Site icon Vistara News

`ಸರಳ ಜೀವನʼ ಚಂದ್ರಶೇಖರ್ ಗುರೂಜಿ ಹತ್ಯೆಯಾಗಿ ಒಂದು ತಿಂಗಳು: 30 ದಿನದ ಘಟನಾವಳಿಗಳು ಇಲ್ಲಿವೆ

sarala vasthu

ಪರಶುರಾಮ್ ತಹಶೀಲ್ದಾರ್, ಹುಬ್ಬಳ್ಳಿ
ಸರಳ ವಾಸ್ತು ಸಂಸ್ಥೆಯ ಚಂದ್ರಶೇಖರ್ ಗುರೂಜಿ ಹತ್ಯೆಯಾಗಿ ಶುಕ್ರವಾರಕ್ಕೆ(ಆಗಸ್ಟ್‌ 5) ಇವತ್ತಿಗೆ ಒಂದು ತಿಂಗಳು ಕಳೆದಿದೆ. ಜುಲೈ 5ರಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಇಬ್ಬರು ಶಿಷ್ಯರೇ ಗುರೂಜಿಯನ್ನು ಅಮಾನವೀಯವಾಗಿ ಹತ್ಯೆ ಮಾಡಿದ್ದರು. ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ‌.

ಸರಳ ವಾಸ್ತು ಸಂಸ್ಥೆಯನ್ನು ಕಟ್ಟಿಬೆಳೆಸಿ ದೇಶ ವಿದೇಶಗಳಲ್ಲಿ ಚಂದ್ರಶೇಖರ ಗುರೂಜಿ ಪ್ರಖ್ಯಾತಿ ಗಳಿಸಿದ್ದರು. ಹುಬ್ಬಳ್ಳಿಯ ಉಣಕಲ್ ಕೆರೆ ಬಳಿಯ ಐಷಾರಾಮಿ ಪ್ರೆಸಿಡೆಂಟ್ ಹೋಟೆಲ್‍ನಲ್ಲಿ ಜುಲೈ 5ರಂದು ಬೆಳಗ್ಗೆ ಚಾಕುವಿನಿಂದ ಇರಿದು ಗುರೂಜಿಯನ್ನು ಹತ್ಯೆ ಮಾಡಲಾಗಿತ್ತು. ಈ ಭಯಾನಕ ದೃಶ್ಯ ಹೋಟೆಲ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಚಂದ್ರಶೇಖರ ಗುರೂಜಿಯವರ ಸರಳ ವಾಸ್ತು ಕಚೇರಿಯಲ್ಲಿ ಈ ಹಿಂದೆ ಉದ್ಯೋಗಿಗಳಾಗಿದ್ದವರೇ ಕೊಲೆ ಮಾಡಿದ್ದು ತೀವ್ರ ಆತಂಕಕ್ಕೆ ಕಾರಣವಾಗಿತ್ತು.
ಚಂದ್ರಶೇಖರ ಗುರೂಜಿ ಪ್ರೆಸಿಡೆಂಟ್ ಹೋಟೆಲ್‍ನಲ್ಲಿ ಜುಲೈ 2ರಿಂದ ವಾಸ್ತವ್ಯ ಹೂಡಿದ್ದರು. ಗುರೂಜಿ ಚಲನವಲನದ ಮೇಲೆ ನಿಗಾ ಇಟ್ಟಿದ್ದ ಹಂತಕರು ಜುಲೈ 5ರಂದು ಬೆಳಗ್ಗೆ 11 ಗಂಟೆಗೆ ಹೊಟೆಲ್‌ಗೆ ಆಗಮಿಸಿದ್ದರು. ಧಾರವಾಡ ಜಿಲ್ಲೆಯ ದುಮ್ಮವಾಡ ಮೂಲದ ಮಹಾಂತೇಶ್ ಶಿರೂರ್ ಮತ್ತು ಮಂಜುನಾಥ್ ಮರೇವಾಡ್ ಹೋಟೆಲ್‌ ಲಾಬಿಗೆ ಬಂದಿದ್ದರು. ಹೋಟೆಲ್ ಸಿಬ್ಬಂದಿಗೆ ತಾವು ಚಂದ್ರಶೇಖರ್ ಗುರೂಜಿ ಅವರನ್ನು ಭೇಟಿಯಾಗಲು ಬಂದಿರುವುದಾಗಿ ತಿಳಿಸಿದ್ದರು. ಈ ವಿಷಯವನ್ನು ಹೋಟೆಲ್ ಸಿಬ್ಬಂದಿ ಮೊದಲ ಮಹಡಿಯ ರೂಮ್ ನಂಬರ್ 220ರಲ್ಲಿ ತಂಗಿದ್ದ ಗುರೂಜಿ ಅವರಿಗೆ ತಿಳಿಸಿದ್ದರು. ಅವರನ್ನು ಅಲ್ಲೇ ಕೂರಿಸಿ, ತಾವು ಭೇಟಿ ಮಾಡಲು ಬರುವುದಾಗಿ ಗುರೂಜಿ ಹೋಟೆಲ್ ಸಿಬ್ಬಂದಿಗೆ ಹೇಳಿ ಕಳುಹಿಸಿದ್ದರು. ಸ್ವಲ್ಪ ಹೊತ್ತಿನ ನಂತರ ಚಂದ್ರಶೇಖರ ಗುರೂಜಿ ಕೆಳಗಿಳಿದು ಲಾಬಿಗೆ ಆಗಮಿಸಿದ್ದರು.

ಗುರೂಜಿ ಸೋಫಾದಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮಂಜುನಾಥ್ ಮರೇವಾಡ ಕಾಲಿಗೆ ತಲೆಹಚ್ಚಿ ಆಶಿರ್ವಾದ ಪಡೆಯುವ ನಾಟಕ ಮಾಡಿದ್ದ. ಮತ್ತೊಂದೆಡೆ ನಿಂತಿದ್ದ ಮಹಾಂತೇಶ್ ಶಿರೂರ್ ಎದೆಗೆ ಚೂರಿಯಿಂದ ಇರಿದಿದ್ದಾನೆ. ಏಕಾಏಕಿ ನಡೆದ ಈ ದಾಳಿಯಿಂದ ಬೆಚ್ಚಿದ ಗುರೂಜಿಯವರು ಮೇಲೆದ್ದು, ತಮ್ಮ ಮೇಲಿನ ದಾಳಿಯಿಂದ ಪಾರಾಗಲು ಯತ್ನಿಸಿದರು. ಇಬ್ಬರೂ ಚೂರಿಯಿಂದ ಗುರೂಜಿಯ ಎದೆ, ಬೆನ್ನು, ಹೊಟ್ಟೆ, ಕುತ್ತಿಗೆಗೆ ಇರಿದಿದ್ದರು. ಅಷ್ಟರಲ್ಲಿ ಗುರೂಜಿ ಕೆಳಗುರುಳಿ ಒದ್ದಾಡಿದರೂ ಬಿಡದೆ ದೇಹಕ್ಕೆ ಚಾಕುವಿನಿಂದ ಇರಿದಿದ್ದರು. ನಂತರ ಗುರೂಜಿ ಕತ್ತು ಕೊಯ್ದು, ಇಷ್ಟೆಲ್ಲಾ ಕೇವಲ 40 ಸೆಕೆಂಡ್‍ನಲ್ಲಿ ಮುಗಿದು ಹೋಗಿತ್ತು. ಈ ಭೀಭತ್ಸ ದಾಳಿಯಿಂದ ಭಯಭೀತರಾದ ಲಾಬಿಯಲ್ಲಿದ್ದ ಹೋಟೆಲ್ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದರು. ಅದರಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಚೀರಿಕೊಂಡಿದ್ದರು.

ಕೆಲ ಪುರುಷ ಸಿಬ್ಬಂದಿ ಗುರೂಜಿ ಮೇಲಿನ ದಾಳಿಯನ್ನು ತಡೆಯುವ ಯತ್ನವನ್ನು ಮಾಡಿದ್ದರಾದರೂ ಅವರಿಗೂ ಚಾಕು ತೋರಿಸಿ ಈ ಇಬ್ಬರು ಬೆದರಿಕೆ ಹಾಕಿದ್ದದರಿಂದ ಹೆದರಿ ಹಿಂದೆ ಸರಿದಿದ್ದರು. ಕೊನೆಗೆ ಈ ಇಬ್ಬರು ಹಂತಕರು ಹೋಟೆಲ್‍ನ ಹೊರಗೆ ಓಡಿ ಹೋಗಿದ್ದರು. ನಂತರ ಹೋಟೆಲ್ ಹೊರಗೆ ನಿಲ್ಲಿಸಿದ್ದ ಮಹಾಂತೇಶ್ ಶಿರೂರ್‌ನ ಕಾರಿನಲ್ಲಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗುರೂಜಿಯನ್ನು ಕೂಡಲೇ ಹೋಟೆಲ್ ಸಿಬ್ಬಂದಿ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲದೇ ವಿದ್ಯಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಂತಕರ ಸೆರೆಗೆ ನಗರದ ಸುತ್ತಮುತ್ತ ನಾಕಾಬಂದಿ ವಿಧಿಸಿ ಕಾರ್ಯಾಚರಣೆಗಿಳಿದಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್, ಡಿಸಿಪಿ, ಎಸಿಪಿಗಳು ಹೋಟೆಲ್‍ನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ 5 ತಂಡಗಳನ್ನು ರಚಿಸಿದ್ದರು. ಕಾರ್ಯಾಚರಣೆಗೆ ಇಳಿದ ಪೊಲೀಸರು ಮಹಾಂತೇಶ್ ಶಿರೂರ್ ಹಾಗೂ ಮಂಜುನಾಥ್ ಮರೇವಾಡನನ್ನು ರಾಮದುರ್ಗದ ಬಳಿ ವಶಕ್ಕೆ ಪಡೆದಿದ್ದರು.
ಸಿಸಿಟಿವಿಯಲ್ಲಿ ಆರೋಪಿಗಳ ಸುಳಿವು ಸಿಗುತ್ತಿದ್ದಂತೆ ತನಿಖೆ ಚುರುಕುಗೊಳಿಸದ ಪೊಲೀಸರು ಮಹಾಂತೇಶ್ ಪತ್ನಿ ವನಜಾಕ್ಷಿಯನ್ನು ಕರೆತಂದು ವಿಚಾರಣೆ ಮಾಡಿದ್ದರು. ವನಜಾಕ್ಷಿ ಗುರೂಜಿ ಬಳಿ ಕೆಲಸ ಮಾಡುತ್ತಿದ್ದ ಬಗ್ಗೆ ತಿಳಿಸಿದ್ದಳು. ಕೊಲೆ ದೃಶ್ಯಗಳಲ್ಲಿ ಇರುವುದು ಮಹಾಂತೇಶ್ ಮತ್ತು ಮಂಜುನಾಥ್ ಎಂದು ಗುರುತಿಸಿದ್ದಳು‌. ಗುರೂಜಿ ತಮಗೆ ಕೆಲಸ ಕೊಟ್ಟು ಅನ್ನಕೊಟ್ಟಿದ್ದರು, ತಂದೆ ಸಮಾನರಾದ ಅವರ ಕೊಲೆ ಮಾಡಿದ್ದು ಸರಿಯಲ್ಲ ಎಂದು ಕಣ್ಣೀರು ಹಾಕಿದ್ದಳು‌.

ಮುಗಿಲು ಮುಟ್ಟಿದ್ದ ರೋದನ

ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಕೊಲೆಗೆ ರಾಜ್ಯವೇ ಮಮ್ಮಲನೇ ಮರುಗಿತ್ತು. ಕಿಮ್ಸ್ ಆಸ್ಪತ್ರೆಯಲ್ಲಿ ಮೃತದೇಹದ ಪೋಸ್ಟ್‌ಮಾರ್ಟಮ್ ಮಾಡಲಾಗಿತ್ತು. ಈ ವೇಳೆ ಗುರೂಜಿ ದೇಹಕ್ಕೆ ಐವತ್ತೆರಡು ಬಾರಿ ಇರಿದಿದ್ದ ಹಾಗೂ ಹನ್ನೆರಡು ಇಂಚಿನಷ್ಟು ಕತ್ತು ಕೊಯ್ದಿರುವುದಾಗಿ ವರದಿ ಬಂದಿತ್ತು. ಮಾರನೆಯ ದಿನ ಜುಲೈ 6ರಂದು ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿನ ಜಮೀನಿನಲ್ಲಿ ಗುರೂಜಿಯ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಗುರೂಜಿ ಪತ್ನಿ, ಪುತ್ರಿ, ಸಹೋದರ, ಸಹೋದರಿ ಸೇರಿದಂತೆ ಬೆಂಬಲಿಗರ ರೋದನ ಮುಗಿಲು ಮುಟ್ಟಿತ್ತು‌. ಚಂದ್ರಶೇಖರ್ ಗುರೂಜಿ ಸಾಕಿದ್ದ ಶ್ವಾನವೂ ಅಂತಿಮ ನಮನ ಸಲ್ಲಿಸಿತ್ತು.
ಇತ್ತ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಗುರೂಜಿ ಕುಟುಂಬಸ್ಥರು ದೂರು ದಾಖಲಿಸಿದ್ದರು. ಅದರಲ್ಲಿ ಆಸ್ತಿ ಕಲಹದ ಕಾರಣ ಗುರೂಜಿ ಕೊಲೆ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದರು.

ಮಹಾಂತೇಶ್ ಮತ್ತು ಮಂಜುನಾಥನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಪೊಲೀಸರು ಆರು ದಿನ ಕಸ್ಟಡಿಗೆ ಪಡೆದಿದ್ದರು. ಇಬ್ಬರನ್ನೂ ವಿಚಾರಣೆ ನಡೆಸಿದಾಗ ಹಲವು ವಿಷಯಗಳು ಬಯಲಿಗೆ ಬಂದಿದ್ದವು.
ಗುರೂಜಿ ಹತ್ಯೆಗೆ ಪ್ರಮುಖ ಕಾರಣ ಬೇನಾಮಿ ಆಸ್ತಿ ಎಂದು ಆರೋಪಿತರು ಬಾಯ್ಬಿಟ್ಟಿದ್ದರು. ಮಹಾಂತೇಶ್ ಗುರೂಜಿ ಆಪ್ತನಾಗಿದ್ದ ವೇಳೆ ಹಲವು ಆಸ್ತಿಗಳನ್ನು ಗುರೂಜಿ ಖರೀದಿಸಿದ್ದರು. ಮಹಾಂತೇಶ್ ಸೂಚನೆಯಂತೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿಗಳನ್ನು ಸರಳವಾಸ್ತು ಸಂಸ್ಥೆಯ ಸಿಬ್ಬಂದಿ ಹೆಸರಲ್ಲಿ ಬೇನಾಮಿ ಮಾಡಿಟ್ಟಿದ್ದರು. ಮಹಂತೇಶ್ ಕೆಲವೊಂದು ಹಣಕಾಸಿನ ವ್ಯವಹಾರಗಳನ್ನು ಗುರೂಜಿಗೆ ಗೊತ್ತಾಗದಂತೆ ಮಾಡಿದ್ದ. ಹೀಗಾಗಿ ಗುರೂಜಿ ಮಹಾಂತೇಶ್ ಮತ್ತವನ ಪತ್ನಿಯನ್ನು ಹಂತಹಂತವಾಗಿ ಕೆಲಸದಿಂದ ತೆಗೆದುಹಾಕಿದ್ದರು.

ನಂತರ ಮಹಾಂತೇಶ್ ಆಪ್ತರನ್ನು ಕೆಲಸ ಬಿಡಿಸಿ ಮನೆಗೆ ಕಳಿಸಿದ್ದರು. ಬೇನಾಮಿ ಆಸ್ತಿಗಳನ್ನು ಒಂದೊಂದಾಗಿ ಮರಳಿ ಪಡೆದಿದ್ದರು. ಮಹಾಂತೇಶ್ ತನ್ನ ಸ್ನೇಹಿತನ ಹೆಸರಲ್ಲಿದ್ದ ಒಂದು ಆಸ್ತಿಯನ್ನು ಮಾರಿ ಐವತ್ತು ಲಕ್ಷ ರೂಪಾಯಿಗಳನ್ನು ಹಂಚಿಕೊಂಡಿದ್ದ. ಇದು ಗೊತ್ತಾದ ಗುರೂಜಿ ಆಸ್ತಿ ಖರೀದಿಸಿದವರನ್ನು ಸಂಪರ್ಕಿಸಿ ಖರೀದಿ ಮಾಡದಂತೆ ಹೇಳಿದ್ದರು. ಕೆಲಸ ಕಳೆದುಕೊಂಡು ಕಂಗಾಲಾಗಿದ್ದ ಮಹಾಂತೇಶ್ ಈಗ ಗುರೂಜಿ ಆಸ್ತಿ ಮರಳಿ ಕೇಳುತ್ತಿರುವುದಕ್ಕೆ ರೊಚ್ಚಿಗೆದ್ದಿದ್ದ‌. ಗುರೂಜಿ ಸಂಪರ್ಕಿಸಲು ಪ್ರಯತ್ನಿಸಿ ವಿಫಲನಾಗಿದ್ದ. ಸಂಬಂಧಿಯೊಬ್ಬರು ನಿಧನರಾದ ಕಾರಣ ಗುರೂಜಿ ಹುಬ್ಬಳ್ಳಿಗೆ ಬರುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡು ಅವರನ್ನು ಭೇಟಿಯಾಗಿದ್ದ. ಜುಲೈ ನಾಲ್ಕರಂದು ಭೇಟಿಯಾಗಿ ಮಾತುಕತೆ ನಡೆಸಿದ್ದ.

ಗುರೂಜಿ ಮಹಾಂತೇಶನ ಬೇಡಿಕೆಗಳಿಗೆ ಒಪ್ಪದ ಕಾರಣ ಮಾರನೆಯ ದಿನ ಅಂದರೆ ಜುಲೈ ಐದರಂದು ಮಂಜುನಾಥನ ಜೊತೆ ಸೇರಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಆರೋಪಿತರು ಗುರೂಜಿ ಕೊಲೆ ಹಿಂದಿನ ಕಾರಣಗಳನ್ನು ಪೊಲೀಸರ ಮುಂದೆ ಎಳೆಎಳೆಯಾಗಿ ಬಾಯ್ಬಿಟ್ಟಿದ್ದಾರೆ. ಒಟ್ಟು ಹನ್ನೆರಡು ದಿನ ಆರೋಪಿಗಳನ್ನು ಕಸ್ಟಡಿಗೆ ಪಡೆದ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಎಸಿಪಿ ವಿನೋದ್ ಮುಕ್ತೆದಾರ ಈ ಎಲ್ಲ ವಿಚಾರಗಳ ಕುರಿತು ವಿಚಾರಣೆ ಮುಂದುವರಿಸಿದ್ದಾರೆ. ವಿವಿಧ ಆಯಾಮಗಳಲ್ಲಿ ಇನ್ನೂ ತನಿಖೆ ಸಾಗುತ್ತಿದೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆಗೆ ತಯಾರಿ ಮಾಡುತ್ತಿದ್ದಾರೆ. ಸದ್ಯದಲ್ಲೆ ಚಾರ್ಜ್‌ಶೀಟ್‌ ಸಲ್ಲಿಕೆ ಆಗಲಿದ್ದು, ವಿಚಾರಣೆ ವೇಳೆ ಹಂತಕರು ಹೇಳಿರುವ ಮಾತುಗಳು ಬಹಿರಂಗವಾಗಲಿವೆ.

ಇದನ್ನೂ ಓದಿ } ಚಂದ್ರಶೇಖರ ಗುರೂಜಿ ಹತ್ಯೆಗೂ ಮುಂಚೆ ವಾಟ್ಸ್‌ಆ್ಯಪ್‌ನಲ್ಲಿ ಕ್ರಿಯೇಟ್‌ ಆಗಿತ್ತು ಗ್ರೂಪ್!

Exit mobile version