Site icon Vistara News

NIA Raid | ರಾಜ್ಯದ 2 PFI ಕಚೇರಿ, ಹಲವು ನಾಯಕರ ಮನೆಗಳಿಗೆ ಏಕಕಾಲದಲ್ಲಿ ದಾಳಿ, Go back ಪ್ರತಿಭಟನೆ

ಬೆಂಗಳೂರು: ಭಯೋತ್ಪಾದನೆಗೆ ಕುಮ್ಮಕ್ಕು, ಉಗ್ರ ಚಟುವಟಿಕೆಗಳಿಗೆ ತರಬೇತಿ, ಉನ್ನತ ನಾಯಕರ ಹತ್ಯೆ ಸಂಚಿನ ಮೂಲಕ ರಾಷ್ಟ್ರದ್ರೋಹಿ ಕೃತ್ಯಗಳಲ್ಲಿ ತೊಡಗಿದೆ ಎಂಬ ಆರೋಪ ಎದುರಿಸುತ್ತಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ)ಕ್ಕೆ ರಾಜ್ಯದಲ್ಲಿ ಗುರುವಾರ ಬೃಹತ್‌ ದಾಳಿಯ ಆಘಾತ ಎದುರಾಗಿದೆ

ಬೆಂಗಳೂರು, ಮಂಗಳೂರಿನ ಪಿಎಫ್‌ ಕಚೇರಿಗಳು, ರಾಜ್ಯದ ಹಲವು ಪ್ರಮುಖ ನಾಯಕರ ನಿವಾಸಗಳಿಗೆ ಎನ್‌ಐಎ ಮುಂಜಾನೆಯೇ ಮಿಂಚಿನ ದಾಳಿ ನಡೆಸಿದೆ. ಹಲವಾರು ನಾಯಕರನ್ನು ವಶಕ್ಕೆ ಪಡೆಯಲಾಗಿದ್ದು, ಕಚೇರಿ ಹಾಗೂ ಮನೆಗಳಲ್ಲಿದ್ದ ಹಲವು ವಸ್ತುಗಳು ಹಾಗೂ ದಾಖಲೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಬೆಳಗ್ಗೆ ಆರು ಗಂಟೆಗೆ ಆರಂಭವಾದ ದಾಳಿ ಸುಮಾರು ೯.೩೦ರ ಹೊತ್ತಿಗೆ ಮುಕ್ತಾಯಗೊಂಡಿದೆ. ಈ ನಡುವೆ, ಪಿಎಫ್‌ಐ ಕಾರ್ಯಕರ್ತರು ಮತ್ತು ನಾಯಕರು ಈಗ ದಾಳಿಯನ್ನು ಖಂಡಿಸಿದ್ದು, ಗೋ ಬ್ಯಾಕ್‌ ಎನ್‌ಐಎ ಎಂದು ಪ್ರತಿಭಟನೆ ನಡೆಸಿದ್ದಾರೆ.

ಎಲ್ಲೆಲ್ಲಿ ಪ್ರಮುಖ ದಾಳಿ?
ಬೆಂಗಳೂರಿನ ಪುಲಿಕೇಶಿ ನಗರದಲ್ಲಿರುವ ಪಿಎಫ್‌ಐ ಪ್ರಧಾನ ಕಚೇರಿ, ಮಂಗಳೂರಿನ ಸ್ಟೇಟ್‌ ಬ್ಯಾಂಕ್‌ ಸಮೀಪದ ನೆಲ್ಲಿಕಾಯಿ ರಸ್ತೆಯ ಪಿಎಫ್‌ಐ ಕಚೇರಿಗೆ ಪ್ರಮುಖವಾಗಿ ದಾಳಿ ಮಾಡಲಾಗಿದೆ.
ಪಿಎಎಫ್‌ ರಾಜ್ಯಾಧ್ಯಕ್ಷ ನಾಸಿರ್‌ ಪಾಷಾ ಅವರ ಬೆಂಗಳೂರಿನ ಹಲವು ಮನೆಗಳು ಹಾಗೂ ಕಾರ್ಯದರ್ಶಿ ಅಫ್ಸರ್‌ ಪಾಷಾ ಅವರಿಗೆ ಸೇರಿದ ಪಾದರಾಯನಪುರದ ಕಚೇರಿ ಮೇಲೆ ಅಧಿಕಾರಿಗಳು ದಾಳಿ ಮಾಡಿ ತನಿಖೆ ನಡೆಸಿದರು.
ಉಳಿದಂತೆ ಉತ್ತರ ಕನ್ನಡದ ಶಿರಸಿ, ಕೊಪ್ಪಳ, ಶಿವಮೊಗ್ಗ, ಮೈಸೂರುಗಳಲ್ಲಿ ಹಲವು ನಾಯಕರ ಮನೆಗಳಿಗೆ ದಾಳಿ ನಡೆದಿದೆ. ಮಂಗಳೂರಿನಲ್ಲಿ ಎ.ಕೆ. ಅಶ್ರಫ್, ಶರೀಫ್ ಬಜ್ಪೆ, ನವಾಜ್ ಕಾವೂರು, ಮೊಯ್ದಿನ್ ಹಳೆಯಂಗಡಿ, ಮೊಹಮ್ಮದ್ ಶಾಕಿಬ್, ಮೊಹಮ್ಮದ್ ತಫ್ಸೀರ್, ಯಾಸಿರ್ ಹಸನ್, ಅಬ್ದುಲ್ ಖಾದರ್ ಪುತ್ತೂರು ಎಂಬವರ ಮನೆಗಳಿಗೆ ದಾಳಿ ನಡೆಯಿತು.

ಬೆಂಗಳೂರಿನ ಪಿಎಫ್‌ಐ ಕಚೇರಿ ಮುಂದೆ ಎನ್‌ಐಎ ಗೋಬ್ಯಾಕ್‌ ಪ್ರತಿಭಟನೆ

ಬೆಂಗಳೂರಿನಲ್ಲಿ ಎಲ್ಲೆಲ್ಲಿ ದಾಳಿ?
ಬೆಂಗಳೂರಿನ ಪುಲಿಕೇಶಿ ನಗರದ ಪಿಎಫ್‌ಐ ಕಚೇರಿಯ ಮೂರು ಮಹಡಿಗಳಲ್ಲಿ ಪರಿಶೀಲನೆ ನಡೆದಿದೆ. ಕಚೇರಿಯಲ್ಲಿದ್ದ ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆರು ಮೊಬೈಲ್ ಫೋನ್ ಗಳನ್ನು ಸೀಜ್ ಮಾಡಿದೆ. 12 ಸೈಬರ್ ಪೊಲೀಸ್ ತಂಡಗಳನ್ನು ಕೂಡಾ ಜತೆಗೇ ಕರೆದೊಯ್ದಿರುವ ಎನ್‌ಐಎ ಆರು ಮೊಬೈಲ್‌ಗಳನ್ನು ಎರಡು ಮೊಬೈಲ್‌ಗಳನ್ನು ಸ್ಥಳದಲ್ಲೇ ರಿಟ್ರೀವ್‌ ಮಾಡಿದೆ.

ಮೂರು ಅಂತಸ್ತಿನ ಕಟ್ಟಡದ ಎಲ್ಲ ಮೂಲೆಗಳನ್ನು ಜಾಲಾಡಿರುವ ಅಧಿಕಾರಿಗಳು ಅಲ್ಲಿ ಸಿಕ್ಕಿದ ದಾಖಲೆಗಳನ್ನು ಜೆರಾಕ್ಸ್‌ ಮಾಡಿಸಿದ್ದಾರೆ. ಕಚೇರಿಯಲ್ಲಿರುವ ಕಂಪ್ಯೂಟರ್‌ ಮತ್ತು ಹಾರ್ಡ್‌ ಡಿಸ್ಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಭಾರಿ ಪ್ರತಿಭಟನೆ: ಪುಲಿಕೇಶಿ ನಗರದ ಕಚೇರಿಗೆ ದಾಳಿ ನಡೆಯುತ್ತಿದ್ದಂತೆಯೇ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಎನ್‌ಐಎ ಗೋಬ್ಯಾಕ್‌ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.

ಅನೀಸ್‌ ಅಹಮದ್‌ ಮನೆಗೆ ದಾಳಿ
ಸುಮಾರು ೧೫ ಮಂದಿ ಎನ್‌ಐಎ ಅಧಿಕಾರಿಗಳ ತಂಡ ಬೆಳಗ್ಗೆ ಆರು ಗಂಟೆಗೆ ಪಿಎಫ್‌ಐ ನಾಯಕ ಅನೀಸ್‌ ಅಹಮದ್‌ ಅವರ ಬಾಗಲೂರಿನ ಮನೆಗೆ ದಾಳಿ ಮಾಡಿದರು. ಬಾಗಲೂರಿನ ರಾಗಾ ಅಪಾರ್ಟ್‌ಮೆಂಟ್‌ಗೆ ದಾಳಿ ನಡೆಸಿದರು. ಆ ಕೂಡಲೇ ನೂರಾರು ಮಂದಿ ಪಿಎಫ್‌ಐ ಕಾರ್ಯಕರ್ತರು ಅಲ್ಲಿಗೆ ಧಾವಿಸಿದ್ದು ಎನ್‌ಐಎ ಗೋಬ್ಯಾಕ್‌ ಎಂದು ಧಿಕ್ಕಾರ ಕೂಗಿದರು.
ಇದೇ ವೇಳೆ ಪಿಎಎಫ್‌ ರಾಜ್ಯಾಧ್ಯಕ್ಷ ನಾಸಿರ್‌ ಪಾಷಾ ಅವರ ಬೆಂಗಳೂರಿನ ಹಲವು ಮನೆಗಳು ಹಾಗೂ ಕಾರ್ಯದರ್ಶಿ ಅಫ್ಸರ್‌ ಪಾಷಾ ಅವರಿಗೆ ಸೇರಿದ ಪಾದರಾಯನಪುರದ ಮನೆಗಳಿಗೆ ದಾಳಿ ನಡೆಯಿತು. ರಿಚ್ಮಂಡ್ ಸರ್ಕಲ್ ಬಳಿಯ ಮಹಮದ್ ಸಾಕಿಬ್ ಮನೆಗೆ ದಾಳಿ ಮಾಡಿ ದಾಖಲೆಗಳನ್ನು ವಶಕ್ಕೆ ಪಡೆದರು.

ದಾಳಿಗೆ ಕಾರಣಗಳೇನು?
-ದೇಶದ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳಲ್ಲಿ ಪಿಎಫ್‌ಐ ಹೆಸರು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ತನಿಖೆ ನಡೆದಿದೆ. ದೇಶದ ಸುಮಾರು ೧೩ ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ. ಕಳೆದ ಕೆಲವು ವಾರಗಳಿಂದ ಅಲ್ಲಲ್ಲಿ ಎನ್‌ಐಎ ದಾಳಿ ನಡೆಯುತ್ತಲೇ ಇದೆ.
– ಬಿಹಾರದ ಪುಲ್ವಾಮಾ ಷರೀಫ್‌ನಲ್ಲಿ ಪ್ರಧಾನಿ ಹತ್ಯೆಗೆ ಸಂಚು ನಡೆದಿದ್ದರ ಹಿಂದೆ ಪಿಎಫ್‌ಐ ಕೈವಾಡವಿದೆ ಎಂದು ಆರೋಪಿಸಲಾಗಿತ್ತು.
– ಪಿಎಫ್ಐ ಮೇಲೆ ಈ ಹಿಂದೆ ಇಡಿ ದಾಳಿ ನಡೆಸಿ ತನಿಖೆ ನಡೆಸಲಾಗಿತ್ತು. ತನಿಖೆ ವೇಳೆ ಕೋಟ್ಯಾಂತರ ಹಣಕಾಸು ವ್ಯವಹಾರ ಪತ್ತೆಯಾಗಿತ್ತು. ಪಿಎಫ್‌ಐಗೆ ಹರಿದುಬರುತ್ತಿದೆ ಎನ್ನಲಾದ ವಿದೇಶಿ ದೇಣಿಗೆಯ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.
-ಪಿಎಫ್ಐ ನಾಯಕರಿಂದ ಭಯೋತ್ಪಾದಕ ಹಾಗು ಸಮಾಜದ ಆಶಾಂತಿಗೆ ಹಣಕಾಸು ನೆರವು ಇರುವ ಬಗ್ಗೆ ಮಾಹಿತಿ ಇತ್ತು.

ಇದನ್ನೂ ಓದಿ | NIA Raid | ಪಿಎಫ್​ಐಗೆ ಸೇರಿದ ಸ್ಥಳಗಳ ಮೇಲೆ ಎನ್​ಐಎ ಮಿಂಚಿನ ದಾಳಿಗೆ ಕಾರಣವೇನು?

Exit mobile version