Site icon Vistara News

pendal collapse | ಕಲೋತ್ಸವದ ವೇಳೆ ಪೆಂಡಾಲ್‌ ಕುಸಿದು ಬಿದ್ದು ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ

kalothsava

ಮಂಗಳೂರು: ಕೇರಳ ಸರಕಾರ ನಡೆಸುವ ಕಲೋತ್ಸವಕ್ಕೆ ಹಾಕಿದ ಪೆಂಡಾಲ್‌ ಕುಸಿದುಬಿದ್ದು ನೂರಾರು ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಈ ಬೃಹತ್‌ ಪೆಂಡಾಲ್‌ನ ಅಡಿ ೫೦೦ಕ್ಕೂ ಅಧಿಕ ಮಕ್ಕಳಿದ್ದರೂ ಅದೃಷ್ಟವಶಾತ್‌ ಯಾರಿಗೂ ಮಾರಣಾಂತಿಕ ಗಾಯಗಳಾಗಿಲ್ಲ. ಇದರಿಂದ ಪೋಷಕರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.

ಪೆಂಡಾಲ್‌ ಉರುಳಿದ ಜಾಗ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಬೇಕೂರು ಸರ್ಕಾರಿ ಶಾಲೆಯ ಆವರಣದಲ್ಲಿ ಕಲೋತ್ಸವವನ್ನು ಆಯೋಜಿಸಲಾಗಿತ್ತು. ಕಲೋತ್ಸವದ ಭಾಗವಾಗಿ ಶುಕ್ರವಾರ ವಿಜ್ಞಾನ ಮೇಳ ಇತ್ತು. ಇದಕ್ಕಾಗಿ ತಾಲೂಕಿನ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಬಂದಿದ್ದರು. ಜತೆಗೆ ಹೆತ್ತವರು ಕೂಡಾ ಆಗಮಿಸಿದ್ದರು.

ಶಾಲೆಯ ಆವರಣದಲ್ಲಿ ತಗಡಿನ ಶೀಟಿನಿಂದ ಬೃಹತ್‌ ಪೆಂಡಾಲನ್ನು ನಿರ್ಮಿಸಲಾಗಿತ್ತು. ಮಳೆ ಬಂದರೂ ತಡೆಯಬಲ್ಲ ಶಕ್ತಿ ಇರುವ ಪೆಂಡಾಲ್‌ ಇದೆಂದು ನಂಬಲಾಗಿತ್ತು. ಆದರೆ, ಮಧ್ಯಾಹ್ನ ಸುಮಾರು ಮೂರು ಗಂಟೆಯ ಹೊತ್ತಿಗೆ ಒಮ್ಮಿಂದೊಮ್ಮೆಗೇ ಈ ತಗಡಿನ ಚಪ್ಪರ ಏಕಾಏಕಿಯಾಗಿ ಉರುಳಿಬಿದ್ದಿದೆ.

ತಗಡಿನ ಶೀಟು, ಅದಕ್ಕೆ ಆಧಾರವಾಗಿರುವ ಸರಳುಗಳು, ದೊಡ್ಡ ಕಂಬಳ ಸಹಿತ ಇಡೀ ಚಪ್ಪರವೇ ಬಿದ್ದಿದೆ. ಸಾಲದ್ದಕ್ಕೆ ಈಗ ತಗಡಿನ ತುದಿಗಳು ತುಂಬ ಮೊನಚು ಆಗಿರುತ್ತವೆ. ಏಕಾಏಕಿಯಾಗಿ ಈ ಚಪ್ಪರ ಕುಸಿದುಬಿದ್ದಿದ್ದು, ಹಲವು ವಿದ್ಯಾರ್ಥಿಗಳು ಅದರಡಿಯಲ್ಲಿ ಸಿಕ್ಕಿಬಿದ್ದರು. ಎಲ್ಲ ಮಕ್ಕಳನ್ನು ಕೂಡಲೇ ಮೇಲಕ್ಕೆತ್ತಿ ರಕ್ಷಿಸಲಾಯಿತು.

ಯಾವುದೇ ಜೀವ ಹಾನಿ ಸಂಭವಿಸಿಲ್ಲವಾದರೂ ಹಲವರಿಗೆ ಗಂಭೀರ ಗಾಯಗಳಾಗಿವೆ. ಕೆಲವರ ದೇಹ ಭಾಗಗಳು ಮುರಿದಿರಬಹುದು ಎಂದು ಹೇಳಲಾಗಿದೆ.

ಈ ಭಾಗದಲ್ಲಿ ಮಳೆ ಬಂದಿಲ್ಲ. ಜೋರಾದ ಗಾಳಿಯೂ ಬೀಸಿಲ್ಲ. ಹಾಗಿಲ್ಲದಿದ್ದರೂ ಪೆಂಡಾಲ್‌ ಉರುಳಿದ್ದು ಹೇಗೆ? ಸರಿಯಾಗಿ ಕಟ್ಟದೆ ನಿರ್ಲಕ್ಷ್ಯ ವಹಿಸಲಾಯಿತೇ ಎಂಬ ಅನುಮಾನ ಮೂಡಿದೆ.

Exit mobile version