ಮಂಗಳೂರು: ದಕ್ಷಿಣ ಕನ್ನಡದಲ್ಲಿ ಪಿಎಫ್‌ಐ ನಾಯಕನಾಗಿ ಸಾಕಷ್ಟು ಸುದ್ದಿಯಲ್ಲಿರುವ ʻತಾಂಟ್ರೆ ಬಾ ತಾಂಟ್ʼ ಎಂಬ ಘೋಷಣೆಯ ಮೂಲಕ ಹೆಸರಾದ ರಿಯಾಜ್ ಪರಂಗಿಪೇಟೆ ಮನೆಗೆ ಗುರುವಾರ ರಾಷ್ಟ್ರೀಯ ತನಿಖಾ ದಳ (NIA RAID) ದಾಳಿ ನಡೆಸಿದೆ. ದಾಳಿಯ ವೇಳೆ ರಿಯಾಜ್ ಪರಂಗಿಪೇಟೆ ಮನೆಯಲ್ಲೇ ಇದ್ದು, ಈಗ ವಿಚಾರಣೆ ನಡೆಯುತ್ತಿದೆ. ಇದು ಕಳೆದ ಜುಲೈ ೨೬ರಂದು ನಡೆದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಸಂಬಂಧ ನಡೆದ ದಾಳಿ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ, ಈಗ ಅದರ ಕೊಂಡಿಗಳು ಬಿಹಾರದತ್ತ ಚಾಚಿಕೊಳ್ಳುವಂತೆ ಕಾಣುತ್ತಿದೆ.
ಕಳೆದ ಜುಲೈ ೧೩ರಂದು ಬಿಹಾರದ ಪುಲ್ವಾರಿ ಷರೀಫ್‌ನಲ್ಲಿ ಪಿಎಫ್‌ಐ ಸಂಘಟನೆಗೆ ಸೇರಿದ ಮೂವರನ್ನು ಬಂಧಿಸಲಾಗಿತ್ತು. ನಿವೃತ್ತ ಜಾರ್ಖಂಡ್ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾಲುದ್ದೀನ್, ಅಥರ್ ಪರ್ವೇಜ್ ಮತ್ತು ನೂರುದ್ದೀನ್ ಜಂಗಿ ಎಂಬವರೇ ಬಂಧಿತರು. ಇವರ ಬಂಧನದ ಮೂಲಕ ಬಿಹಾರಲ್ಲಿ ನಡೆಯುತ್ತಿದ್ದ ಟೆರರ್ ಕಾರ್ಯಾಚರಣೆಯ ಕಾರ್ಯತಂತ್ರಗಳು ಬಯಲಾಗಿದ್ದವು. ಇವರು ಪ್ರಧಾನಿ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮದಲ್ಲಿ ದುಷ್ಟ ಕೃತ್ಯ ನಡೆಸಲು ಮುಂದಾಗಿದ್ದರು ಎಂಬ ಅಂಶವೂ ಹೊರಬಿದ್ದಿತ್ತು. ಈ ಷಡ್ಯಂತ್ರದ ಹಿಂದೆ ದೇಶವ್ಯಾಪಿ ಜಾಲವೊಂದು ಕಾರ್ಯ ನಿರ್ವಹಿಸುತ್ತಿದೆ ಎಂಬ ಸಂಶಯವೂ ಇತ್ತು. ರಾಷ್ಟ್ರೀಯ ತನಿಖಾ ದಳ ಇದನ್ನು ಭೇದಿಸುವ ಪ್ರಯತ್ನವನ್ನು ಮಾಡಿದ್ದು, ಹಲವು ಕಡೆ ದಾಳಿ ನಡೆಸಿದೆ.
ಗುರುವಾರ ಎನ್‌ಐಎ ಬಿಹಾರ ಸೇರಿದಂತೆ ೩೦ ಕಡೆಗಳಲ್ಲಿ ಪಿಎಫ್‌ಐ ಸಂಘಟನೆಯ ನಾಯಕರ ಮೇಲೆ ದಾಳಿ ಮಾಡಿದೆ. ಅದರ ಭಾಗವೇ ರಿಯಾಜ್ ಪರಂಗಿಪೇಟೆ ಮನೆ ಮೇಲಿನ ದಾಳಿ ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಒಂದು ತಂಡ ಈಗಾಗಲೇ ಮಂಗಳೂರನ್ನು ಕೇಂದ್ರೀಕರಿಸಿ ಕಾರ್ಯಾಚರಣೆ ನಡೆಸುತ್ತಿದೆ. ಅದು ಕೂಡಾ ಪಿಎಫ್‌ಐನ್ನೇ ಆಧಾರವಾಗಿಟ್ಟುಕೊಂಡು ಬಲೆ ಬೀಸುತ್ತಿದೆ. ಈಗ ಬಿಹಾರದಿಂದಲೂ ನಾಲ್ವರ ತಂಡ ಆಗಮಿಸಿದೆ. ಬಿಹಾರದ ನಾಲ್ವರು ಮತ್ತು ಮಂಗಳೂರಿನಲ್ಲಿರುವ ನಾಲ್ವರು ಅಧಿಕಾರಿಗಳು ಸೇರಿ ರಿಯಾಜ್ ಫರಂಗಿಪೇಟೆ ಮನೆಗೆ ದಾಳಿ ಮಾಡಿದ್ದಾರೆ. ಅಲ್ಲಿ ಸಾಕಷ್ಟು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ತಾಂಟ್ರೆ ಬಾ ತಾಂಟ್?
ರಿಯಾಜ್ ಪರಂಗಿಪೇಟೆ ಈ ಭಾಗದಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐಗೆ ಪ್ರಮುಖ ನಾಯಕರು ಹಾಗೂ ಪ್ರಖರ ಭಾಷಣಕಾರರು. ಆರೆಸ್ಸೆಸ್‌ಗೆ ಸಡ್ಡು ಹೊಡೆದೇ ಹೊಡೆಯುತ್ತೇವೆ ಎಂದು ನೇರವಾಗಿ ಹೇಳುವವರು. ಇದೇ ಕಾರಣಕ್ಕಾಗಿ ಅವರ ಪ್ರಖರ ಭಾಷಣದ ನಡುವೆ ಹೊರಹೊಮ್ಮಿದ ʻತಾಂಟ್ರೆ ಬಾ ತಾಂಟ್ʼ ಎಂಬ ಘೋಷಣೆ ಭಾರಿ ಜನಪ್ರಿಯವಾಗಿತ್ತು. ʻನೀವು ನಮ್ಮ ಮೇಲೆ ದಾಳಿ ಮಾಡಿದರೆ ನಾವೂ ದಾಳಿಗೆ ಸಿದ್ಧʼ ಎಂಬರ್ಥದ ಮಾತಿದು. ತಾಕತ್ತಿದ್ದರೆ ಬಾ ಎಂದು ಆಹ್ವಾನಿಸುವ ಧ್ವನಿಯೂ ಇದಕ್ಕಿದೆ. ಶಬ್ದಾರ್ಥದಲ್ಲಿ ಹೇಳುವುದಾದರೆ ʻನನಗೆ ತಾಗ್ತೀಯಾ(ಡಿಕ್ಕಿ ಹೊಡಿತೀಯಾ) ಬಾ ತಾಗುʼ ಎಂದಾಗುತ್ತದೆ. ರಿಯಾಜ್ ಪರಂಗಿಪೇಟೆಯ ಇಂಥ ಭಾಷಣಗಳು ಒಂದು ಸಮುದಾಯದ ಜನರಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿವೆ.
ಬಿಹಾರದ ಕನೆಕ್ಷನ್ ಹೇಗೆ?
ಬಿಹಾರದ ಪುಲ್ವಾರಿ ಷರೀಫ್‌ನಲ್ಲಿ ಜಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇಳೆ ದಾಳಿಗೆ ಸಂಚು ನಡೆಸುತ್ತಿದ್ದರು ಎಂಬ ಆರೋಪದಲ್ಲಿ ಬಂಧಿತರಾಗಿರುವ ಆಥರ್ ಪರ್ವೇಜ್ ಮತ್ತು ಜಲಾಲುದ್ದೀನ್ ಜತೆಗೆ ರಿಯಾಜ್ ಪರಂಗಿಪೇಟೆಗೆ ನಂಟಿದೆ ಎನ್ನುವುದು ಬಿಹಾರದಲ್ಲಿ ನಡೆದ ತನಿಖೆ ವೇಳೆ ಬಯಲಾಗಿದೆ ಎನ್ನಲಾಗಿದೆ.
ಇವರಿಬ್ಬರ ಜತೆ ರಿಯಾಜ್‌ಗೆ ಫೋನ್ ಸಂಪರ್ಕವಿರುವುದು ಮಾತ್ರವಲ್ಲ, ಬಿಹಾರದಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಆತ ಭಾಗಿಯಾಗಿದ್ದ ಎಂಬ ಅಂಶವೂ ಎನ್‌ಐಎ ತನಿಖೆ ವೇಳೆ ಬಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಮೊದಲು ಅಶಾಂತಿ ಮೂಡಿಸುವ ಯತ್ನದ ಸಂಚುಕೋರರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ರಿಯಾಜ್ ಫರಂಗಿಪೇಟೆ ಭಾಗವಹಿಸಿದ್ದ ಎಂಬ ದಾಖಲೆಯನ್ನು ಎನ್‌ಐಎ ಸಂಗ್ರಹಿಸಿದೆ. ಸಂಚು ರೂಪಿಸುವ ಸಂದರ್ಭದಲ್ಲೂ ಸಂಚುಕೋರರು ರಿಯಾಜ್ ಜೊತೆ ದೂರವಾಣಿಯಲ್ಲಿ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ. ಇದಿಷ್ಟೂ ಮಾಹಿತಿಯನ್ನು ಪಡೆದುಕೊಂಡ ಬಿಹಾರದ ತಂಡ ರಿಯಾಜ್ ಮನೆಗೆ ಲಗ್ಗೆ ಇಟ್ಟಿದೆ.
ಏನಿದು ಪುಲ್ವಾರಿ ಷರೀಫ್ ಕೇಸ್? ೨೦೪೭ರಲ್ಲಿ ಇಸ್ಲಾಮಿಕ್ ರೂಲ್?
ಬಿಹಾರದಲ್ಲಿ ನಡೆದ ಪ್ರಧಾನಿ ಮೋದಿ ಅವರ ಕಾರ್ಯಕ್ರಮವನ್ನು ಹಾಳುಗೆಡವಲು ಮತ್ತು ಅವರ ಮೇಲೆ ದಾಳಿ ನಡೆಸಲು ಒಂದು ಸಂಚು ನಡೆದಿತ್ತು ಎಂಬ ಅಂಶದ ಬೆನ್ನು ಹತ್ತಿದ ಪೊಲೀಸರು ಕಳೆದ ಜುಲೈ ೧೩ರಂದು ಪುಲ್ವಾರಿ ಷರೀಫ್‌ನಲ್ಲಿ ಪಿಎಫ್‌ಐ ಸಂಘಟನೆಗೆ ಸೇರಿದ ಮೂವರನ್ನು ಬಂಧಿಸಿತ್ತು. ನಿವೃತ್ತ ಜಾರ್ಖಂಡ್ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾಲುದ್ದೀನ್, ಅಥರ್ ಪರ್ವೇಜ್ ಮತ್ತು ನೂರುದ್ದೀನ್ ಜಂಗಿ ಎಂಬವರೇ ಬಂಧಿತರು.ಇವರ ವಿಚಾರಣೆಯ ವೇಳೆ ಭಯಾನಕ ಸತ್ಯಗಳು ಹೊರಬಿದ್ದಿದ್ದವು.
ಬಂಧಿತರಾದ ಉಗ್ರರಿಂದ ಪಾಟ್ನಾ ಪೊಲೀಸರು ಎರಡು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ ಒಂದು ೮ ಪುಟಗಳ ಸುದೀರ್ಘ ಡಾಕ್ಯುಮೆಂಟ್ ʼ2047ರ ವೇಳೆಗೆ ಭಾರತದಲ್ಲಿ ಸಂಪೂರ್ಣವಾಗಿ ಇಸ್ಲಾಮಿಕ್ ಆಡಳಿತ(Islamic rule in the country by 2047)ʼ ಎಂಬ ತಲೆ ಬರಹ ಹೊಂದಿದೆ. ಅಂದರೆ ಇನ್ನು 25ವರ್ಷಗಳಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸುವ ಪ್ರಯತ್ನಗಳ ಬಗ್ಗೆ ಇದರಲ್ಲಿ ಉಲ್ಲೇಖವಿತ್ತು. ಅದರ ಹೊರತಾಗಿಯೂ ಈ ಉಗ್ರ ಘಟಕದಲ್ಲಿ ಇದ್ದ, ಇಸ್ಲಾಮಿಕ್ ಉಗ್ರ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ಸೇರಿದ ಹಲವು ಧ್ವಜಗಳು, ಪೋಸ್ಟರ್‌ಗಳು, ಕರಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಪಿಎಫ್‌ಐ ಸಂಘಟನೆ ಭಾರತದಲ್ಲಿ ಅದೆಷ್ಟು ಉಗ್ರ ಚಟುವಟಿಕೆ ನಡೆಸುತ್ತಿದೆ, ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸಲು ಏನೆಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ ಹಾಗೂ ಅದಕ್ಕಾಗಿ ಯಾವೆಲ್ಲ ದೇಶಗಳ ಸಹಕಾರ ಪಡೆಯುತ್ತಿದೆ ಎಂಬುದಕ್ಕೆ ಈ ದಾಖಲೆಗಳು ಕೈಗನ್ನಡಿಯಂತಿವೆ ಎಂದು ಎನ್‌ಐಎ ಹೇಳಿತ್ತು. ʼಒಟ್ಟಾರೆ ಮುಸ್ಲಿಮರಲ್ಲಿ ಶೇ.10ರಷ್ಟು ಜನರು ನಮ್ಮ ಬೆನ್ನ ಹಿಂದೆ ಬೆಂಬಲವಾಗಿ ಇದ್ದರೆ ಸಾಕು. ನಾವು ಈ ಹೇಡಿಗಳಾದ ಬಹುಸಂಖ್ಯಾತ ಸಮುದಾಯವನ್ನು ಸಂಪೂರ್ಣವಾಗಿ ನಿಗ್ರಹಿಸುತ್ತೇವೆ. ಅವರು ನಮ್ಮ ಅಧೀನದಲ್ಲಿ ಇರುವಂತೆ ಮಾಡುತ್ತೇವೆ. ಇಸ್ಲಾಂ ವೈಭವ ಮರುಕಳಿಸುವಂತೆ ಮಾಡುತ್ತೇವೆʼ ಎಂಬ ಸಾಲುಗಳನ್ನು ಕೂಡ ಈ ಡಾಕ್ಯುಮೆಂಟ್‌ನಲ್ಲಿ ಪಿಎಫ್‌ಐ ಬರೆದುಕೊಂಡಿತ್ತು. ಈ ಉಗ್ರರು ಮಾರ್ಶಲ್ ಆರ್ಟ್ಸ್ ಕಲಿಸುವ ನೆಪದಲ್ಲಿ ಸ್ಥಳೀಯ ಯುವಕರನ್ನು ಸೆಳೆದು ಮಾರಕಾಸ್ತ್ರಗಳ ಪ್ರಯೋಗ ಹೇಳಿಕೊಡುತ್ತಿದ್ದರು ಎಂಬುದೂ ಗೊತ್ತಾಗಿತ್ತು. ಇಂಥ ಸಂಘಟನೆ ಜತೆಗಿನ ನಂಟು ಈಗ ರಿಯಾಜ್ ಪರಂಗಿಪೇಟೆ ಕೊರಳಿಗೆ ಸುತ್ತಿಕೊಂಡಿದೆ.
ಗುರುವಾರವೇ ದೇಶದ ಹಲವೆಡೆ ದಾಳಿ
ಬಿಹಾರದ ಟೆರರ್ ಮಾದರಿಯನ್ನು ಸದೆಬಡಿಯುವ ಉದ್ದೇಶದಿಂದ ಎನ್‌ಐಎ ಗುರುವಾರ ದೇಶದ ಹಲವೆಡೆ ಶಂಕಿತರ ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದೆ. ಪ್ರಮುಖವಾಗಿ ಬಿಹಾರದ ಕೆಲವು ಭಾಗಗಳಾದ ಛಪ್ರಾ, ಆರಾರಿಯಾ, ಔರಂಗಾಬಾದ್, ಕಿಷನ್‌ಗಂಜ್, ನಳಂದಾ ಹಾಗೂ ಜೆಹನಾಬಾದ್‌ನಲ್ಲಿ ದಾಳಿಗಳು ನಡೆದಿವೆ.
ಇದನ್ನೂ ಓದಿ |ಬಂಧಿತ ಉಗ್ರರ ಬಳಿಯಿದ್ದ ದಾಖಲೆಯಲ್ಲಿದೆ ಶಾಕಿಂಗ್ ವಿಷಯ; ಪಿಎಫ್‌ಐ ಯೋಜನೆ ಬಹಿರಂಗ !