Site icon Vistara News

NIA Raid | ಎನ್‌ಐಎ ಬಂಧಿಸಿರುವ ಬೆಂಗಳೂರಿನ ಏಳು ಪಿಎಫ್‌ಐ ಮುಖಂಡರ ಸಂಪೂರ್ಣ ಕ್ರೈಂ ಹಿಸ್ಟರಿ ಇಲ್ಲಿದೆ!

PFI Ban

ಬೆಂಗಳೂರು: ಗುರುವಾರ ಬೆಂಗಳೂರಿನಲ್ಲಿ ನಡೆದ ಎನ್‌ಐಎ ದಾಳಿಯಲ್ಲಿ ಬಂಧಿತರಾದ ಏಳು ಮಂದಿ ಪಿಎಫ್‌ಐ ಮುಖಂಡರನ್ನು ದಿಲ್ಲಿಗೆ ಕರೆದೊಯ್ಯಲಾಗಿದೆ. ದೇಶದ ೧೩ ರಾಜ್ಯಗಳಲ್ಲಿ ಗುರುವಾರ ಬಂಧಿತರಾದ ಎಲ್ಲ ೪೫ ಮಂದಿಯನ್ನೂ ದಿಲ್ಲಿಗೆ ಕರೆದೊಯ್ದು ಅಲ್ಲಿನ ಸ್ಪೆಷಲ್‌ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.

ಎನ್‌ಐಎ ಕಳೆದ ಮೂರು ತಿಂಗಳಿನಿಂದ ಭಾರಿ ಸಿದ್ಧತೆಗಳನ್ನು ಮಾಡಿ ಈ ದಾಳಿ ಮಾಡಿದೆ. ಪಿಎಫ್​ಐನ ಪ್ರತಿ ಮುಖಂಡ, ಪ್ರಮುಖರ ಮಾಹಿತಿ ಕಲೆಯನ್ನು ಕಲೆ ಹಾಕಿದ್ದಲ್ಲದೆ, ಅವರು ಯಾವ ಟೈಂನಲ್ಲಿ ಮನೆಯಲ್ಲಿರ್ತಾರೆ, ಎಷ್ಟು ಹೊತ್ತಿಗೆ ಹೊರಗೆ ಹೋಗುತ್ತಾರೆ ಎಂದು ಕಣ್ಣಿಟ್ಟಿತ್ತು. ಎನ್‌ಐಎ ಈ ಹಿಂದೆಯೇ ಬಂಧನಕ್ಕೆ ಸ್ಕೆಚ್‌ ಹಾಕಿತ್ತಾದರೂ ಕೇರಳದ ಮಲಪ್ಪುರಂನಲ್ಲಿ ಸಭೆ ಇದ್ದುದರಿಂದ ವಿಳಂಬವಾಗಿದೆ. ಪಿಎಫ್‌ಐ ನಾಯಕರು ಮೀಟಿಂಗ್​ಗೆ ತೆರಳಿದ ಹಿನ್ನೆಲೆಯಲ್ಲಿ ವಿಳಂಬ ಮಾಡಲಾಯಿತು. ಆದರೆ, ಗುರುವಾರ ಎಲ್ಲ ಮುಖಂಡರು ಬೆಂಗಳೂರಲ್ಲೇ ಇದ್ದರು ಎಂಬುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಲಾಗಿದೆ.

ಹಾಗಿದ್ದರೆ, ಎನ್‌ಐಎ ಬಂಧಿಸಿರುವ ಏಳು ಮಂದಿ ಪಿಎಫ್‌ಐ ನಾಯಕರ ಹಿಸ್ಟರಿ ಏನು? ಇಲ್ಲಿದೆ ಮಾಹಿತಿ
1. ಅನೀಸ್ ಅಹಮದ್
ಪಿಎಫ್​ಐನ ರಾಜ್ಯ ಮಟ್ಟದ ನಾಯಕನಾಗಿರುವ ಅನೀಸ್‌ ಮಹಮ್ಮದ್‌ ಕಳೆದ ಹತ್ತು ದಿನಗಳಿಂದ ಮಲಬಾರ್‌ ಕಾನ್ಫರೆನ್ಸ್‌ ಎಂಬ ಹೆಸರಿನಡಿ ಮೀಟಿಂಗ್‌ ನಡೆಸುತ್ತಿದ್ದ. ಬೆಂಗಳೂರು ಮೂಲದವನಾದ ಅನೀಸ್​ ಅಹ್ಮದ್​ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿದ್ದಾನೆ.

೨. ಅಫ್ಸರ್ ಪಾಷಾ
ಈತನೂ ರಾಜ್ಯದ ಮಟ್ಟದ ನಾಯಕನಾಗಿದ್ದು, ಈತನ ಮೇಲೆ ಒಂದೂವರೆ ವರ್ಷದ ಹಿಂದೆ ಇ.ಡಿ. ದಾಳಿ ನಡೆದಿತ್ತು. ಅಕ್ರಮ ಹಣ ವರ್ಗಾವಣೆ ಸಂಬಂಧ ದಾಳಿ ನಡೆದಿತ್ತು. ಆಗ ಈತನ ಮನೆಯಲ್ಲಿ ಜಗಳ ನಡೆದು ಆತ ದರಾಯನಪುರದ ಟೆಲಿಕಾಂ ಲೇಔಟ್​ನ ಬಾಡಿಗೆ ಮನೆಗೆ ಶಿಫ್ಟ್​ ಆಗಿದ್ದ. ಅಪ್ಸರ್‌ ಪಾಷಾನಿಗೆ ವಿಜಯನಗರದಲ್ಲಿ ಲಸ್ಸಿ ಶಾಪ್ ಒಂದಿದೆ.

3. ಅಬ್ದುಲ್ ವಹೀದ್
ಜಯಮಹಲ್ ಪ್ಯಾಲೇಸ್ ಹತ್ತಿರ ವಾಸವಿದ್ದ ಅಬ್ದುಲ್ ವಹೀಬ್‌ ಮೂಲತಃ ತಮಿಳುನಾಡಿನವನು. ಇಲ್ಲಿಗೆ ಬಂದು ನೆಲೆಸಿದ್ದ ಆತನ ಪಿಎಫ್‌ಐನ ರಾಜ್ಯ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಆಗಿದ್ದ.

4. ಯಾಸಿರ್ ಅರಾಫತ್‌ ಹಸನ್​​
ಮೂಲತಃ ಮಂಗಳೂರಿನವನಾದ ಯಾಸಿರ್​ ಅರಾಫತ್​ ಬೆಂಗಳೂರಲ್ಲಿ PFI ಕಾರ್ಯಚಟುವಟಿಕೆ ನೋಡಿಕೊಳ್ಳುತ್ತಿದ್ದ. ಕಾವಲ ಬೈರಸಂದ್ರದಲ್ಲಿ ಮನೆ ಮಾಡಿಕೊಂಡಿದ್ದ ಅರಾಫತ್​ನೇ ಬಹುತೇಕ ಎಲ್ಲ ಪಿಎಫ್‌ಐ ಕಚೇರಿಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದ.

5. ಮಹಮ್ಮದ್ ಶಕೀಬ್
ಮೂಲತಃ ತಮಿಳುನಾಡಿನ ಮಹಮ್ಮದ್ ಶಾಕಿಬ್ ರಿಚ್ಮಂಡ್​ ಟೌನ್​ನ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ. ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ಆತ ಪಿಎಫ್‌ಐನ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ.

6. ಶಾಹಿದ್ ನಸೀರ್​
ಬೆಂಗಳೂರು ಮೂಲದ ಶಾಹಿದ್​ ನಸೀರ್ ಸೋಷಿಯಲ್‌ ಮೀಡಿಯಾ ಇನ್‌ಚಾರ್ಜ್‌ ಆಗಿದ್ದ. ಪಿಎಫ್‌ಐ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ.​

೭. ಮೊಹಮ್ಮದ್‌ ಫಾರುಖ್‌ ಉರ್‌ ರಹಮಾನ್‌
ಬೆಂಗಳೂರು ಮೂಲದ ಈತ ಪಿಎಫ್‌ಐನ ಸಕ್ರಿಯ ಮುಖಂಡ

ಇದನ್ನೂ ಓದಿ | NIA raid | ಶಂಕಿತ ಉಗ್ರ ಯಾಸಿರ್‌ ಅರಾಫತ್‌ನನ್ನು ಹಿಡಿದ ಕಾರ್ಯಾಚರಣೆ ಹೀಗಿತ್ತು

Exit mobile version