ಮೈಸೂರು: ಮೂರು ತಿಂಗಳ ಹಿಂದೆ ಹೊಸ ಬಾಳಿನ ಹೊಸಿಲು ತುಳಿದಿದ್ದ ವಧುವೊಬ್ಬಳು ಇದೀಗ ನೇಣಿಗೆ ಶರಣಾಗಿದ್ದಾಳೆ. ಒಲ್ಲದ ಮದುವೆಯಿಂದ ಬೇಸತ್ತಿದ್ದ ಆಕೆ ಪ್ರಿಯಕರನ ಜತೆ ಓಡಿ ಹೋಗಿದ್ದಳು. ಮನೆಯವರು ಅವರಿಬ್ಬರನ್ನು ಪತ್ತೆ ಹಚ್ಚಿ ಯುವತಿಯನ್ನು ಮನೆಗೆ ಕರೆ ತಂದಿದ್ದರು. ಈಗ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ.
ಈ ಘಟನೆ ನಡೆದಿರುವುದು ಮೈಸೂರಿನ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ. ವರ್ಷಿತಾ (೨೦) ಪ್ರಾಣ ಕಳೆದುಕೊಂಡ ವಧು.
ಯಾಕೇ ಹೀಗಾಯ್ತು?
ಎಂ. ನಾಗರಾಜು ಅವರ ಪುತ್ರಿ ೨೦ ವರ್ಷದ ವರ್ಷಿತಾಳ ಮದುವೆ ಕಳೆದ ಮೇ ೮ರಂದು ಚಾಮರಾಜ ನಗರದ ಅಭಿಷೇಕ್ ಜತೆಗೆ ಅದ್ಧೂರಿಯಾಗಿ ನಡೆದಿತ್ತು. ಆದರೆ, ಈ ಮದುವೆ ವರ್ಷಿತಾಗೆ ಇಷ್ಟವಿರಲಿಲ್ಲ. ಯಾಕೆಂದರೆ, ಆಕೆ ಅದಾಗಲೇ ಪಕ್ಕದ ಮನೆಯ ಕಿರಣ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಮಗಳ ಮನವೊಲಿಸಿದ್ದ ಹೆತ್ತವರು ಮದುವೆ ನೆರವೇರಿಸಿದ್ದರು.
ಈ ನಡುವೆ ವರ್ಷಿತಾ ಆಷಾಢ ಮಾಸಕ್ಕೆ ತವರು ಮನೆಗೆ ಬಂದಿದ್ದಳು. ಈ ಹಂತದಲ್ಲಿ ಮತ್ತೆ ಕಿರಣ್ ಜತೆಗೆ ಸಂಪರ್ಕ ಗಟ್ಟಿಗೊಂಡು ಅವರಿಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದರು. ವರ್ಷಿತಾ ಕಾಣೆಯಾದ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರು ಮತ್ತು ಮನೆಯವರು ಹುಡುಕಿದ ಪರಿಣಾಮವಾಗಿ ಪ್ರೇಮಿಗಳು ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದರು. ವಾಪಸ್ ಕರೆತಂದ ಪೊಲೀಸರು, ಇಬ್ಬರಿಗೂ ಬುದ್ಧಿವಾದ ಹೇಳಿ ಅವರವರ ಮನೆಗೆ ಕಳುಹಿಸಿದ್ದರು. ಬಳಿಕ ವರ್ಷಿತಾ ಮೈಸೂರಿನಲ್ಲಿದ್ದ ಸಂಬಂಧಿಕರ ಮನೆಗೆ ಬಂದಿದ್ದಳು. ಅಲ್ಲಿ ಮೂರು ದಿನ ಇದ್ದ ಆಕೆ ಎಲ್ಲವೂ ಸರಿ ಹೋಯಿತು ಎಂಬಂತೆ ವರ್ತಿಸುತ್ತಿದ್ದಳು. ಅಲ್ಲಿಂದ ಆಕೆ ಬಳಿಕ ರಾಂಪುರ ಗ್ರಾಮದಲ್ಲಿರುವ ತಾತನ ಮನೆಗೆ ಹೋಗಿದ್ದಳು. ಅಲ್ಲಿ ಮನೆಯ ವಾಷ್ ರೂಮನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಪ್ರಿಯಕರನಿಂದ ಬೇರ್ಪಡಿಸಿದ್ದರಿಂದ ಆಕೆ ತೀವ್ರವಾಗಿ ನೊಂದಿದ್ದಳು. ಪೋಷಕರ ಮನಸು ಅವಳಿಗೆ ಅರ್ಥವಾಗಲಿಲ್ಲ. ಅವಳ ಮನಸು ಇವರಿಗೆ ಅರ್ಥವಾಗಲಿಲ್ಲ. ಅಂತಿಮವಾಗಿ ಹೆಣ್ಣು ಮಗಳೊಬ್ಬಳು ಪ್ರಾಣ ಕಳೆದುಕೊಳ್ಳುವಂತಾಯಿತು. ಇದನ್ನೆಲ್ಲ ನೋಡಿ ಬಿಕ್ಕಿ ಬಿಕ್ಕಿ ಅಳುವ ಸರದಿ ಮನೆಯವರದ್ದು.
ಇದನ್ನೂ ಓದಿ Suicide case | ಜನ್ಮದಿನವೇ ಆತ್ಮಹತ್ಯೆ ಮಾಡಿಕೊಂಡ ಕಾಲೇಜು ಉಪನ್ಯಾಸಕಿ