರ್ಮ ಅವರೊಂದಿಗೆ ಮುಕ್ತ “ಸಂವಾದ”ವನ್ನು ಪ್ರಸ್ತುತ ಪಡಿಸುತ್ತಿದೆ. ಇವರು “ಪುನರ್ವಸು”, “ಪ್ರಮೇಯ”, “ಚೆನ್ನಭೈರಾದೇವಿ” ಮುಂತಾದ ಪ್ರಸಿದ್ಧ ಕೃತಿಗಳ ಲೇಖಕರು, ನಾಟಕ ಜಗತ್ತಿನ ಹೆಸರಾಂತ ನಟ, ನಾಟಕಕಾರ ಹಾಗೂ ನಿರ್ದೇಶಕರು, “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ” ಭಕ್ತಿಗೀತೆಯನ್ನು ರಚಿಸಿದವರು.

ಹೆಸರಾಂತ ಕಲಾವಿದರು ಮತ್ತು ಕಲಾಸ್ನೇಹಿ ಹಾಗೂ ನರ್ತನಯೋಗ ಶಾಲೆಯ ನಿರ್ದೇಶಕರು ಆದ ಯೋಗೇಶ್ ಕುಮಾರ್ ಮತ್ತು ಸ್ನೇಹಾ ನಾರಾಯಣ್ ದಂಪತಿಗಳಿಂದ ಸೊಗಸಾದ ನೃತ್ಯ ಕಾರ್ಯಕ್ರಮ “ಯುಗಳ ನೃತ್ಯ ಸಂಭ್ರಮ” ಪ್ರಸ್ತುತವಾಗಲಿದೆ. ಈ ವಿಶ್ವ ಕನ್ನಡ ಸಮಾವೇಶದಲ್ಲಿ ರಂಗಸ್ಥಳ ನಾಟಕ, ನಾವಿಕ ಕೋಗಿಲೆ ಗಾಯನ ಸ್ಪರ್ಧೆ, ನೃತ್ಯೋತ್ಸವ ನೃತ್ಯ, ಶೃಂಗಾರ ಸಿರಿ ಫ್ಯಾಶನ್ ಶೋ ಹೀಗೆ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ನಾವಿಕದ ಅತಿಥಿಗಳು

ನಾವಿಕ ಕೋಗಿಲೆ

ಟೀನೇಜ್ ಕೆಟಗರಿಯಲ್ಲಿ ಪ್ರಕೃತಿ ಉಪಾಧ್ಯ, ಸನ್ಮಿತಾ ಹೊಸೂರ್, ನಯನ ಪ್ರಸಾದ್ ಮತ್ತು ತನ್ವಿ ಪ್ರಸಾದ್ ಫೈನಲ್‌ಗೆ ಬಂದಿದ್ದು ಮುಖ್ಯ ವೇದಿಕೆಯಲ್ಲಿ “ಯುವ ನಾವಿಕ ಕೋಗಿಲೆ” ಪ್ರಶಸ್ತಿಗಾಗಿ ಸ್ಪರ್ಧಿಸಲಿದ್ದಾರೆ. ವಯಸ್ಕರ ವಿಭಾಗದಲ್ಲಿ ಅರ್ಚನಾ ಪ್ರದೀಪ್, ಅಕ್ಷಯ್ ರಾವ್, ಮಾಳವಿಕಾ ಪ್ರಸಾದ್, ಅಮೋಘ ಅಯ್ಯರ್, ಸೌಜನ್ಯ ಮೂರ್ತಿ ಮತ್ತು ನಿಶಾಂತ್ ಉಡುಪ ಫೈನಲ್ ರೌಂಡ್‌ಗೆ ಅರ್ಹತೆ ಪಡೆದಿದ್ದಾರೆ. ಈ ಆರು ಜನರಲ್ಲಿ ಯಾರು ಪ್ರತಿಷ್ಠಿತ “ನಾವಿಕ ಕೋಗಿಲೆ” ಪ್ರಶಸ್ತಿಯನ್ನು ಪಡೆಯುತ್ತಾರೆ ಎಂದು ತೀವ್ರ ಕುತೂಹಲ ಮೂಡಿದೆ.

ಶುಚಿ- ರುಚಿಯಾದ ಭರ್ಜರಿ ಊಟ

ಕರ್ನಾಟಕದ ಪ್ರಾದೇಶಿಕ ವೈವಿಧ್ಯಮಯ ಸವಿ ಭೋಜನವನ್ನು ಮೂರು ದಿನಗಳ ಕಾಲ ಉಚಿತವಾಗಿ ಅನುಭವಿಸಿ. ಸಮ್ಮೇಳನಕ್ಕೆ ಬರುವವರಿಗೆಲ್ಲ ʻಬೀಗರೂಟʼದ ಔತಣ ನೀಡೋಕೆ ನಾವು ರೆಡಿ ಎನ್ನುತ್ತಿದ್ದಾರೆ ಆಸ್ಟಿನ್‌ ನಿವಾಸಿ, ಈ ಸಮ್ಮೇಳನದ ಊಟೋಪಚಾರ ಸಮಿತಿಯ ಪ್ರಮುಖರಾದ ಸಂದೀಪ್‌ ಚಕ್ರವರ್ತಿ, ಸಿಯಾಟಲ್‌ನ ಅನಿಲ್‌ ಪುವ್ವಾಡಿ ಮತ್ತವರ ತಂಡ. ಈ ಪಟ್ಟಿಯಲ್ಲಿ ಮಂಗಳೂರು, ಕಾರವಾರ ಉಡುಪಿ ಭಾಗದ ತಿನಿಸುಗಳು, ಇತ್ತ ಉತ್ತರ ಕರ್ನಾಟಕದ ರೊಟ್ಟಿ ಎಣ್ಣೆಗಾಯಿ, ಅತ್ತ ಮೈಸೂರು ಭಾಗದ ಸಿಹಿ ತಿನಿಸುಗಳು, ಬೆಳಗಾವಿಯ ಕುಂದ, ದಾವಣಗೆರೆಯ ಬೆಣ್ಣೆ ದೋಸೆ ಹೀಗೆ ಹತ್ತು ಹಲವು ಬಗೆಯ ತಿಂಡಿ ತಿನಿಸುಗಳಿವೆ. ಸಮ್ಮೇಳನ ನಡೆಯುವ ಹೋಟೆಲ್ಲಿನಲ್ಲೇ ಸುಸಜ್ಜಿತ ಅಡುಗೆಮನೆ ಇರುವುದರಿಂದ ಬಹುತೇಕ ಅಡುಗೆ ಇಲ್ಲಿಯೇ ತಯಾರಿಸಿ ಬಡಿಸಲಾಗುವುದು. ಕೆಲವೊಂದು ಸಿಹಿ ತಿಂಡಿಗಳನ್ನು ಮತ್ತು ರೊಟ್ಟಿ, ಉಪ್ಪುಮೆಣಸು, ಹಪ್ಪಳ, ಸಂಡಿಗೆ ಹೀಗೆ ಒಂದಷ್ಟನ್ನು ಕರ್ನಾಟಕದ ಕೆಲವು ಭಾಗಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಪ್ರತಿಬಾರಿಯ ಊಟದಲ್ಲಿ 9-10 ಐಟಂಗಳು ಇರಲಿವೆ. ಬೆಳಗಿನ ಉಪಹಾರದಲ್ಲಿಯೂ 4-5 ಮಾದರಿಯ ತಿಂಡಿಗಳು ಇರಲಿವೆ. ಊಟದ ಸಮಯದಲ್ಲಿ ಸರತಿಸಾಲುಗಳನ್ನು ವಿಂಗಡಿಸಲಾಗುತ್ತದೆ. ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ನೂಕುನುಗ್ಗಲು ತಪ್ಪಿಸಲು ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ.

ಹೂಡಿಕೆದಾರರಿಗೆ ವಿನೂತನ ವೇದಿಕೆ

“ಬಿಜ್ ಸ್ಪಾರ್ಕ್ – ಇನ್‌ಸ್ಪೈರ್, ಕನೆಕ್ಟ್ ಮತ್ತು ಥ್ರೈವ್” ಅನ್ನುವ ಧ್ಯೇಯದೊಂದಿಗೆ ಹೂಡಿಕೆದಾರರ ಸಮಾವೇಶವನ್ನು ನಾವಿಕದಲ್ಲಿ ಆಯೋಜಿಸಲಾಗಿದೆ. ಉದ್ಯಮದ ಪ್ರಮುಖರೊಂದಿಗೆ ಭೇಟಿ ಮಾಡಿ, ಸೌಹಾರ್ದಯುತ ಪರಿಚಯವನ್ನು ಮಾಡಿಕೊಂಡು ಮೌಲ್ಯಯುತ ಒಳನೋಟಗಳನ್ನು ಪಡೆದುಕೊಳ್ಳುವ ಈ ವಿಶೇಷ ಅವಕಾಶವನ್ನು ಒದಗಿಸಲಾಗಿದೆ. “ಏಳು ಪ್ರಮುಖ ಕಂಪನಿಗಳ ಪ್ರತಿನಿಧಿಗಳು ‌ತಮ್ಮ ಕಂಪನಿಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ವಿವರಿಸಲಿದ್ದಾರೆ” ಎಂದು ಈ ʻಇನ್‌ವೆಸ್ಟ್‌ಮೆಂಟ್‌ ಫೋರಂʼ ಮುಖ್ಯಸ್ಥ ಹಾಗೂ ಸಹ-ಸಂಚಾಲಕರಾದ ಗೌರಿ ಶಂಕರ್‌ ರಂಗನಗೌಡ ತಿಳಿಸಿದರು. ಇನ್‌ವೆಸ್ಟ್‌ಮೆಂಟ್‌ ಫೋರಂ ಸಮಿತಿಯಲ್ಲಿ ಗೌರಿ ಶಂಕರ್‌ ಅವರೊಂದಿಗೆ ಆಸ್ಟಿನ್‌ ನಗರದ ಪ್ರವೀಣ್‌ ಕುಮಾರ್‌, ನ್ಯೂಯಾರ್ಕ್‌ ನಗರದ ಶಿವಕುಮಾರ್‌ ಬೆಂಗಳೂರ್‌, ನ್ಯೂಜರ್ಸಿಯ ಡಾ.ಅಶೋಕ ಕಟ್ಟೀಮನಿ, ಡ್ಯಾಲಸ್‌ ನಗರದ ವೆಂಕಟ್‌ ಗಂಗಲ್‌ ಹಾಗೂ ನಾರಾಯಣ ಮಹಾಜನ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೀಟ್ ಗುರುಸ್

ನಮ್ಮ ಕರುನಾಡ ಕಲೆಯಾದ ಜಾನಪದ ಸಂಗೀತದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಅತ್ಯದ್ಭುತ ಪ್ರಾಕಾರಗಳ ಮೂಲಕ ಜನಪ್ರಿಯಗೊಳಿಸಿರುವ ಹೆಸರಾಂತ ವಾದ್ಯಸಂಗೀತಗಾರರಾದ ಬೀಟ್ ಗುರುಸ್ ತಂಡ ಬರುತ್ತಿದ್ದಾರೆ. 2005ರಲ್ಲಿ ಪ್ರಾರಂಭವಾದ ಬೀಟ್ ಗುರುಸ್ ತಂಡ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ತಾಳವಾದ್ಯ ಸಂಗೀತದ ಮೂಲಕ ಶುದ್ಧ ಸ್ಥಳೀಯ ಹಾಗು ಜಾನಪದ ಶೈಲಿಯನ್ನು ಎಲ್ಲರಿಗೂ ಪರಿಚಯಿಸುತ್ತಿದ್ದಾರೆ.

ಗಂಧದ ಗೊಂಬೆಗಳು

ಈ ಬಾರಿ ಚಿಕ್ಕ ಮಕ್ಕಳಿಗಾಗಿ ಗಂಧದ ಗೊಂಬೆಗಳು ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಮಕ್ಕಳು ಕನ್ನಡದ ಚಾರಿತ್ರಿಕ ವ್ಯಕ್ತಿಗಳ ವೇಷಭೂಷಣದೊಂದಿಗೆ ಕೆಲವು ಆಯ್ದ ಜಾಗಗಳಲ್ಲಿ ನಿಂತಿರುತ್ತಾರೆ. ನೀವು ಈ ಶಿಲಾ ಮೂರ್ತಿಯನ್ನು ಮುಟ್ಟಿದರೆ, ಅದಕ್ಕೆ ಜೀವ ಬಂದು ತನ್ನ ಇತಿಹಾಸವನ್ನು ಹೇಳುತ್ತದೆ.

ಆಧ್ಯಾತ್ಮಿಕ ವೇದಿಕೆ

ಗ್ರ್ಯಾಂಡ್ ಮಾಸ್ಟರ್ ಪ್ರಬೋಧ್ ಅಚ್ಯುತರು ಪ್ರಬುದ್ಧ ಆರೋಗ್ಯ ಮತ್ತು ಆಧ್ಯಾತ್ಮಿಕ ವೇದಿಕೆಯಲ್ಲಿ ಸ್ಪೀಕರ್ ಆಗಿ ಬರುತ್ತಿದ್ದಾರೆ. ಗೌರವಾನ್ವಿತ ವೈದ್ಯರು ಮತ್ತು ಆಧ್ಯಾತ್ಮಿಕ ನಾಯಕರೊಂದಿಗೆ ಈ ವೇದಿಕೆಯಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಶಾಂತಿ, ಸ್ಪಷ್ಟತೆ ಮತ್ತು ಉದ್ದೇಶವನ್ನು ತರುವಂತಹ ಅಭ್ಯಾಸಗಳ ಶಕ್ತಿಯನ್ನು ಅನ್ವೇಷಿಸಬಹುದು.

ಆರೋಗ್ಯ ಮತ್ತು ಆಧ್ಯಾತ್ಮಿಕ ಫೋರಮ್

ಈ ವೇದಿಕೆಯಲ್ಲಿ ಡಾ. ಪದ್ಮಿನಿ ಶಾಮ ಸುಂದರ, ಡಾ. ರಾಮಕೃಷ್ಣರಾವ್ ಮತ್ತು ಡಾ. ಕೃಷ್ಣಮೂರ್ತಿ ಜೋಯಿಸ್ ಮಾತನಾಡಲಿದ್ದಾರೆ. ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅರ್ಚನಾ ಮತ್ತು ಪ್ರಶಾಂತ್ ಕುಲಕರ್ಣಿ ಯೋಗ ಮತ್ತು ಮೆಡಿಟೇಶನ್ ಕ್ಯಾಂಪ್‌ಗಳನ್ನು ನಡೆಸಲಿದ್ದಾರೆ. ಡಾ. ಕೃಷ್ಣಮೂರ್ತಿ ಜೋಯಿಸ್ ಅವರು ಗಣೇಶ ಪೂಜೆಯೊಂದಿಗೆ ನಾವಿಕ ಸಮ್ಮೇಳನವನ್ನು ಆರಂಭಿಸಲಿದ್ದಾರೆ.

ವೈದ್ಯರ ಫೋರಮ್

ಪ್ರಸಿದ್ಧ ವೈದ್ಯರುಗಳು ಈ ವೇದಿಕೆಯಲ್ಲಿ ತಮ್ಮ ಪರಿಣತಿ ಮತ್ತು ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ! ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವೈದ್ಯರು ಮತ್ತು ನಿಯೋಜಿತರಿಗೆ ಓಹಿಯೋ ವೈದ್ಯಕೀಯ ವಿಶ್ವವಿದ್ಯಾನಿಲಯವು 4.00 AMA PRA ವರ್ಗ 1ರ CME ಕ್ರೆಡಿಟ್ ಅನ್ನು ಕೊಡಲಿದ್ದಾರೆ. ಎಂಡಿ ಕೌಶಿಕ್ ತಮ್ಮ ಮ್ಯಾಜಿಕ್ ಶೋನಿಂದ ಎಲ್ಲರನ್ನೂ ಮಂತ್ರ ಮುಗ್ಧ ಮಾಡಲಿದ್ದಾರೆ.

ವೆಂಡರ್ಸ್‌ ಬೂತ್‌

ಇನ್ನು ನಾನಾ ವ್ಯಾಪಾರ ವ್ಯವಹಾರಗಳು, ದೇಶಿ ತಿಂಡಿತಿನಿಸುಗಳು, ಭಾರತೀಯ ಸಿದ್ಧ ಉಡುಗೆ ತೊಡುಗೆ, ಸೀರೆಗಳು, ಜ್ಯುವೆಲರಿ, ಕಾನೂನು ಸಲಹೆ, ವಿಮಾ ಯೋಜನೆ, ಉಳಿತಾಯ ವಿಚಾರಗಳು, ಶೇರು ಮಾರ್ಕೆಟ್‌ ಹೂಡಿಕೆಗಳ ಬಗ್ಗೆ ಮಾಹಿತಿ, ಹೀಗೆ ಹತ್ತು ಹಲವು ವ್ಯಾವಹಾರಿಕ ಮಾದರಿಗಳನ್ನು ಉತ್ತೇಜಿಸಲು ಸಮ್ಮೇಳನದ ಆವರಣದಲ್ಲಿ ವೆಂಡರ್ ಬೂತ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸಮಿತಿಯಲ್ಲಿ ಆಸ್ಟಿನ್‌ ನಗರದ ಸಂತೋಷ ಕೊಂಡಜ್ಜಿ, ಡ್ಯಾಲಸ್ಸಿನ ವಿಷ್ಣುವರ್ಧನ ರೆಡ್ಡಿ ಹಾಗೂ ರಾಘವ ಸೇಟ್‌, ನ್ಯೂಯಾರ್ಕ್‌ ನಗರದ ಪುಷ್ಪಲತ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ: ನಾವಿಕ

Exit mobile version