ಬೆಂಗಳೂರು: ಬೆಂಗಳೂರಿನ ಪುಲಿಕೇಶಿ ನಗರದಲ್ಲಿರುವ ಪ್ರಧಾನ ಕಚೇರಿಯೂ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರಾಷ್ಟ್ರೀಯ ತನಿಖಾ ದಳವು ಪಾಪ್ಯುಲರ್ ಫ್ರಂಟ್ ಕಚೇರಿಗಳು ಹಾಗೂ ಮುಖಂಡರ ಮನೆಗಳ ಮೇಲೆ ದಾಳಿ ಮಾಡಿದೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ನಡೆದ ದಾಳಿಯಲ್ಲಿ ಒಟ್ಟು ೨೦ ಮಂದಿ ಮುಖಂಡರನ್ನು ಎನ್‌ಐಎ ವಶಕ್ಕೆ ಪಡೆದಿದೆ. ಕೆಲವು ನಾಯಕರನ್ನು ಆಯಾ ಜಿಲ್ಲೆಗಳಲ್ಲೇ ವಿಚಾರಣೆ ನಡೆಸುತ್ತಿದ್ದರೆ ಕೆಲವರನ್ನು ಬೆಂಗಳೂರಿಗೆ ಕರೆತರಲಾಗಿದೆ.
ಯಾವ ರಾಜ್ಯದಲ್ಲಿ ಎಷ್ಟು?
ದೇಶದಲ್ಲಿ ೧೩ ರಾಜ್ಯಗಳಲ್ಲಿ ದಾಳಿ ನಡೆದಿದ್ದು ೧೦೦ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅವುಗಳ ಪೈಕಿ ಕೇರಳದಲ್ಲಿ ಅತ್ಯಂತ ಹೆಚ್ಚು ಅಂದರೆ ೨೨ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಕರ್ನಾಟಕದಲ್ಲಿ 20 ಮಂದಿ, ಮಹಾರಾಷ್ಟ್ರದಲ್ಲಿ 20 ಮಂದಿ, ತಮಿಳುನಾಡಿನಲ್ಲಿ 10 ಮಂದಿ, ಅಸ್ಸಾಂನಲ್ಲಿ 9, ಉತ್ತರಪ್ರದೇಶದಲ್ಲಿ 8 ಮಂದಿ, ಆಂಧ್ರಪ್ರದೇಶದಲ್ಲಿ 5 ಮಂದಿ, ಮಧ್ಯಪ್ರದೇಶದಲ್ಲಿ 4 ಮಂದಿ, ದೆಹಲಿ, ಪುದುಚೇರಿಯಲ್ಲಿ ತಲಾ ಮೂವರು, ರಾಜಸ್ಥಾನದಲ್ಲಿ ಇಬ್ಬರನ್ನು.. ಹೀಗೆ ದೇಶದಲ್ಲಿ ೧೦೬ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನ ಪುಲಿಕೇಶಿ ನಗರದಲ್ಲಿರುವ ಪಿಎಫ್‌ಐ ಕಚೇರಿ, ಮಂಗಳೂರಿನ ನೆಲ್ಲಿಕಾಯಿ ಮಠದ ರಸ್ತೆಯಲ್ಲಿರುವ ಕಚೇರಿಗೆ ದಾಳಿ ನಡೆದಿದೆ. ಉಳಿದಂತೆ ಬೆಂಗಳೂರಿನ ಸುಮಾರು ೧೨ ಮುಖಂಡರು, ದಕ್ಷಿಣ ಕನ್ನಡದಲ್ಲಿ ಆರು ಮುಖಂಡರ ಮನೆಗೆ ದಾಳಿ ನಡೆದಿದೆ.
ಸೂಕ್ತ ದಾಖಲೆಗಳೊಂದಿಗೆ ದಾಳಿ ನಡೆಸಿದ್ದು, ಇನ್ನಷ್ಟು ದಾಖಲೆಗಳು ದಾಳಿಯ ವೇಳೆ ಸಿಕ್ಕಿವೆ ಎನ್ನಲಾಗಿದೆ. ಬಹುತೇಕ ಕಡೆಗಳಲ್ಲಿ ದಾಳಿ ಅಂತ್ಯಗೊಂಡಿದೆ. ಮಹಜರು ಮತ್ತು ವಶದಲ್ಲಿರುವ ವ್ಯಕ್ತಿಗಳ ವಿಚಾರಣೆ ಬಳಿಕ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಗಳಿವೆ.
ಯಾರೆಲ್ಲ ಎನ್‌ಐಎ ವಶದಲ್ಲಿದ್ದಾರೆ?
ಬೆಂಗಳೂರು (೫ ಮಂದಿ): ಪಿಎಫ್‌ಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹಮದ್, ರಾಷ್ಟ್ರೀಯ ಕಾರ್ಯದರ್ಶಿ ಅಫ್ಸರ್ ಪಾಷಾ, ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಅಬ್ದುಲ್ ವಹೀದ್ ಸೇಠ್, ರಾಷ್ಟ್ರೀಯ ಮಾಧ್ಯಮ ಕಾರ್ಯದರ್ಶಿ ಮಹಮ್ಮದ್ ಶಕೀಬ್, ರಾಜ್ಯ ಕಾರ್ಯಕಾರಿಣಿ ಸಮಿತಿಯ ಯಾಸಿರ್ ಹಸನ್.
ಕೊಪ್ಪಳ: ಪಿಎಫ್ಐ ಕೊಪ್ಪಳ ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜ್
ಉತ್ತರ ಕನ್ನಡ (ಇಬ್ಬರು): ಶಿರಸಿಯ ಟಿಪ್ಪು ನಗರದ ಎಸ್‌ಡಿಪಿಐ ಮುಖಂಡ ಅಬ್ದುಲ್ ಹೊನ್ನಾವರ್(45), ಕಾರವಾರದ ಟಿಪ್ಪು ನಗರ ನಿವಾಸಿ ಎಸ್‌ಡಿಪಿಐ ಮುಖಂಡ ಅಬ್ದುಲ್ ಅಜೀಜ್ ಶುಕುರ್(45)
ಮೈಸೂರು: ಪಿಎಫ್ಐ ಸಂಘಟನೆ ಜಿಲ್ಲಾ ಮಾಜಿ ಅಧ್ಯಕ್ಷ ಮೌಲಾನ ಮಹಮ್ಮದ್ ಖಲಿಂ ಉಲ್ಲಾ
ಶಿವಮೊಗ್ಗ(ಇಬ್ಬರು): ಪಿಎಫ್ಐ ವಲಯ ಸಂಯೋಜಕ ಶಾಹಿದ್ ಖಾನ್, ಶಿವಮೊಗ್ಗದ ಟಿಪ್ಪು ನಗರ ನಿವಾಸಿ, ಎಸ್‌ಡಿಪಿಐ ಮಾಜಿ ರಾಜ್ಯಾಧ್ಯಕ್ಷ ಸಲೀಮ್ ಖಾನ್
ದಾವಣಗೆರೆ (೨): ಪಿಎಫ್ಐ ಮುಖಂಡ ಇಮಾನುದ್ದೀನ್, ಹರಿಹರ ಮೂಲದ ಅಬು ತಾಹೀರ್
ದಕ್ಷಿಣ ಕನ್ನಡ (೩): ಪಿಎಫ್ ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಜೋಕಟ್ಟೆ, ಮೊಯಿದ್ದೀನ್ ಹಳೆಯಂಗಡಿ, ಪಿಎಫ್ ಐ ಗ್ರಾಮಾಂತರ ಜಿಲ್ಲಾಧ್ಯಕ್ಷ ನವಾಜ್ ಕಾವೂರು
ಇದನ್ನೂ ಓದಿ | NIA Raid | ಹಿಜಾಬ್ ಗಲಾಟೆಯಿಂದ ಹಿಡಿದು ಆರ್‌ಎಸ್‌ಎಸ್ ಪ್ರಮುಖರ ಹತ್ಯೆವರೆಗೆ ಪಿಎಫ್‌ಐ ವಿರುದ್ಧ ಹಲವು ಆರೋಪ