Site icon Vistara News

NIA Raid | ಮುಂಜಾನೆಯಿಂದಲೇ ಎನ್‌ಐಎ ದಾಳಿ; ಬೆಚ್ಚಿ ಬಿದ್ದ ಪಿಎಫ್‌ಐ, ವಿಚಾರಣೆ ತೀವ್ರ

Terrorist Arrested

ಬೆಂಗಳೂರು: ಎನ್‌ಐಎ ಅಧಿಕಾರಿಗಳ (NIA Raid) ಬೇಟೆ ಮುಂದುವರಿದಿದೆ. ಮಂಗಳವಾರ ಮುಂಜಾನೆಯೇ ದಾಳಿ ನಡೆಸಿದ್ದು, ಪಿಎಫ್‌ಐ ಸಂಘಟನೆ ಬೆಚ್ಚಿಬಿದ್ದಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳ ಮಿಂಚಿನ ದಾಳಿ ಹೇಗಿತ್ತು? ಯಾವೆಲ್ಲ ಜಿಲ್ಲೆಯಲ್ಲಿ ಪಿಎಫ್‌ಐ ಅಧ್ಯಕ್ಷರನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಜಯಪುರ, ಸಮಯ ಬೆಳಗ್ಗೆ 6.30

ಮುಂಜಾನೆ 6.30ಕ್ಕೆ ವಿಜಯಪುರ ಜಿಲ್ಲಾ ಪಿಎಫ್‌ಐ ಅಧ್ಯಕ್ಷ ಆಶ್ಪಾಕ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಜೆ.ಎಂ.ರಸ್ತೆಯಲ್ಲಿರುವ ಜಮಖಂಡಿಯ ಅವರ ನಿವಾಸದ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡರು. ಈ ಬಗ್ಗೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ ಕುಮಾರ್‌ ಮಾಹಿತಿ ನೀಡಿದ್ದಾರೆ. ಬಂಧಿತನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.

ಬಾಗಲಕೋಟೆ ಪಿಎಫ್‌ಐ 7 ಕಾರ್ಯಕರ್ತರು ವಶ, ಸಮಯ ಬೆಳಗ್ಗೆ 3

ಬಾಗಲಕೋಟೆಯಲ್ಲಿ ಬೆಳಗಿನ ಜಾವ ಮೂರು ಗಂಟೆಗೆಲ್ಲ ದಾಳಿ ನಡೆಸಲಾಗಿದ್ದು, ಪಿಎಫ್ಐನ ಏಳು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಗಲಕೋಟೆ ಎಸ್‌ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಬೆಳಗ್ಗೆ 3 ಗಂಟೆಗೆ ಕಾರ್ಯಾಚರಣೆ ನಡೆಸಿದ್ದು, ಜಮಖಂಡಿಯಲ್ಲಿ ನಾಲ್ವರು, ಮಹಾಲಿಂಗಪುರ, ಇಳಕಲ್ ಹಾಗೂ ಬನಹಟ್ಟಿಯಲ್ಲಿ ತಲಾ ಒಬ್ಬೊಬ್ಬರನ್ನು ಬಂಧಿಸಲಾಗಿದೆ.

ಜಮಖಂಡಿಯ ಪಿಎಫ್ಐ ಜಿಲ್ಲಾ ಅಧ್ಯಕ್ಷ ಅಜ್ಗರ್ ಅಲಿ, ಇರ್ಫಾನ್ ಮಳಲಿ, ಮಹಮ್ಮದ್ ಗೌಸ್, ರಾಜೇಸಾಬ್ ಹುಸೇನ್ ಸಾಬ್, ಇಳಕಲ್ ನ ಎಸ್.ಡಿಪಿಐ ಜಿಲ್ಲಾ ಕಾರ್ಯದರ್ಶಿ ಮುರ್ತೂಜ್, ಮಹಾಲಿಂಗಪುರದ ಉಮರ್ ಫಾರೂಕ್ ಹಾಗೂ ಬನಹಟ್ಟಿಯ ಮೂಸಾ ಅಹ್ಮದ್ ಸೇರಿ ೭ ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧನ ಆಗಿರುವ ಏಳು ಜನರನ್ನು ಆಯಾ ವ್ಯಾಪ್ತಿಯ ತಹಸೀಲ್ದಾರ್‌ಗೆ ಪೊಲೀಸರು ಒಪ್ಪಿಸಲಿದ್ದಾರೆ. ಈ ವೇಳೆ ತಹಸೀಲ್ದಾರ್ ಬಂಧಿತರ ವಿರುದ್ಧ ಕೇಸ್ ಹಾಕುವ ಸಾಧ್ಯತೆ ಇದ್ದು, ಯಾವುದೇ ರೀತಿಯ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗಿಯಾಗದಂತೆ ಮುಚ್ಚಳಿಕೆ ಬರೆಸಿಕೊಂಡು ಬಿಡುವ ಸಾಧ್ಯತೆಯಿದೆ.

ಚಿತ್ರದುರ್ಗದ ಚಿಕ್ಕಪೇಟೆ ನಿವಾಸಿ ಅಫನ್‌ ಆಲಿ ವಶಕ್ಕೆ

ಚಿತ್ರದುರ್ಗದ ಪಿಎಫ್ಐ ಮುಖಂಡ ಅಫನ್ ಆಲಿ ಎಂಬಾತನನ್ನು ಕೋಟೆ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತ 6 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

ಚಾಮರಾಜನಗರ ಸಮಯ ಬೆಳಗ್ಗೆ 4; ಕಾರ್ಯಕರ್ತರು ಪೊಲೀಸರ ವಶಕ್ಕೆ

ಚಾಮರಾಜನಗರದಲ್ಲಿ ಪೊಲೀಸರು ರಾತ್ರಿಯಿಂದಲೇ ಕಾರ್ಯಾಚರಣೆಗಿಳಿದಿದ್ದು, ಇಬ್ಬರು ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಿಎಫ್ಐ ಜಿಲ್ಲಾಧ್ಯಕ್ಷ ಕಪಿಲ್, ಕಾರ್ಯದರ್ಶಿ ಸುಯೇಬ್‌ರನ್ನು ಬೆಳಗ್ಗೆ 4 ಗಂಟೆಗೆ ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗದಲ್ಲಿ ಇಬ್ಬರು ಮುಖಂಡರ ಬಂಧನ

ಶಿವಮೊಗ್ಗದಲ್ಲಿ ಎಸ್‌ಡಿಪಿಐ, ಪಿಎಫ್ಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೂವರು ಎಸ್‌ಡಿಪಿಐ ಹಾಗೂ ಇಬ್ಬರು ಪಿಎಫ್ಐ ಕಾರ್ಯಕರ್ತರು ಬಂಧಿಸಲಾಗಿದೆ. ಭದ್ರಾವತಿಯ ಹರ್ಷದುಲ್ಲಾ, ಮೊಹಮ್ಮದ್ ಸಾದಿಕ್ ವುಲ್ಲಾ, ಮೊಹಮ್ಮದ್ ಮೋಯಿವುದ್ದೀನ್ ತಾಯೀರ್ ಬಂಧಿತರಾಗಿದ್ದಾರೆ.

ವಶಕ್ಕೆ ಪಡೆದವರ ವಿಚಾರಣೆ ನಡೆಸಲಾಗುತ್ತಿದ್ದು, ಅಗತ್ಯ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಅಲ್ಲದೆ, ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆನ್ನಲಾಗುತ್ತಿದೆ.

ಉಡುಪಿಯಲ್ಲಿ ಇಲ್ಯಾಸ್‌ ಹೊಡೆ ಬಂಧನ

ಉಡುಪಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಲ್ಯಾಸ್ ಹೂಡೆ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಕುಂದಾಪುರದ ಆಶಿಕ್ ಕೋಟೇಶ್ವರ, ಗಂಗೊಳ್ಳಿಯಲ್ಲಿ ಕಾರ್ಯಕರ್ತ ರಜಾಬ್, ಬೈಂದೂರಿನಲ್ಲಿ ಕಾರ್ಯಕರ್ತ ಕಲಿಲ್ ಸೈಯದ್‌ನನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿಯಲ್ಲೂ ಮುಂಜಾನೇಯೇ ರೈಡ್‌

ಬೆಳಗಾವಿಯಲ್ಲಿ ಐವರು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಬೆಳಗ್ಗೆ 4 ಗಂಟೆಗೆ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಇತ್ತೀಚೆಗೆ ಪಿಎಫ್‌ಐ ಸಂಘಟನೆಯಿಂದ ರಾಷ್ಟ್ರೀಯ ಹೆದ್ದಾರಿ ೪ ಅನ್ನು ತಡೆದು ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಿಎಫ್ಐ ಜಿಲ್ಲಾಧ್ಯಕ್ಷ ನವೀದ್ ಕಟಗಿ ಅವರನ್ನು ವಶಕ್ಕೆ ಪಡೆಯಲಾಗಿದೆ.

ಬೀದರ್‌ನಲ್ಲಿ ಇಬ್ಬರ ವಶ

ಬೀದರ್‌ನಲ್ಲಿ ಪಿಎಫ್‌ಐ ಮುಖಂಡ ಕರೀಂ ಹಾಗೂ ಎಸ್‌ಡಿಪಿಐ ಕಾರ್ಯದರ್ಶಿ ಮಕ್ಸೂದ್ ಅಲಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ರಾಯಚೂರಿನಲ್ಲಿ ಶಾಂತಿ ಭಂಗ

ಸಮಾಜದಲ್ಲಿ ಶಾಂತಿ ಭಂಗ ಆರೋಪ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಪಿಎಫ್ಐ ಮಾಜಿ ಅಧ್ಯಕ್ಷ ಮಹಮದ್ ಇಸ್ಮಾಯಿಲ್ ಹಾಗೂ ಕಾರ್ಯದರ್ಶಿ ಆಸೀಂ ಎಂಬುವವರನ್ನು ಬೆಳಗಿನ ಜಾವ ಐದು ಗಂಟೆಗೆ ವಶಕ್ಕೆ ಪಡೆಯಲಾಗಿದೆ. ಬಳಿಕ ಗುಪ್ತ ಸ್ಥಳದಲ್ಲಿ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ರಾಮನಗರದಲ್ಲಿ ಪಿಎಫ್‌ಐ ಕಾರ್ಯಕರ್ತರು ವಶ

ಚನ್ನಪಟ್ಟಣ ಟೌನ್‌ನಲ್ಲಿ ಬೆಳಗಿನ ಜಾವ 5 ಗಂಟೆಗೆ ತನಿಖಾ ತಂಡ ದಾಳಿ ನಡೆಸಿ, ತಾಲೂಕು ಅಧ್ಯಕ್ಷ ಇಮ್ರಾನ್ ಬಿನ್ ಯುಸೆಪ್ ಅಲಿ, ಮುಖಂಡ ಮಹಮದ್ ಯೂಸೇಪ್ ಬಿನ್ ಜಯಾವುಲ್ಲ, ಸೈಯದ್ ನದೀಮ್ ಬಿನ್ ಸೈಯದ್ ನಹಿಮ್, ಏಜು ವಿನ್ ರೆಹಮತುಲ್ಲಾ ಹಾಗೂ ಸೈಯದ್ ಸದಾಂ ಬಿನ್ ಸೈಯದ್ ಸಾದತ್ ಫಿರ್ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ 15 ಪ್ರಮುಖ ಪಿಎಫ್‌ಐ ಕಾರ್ಯಕರ್ತರು ಪೊಲೀಸರ ವಶದಲ್ಲಿದ್ದಾರೆ.

ಮಂಗಳೂರಿನಲ್ಲಿಯೂ ಪೊಲೀಸ್‌ ಕಾರ್ಯಾಚರಣೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದು, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಹಾಜರುಪಡಿಸಿದ ಬಳಿಕ ಮಂಗಳೂರು ಜೈಲಿಗೆ ಕರೆ ತಂದು ಬಿಡಲಾಗಿದೆ. ಮಂಗಳೂರಿನ ಕೊಡಿಯಾಲ್ ಜಹ.ಬೈಲ್ ಬಳಿಯ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಆಯಾ ಠಾಣಾ ವ್ಯಾಪ್ತಿಯ ಬಂಧಿತರನ್ನು ಕರೆತರಲಾಗಿದೆ. ಪಿಎಫ್ಐ ಜಿಲ್ಲಾಧ್ಯಕ್ಷ ಇಜಾಜ್ ಅಹ್ಮದ್, ಮುಖಂಡರಾದ ಫಿರೋಜ್ ಖಾನ್, ರಾಜಿಕ್, ಮುಜಾವರ್, ನೌಫಲ್ ಸೇರಿ ಎಂಟು ಮಂದಿ ಬಂಧಿತರು. ಮಂಗಳೂರಿನ ಉಳ್ಳಾಲ, ಕಾವೂರು, ಸುರತ್ಕಲ್, ಬಜಪೆ ಹಾಗೂ ಪುತ್ತೂರು ಭಾಗದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.

ಗೃಹ ಇಲಾಖೆ ಸೂಚನೆ
ಗೃಹ ಇಲಾಖೆ‌ ಸೂಚನೆ ಮೇರೆಗೆ ಹಾಸನ ಜಿಲ್ಲೆಯ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಿದ್ದಿಕ್ ಆನೆಮಹಲ್ ಎಂಬುವವರನ್ನು ಸೋಮವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ. ಇವರನ್ನು ಸಕಲೇಶಪುರ ಉಪ ವಿಭಾಗಾಧಿಕಾರಿ ಎದುರು ಹಾಜರುಪಡಿಸಲಾಗಿದೆ. ಎನ್.ಐ.ಎ ದಾಳಿ ಬಳಿಕ ದೇಶದ ವಿವಿಧೆಡೆ ಶಾಂತಿ ಕದಡುವ ಸಾಧ್ಯತೆ ಇದ್ದು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ.

ಇದನ್ನೂ ಓದಿ | NIA Raid | ದೇಶಾದ್ಯಂತ ಎನ್‌ಐಎ ದಾಳಿಗೆ ಕಾರಣವಾಗಿದ್ದು ಪಿಎಫ್‌ಐ ಸದಸ್ಯರ ಕರಾಟೆ ಕ್ಲಾಸ್!

Exit mobile version