Site icon Vistara News

ಪರೇಶ್‌ ಮೇಸ್ತಾ ಕೊಲೆ ಪ್ರಧಾನ ಆರೋಪಿಗೆ ವಕ್ಫ್‌ ಬೋರ್ಡ್‌ ಉಪಾಧ್ಯಕ್ಷ ಸ್ಥಾನ: ಬಿಜೆಪಿ ಎಡವಟ್ಟಿಗೆ ಎಲ್ಲೆಡೆ ತರಾಟೆ

Paresh mesta- annigeri

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಿಂದು ಯುವಕ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದವನಿಗೆ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ ನೀಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.

2017ರ ಡಿಸೆಂಬರ್ ತಿಂಗಳಿನಲ್ಲಿ ಹೊನ್ನಾವರದಲ್ಲಿ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲೇ ಪಟ್ಟಣದ ಪರೇಶ್‌ ಮೇಸ್ತಾ ಎನ್ನುವ ಯುವಕ ನಾಪತ್ತೆಯಾಗಿ, ಎರಡು ದಿನಗಳ ನಂತರ ಶವವಾಗಿ ಪಟ್ಟಣದ ಕೆರೆಯೊಂದರಲ್ಲಿ ಪತ್ತೆಯಾಗಿದ್ದ. ಮೇಸ್ತಾನನ್ನು ಕೋಮು ಗಲಭೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಆಪಾದಿಸಿ ಬಿಜೆಪಿಯು ರಾಜ್ಯಾದ್ಯಂತ ಯುವಕನ ಸಾವಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಸಿತ್ತು. ಆಗ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್‌ ಶಾ ಅವರೇ ಹೊನ್ನಾವರಕ್ಕೆ ಬಂದು ಪರೇಶ್‌ ಮೇಸ್ತಾ ಮನೆಗೆ ಭೇಟಿ ನೀಡಿದ್ದರು. ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಈಗ ಪರೇಶ್‌ ಕೊಲೆ ಆರೋಪಿಗೆ ಬಿಜೆಪಿ ಸರ್ಕಾರದಿಂದಲೇ ವಕ್ಫ್‌ ಮಂಡಳಿಯಲ್ಲಿ ಸ್ಥಾನಮಾನ ನೀಡಿ ಗೌರವಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ಪರಮೇಶ್‌ ಮೇಸ್ತ ಕೊಲೆಯಾದಾಗ ಹಾಕಲಾಗಿದ್ದ ಹೋರ್ಡಿಂಗ್‌

ಗಲಭೆಗೆ ಕಾರಣವಾಗಿದ್ದ ಮೇಸ್ತಾ ಪ್ರಕರಣ
ಜಿಲ್ಲೆಯ ಹೊನ್ನಾವರ, ಕುಮಟಾ, ಶಿರಸಿ, ಕಾರವಾರದಲ್ಲಿ ಈ ಘಟನೆ ಗಲಾಟೆಗೆ ಕಾರಣವಾಗಿ, ಈ ಪ್ರಕರಣವನ್ನ ಅಂದಿನ ಕಾಂಗ್ರೆಸ್ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಜಮಾಲ್ ಅಜಾದ್ ಅಣ್ಣಿಗೇರಿ ಎಂಬಾತನನ್ನ ಎ1 ಆರೋಪಿಯನ್ನಾಗಿ ಮಾಡಿ ಬಂಧಿಸಲಾಗಿತ್ತು. ಈ ಪ್ರಕರಣ ಇನ್ನೂ ಸಿಬಿಐ ತನಿಖೆ ಮಾಡುತ್ತಿದ್ದು, ಬಂಧಿತರೆಲ್ಲರೂ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇದರ ನಡುವೆ ಕೆಲ ದಿನಗಳ ಹಿಂದೆ ಜಿಲ್ಲಾ ವಕ್ಫ್ ಬೋರ್ಡ್ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಉಪಾಧ್ಯಕ್ಷ ಸ್ಥಾನವನ್ನ ಎ1 ಆರೋಪಿ ಅಜಾದ್ ಅಣ್ಣಿಗೇರಿಗೆ ನೀಡಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

ಪರಮೇಶ್‌ ಮೇಸ್ತ ಕೊಲೆಯಾದಾಗ ಬಿಜೆಪಿ ನಡೆಸಿದ ಪ್ರತಿಭಟನೆ

ಪರೇಶ್ ಮೇಸ್ತಾ ಹತ್ಯೆ ವಿರುದ್ಧವೇ ಹೋರಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಆರೋಪಿಗೆ ಅಧಿಕಾರಕ್ಕೆ ಸರ್ಕಾರಿ ಸಂಸ್ಥೆಯಲ್ಲಿ ಸ್ಥಾನವನ್ನು ಕೊಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ. ಅಲ್ಲದೇ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದಲೇ ಉಪಾಧ್ಯಕ್ಷ ಸ್ಥಾನ ನೀಡಿದ್ದು, ಬಿಜೆಪಿಗೆ ನೈತಿಕತೆ ಏನುಳಿದಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಅಸ್ತ್ರ ಸಹ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಉಪಾಧ್ಯಕ್ಷನ ಬದಲಾವಣೆಗೆ ಅಧ್ಯಕ್ಷನಿಂದ ಮನವಿ
ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರ ಪಟ್ಟಿಯಲ್ಲಿ ಬೇರೆ ಪಕ್ಷದ ಅಜಾದ್‌ ಅಣ್ಣಿಗೇರಿ ಹಾಗೂ ಕೆ.ಎಚ್‌.ಕರೀಂ ಹಾಜಿ ಅವರನ್ನು ನೇಮಕ ಮಾಡಿದ್ದು, ಪದಾಧಿಕಾರಿಗಳನ್ನು ಬದಲಿಸುವಂತೆ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮಹಮ್ಮದ್ ಅನೀಷ್ ತಹಸೀಲ್ದಾರ್ ಮುಜರಾಯಿ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.

‘ನನ್ನನ್ನು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯರ ಪಟ್ಟಿಯನ್ನ ಕಳುಹಿಸಿದ್ದೆ. ಆದರೆ ಬೇರೆ ಪಕ್ಷದ ಇಬ್ಬರನ್ನ ನೇಮಕ ಮಾಡಿರುವುದು ಬಿಜೆಪಿ ಪಕ್ಷದವರ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಸಲ್ಲಿಸಿದ ಸದಸ್ಯರ ಪಟ್ಟಿಯನ್ನು ಪರಿಗಣಿಸಿ ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯರನ್ನು ನೇಮಕ ಮಾಡಿʼ ಎಂದು ಅವರು ಮನವಿ ಮಾಡಿದ್ದಾರೆ.

Exit mobile version