ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಪಿಎಫ್‌ಐಗೆ ಸಂಬಂಧಿಸಿದ ತಾಣಗಳಲ್ಲಿ ರಾಷ್ಟ್ರೀಯ ತನಿಖಾ ದಳ (NIA raid) ದಾಳಿ ನಡೆಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಬಂಟ್ವಾಳದ 16 ಕಡೆ ಎನ್ಐಎ ಅಧಿಕಾರಿಗಳು ಸ್ಥಳೀಯ ಪೊಲೀಸ್ ಆಧಿಕಾರಿಗಳ ನೆರವು ಪಡೆದು ದಾಳಿ ನಡೆಸಿದ್ದಾರೆ. 16 ಕಡೆ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಬಳಕೆಯಾಗುತ್ತಿರುವ ಆರೋಪದ ಮೇಲೆ ದಾಳಿ ನಡೆಸಲಾಗಿದೆ. ದಕ್ಷಿಣ ಭಾರತದಲ್ಲಿ ನಿಷೇಧಿತ ಪಿಎಫ್ಐ ಸಂಸ್ಥೆಯ ಹವಾಲಾ ಹಣ ಜಾಲವನ್ನು ಭೇದಿಸಲು NIA ಮುಂದಾಗಿದೆ.
ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್‌ವರ್ಕ್‌ನ ಬಗ್ಗೆ ಎನ್‌ಐಎ ಸಾಕಷ್ಟು ಸುಳಿವು ಪಡೆದಿದೆ. ಬಿಹಾರದ ಪಾಟ್ನಾದಲ್ಲಿ 2022ರ ಜುಲೈ ತಿಂಗಳಲ್ಲಿ ಪತ್ತೆಯಾಗಿದ್ದ ಫುಲ್ವಾರಿ ಶರೀಫ್ ಪ್ರಕರಣದಲ್ಲಿ ಇದು ಕಂಡುಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಹಾಗೂ ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಸಂಚು ರೂಪಿಸಲಾಗಿತ್ತು.
ಈ ಪ್ರಕರಣದ ತನಿಖೆಯ ಜಾಡು ಹಿಡಿದು NIA ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದೆ. ಇತ್ತೀಚೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಮತ್ತು ಪುತ್ತೂರಿನಲ್ಲಿ NIA ಅಧಿಕಾರಿಗಳು ದಾಳಿ ನಡೆಸಿದ್ದರು. ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್‌ರನ್ನು NIA ಅಧಿಕಾರಿಗಳು ಬಂಧಿಸಿದ್ದಾರೆ. ಕೇರಳದ ಕಾಸರಗೋಡಿನ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಎಂಬಾತನನ್ನೂ ಬಂಧಿಸಿದ್ದರು. ದಾಳಿ ಸಂದರ್ಭದಲ್ಲಿ ಹಲವು ಡಿಜಿಟಲ್ ಸಾಕ್ಷ್ಯಗಳು ಮತ್ತು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದ ಬಗ್ಗೆ ದಾಖಲೆ ಪತ್ತೆ ಹಚ್ಚಿದ್ದರು.
ಹಲವು ತಿಂಗಳ ನಡೆದ ವ್ಯಾಪಕ ಎನ್‌ಐಎ ದಾಳಿಗಳಿಂದ ಪಡೆದ ದಾಖಲೆಗಳು, ಪಿಎಫ್‌ಐ ಸಂಸ್ಥೆಯ ನಿಷೇಧಕ್ಕೆ ಮೂಲವಾಗಿದ್ದವು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ: NIA Crackdown: ದೇಶವಿರೋಧಿ ಕೃತ್ಯ; ದೇಶದ ಹಲವೆಡೆ ಎನ್‌ಐಎ ದಾಳಿ, ಅಪಾರ ಶಸ್ತ್ರಾಸ್ತ್ರ ವಶ, ಆಸ್ತಿ ಜಪ್ತಿ