ಹುಬ್ಬಳ್ಳಿ: ಮಗಳು ನೇಹಾ ಹತ್ಯೆ (Neha Murder Case) ನಡೆದ ಮೇಲೆ ತಮಗೂ ಜೀವ ಬೆದರಿಕೆ ಇದೆ ಎಂದು ನಿರಂಜನ ಹಿರೇಮಠ್ ಅವರು ಹೇಳಿದ ಹಿನ್ನೆಲೆಯಲ್ಲಿ ಅವರಿಗೆ ಗನ್ ಮ್ಯಾನ್, ಮನೆಗೆ ಪೊಲೀಸ್ ಭದ್ರತೆಯನ್ನು ರಾಜ್ಯ ಸರ್ಕಾರ ಏರ್ಪಡಿಸಿದೆ. ನೇಹಾ ಹಿರೇಮಠ್ ಹತ್ಯೆ ಹಿನ್ನೆಲೆ ಸಿಎಂ ಸಿದ್ಧರಾಮಯ್ಯ ಅವರು ನೇಹಾ ತಂದೆ ನಿರಂಜನ್ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿ, ಬೆದರಿಕೆ ಇದ್ದರೆ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ನೇಹಾ ತಂದೆಗೆ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಮಗಳ ಹತ್ಯೆ ನಂತರ ಅನೇಕರು ಬಂದು ಸಾಂತ್ವನ ಹೇಳಿ, ಧೈರ್ಯ ತುಂಬುತ್ತಿದ್ದಾರೆ. ಆದರೆ ಮಗಳ ಹತ್ಯೆಯಾದ ಐದನೇ ದಿನ, ಸಂತಾಪದ ನೆಪದಲ್ಲಿ ಒಬ್ಬರು ನಮ್ಮ ಮನೆಗೆ ಬಂದು ವಿಡಿಯೊ ಮಾಡಿಕೊಂಡು ಹೋಗಿದ್ದಾರೆ. ಕೆಲವೊಂದು ಅನುಮಾನಾಸ್ಪದ ಸನ್ನಿವೇಶ ಕಂಡು ಬಂದಿದೆ. ಕೊಲೆ ಮಾಡುವ ಮುನ್ನ ಆರೋಪಿ ಬಿಡ್ನಾಳದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದ ಎಂದು ತಿಳಿದು ಬಂದಿದೆ. ಇವತ್ತು ಕೆಲ ವ್ಯಕ್ತಿಗಳು ಯಾವುದೊ ಸಂಚು ಹಾಕಿದ್ದಾರೆ ಎಂಬ ಅನುಮಾನ ಬಂದಿದೆ. ಈ ವಿಷಯವನ್ನು ಪೊಲೀಸ್ ಆಯುಕ್ತರಿಗೆ ಹೇಳಿದ್ದೇವೆ, ಅವರು ಭದ್ರತೆ ಕೊಡುವುದಾಗಿ ಹೇಳಿದ್ದು, ಪೊಲೀಸರನ್ನು ನಿಯೋಜಿಸಿದ್ದಾರೆ ಎಂದು ನಿರಂಜನ್ ಗುರುವಾರ ತಿಳಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಏನಿದು ಪ್ರಕರಣ?
ಪ್ರೀತಿಸಲು ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್ ಪ್ರೇಮಿ ಫಯಾಜ್ ಎಂಬಾತ ಕಾರ್ಪೋರೇಟರ್ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದು ಎಸ್ಕೇಪ್ ಆಗಲು ಯತ್ನಿಸಿದ್ದ. ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲೇ ಈ ಹತ್ಯೆ ನಡೆದಿತ್ತು. ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಬರ್ಬರವಾಗಿ ಕೊಲೆಯಾಗಿದ್ದಳು.
ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಓದುತ್ತಿದ್ದಳು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಳು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಆತ ಏ.18ರ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ, ಆದರೆ ನೇಹಾ ಪ್ರೀತಿಸಲು ನಿರಾಕರಿಸಿದ್ದಳು.
ಇದನ್ನೂ ಓದಿ | Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ
ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿ ಫಯಾಜ್ ಏಕಾಏಕಿ ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದ. ಆತನಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದ ನೇಹಾಳನ್ನು ಹಿಡಿದುಕೊಂಡ ಪಾಗಲ್ ಪ್ರೇಮಿ, ಮನಬಂದಂತೆ ಚಾಕುವಿನಿಂದ ಇರಿದಿದ್ದ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದರಿಂದ ನೇಹಾಳಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಅಲ್ಲಿದ್ದವರು ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದರು. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಳು.