ಮೈಸೂರು: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯನ್ನು ಮಣಿಸಲು ಕರ್ನಾಟಕ ಕಾಂಗ್ರೆಸ್ ನಾಯಕರು ತೊಡೆತಟ್ಟಿ ನಿಂತಿದ್ದರೆ, ರಾಜ್ಯಾದ್ಯಂತ ಅಬ್ಬರದ ಪ್ರಚಾರ ಕೈಗೊಳ್ಳುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಾತ್ರ ಮೈಸೂರು (Mysore) ಹಾಗೂ ಚಾಮರಾಜನಗರ (Chamarajanagar) ಲೋಕಸಭೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಒತ್ತಡಕ್ಕೆ ಸಿಲುಕಿದ್ದಾರೆ. ಇದೇ ಕಾರಣಕ್ಕೆ ಅವರು ಮೈಸೂರು ಹಾಗೂ ಚಾಮರಾಜನಗರದಲ್ಲಿ ಎಡೆಬಿಡದೆ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಎರಡೂ ಕ್ಷೇತ್ರಗಳನ್ನು ಮುಖ್ಯಮಂತ್ರಿಯವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆದರೆ, ಸಿಎಂ ತವರು ಕ್ಷೇತ್ರವಾದ ವರುಣದಲ್ಲೇ ಕಾಂಗ್ರೆಸ್ ವಿರುದ್ಧ ಜನರ ರೋಷಾಗ್ನಿ ಕಟ್ಟೆಯೊಡೆದಿದೆ. ಚುನಾವಣೆ ಪ್ರಚಾರದ ವೇಳೆ ಡಾ.ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರನ್ನು ಜನ ತರಾಟೆಗೆ ತೆಗೆದುಕೊಂಡಿದ್ದು, ಸಿಎಂ ಪುತ್ರ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಹೌದು, ವರುಣ ಕ್ಷೇತ್ರದ ಅಳಗಂಚಿ ಗ್ರಾಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮದಲ್ಲಿ ಬಣ್ಣಾರಿ ಅಮ್ಮನ್ ಸರ್ಕಾರಿ ಕಾರ್ಖಾನೆ ವಿರುದ್ಧ ರೈತರು ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ವರುಣದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಕೈಗೊಳ್ಳುವ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರು ಅಳಗಂಚಿ ಗ್ರಾಮಕ್ಕೆ ತೆರಳಿದರು. ಹಾಗೆಯೇ, ಪ್ರತಿಭಟನಾನಿರತ ಗ್ರಾಮಸ್ಥರನ್ನು ಭೇಟಿಯಾದರು. ಆಗ ರೈತರು ಇವರನ್ನು ತರಾಟೆಗೆ ತೆಗೆದುಕೊಂಡರು.
“ಚುನಾವಣೆ ಅಂತ ನೀವು ಇಲ್ಲಿಗೆ ಬಂದಿದ್ದೀರಿ. ಇಲ್ಲ ಎಂದರೆ ನೀವು ನಮ್ಮ ಕಷ್ಟ ಕೇಳುತ್ತಿರಲಿಲ್ಲ. ಎರಡು ತಿಂಗಳಿಂದ ಪ್ರತಿಭಟನೆ ನಡೆಸಿದರೂ ನೀವು ಇತ್ತ ಸುಳಿದಿಲ್ಲ. ನಾವು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. “ನನ್ನ ತಂದೆ ಬಳಿ ಮಾತನಾಡಿ ಖಂಡಿತವಾಗಿಯೂ ಸಮಸ್ಯೆ ಬಗೆಹರಿಸುತ್ತೇನೆ” ಎಂದು ಯತೀಂದ್ರ ಸಿದ್ದರಾಮಯ್ಯ ಅವರು ಆಕ್ರೋಶ ತಣ್ಣಗಾಗಿಸಲು ಯತ್ನಿಸಿದರು. ಆದರೆ, ರೈತರು ಇನ್ನಷ್ಟು ಕೋಪಗೊಂಡ ಕಾರಣ ಯತೀಂದ್ರ ಸಿದ್ದರಾಮಯ್ಯ ಅವರು ಅಲ್ಲಿಂದ ಕಾಲ್ಕಿತ್ತರು.
ಸಿಎಂ ಸ್ಥಾನ ಉಳಿಯಲು 60 ಸಾವಿರ ಲೀಡ್ ಬೇಕು
ಸಿಎಂ ಸ್ಥಾನದಲ್ಲಿ ಉಳಿಯಬೇಕು ಎಂದರೆ ವರುಣಾ ಕ್ಷೇತ್ರದಲ್ಲಿ 60 ಸಾವಿರ ಮತಗಳ ಲೀಡ್ ಕೊಡಬೇಕು ಎಂದು ಕೆಲ ದಿನಗಳ ಹಿಂದಷ್ಟೇ ಸಿದ್ದರಾಮಯ್ಯ ಹೇಳಿದ್ದರು. ವರುಣಾ ಕ್ಷೇತ್ರದ ಬಿಳಿಗೆರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೋ ಬೇಡವೋ? ನಾನು ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕು ಎಂದರೆ ವರುಣಾ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಟ್ಟು ಸುನೀಲ್ ಬೋಸ್ ಅವರನ್ನು ಗೆಲ್ಲಿಸಿ. ವರುಣಾ ನನ್ನ ಅದೃಷ್ಟದ ಕ್ಷೇತ್ರ. ಇಲ್ಲಿಂದ ಗೆದ್ದು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಈಗಲೂ ವರುಣಾ ಕ್ಷೇತ್ರದಲ್ಲಿ ಸುನೀಲ್ ಬೋಸ್ ಅವರನ್ನು 60 ಸಾವಿರ ಲೀಡ್ ಕೊಟ್ಟು ಗೆಲ್ಲಿಸಿ. ಆಗ ನನ್ನನ್ನು ಯಾರೂ ಮುಟ್ಟಲು ಆಗುವುದಿಲ್ಲ” ಎಂಬುದಾಗಿ ಹೇಳಿದ್ದರು. ಅವರ ಮೇಲೆ ಎಷ್ಟು ಒತ್ತಡ ಇದೆ ಎಂಬುದಕ್ಕೆ ಅವರ ಹೇಳಿಕೆಯೇ ಸಾಕ್ಷಿಯಾಗಿದೆ.
ಇದನ್ನೂ ಓದಿ: ಚಾಮರಾಜನಗರ, ಮೈಸೂರಿನಲ್ಲಿ ಸಿದ್ದರಾಮಯ್ಯಗೆ ಮಾಡು ಇಲ್ಲವೆ ಮಡಿ ಸ್ಥಿತಿ; ಮೈಸೂರಲ್ಲೇ ಮೊಕ್ಕಾಂ!