Site icon Vistara News

NIA Raid | PFI, SDPI ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ, ಏಳು ಅಂಶಗಳ ಚಾರ್ಜ್‌ಶೀಟ್‌ ಸಲ್ಲಿಕೆ

PFI

ಬೆಂಗಳೂರು: ರಾಜ್ಯದ ಹಲವಾರು ಕಡೆಗಳಲ್ಲಿ ಗುರುವಾರ ಮುಂಜಾನೆಯೇ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಕಚೇರಿಗಳು ಮತ್ತು ನಾಯಕರ ಮನೆಗೆ ದಾಳಿ ನಡೆಸಿದ ಬೆನ್ನಿಗೇ ಪಿಎಫ್‌ಐ ಹಾಗೂ ಎಸ್‌ಡಿಪಿಐಯನ್ನು ನಿಷೇಧಿಸಬೇಕೆಂಬ ಬೇಡಿಕೆ ಜೋರಾಗಿದೆ.

ಹಿಂದೂ ಜನಜಾಗೃತಿ ಸಮಿತಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಎರಡೂ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಸಮಿತಿಯ ಮೋಹನ್‌ ಗೌಡ ಮತ್ತು ಇತರರು ಗೃಹ ಸಚಿವರಿಗೆ ಮನವಿ ಮಾಡಿದರು.

ರಾಜ್ಯದಲ್ಲಿ ಹಿಂದೂ‌ ಕಾರ್ಯಕರ್ತರ ಕೊಲೆಗಳು ನಡೆಯುತ್ತಲೇ ಇದೆ. ಸುಮಾರು ೧೫ ಕೊಲೆ ಪ್ರಕರಣಗಳಲ್ಲಿ ಪಿಎಫ್‌ಐ ಶಾಮೀಲಾಗಿರುವುದು ಸಾಬೀತಾಗಿದೆ. ಈ ಸಂಘಟನೆಗಳು ರಾಜ್ಯದಲ್ಲಿ ಟೆರರ್ ಟ್ರೈನಿಂಗ್ ಕ್ಯಾಂಪ್‌ಗಳಾಗಿ ಪರಿವರ್ತನೆಗೊಂಡಿದೆ. ಈ‌ ಹಿನ್ನೆಲೆಯಲ್ಲಿ ಸಂಘಟನೆಗಳನ್ನು ನಿಷೇಧಿಸುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ಮೋಹನ್‌ ಗೌಡ ತಿಳಿಸಿದರು.

ಗುರುವಾರ ನಡೆದ ದಾಳಿಯ ವೇಳೆ ೧೦ ರಾಜ್ಯಗಳಲ್ಲಿ ೧೦೦ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ರಾಜ್ಯ ವತಿಯಿಂದಲೂ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಿಎಫ್‌ಐ ನಿಷೇಧಿಸುವ ಚಿಂತನೆ ಇದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ ಎಂದು ಗೃಹ ಸಚಿವರು ಹೇಳಿದರು ಎಂದು ಮೋಹನ್‌ ಗೌಡ ವಿವರಿಸಿದರು.

ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ.

ಹಿಂದೂ ಜನಜಾಗೃತಿ ಸಮಿತಿ ಸಲ್ಲಿಸಿದ ಮನವಿಯ ಮುಖ್ಯಾಂಶಗಳು
೧. ಕೇರಳದಲ್ಲಿ 2006 ರಲ್ಲಿ ಸ್ಥಾಪನೆಯಾದ ‘ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ’ (PFI) ಹೆಸರಿನ ಸಂಘಟನೆಯ ಜಾಲವು ಈಗ ಕರ್ನಾಟಕ ಸೇರಿ ದೇಶದಾದ್ಯಂತ ಹರಡಿದೆ. ಈ ಸಂಘಟನೆಯು ಅತ್ಯಂತ ಕ್ರೂರವಾಗಿದ್ದು, ಅನೇಕ ದೇಶದ್ರೋಹ ಮತ್ತು ಸಮಾಜದ್ರೋಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಮತ್ತು ಕರ್ನಾಟಕ ರಾಜ್ಯದಲ್ಲಿ ಪ್ರವೀಣ್‌ ನೆಟ್ಟಾರು, ಶಿವಮೊಗ್ಗದ ಹರ್ಷ, ಬೆಂಗಳೂರಿನ ರುದ್ರೇಶ್‌, ಬಂಟ್ವಾಳದ ಶರತ್ ಮಡಿವಾಳ ಸೇರಿ 15 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯಾ ಪ್ರಕರಣದ ಆರೋಪ ಪಟ್ಟಿಯಲ್ಲಿ ಪಿಎಫ್‌ಐ ಭಾಗಿಯಾಗಿದೆ. ಇಡೀ ರಾಜ್ಯದಲ್ಲಿ ಹತ್ಯೆ, ದಂಗೆ, ಕೋಮುಭಾವನೆ, ದ್ವೇಷದ ಪ್ರಚಾರ, ಭಯೋತ್ಪಾದನಾ ತರಬೇತಿ ಕೇಂದ್ರ ನಡೆಸುವುದು ಮುಂತಾದ ಚಟುವಟಿಕೆಯಲ್ಲಿ ನಡೆಸುವ ಮೂಲಕ ರಾಜ್ಯದ ಕಾನೂನು ವ್ಯವಸ್ಥೆಗೆ ಅತ್ಯಂತ ಅಪಾಯಕಾರಿಯಾಗಿದೆ. ಈ ದೃಷ್ಟಿಕೋನದಿಂದ ‘ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ’ ವನ್ನು ನಿಷೇಧ ಮಾಡಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು.

೨.’ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ’ ಈ ಸಂಘಟನೆಯ ಅಧ್ಯಕ್ಷ ಅಬ್ದುಲ್‌ ರೆಹಮಾನ್‌ ಭಾರತದಲ್ಲಿ ನಿಷೇಧಿಸಲ್ಪಟ್ಟ ‘SIMI’ ಅಂದರೆ ‘ಸೂಡೆಂಟ್ಸ್ ಇಸ್ಲಾಮಿಕ ಮೂವ್‌ಮೆಂಟ್‌ ಆಫ್ ಇಂಡಿಯಾ’ ಎಂಬ ಭಯೋತ್ಪಾದಕ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದವನು ಮತ್ತು ಅಬ್ದುಲ್‌ ಹಮೀದ್ ಕೇರಳ ರಾಜ್ಯ ʻಸಿಮಿ’ ಈ ಭಯೋತ್ಪಾದಕ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿದ್ದ.

೨. 2013ರ ಏಪ್ರಿಲ್‌ನಲ್ಲಿ ಕೇರಳ ಪೊಲೀಸರು ಕಣ್ಣೂರಿನ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿ ಪಾಪ್ಯುಲರ್ ಫ್ರಂಟ್‌ ಆಫ್ ಇಂಡಿಯಾದ 21 ಕಾರ್ಯಕರ್ತರನ್ನು ಬಂಧಿಸಿದರು. ಅವರಿಂದ ನಾಡ ಬಾಂಬ್‌ಗಳು, ಕತ್ತಿಗಳು, ಬಾಂಬ್‌ಗಳನ್ನು ತಯಾರಿಸುವಂತಹ ಕಚ್ಚಾ ವಸ್ತುಗಳು ಮತ್ತು ಪಿಎಫ್‌ಐನ ಕರಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ೨೧ ಕಾರ್ಯಕರ್ತರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವ ಅಪರಾಧಗಳನ್ನು ನಮೂದಿಸಲಾಗಿದೆ. ಅದಲ್ಲದೇ ಕಳೆದ ತಿಂಗಳು ಬಿಹಾರದ ಪಿಎಫ್‌ಐ ಕಾರ್ಯಾಲಯದ ಮೇಲೆ ಪೋಲಿಸರು ದಾಳಿ ಮಾಡಿದಾಗ ಭಾರತವನ್ನು ೨೦೪೭ರ ಒಳಗೆ ಭಾರತವನ್ನು ಇಸ್ಲಾಮಿಕರಣ ಮಾಡುವ ಷಡ್ಯಂತ್ರ ಬರಹ ಎಲ್ಲವು ದೊರೆತಿದೆ.

೩. ಬೆಂಗಳೂರಿನ ಕೆಜಿ, ಡಿಜೆ ಹಳ್ಳಿಯ, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ ದಂಗೆ ಪ್ರಕರಣದಲ್ಲಿ ಪಿಎಫ್‌ಐ ಸಂಘಟನೆಯ ಕೈವಾಡವಿರುವುದನ್ನು ರಾಷ್ಟ್ರೀಯ ತನಿಖಾ ದಳ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

4. ೨೦೧೨ರಲ್ಲಿ ಕೇರಳ ಸರಕಾರವು ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಕುರಿತು ಕೇರಳ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿತು. ಅದರಲ್ಲಿ ಈ ಸಂಘಟನೆಯು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಹಾಗೂ ಇದು ಸೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್‌ ಆಫ್‌ ಇಂಡಿಯಾ ಅಂದರೆ ‘ಸಿಮಿ’ಯನ್ನು ಪುನರುಜ್ಜಿವನಗೊಳಿಸಿದಂತಿದೆ ಎಂದು ಹೇಳಿತ್ತು.

೫. ಕೇಂದ್ರ ಸರಕಾರ ಸಿಮಿಯನ್ನು ಭಯೋತ್ಪಾದಕ ಸಂಘಟನೆ ಎಂದು ಹೇಳಿ ಅದನ್ನು ನಿಷೇಧಿಸಿದೆ. ಈ ಸಂಘಟನೆಯು ವಿವಿಧ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮತ್ತು ಸಿಪಿಐ ಸಂಘಟನೆಯ ೨೭ ಜನರನ್ನು ಹತ್ಯೆಗೆಯ್ದ, ೮೬ ಜನರನ್ನು ಕೊಲ್ಲಲು ಪ್ರಯತ್ನಿಸಿದ ಮತ್ತು ಧಾರ್ಮಿಕ ಹಿಂಸಾಚಾರದ ಘಟನೆಗಳಲ್ಲಿ ೧೦೬ ಪ್ರಕರಣಗಳು ದಾಖಲಾಗಿದೆ, ಜೊತೆಗೆ ಈ ಸಂಘಟನೆಯು ಅಪಹರಣ, ಗಲಭೆಗಳನ್ನು ಪ್ರಚೋದಿಸುವುದು ಇತ್ಯಾದಿ, ದೇಶದ್ರೋಹಿ ಕೃತ್ಯಗಳಲ್ಲಿ ಕೂಡ ಭಾಗಿಯಾಗಿದೆ.

೬. ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಸದಸ್ಯರು ಫೇಸ್‌ಬುಕ್‌ನಲ್ಲಿ ‘ಐಸಿಸ್‌ನ ಸಮರ್ಥಕರು’ ಎಂದು ಬಹಿರಂಗಗೊಂಡಿದೆ ಮತ್ತು ಅವರು ‘ಹರ್ಕತ್-ಉಲ್-ಜಿಹಾದ್ ಆಲ್-ಇಸ್ಲಾಮಿ’, ‘ಹಿಜ್‌ಬುಲ್‌ ಮುಜಾಹಿದ್ದೀನ್’, ‘ಲಷ್ಕರ್-ಎ-ತೊಯ್ದಾ ಮತ್ತು ‘ಅಲ್-ಕಾಯಿದಾ’ ಜೊತೆ ಸಹ ಸಂಬಂಧ ಹೊಂದಿದ್ದರು ಎಂಬುದು ಬಹಿರಂಗವಾಗಿದೆ.

೭. ಪೌರತ್ವ ಕಾಯ್ದೆ (CAA) ವಿರುದ್ಧ ಉತ್ತರ ಪ್ರದೇಶದಲ್ಲಿ ಗಲಭೆ ಮತ್ತು ಹೀಸಾಚಾರವನ್ನು ಪ್ರಚೋದಿಸುವ ಪ್ರಕರಣದಲ್ಲಿ ಸೆಕ್ಯೂಲರ್ ಸ್ಟೇಟ್ ಆಫ್ ಇಂಡಿಯಾದ ೧೦೮ ಕಾರ್ಯಕರ್ತರು ಬಂಧನಕ್ಕೊಳಗಾಗಿದ್ದರು. ಅದಕ್ಕಾಗಿಯೇ ಉತ್ತರ ಪ್ರದೇಶ ಸರಕಾರವು ಈ ಸಂಘಟನೆಯನ್ನು ನಿಷೇಧಿಸುವ ಪ್ರಕ್ರಿಯೆ ಆರಂಭಿಸಿದೆ. ಇದು ವಿಷಯದ ಗಾಂಭೀರ್ಯವನ್ನು ಸ್ಪಷ್ಟಪಡಿಸುತ್ತದೆ. ಈ ಹಿನ್ನೆಲೆಯಲ್ಲಿ ಸಂಘಟನೆಯನ್ನು ನಿಷೇಧಿಸಬೇಕು, ಕಚೇರಿಗಳಿಗೆ ಬೀಗ ಹಾಕಬೇಕು, ನಾಯಕರನ್ನು ಬಂಧಿಸಬೇಕು ಎಂದು ಹಿಂದೂ ಜನಜಾಗೃತಿ ವೇದಿಕೆ ಆಗ್ರಹಿಸಿದೆ.

ಇದನ್ನೂ ಓದಿ | NIA Raid | ರಾಜ್ಯದ 2 PFI ಕಚೇರಿ, ಹಲವು ನಾಯಕರ ಮನೆಗಳಿಗೆ ಏಕಕಾಲದಲ್ಲಿ ದಾಳಿ, Go back ಪ್ರತಿಭಟನೆ

Exit mobile version