Site icon Vistara News

3 ತಿಂಗಳಲ್ಲಿ ಬೆಂಗಳೂರು ಸ್ಕೈಬಸ್‌ ಸರ್ವೇ: CM ಬೊಮ್ಮಾಯಿಗೆ ʼಹಣ ತರುವ ಮಂತ್ರʼ ಬೋಧಿಸಿದೆ ಎಂದ ನಿತಿನ್‌ ಗಡ್ಕರಿ !

Nitin Gadkari

ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಎರಡು ಸಭೆ ನಡೆಸಲಾಗಿದ್ದು, ವಿಸ್ತೃತ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಇದೇ ವೇಳೆ, ಬೃಹತ್‌ ಪ್ರಮಾಣದ ಕಾಮಗಾರಿಗಳಿಗೆ ಹಣವನ್ನು ಎಲ್ಲಿಂದ ತರಬೇಕು ಎಂಬ ಮಂತ್ರವನ್ನು ಸಿಎಂ ಬೊಮ್ಮಾಯಿ ಅವರಿಗೆ ಹೇಳಿಕೊಟ್ಟಿರುವುದಾಗಿ ತಿಳಿಸಿದ್ದಾರೆ.

ಸಚಿವಾಲಯದಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ʼಮಂಥನʼ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ವಿಸ್ತೃತವಾಗಿ ಕರ್ನಾಟಕದ ಸಂಚಾರ ವ್ಯವಸ್ಥೆಯ ಕುರಿತು ಗಡ್ಕರಿ ಮಾತನಾಡಿದರು.

ಸಿಎಂ ಬೊಮ್ಮಾಯಿ ಅವರ ಜತೆಗೆ ಗುರುವಾರ ಸಂಜೆ ಹಾಗೂ ಗುರುವಾರ ಬೆಳಗ್ಗೆ ಸಭೆ ನಡೆಸಲಾಗಿದೆ. ವಿಸ್ತೃತವಾಗಿ ಚರ್ಚೆಯಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಬಹಳಷ್ಟು ದೊಡ್ಡ ಸಮಸ್ಯೆ. ಬೆಂಗಳೂರು ಹಾಗೂ ಹೊರ ಪ್ರದೇಶದ ಸಂಚಾರ ದಟ್ಟಣೆ ಕಡಿಮೆ ಮಾಡಲು ಚೆನ್ನೈ-ಬೆಂಗಳೂರು ನಡುವೆ ಗ್ರೀನ್‌ ಕಾರಿಡಾರ್‌ ಕಾರ್ಯ ನಡೆಯುತ್ತಿದೆ. ಸೂರತ್‌ನಿಂದ ನಾಸಿಕ್‌, ಅಹಮದ್‌ನಗರ, ಸೋಲಾಪುರ, ಚೆನ್ನೈ ಮೂಲಕ ಬೆಂಗಳೂರು ಸಂಪರ್ಕಿಸುವ ಯೋಜನೆಯೂ ನಡೆಯುತ್ತಿದೆ. ಇದರಿಂದ ಉತ್ತರ ಹಾಗೂ ದಕ್ಷಿಣ ಭಾರತದ ನಡುವೆ ಸಂಚಾರ ಸರಾಗವಾಗಿ ಆಗುತ್ತದೆ. ಈ ಹೆದ್ದಾರಿ ಅಕ್ಕಲಕೋಟೆ, ಗುಲ್ಬರ್ಗ, ರಾಯಚೂರಿನಂತಹ ಹಿಂದುಳಿದ ಪ್ರದೇಶಗಳಲ್ಲಿ ಹಾದು ಹೋಗುವುದರಿಂದ ಈ ಪ್ರದೇಶಗಳಲ್ಲಿ ಅಭಿವೃದ್ಧಿಯೂ ಆಗುತ್ತದೆ ಎಂದರು.

ಬೆಂಗಳೂರು ಸ್ಯಾಟಲೈಟ್‌ ರಿಂಗ್‌ ರಸ್ತೆ 288 ಕಿ.ಮೀ. ಉದ್ದವಿದ್ದು, ಸುಮಾರು ಹದಿನೇಳು ಸಾವಿರ ಕೋಟಿ ರೂ. ಮೊತ್ತದ ಯೋಜನೆ. ಪುಣೆ-ಬೆಂಗಳೂರು, ಪುಣೆ-ಚೆನ್ನೈ ಸೇರಿ ಎಲ್ಲ ಪ್ರಮುಖ ರಸ್ತೆಗಳನ್ನೂ ಇದಕ್ಕೆ ಸಂಪರ್ಕಿಸುವುದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗುತ್ತದೆ. ಸ್ಯಾಟಲೈಟ್‌ ರಿಂಗ್‌ ರಸ್ತೆಯ ಹತ್ತು ಪ್ಯಾಕೇಜ್‌ನಲ್ಲಿ ಐದು ಪ್ಯಾಕೇಜ್‌ ಗುತ್ತಿಗೆ ನೀಡಲಾಗಿದ್ದು, ಮೂರರ ಕೆಲಸ ಆರಂಭವಾಗಿದೆ. ಇಲ್ಲಿಯವರೆಗೆ 7% ಕೆಲಸವಾಗಿದೆ. ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನದ ಬಳಿಯಲ್ಲಿ ಪರಿಸರ ಇಲಾಖೆ ಅನುಮತಿಗಾಗಿ ಸ್ವಲ್ಪ ಸಮಸ್ಯೆ ಆಗುತ್ತಿದ್ದು, ಐದಾರು ತಿಂಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ ಎಂದರು.

ದೆಹಲಿಯ ಮಾರುಕಟ್ಟೆ, ಎಲ್ಲ ರೀತಿಯ ಹೋಲ್‌ಸೇಲ್‌ ಮಾರುಕಟ್ಟೆಗಳನ್ನೂ ಸಂಪರ್ಕಿಸಲು ಯೋಜನೆ ರೂಪಿಸಿದ್ದೇವೆ. ಇದೇ ರೀತಿ ಬೆಂಗಳೂರಿನಲ್ಲೂ ಸಂಚಾರ ದಟ್ಟಣೆಗೆ ಕಾರಣವಾಗುತ್ತಿರುವ ಹೆದ್ದಾರಿಗಳನ್ನು ಸ್ಯಾಟಲೈಟ್‌ ರಿಂಗ್‌ ರಸ್ತೆಗೆ ಸ್ಥಳಾಂತರಿಸುವಂತೆ ಸಿಎಂ ಬೊಮ್ಮಾಯಿ ಅವರಿಗೆ ಸಲಹೆ ನೀಡಲಾಗಿದೆ. ರಿಂಗ್‌ ರಸ್ತೆಯನ್ನು ಚೆನ್ನೈ, ಪುಣೆ, ವಿಜಯವಾಡ ಜತೆಗೆ ಜೋಡಿಸಲಾಗುತ್ತದೆ. ಬೆಂಗಳೂರಿನೊಳಗೂ ಅನೇಕ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಇದ್ದು, ಅವುಗಳನ್ನೂ ಅಭಿವೃದ್ಧಿಗೊಳಿಸಲು ನಿರ್ಧಾರ ಮಾಡಲಾಗಿದೆ ಎಂದರು.

ಜಾಗತಿಕ ಕಂಪನಿಯಿಂದ ಸರ್ವೇ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ರಸ್ತೆ ಅಗಲೀಕರಣ ಬಹುಕಷ್ಟ. ಭೂಸ್ವಾಧೀನ ಸಾಧ್ಯವಿಲ್ಲದಿರುವಾಗ ಮೂರು ಹಂತದ ಸೇತುವೆಗಳ ನಿರ್ಮಾಣಕ್ಕೆ ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಭೂಸ್ವಾಧೀನಕ್ಕೆ ಅವಕಾಶ ಇಲ್ಲದ ಕಡೆಯಲ್ಲಿ ಸ್ಕೈಬಸ್‌ಗಳನ್ನು ನಿರ್ಮಿಸುವ ಚಿಂತನೆಯಿದೆ.

ಪ್ರಧಾನಿ ನರೇಂದ್ರ ಮೋದಿಯವರು ಈ ನಿಟ್ಟಿನಲ್ಲಿ ಒತ್ತು ನೀಡುವಂತೆ ಹೇಳಿದ್ದಾರೆ. ದೇಶಾದ್ಯಂತ ಈ ಯೋಜನೆಗೆ ನೂರೈವತ್ತಕ್ಕೂ ಹೆಚ್ಚು ಪ್ರಸ್ತಾವನೆಗಳು ಬಂದಿವೆ. ಅವುಗಳ ಅಧ್ಯಯನ ನಡೆಯಬೇಕಿದೆ. ಬೆಂಗಳೂರಿನಲ್ಲಿ ಸ್ಕೈಬಸ್‌ ನಿರ್ಮಾಣವಾದರೆ ಒಂದು ಬಾರಿಗೆ ಸುಮಾರು ಇನ್ನೂರು ಜನರು ಅತ್ಯಂತ ಕಡಿಮೆ ಖರ್ಚಿನಲ್ಲಿ ತಮ್ಮ ಲ್ಯಾಪ್‌ಟಾಪ್‌ ಹಿಡಿದುಕೊಂಡು ಕೆಲಸ ಮಾಡುತ್ತ ಸಂಚಾರ ಮಾಡಬಹುದು ಎಂದರು.

ಆದರೆ ಈ ಕಾರ್ಯಕ್ಕೆ ಸರ್ವೇ ಮಾಡುವ ಕೌಶಲ ಭಾರತೀಯ ಕಂಪನಿಯಲ್ಲಿಲ್ಲ. ಹೀಗಾಗಿ ವಿಶ್ವದಲ್ಲಿ ಈ ಕಾರ್ಯದಲ್ಲಿ ತಜ್ಞತೆ ಹೊಂದಿರುವ ಎರಡು ಕಂಪನಿಗಳಿವೆ. ಜಾಗತಿಕ ಕಂಪನಿ ಮೂಲಕ ಇಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಆದೇಶಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸುಮಾರು ಮೂರು ತಿಂಗಳಲ್ಲಿ ಈ ಸಂಸ್ಥೆ ವರದಿ ನೀಡುತ್ತದೆ. ಈ ಯೋಜನೆಗೆ ಹಣವನ್ನು ವ್ಯಯಿಸಲು ನಾವು ಸಿದ್ಧರಾಗಿದ್ದೇವೆ ಎಂದರು.

ಬೆಂಗಳೂರಿಗೆ ಸಾರ್ವಜನಿಕ ಸಾರಿಗೆ ಅತ್ಯಂತ ಅವಶ್ಯಕ. ನಮ್ಮಲ್ಲಿ ನಾಲ್ಕು ಜನರಿದ್ದರೆ ಎಂಟು ವಾಹನವಿರುತ್ತದೆ. ಇದೇ ಕಾರಣಕ್ಕೆ ಮುಂಬೈಯಲ್ಲಿ ಡಬಲ್‌ ಡೆಕ್ಕರ್‌ ಬಸ್‌ ಹಾಗೂ ಟ್ರಾಲಿ ಬಸ್‌ ಸಹ ಆರಂಭಿಸಲಾಗಿದೆ. ಸಾರ್ವಜನಿಕ ಸಾರಿಗೆಯನ್ನು ಕಡಿಮೆ ಹಣಕ್ಕೆ ದೊರಕುವಂತೆ ಮಾಡಲು ನಿರ್ಧರಿಸಲಾಗಿದೆ. ಐದು ವರ್ಷದಲ್ಲಿ ಐದು ಲಕ್ಷ ಬಸ್‌ಗಳು, ಪರ್ಯಾಯ ಇಂಧನದಲ್ಲಿ ನಡೆಯುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

ನೀವು ಲಕ್ಷ ಕೋಟಿಯಲ್ಲೇ ಮಾತನಾಡುತ್ತೀರಲ್ಲ ಇದಕ್ಕೆ ಹಣವನ್ನು ಎಲ್ಲಿಂದ ತರುತ್ತೀರ ಎಂದು ಪ್ರಶ್ನೆ ಕೇಳುತ್ತಾರೆ ಎಂದ ಗಡ್ಕರಿ, ಹಣದ ಕೊರತೆ ನಮ್ಮಲ್ಲಿ ಇಲ್ಲ. ಹಣವನ್ನು ಎಲ್ಲಿಂದ ತರಬೇಕು ಎಂಭ ಮಂತ್ರವನ್ನು ಸಿಎಂ ಬೊಮ್ಮಾಯಿ ಅವರಿಗೂ ಹೇಳಿಕೊಟ್ಟಿದ್ದೇನೆ. ಯಾವುದೇ ಯೋಜನೆ ರೂಪಿಸಬೇಕಾದರೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಇರಬೇಕಾಗುತ್ತದೆ. ಉದಾಹರಣೆಗೆ ರಸ್ತೆ ಸಾರಿಗೆಗೆ ಸುರಂಗ ಬೇಕಾಗಿರುತ್ತದೆ, ಅದೇ ರೀತಿ ರೈಲ್ವೆ ಇಲಾಖೆಗೂ ಸುರಂಗ ಬೇಕಾಗಿರುತ್ತದೆ, ಇಬ್ಬರೂ ಸೇರಿ ಯೋಜನೆ ರೂಪಿಸಿದರೆ ಇಬ್ಬರಿಗೂ ಹಣ ಉಳಿತಾಯವಾಗುತ್ತದೆ. ಇಲಾಖೆಗಳ ನಡುವೆ ಸಮನ್ವಯತೆಗೆ ಕೆಲಸ ಮಾಡುವಂತೆಯೂ ಸಿಎಂ ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ ಎಂದರು.

ಮುಂಬೈಯಿಂದ ಬೆಂಗಳೂರಿಗೆ ಆರು ಗಂಟೆ

ಪುಣೆ-ಬೆಂಗಳೂರು ಹೆದ್ದಾರಿಯನ್ನು ಮುಂಬೈ-ಬೆಂಗಳೂರು ಹೆದ್ದಾರಿ ಎಂದು ಬದಲಾವಣೆ ಮಾಡಲಾಗಿದೆ ಎಂದು ಗಡ್ಕರಿ ತಿಳಿಸಿದರು. ಇದೀಗ ಹೈವೇಯನ್ನು ರಿ ಅಲೈನ್‌ಮೆಂಟ್‌ ಮಾಡಲಾಗಿದೆ. ಈಗಾಗಲೆ ಇರುವ ರಸ್ತೆಯ ಮಾರ್ಗವಲ್ಲದೆ ಹೊಸದಾಗಿಯೇ ರಸ್ತೆ ನಿರ್ಮಾಣ ಆಗಲಿದೆ. ಇದರಿಂದಾಗಿ ಪುಣೆಯಿಂದ ಬೆಂಗಳೂರಿಗೆ ನಾಲ್ಕು ಗಂಟೆಯಲ್ಲಿ, ಮುಂಬೈಯಿಂದ ಬೆಂಗಳೂರಿಗೆ ಕೇವಲ ಆರು ಗಂಟೆಯಲ್ಲಿ ಸಂಚರಿಸಬಹುದಾಗಿದೆ ಎಂದರು.

ತುಮಕೂರು ರಸ್ತೆ ಗುತ್ತಿಗೆದಾರ ಬದಲು

ತುಮಕೂರು ಹೈವೇ ಸೇತುವೆ ದುರ್ಬಲವಾಗಿದೆ ಎಂದು ಒಪ್ಪಿಕೊಂಡ ನಿತಿನ್‌ ಗಡ್ಕರಿ, ಇದರಿಂದ ಸಾರ್ವಜನಿಕರಿಗೆ ಆದ ತೊಂದರೆಗೆ ಕ್ಷಮೆ ಯಾಚಿಸುತ್ತೇನೆ ಎಂದರು. ಈ ರಸ್ತೆಯ ಕೇಬಲ್‌ಗಳಲ್ಲಿ ಸಮಸ್ಯೆ ಆಗಿದೆ. ಈಗ ನಿರ್ವಹಣೆ ಮಾಡುತ್ತಿರುವ ನವಯುಗ ಸಂಸ್ಥೆಯ ಸಾಮರ್ಥ್ಯಕ್ಕಿಂತ ದೊಡ್ಡ ಯೋಜನೆ ಇದಾಗಿದ್ದು, ಬೇರೆ ಗುತ್ತಿಗೆದಾರರಿಗೆ ಹಸ್ತಾಂತರಿಸುತ್ತೇವೆ. ಮೂರ್ನಾಲ್ಕು ತಿಂಗಳಲ್ಲಿ ಕೆಲಸ ಮುಕ್ತಾಯವಾಗುತ್ತದೆ ಎಂದು ಭರವಸೆ ನೀಡಿದರು.

ಬೆಂಗಳೂರು-ಮೈಸೂರು ಹೆದ್ದಾರಿ ಡ್ರೈನೇಜ್‌ ಸಮಸ್ಯೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಮಾಗಡಿ ಶಾಸಕ ಮಂಜುನಾಥ್‌ ಮಾತನ್ನು ತಿರಸ್ಕರಿಸಿದ ಗಡ್ಕರಿ, ನಾವು ಸಂಪೂರ್ಣ ಪಾರದರ್ಶಕ, ಭ್ರಷ್ಟಾಚಾರರಹಿತವಾಗಿದ್ದೇವೆ. ಆದರೆ ಹೆದ್ದಾರಿಯಲ್ಲಿರುವ ಡ್ರೈನೇಜ್‌ ವ್ಯವಸ್ಥೆಯಲ್ಲಿ ಸಮಸ್ಯೆಯಾಗಿದೆ. ಈಗ ಮಾಡುತ್ತಿರುವ ಪದ್ಧತಿಯಲ್ಲಿ ಪೂರ್ಣ ಗುಣಮಟ್ಟ ಬರುತ್ತಿಲ್ಲ. ಪ್ರಿಕಾಸ್ಟ್‌ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಹೇಳಿದ್ದೇನೆ. ಈ ತಂತ್ರಜ್ಞಾನದ ಮೂಲಕ ಡ್ರೈನೇಜ್‌ ಸಾಮರ್ಥ್ಯವನ್ನು ಹೆಚ್ಚಳ ಮಾಡಲಾಗುತ್ತದೆ ಎಂದರು.

ಶಿರಾಡಿ ಘಾಟ್‌ ಶೀಘ್ರ ಪೂರ್ಣ

ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿರುವ ಹಾಸನ-ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್‌ನಲ್ಲಿ ಮೊದಲಿಗೆ ಚತುಷ್ಪಥ ರಸ್ತೆಯನ್ನು ಪೂರ್ಣಗೊಳಿಸುವುದಾಗಿ ಗಡ್ಕರಿ ಹೇಳಿದರು. ಹಾಸನ-ಮಂಗಳೂರು ಹೆದ್ದಾರಿ ಕಾಮಗಾರಿ ಎಲ್ಲಿಗೆ ಬಂದಿದೆ ಎಂದು ಕೇಳಿದ ಪ್ರಶ್ನೆ, ನನಗೆ ಕರ್ನಾಟಕದ ಬೇರೆ ಬೇರೆ ಭಾಗದ ಬಗ್ಗೆ ಅಷ್ಟೊಂದು ತಿಳುವಳಿಕೆ ಇಲ್ಲ ಎಂದು ಅಧಿಕಾರಿಯ ಬಳಿ ತಿರುಗಿದರು.

ಹತ್ತಿರ ಬಂದ ಅಧಿಕಾರಿ, ಶಿರಾಡಿ ಘಾಟ್‌ ಎಂದು ಹೆಸರು ಹೇಳುತ್ತಿದ್ದಂತೆಯೇ, ನೀವು ಕೇಳಿದ್ದು ಇದರ ಬಗ್ಗೆಯೇ ಎನ್ನುತ್ತಾಯೋಜನೆ ಕುರಿತು ಸಂಪೂರ್ಣ ವಿವರವನ್ನು ಬಿಚ್ಚಿಟ್ಟರು. ಶಿರಾಡಿ ಘಾಟ್‌ ರಸ್ತೆ ಕುರಿತು ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ, ನಂತರ ಬಿ.ಎಸ್‌. ಯಡಿಯೂರಪ್ಪ, ಇದೀಘ ಬಸವರಾಜ ಬೊಮ್ಮಾಯಿವರೆಗೂ ಮಾತನಾಡುತ್ತಲೇ ಇದ್ದೇನೆ. ಅರಣ್ಯ ಇಲಾಖೆಯ ಅನುಮತಿ ಪಡೆಯುವ ವೇಳೆಗೆ ಸಾಕುಸಾಕಾಗಿ ಹೋಗಿದೆ ಎಂದರು.

ಸದ್ಯಕ್ಕೆ ಮೊದಲಿಗೆ ಚತುಷ್ಪಥ ರಸ್ತೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲಾಗುತ್ತದೆ. ನಂತರ ಅರಣ್ಯ ಇಲಾಖೆಯ ಅನುಮತಿ ಪಡೆದು ಸುರಂಗ ನಿರ್ಮಾಣ ಮಾಡಲಾಗುತ್ತದೆ. ಸುಮಾರು ಹದಿನೈದು ಸಾವಿರ ಕೋಟಿ ರೂ. ಮೊತ್ತದ ಯೋಜನೆಯನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದರು.

ವಾಟರ್‌ಗ್ರಿಡ್‌ಗೆ ಅರಣ್ಯ ಇಲಾಖೆ ಅಡ್ಡಿ

ಬೆಂಗಳೂರಿನಲ್ಲಿ ಒತ್ತುವರಿ ಕಾರಣದಿಂದ ಸಂಕಷ್ಟ ಎದುರಾಗಿರುವ ಪ್ರಶ್ನೆಗೆ ಉತ್ತರಿಸಲು ಆರಂಭಿಸಿದ ಗಡ್ಕರಿ, ನದಿ ಜೋಡಣೆ ಯೋಜನೆಯತ್ತ ಗಮನ ಸೆಳೆದರು. ನಾನು ನೀರಾವರಿ ಸಚಿವನಾಗಿದ್ದಾಗ ಗೋದಾವರಿ-ಕೃಷ್ಣಾ-ಪೆನ್ನಾರ್‌-ಕಾವೇರಿಯನ್ನು ಸಂಪರ್ಕಿಸುವ ಯೋಜನೆ ರೂಪಿಸಿದ್ದೆ. ಆದರೆ ಇಂತಹ ಯೋಜನೆ ರೂಪಿಸಿದ ಕೂಡಲೆ ಪರಿಸರ ಇಲಾಖೆ ಅನುಮತಿ ದೊರಕುವುದಿಲ್ಲ.

ಇಡೀ ದೇಶದಲ್ಲಿ ಇದೀಗ ಏಕೀಕೃತ ವಿದ್ಯುತ್‌ ಗ್ರಿಡ್‌, ರಸ್ತೆ ಗ್ರಿಡ್‌ ಇರಬೇಕಾದರೆ ವಾಟರ್‌ ಗ್ರಿಡ್‌ ಏಕೆ ಇರಬಾರದು? ಒಂದು ಭಾಗದಲ್ಲಿ ಹೆಚ್ಚಿನ ಮಳೆಯಾದರೆ ಅದರ ನೀರನ್ನು ಇನ್ನೊಂದು ಭಾಗದಲ್ಲಿ ಹಂಚಿಕೆ ಮಾಡಬಹುದಲ್ಲವೇ? ಈ ರೀತಿ ಮಾಡಿದರೆ ಕರ್ನಾಟಕ-ತಮಿಳುನಾಡು ಸೇರಿ ಯಾವುದೇ ರಾಜ್ಯಗಳ ನಡುವಿನ ಜಲವ್ಯಾಜ್ಯವೇ ಮುಕ್ತಾಯವಾಗುತ್ತದೆ ಎಂದರು.

ಅಕ್ಷಯ ಕುಮಾರ್‌-ಬಿಗ್‌ಬಿಗೆ ಧನ್ಯವಾದ

ದೇಶದಲ್ಲಿ ಅಪಘಾತಗಳೂ ಸಂಭವಿಸುವುದರಿಂದ ಪ್ರತಿ ವರ್ಷ ದೇಶದ ಜಿಡಿಪಿಗೆ 3% ನಷ್ಟವಾಗುತ್ತದೆ ಎಂದು ಗಡ್ಕರಿ ಹೇಳಿದರು. ಪ್ರತಿವರ್ಷ ಸುಮಾರು ಐದು ಲಕ್ಷ ಅಪಘಾತಗಳು ಸಂಭವಿಸುತ್ತವೆ. ಇದರಲ್ಲಿ ಎರಡೂವರೆ ಲಕ್ಷ ಜನರು ಮೃತಪಡುತ್ತಾರೆ. ಲಕ್ಷಾಂತರ ಜನರು ಗಂಭೀರ ಗಾಯಕ್ಕೆ ಒಳಗಾಗುತ್ತಾರೆ. ಇದರಿಂದ ದೇಶದ ಜಿಡಿಪಿಗೆ 3% ನಷ್ಟವಾಗುತ್ತದೆ ಎಂದರು.

ಇದನ್ನು ತಡೆಯಬೇಕೆಂದರೆ ಎಲ್ಲರೂ ಸೀಟ್‌ ಬೆಲ್ಟ್‌ ಧರಿಸಬೇಕು. ಬೆಂಗಳೂರಿಗೆ ಆಗಮಿಸಿದಾಗ ಬುಲೆಟ್‌ ಪ್ರೂಫ್ ವಾಹನದ ಸೀಟ್‌ನ ಬೆಲ್ಟ್‌ ಅನ್ನು ಹಿಂದಕ್ಕೆ ಸರಿಸಿದ್ದರು. ಹೀಗೆಲ್ಲ ಮಾಡಬಾರದು ಎಂದು ಚಾಲಕರಿಗೆ ತಿಳಿಸಿದೆ. ಇತ್ತೀಚೆಗೆ ಉದ್ಯಮಿ ಸೈರಸ್‌ ಮಿಸ್ತ್ರಿ ಅಪಘಾತದಲ್ಲಿ ಮೃತಪಟ್ಟ ನಂತರದಲ್ಲಿ ಸೀಟ್‌ ಬೆಲ್ಟ್‌ ಕುರಿತು ಸಾಕಷ್ಟು ಜಾಗೃತಿ ಮೂಡಿದ್ದು, ಇದನ್ನು ಹೆಚ್ಚೆಚ್ಚು ಪ್ರಸಾರ ಮಾಡಬೇಕು ಎಂದು ಚಿತ್ರನಟ ಅಕ್ಷಯ್‌ ಕುಮಾರ್‌ ಹೇಳಿದರು. ಅಕ್ಷಯ್‌ ಕುಮಾರ್‌, ಅಮಿತಾಭ್‌ ಬಚ್ಚನ್‌ ಅವರುಗಳ ಜಾಹೀರಾತನ್ನು ಬಿಡುಗಡೆ ಮಾಡಿದ್ದೇವೆ. ಇಬ್ಬರೂ ಉಚಿತವಾಗಿ ಜಾಹೀರಾತು ನೀಡಿದ್ದಾರೆ, ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ.

2024ರ ವೇಳೆಗೆ ದೇಶದ ಅಪಘಾತದಲ್ಲಿ ಅರ್ಧದಷ್ಟು ಹಾಗೂ ಸಾವಿನ ಸಂಖ್ಯೆಯಲ್ಲಿ ಅರ್ಧದಷ್ಟು ಕಡಿಮೆ ಮಾಡಲು ನಿರ್ಧರಿಸಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಿದ್ದೇವೆ. ಜನರ ಜೀವನ ಅತ್ಯಂತ ಮುಖ್ಯವಾದದ್ದು. ಇದಕ್ಕಾಗಿ ಎಲ್ಲರೂ, ಹಿಂಬದಿಯ ಸೀಟ್‌ನಲ್ಲಿದ್ದವರೂ ಸೀಟ್‌ಬೆಲ್ಟ್‌ ಧರಿಸಬೇಕು ಎಂದರು.

ಇದನ್ನೂ ಓದಿ | Anand Mahindra | ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಆನಂದ್‌ ಮಹೀಂದ್ರಾ ನೀಡಿದ ಸಲಹೆಯೇನು?

Exit mobile version