ಬೆಂಗಳೂರು: ದೇಶಾದ್ಯಂತ ಗುರುವಾರ ಮುಂಜಾನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಎಸ್‌ಡಿಪಿಐ ನಾಯಕರಿಗೆ ಶಾಕ್ ಕಾದಿತ್ತು. ಸುಮಾರು ೧೩ ರಾಜ್ಯಗಳಲ್ಲಿ ಪಿಎಫ್‌ಐ ಕಚೇರಿ ಮತ್ತು ಮನೆಗಳಿಗೆ ದಾಳಿ ಮಾಡಿದ ಎನ್‌ಐಎ ಒಟ್ಟು ೪೫ ಮಂದಿಯನ್ನು ವಶಕ್ಕೆ ಪಡೆದಿದೆ. ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ದಾಳಿ ನಡೆಸಿದ್ದು ಒಟ್ಟು ೭ ಮಂದಿಯನ್ನು ವಶಕ್ಕೆ ಪಡೆದಿದೆ.
ಬೆಂಗಳೂರಿನ ಪುಲಿಕೇಶಿ ನಗರದಲ್ಲಿರುವ ರಾಜ್ಯದ ಪಿಎಫ್‌ಐ ಪ್ರಧಾನ ಕಚೇರಿ ಹಾಗೂ ಮಂಗಳೂರಿನ ನೆಲ್ಲಿಕಾಯಿ ಮಠ ರಸ್ತೆಯಲ್ಲಿರುವ ಕಚೇರಿಗೆ ಬೆಳಗ್ಗೆಯೇ ರೇಡ್ ಆಗಿತ್ತು. ಎರಡೂ ಕಚೇರಿಗಳನ್ನು ಎನ್‌ಐಎ ಅಧಿಕಾರಿಗಳು ಸಂಪೂರ್ಣವಾಗಿ ಜಾಲಾಡಿದ್ದರು. ಇದರ ಜತೆಗೆ ರಾಜ್ಯದಲ್ಲಿ ಏಳು ಮಂದಿ ಪಿಎಫ್‌ಐ ನಾಯಕರ ನಿವಾಸಕ್ಕೆ ಎನ್‌ಐಎ ದಾಳಿ ಮಾಡಿದ್ದು, ಅವರನ್ನು ವಶಕ್ಕೆ ಪಡೆದಿದೆ. ಅವರಲ್ಲಿ ಒಬ್ಬನನ್ನು ಬಂಧಿಸಿ ದಿಲ್ಲಿಗೆ ಕರೆದೊಯ್ಯಲಾಗಿದೆ.
ರಾಜ್ಯದಲ್ಲಿ ಗುರುವಾರ ಮುಂಜಾನೆ ಹಲವು ಕಡೆಗಳಲ್ಲಿ ಪಿಎಫ್‌ಐ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆದಿತ್ತು. ಆದರೆ, ಎನ್‌ಐಎ ದಾಳಿ ಮಾಡಿದ್ದು ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮಾತ್ರ. ಮಂಗಳೂರಿನಲ್ಲಿ ಸುಮಾರು ಆರು ಮುಖಂಡರ ಮನೆಗೆ ದಾಳಿ ಮಾಡಲಾಗಿತ್ತು. ಅವರಲ್ಲಿ ಪಿಎಫ್ ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಜೋಕಟ್ಟೆ, ಮೊಯಿದ್ದೀನ್ ಹಳೆಯಂಗಡಿ, ಪಿಎಫ್ ಐ ಗ್ರಾಮಾಂತರ ಜಿಲ್ಲಾಧ್ಯಕ್ಷ ನವಾಜ್ ಕಾವೂರು ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಅವರನ್ನು ಎನ್‌ಐಎ ವಶಪಡಿಸಿಕೊಂಡವರ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಕೆಲವು ದಿನಗಳ ಹಿಂದಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈಕಂಬದಲ್ಲಿರುವ ಪಿಎಫ್‌ಐ ರಾಷ್ಟ್ರೀಯ ಮುಖಂಡ ರಿಯಾಜ್ ಪರಂಗಿಪೇಟೆ ಅವರ ಮನೆಗೆ ಎನ್‌ಐಎ ದಾಳಿ ನಡೆಸಿತ್ತು.
ಯಾರೆಲ್ಲ ಎನ್‌ಐಎ ವಶದಲ್ಲಿದ್ದಾರೆ?
ಗುರುವಾರ ಎನ್‌ಐಎ ವಶದಲ್ಲಿರುವ ಎಲ್ಲರೂ ಬೆಂಗಳೂರಿನವರೇ ಆಗಿದ್ದಾರೆ. ಇದರಲ್ಲಿ ಯಾಸಿರ್ ಅರಾಫತ್ ಹಸನ್‌ನ್ನು ಈಗಾಗಲೇ ದಿಲ್ಲಿಗೆ ಕರೆದೊಯ್ಯಲಾಗಿದೆ.
1. ಅನೀಸ್ ಅಹಮದ್, ಪಿಎಫ್‌ಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
೨. ಅಫ್ಸರ್ ಪಾಷಾ, ರಾಷ್ಟ್ರೀಯ ಕಾರ್ಯದರ್ಶಿ
೩. ಅಬ್ದುಲ್ ವಹೀದ್ ಸೇಠ್, ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ
೪. ಯಾಸಿರ್ ಅರಾಫತ್ ಹಸನ್, ಟೆರರ್ ಫಂಡಿಂಗ್ ಮ್ಯಾನೇಜರ್
೫. ಮಹಮ್ಮದ್ ಶಕೀಬ್, ರಾಷ್ಟ್ರೀಯ ಮಾಧ್ಯಮ ಕಾರ್ಯದರ್ಶಿ
೬. ಮೊಹಮ್ಮದ್ ಫಾರುಕ್ ಉರ್ ರಹಮಾನ್, ಬೆಂಗಳೂರು
೭. ಶಾಹಿದ್ ನಾಸಿರ್, ಬೆಂಗಳೂರು
ದಾಳಿಗೆ ಕಾರಣಗಳೇನು?
-ದೇಶದ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳಲ್ಲಿ ಪಿಎಫ್‌ಐ ಹೆಸರು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ತನಿಖೆ ನಡೆದಿದೆ. ದೇಶದ ಸುಮಾರು ೧೫ ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ. ಕಳೆದ ಕೆಲವು ವಾರಗಳಿಂದ ಅಲ್ಲಲ್ಲಿ ಎನ್‌ಐಎ ದಾಳಿ ನಡೆಯುತ್ತಲೇ ಇದೆ.
– ಬಿಹಾರದ ಪುಲ್ವಾಮಾ ಷರೀಫ್‌ನಲ್ಲಿ ಪ್ರಧಾನಿ ಹತ್ಯೆಗೆ ಸಂಚು ನಡೆದಿದ್ದರ ಹಿಂದೆ ಪಿಎಫ್‌ಐ ಕೈವಾಡವಿದೆ ಎಂದು ಆರೋಪಿಸಲಾಗಿತ್ತು.
– ಪಿಎಫ್ಐ ಮೇಲೆ ಈ ಹಿಂದೆ ಇಡಿ ದಾಳಿ ನಡೆಸಿ ತನಿಖೆ ನಡೆಸಲಾಗಿತ್ತು. ತನಿಖೆ ವೇಳೆ ಕೋಟ್ಯಾಂತರ ರೂ. ಹಣಕಾಸು ವ್ಯವಹಾರ ಪತ್ತೆಯಾಗಿತ್ತು. ಪಿಎಫ್‌ಐಗೆ ಹರಿದುಬರುತ್ತಿದೆ ಎನ್ನಲಾದ ವಿದೇಶಿ ದೇಣಿಗೆಯ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.
-ಪಿಎಫ್ಐ ನಾಯಕರಿಂದ ಭಯೋತ್ಪಾದಕ ಹಾಗು ಸಮಾಜದ ಆಶಾಂತಿಗೆ ಹಣಕಾಸು ನೆರವು ಇರುವ ಬಗ್ಗೆ ಮಾಹಿತಿ ಇತ್ತು.
ಎನ್‌ಐಎ ವಶವಾದ ಬಳಿಕ ಮುಂದೇನು?
ಈಗ ರಾಜ್ಯದ ಏಳು ಜನರನ್ನು ಎನ್‌ಐಎ ತನ್ನ ವಶಕ್ಕೆ ಪಡೆದಿದೆ. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಸಾಧ್ಯತೆ ಇದೆ. ಈಗ ಬಂಧನ ಪ್ರಕಟಿಸಿರುವ ಯಾಸಿರ್ ಹೊರತುಪಡಿಸಿ ಉಳಿದವರನ್ನು ಶಂಕಿತರ ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತದೆ.
ವಿಚಾರಣೆ ಜೊತೆ ಏನಾದರೂ ಮೆಟೀರಿಯಲ್ ಸಿಗುತ್ತದೆಯೇ ಎಂದು ಪರಿಶೀಲನೆ ನಡೆಯಲಿದೆ. ದಾಳಿಯ ವೇಳೆ ಸೈಬರ್ ತಜ್ಞರನ್ನೂ ಜತೆಗೆ ಕರೆದೊಯ್ಯಲಾಗಿದ್ದು, ಅವರು ಮೊಬೈಲ್ ಮತ್ತು ಕಂಪ್ಯೂಟರ್‌ನಲ್ಲಿರುವ ಮಾಹಿತಿಗಳನ್ನು ಜಾಲಾಡಲಿದೆ. ಚಾಟಿಂಗ್, ನೆಟ್ ವರ್ಕಿಂಗ್, ಸಂಪರ್ಕ, ಪ್ರಜೋದನೆ ಹೇಳಿಕೆ, ವಿಡಿಯೊ, ಗ್ರೂಪ್ ಗಳು, ಕೋಡ್ ವರ್ಡ್ ಗಳು, ಹಣಕಾಸು ವ್ಯವಹಾರ, ಈ ಮಾದರಿಯಲ್ಲಿ ಸಾಕ್ಷ್ಯಗಳ ಕಲೆ ಹಾಕಲಾಗುತ್ತದೆ.
ಬಳಿಕ ಆರೋಪಿತರಿಗೆ ನೋಟಿಸ್ ನೀಡಿ ಕಳುಹಿಸಬಹುದು. ಇಲ್ಲವೇ ಶಂಕಿತರ ವಿರುದ್ಧ ದಾಳಿ ವೇಳೆ ಸಿಕ್ಕ ಸಾಕ್ಷ್ಯಗಳ ಆಧರಿಸಿ ಬಂಧನ ಮಾಡಬಹುದು. ಒಂದೊಮ್ಮೆ ಈಗ ಬಿಟ್ಟು ಕಳುಹಿಸಿದರೂ ಪದೇಪದೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುತ್ತಾರೆ. ಇದರ ಮಧ್ಯೆ ಮತ್ತಷ್ಟು ಸಾಕ್ಷ್ಯಾಧಾರ ಕಲೆ ಹಾಕಲಾಗುತ್ತದೆ. ಬಳಿಕ ಎಲ್ಲ ಸಾಕ್ಷ್ಯ ಸಿಕ್ಕ ಮೇಲೆ ಬಂಧಿಸುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ | NIA Raid | ಅಪಾಯವಾದೀತು ಹುಷಾರ್: ರಾಜ್ಯಾದ್ಯಂತ ರಾತ್ರಿ ತೀವ್ರ ಕಟ್ಟೆಚ್ಚರ ವಹಿಸಲು ಎಡಿಜಿಪಿ ಸೂಚನೆ