ಚಿಕ್ಕೋಡಿ: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ತನಿಖೆಯನ್ನು ಪ್ರಸ್ತುತ ಸಿಐಡಿ ಉತ್ತಮವಾಗಿಯೇ ನಿರ್ವಹಣೆ ಮಾಡುತ್ತಿದ್ದು, ಹಗರಣದ ತನಿಖೆಯನ್ನು ಇಡಿಗೆ ವರ್ಗಾವಣೆ ಮಾಡುವ ಅವಶ್ಯಕತೆಯಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಳಗಾವಿಯ ನಿಪ್ಪಾಣಿಯಲ್ಲಿ ಗುರುವಾರ ನೂತನ ಪೊಲೀಸ್ ಠಾಣೆ ಉದ್ಘಾಟಿಸಿ ಮಾತನಾಡಿದ ಅವರು, ಸಿಐಡಿ ಅಧಿಕಾರಿಗಳು ಈ ಪ್ರಕರಣದಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ, ಅತ್ಯುತ್ತಮವಾಗಿ ಮತ್ತು ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ತೇಜೋವಧೆಗೆ ವಿಜಯೇಂದ್ರ ಹೆಸರು
ಪಿಎಸ್‌ಐ ಹಗರಣದಲ್ಲಿ ಬಿ.ವೈ. ವಿಜಯೇಂದ್ರ ಅವರ ಹೆಸರನ್ನು ತಳಕು ಹಾಕಿರುವ ವಿಚಾರವು ರಾಜಕೀಯ ಪ್ರೇರಿತವಾಗಿರುವುದು. ಅವರನ್ನು ತೇಜೋವಧೆ ಮಾಡಬೇಕೆಂದು ಹೀಗೆ ಮಾಡಲಾಗುತ್ತಿದೆ. ಅನಾವಶ್ಯಕವಾಗಿ ಅವರ ಹೆಸರನ್ನು ಎಳೆದು ತರಲಾಗಿದ್ದು, ರಾಜಕೀಯ ಲಾಭ ಪಡೆಯುವ ಕೆಲಸಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಯಾರದ್ದೋ ತೇಜೋವಧೆ ಮಾಡಿ ರಾಜಕೀಯ ಲಾಭ ಪಡೆಯಬಾರದು. ಅಲ್ಲದೆ, ನಾನು ಅಂದಿನಿಂದಲೂ ಹೇಳುತ್ತಾ ಬಂದಿದ್ದು, ಇದಕ್ಕೆ ಸಂಬಂಧಪಟ್ಟ ಸಾಕ್ಷ್ಯಾಧಾರ ಕೊಡಲಿ. ಆದರೆ, ಆರೋಪ ಮಾಡಿ ಸಾಕ್ಷಿ ಕೊಡದೆ ಬೆನ್ನು ತೋರಿಸಿ ಓಡಿ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನು ಓದಿ: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ, ಬಂಧಿತ ಎಡಿಜಿಪಿ ಅಮೃತ್ ಪಾಲ್ ವಿಚಾರಣೆ ಇಂದು