Site icon Vistara News

PFIಗೆ CCB ಶಾಕ್‌ | ಕೆ.ಜಿ. ಹಳ್ಳಿ ಪ್ರಕರಣದಲ್ಲಿ ಬಂಧಿತರಾದ 14 ಪಿಎಫ್‌ಐ ಮುಖಂಡರಿಗೆ 11 ದಿನ ಪೊಲೀಸ್‌ ಕಸ್ಟಡಿ

PFI Custody

ಬೆಂಗಳೂರು: ರಾಜ್ಯದಲ್ಲಿ ದುಷ್ಕರ್ಮಿಕ ಕೃತ್ಯಗಳನ್ನು ಸಂಘಟಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಬೆಂಗಳೂರಿನ ಸಿಸಿಬಿ ಮತ್ತು ಪೂರ್ವ ವಿಭಾಗದ ಪೊಲೀಸರು ರಾಜ್ಯದ ನಾನಾ ಕಡೆ ನಡೆಸಿದ ದಾಳಿಯ ವೇಳೆ ಬಂಧಿತರಾದ ೧೪ ಮಂದಿ ಪಿಎಫ್‌ಐ ಮುಖಂಡರನ್ನು ೧೧ ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

ಗುರುವಾರ ಮುಂಜಾನೆ ಮಂಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಮೈಸೂರು, ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಯ ನಾನಾ ಕಡೆಗಳಲ್ಲಿ ನಡೆದ ದಾಳಿಯಲ್ಲಿ ಒಟ್ಟು ೧೪ ಪಿಪಿಎಫ್‌ ಮುಖಂಡರನ್ನು ವಶಕ್ಕೆ ಪಡೆದು ಬಳಿಕ ಕಾನೂನಾತ್ಮಕವಾಗಿ ಬಂಧಿಸಲಾಗಿದೆ. ಶುಕ್ರವಾರ ಅವರನ್ನು 11ನೇ ಹೆಚ್ಚುವರಿ ಚೀಫ್‌ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಹಾಜರುಪಡಿಸಿದಾಗ ಅಕ್ಟೋಬರ್‌ ೩ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶ ನೀಡಲಾಯಿತು.

ನ್ಯಾಯಮೂರ್ತಿಗಳಾದ ಕುಮಾರ್‌ ಎಸ್‌ ಅವರ ಮುಂದೆ ಈ ೧೪ ಮಂದಿಯನ್ನು ಪೊಲೀಸರು ಹಾಜರುಪಡಿಸಿದ್ದು, ಜತೆಗೆ ಹಲವು ಸಾಕ್ಷ್ಯಾಧಾರಗಳನ್ನು ಒದಗಿಸಿದರು. ಲ್ಯಾಪ್‌ಟಾಪ್‌ ಸಹಿತ ಕೋರ್ಟ್‌ಗೆ ಬಂದಿದ್ದ ಪೊಲೀಸರು ನ್ಯಾಯಾಧೀಶರು ಕೇಳಿದ ಎಲ್ಲ ವಿಚಾರಗಳಿಗೆ ವಕೀಲರ ಮೂಲಕ ಉತ್ತರ ನೀಡಿದರು. ಸುಮಾರು ಒಂದು ಗಂಟೆ ಕಾಲ ವಿಚಾರಣೆ ಮಾಡಿದ ನ್ಯಾಯಾಧೀಶರು ಪೊಲೀಸರ ಬೇಡಿಕೆಯಂತೆ ೧೧ ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿದರು.

ಬಿಗಿ ಪೊಲೀಸ್‌ ಬಂದೋಬಸ್ತ್‌
ಅಡುಗೋಡಿಯ ಸೆನ್‌ ಠಾಣೆಯಲ್ಲಿ ಆರೋಪಿಗಳನ್ನು ಹೆಚ್ಚಿನ ಪೊಲೀಸ್‌ ಭದ್ರತೆಯ ಮೂಲಕ ಕೋರ್ಟ್‌ಗೆ ಕರೆ ತರಲಾಯಿತು. ನಾಲ್ಕು ಎಸಿಪಿಗಳು ಹಾಗೂ ಇನ್ಸ್‌ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಭದ್ರತೆಯಲ್ಲಿ ಕೋರ್ಟ್‌ಗೆ ಆಗಮಿಸಿದರು. ಆರೋಪಿಗಳ ಕುಟುಂಬಿಕರು ಕೂಡಾ ಕೋರ್ಟ್‌ ಬಳಿ ಬಂದಿದ್ದರು.

೧೯ ಜನರ ಪೈಕಿ ೧೪ ಮಂದಿ ಬಂಧನ
ಕೆಜಿ ಹಳ್ಳಿಯಲ್ಲಿ ದಾಖಲಾಗಿದ್ದ ಎಫ್​ ಐ ಆರ್​ನಲ್ಲಿ ಉಲ್ಲೇಖವಾಗಿದ್ದು ಬೆಂಗಳೂರಿನ ಪಿಎಫ್​ಐ ಮುಖಂಡರಾದ ನಾಸೀರ್​ ಪಾಷಾ ಹಾಗು ಮನ್ಸೂರ್​ ಅಹ್ಮದ್​ ಒಟ್ಟು 19 ಮಂದಿ. ಇವರ ಪೈಕಿ ೧೪ ಮಂದಿಯನ್ನು ಗುರುವಾರ ಆಪರೇಷನ್‌ನಲ್ಲಿ ಬಂಧಿಸಲಾಗಿತ್ತು.

ಕೆಲವರು ಕೆ.ಜಿ.ಹಳ್ಳಿ ಗಲಭೆಯಲ್ಲೂ ಭಾಗಿ
14 ಜನರನ್ನು ಕರೆತಂದು ವಿಚಾರಣೆ ನಡೆಸಿದಾಗ ಆರಂಭದಲ್ಲೇ ಆತಂಕಕಾರಿ ಮಾಹಿತಿಗಳು ಹೊರಬಿದ್ದಿದೆ. ಈಗ ಸಿಕ್ಕಿಬಿದ್ದಿರುವ ಆರೋಪಿಗಳಲ್ಲಿ ಡಿಜೆ ಹಳ್ಳಿ ಪೊಲೀಸ್​ ಠಾಣೆ ಸುಟ್ಟ ಪ್ರಕರಣದ ಆರೋಪಿಗಳೂ ಇದ್ದಾರೆ. ಸಿಕ್ಕಿಬಿದ್ದಿರುವ ಮುಖಂಡರ ಬಳಿ ಇಡೀ ಕರ್ನಾಟಕದ ಪಿಎಫ್ಐ​ ಮುಖಂಡರ ಜೊತೆ ಪ್ರತಿ ನಿತ್ಯ ಸಂಪರ್ಕದಲ್ಲಿದ್ದವರು. ತಮ್ಮದೇ ಆದ ಜಾಲವನ್ನ ಸೃಷ್ಟಿಸಿ ಮುಸ್ಲಿಂ ಯುವಕರನ್ನು ಧರ್ಮದ ವಿಚಾರವಾಗಿ ಆನ್​ ಲೈನ್​- ಆಫ್​ ಲೈನ್​ ಮುಖಾಂತರ ಪ್ರಚೋದನೆ ನೀಡಿ ಅವರನ್ನ ತಮ್ಮ ಕೆಲಸಕ್ಕೆ ಬಳಸಿಕೊಳ್ಳುವುದಲ್ಲದೆ ಆ ಯುವಕರನ್ನು ಕಾಡುಗಳಲ್ಲಿ ಮಾರಾಕಾಸ್ತ್ರಗಳನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಟ್ರೈನಿಂಗ್​ ಕೂಡ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ. ಜತೆಗೆ ಕೋಮುಗಲಭೆ ಸೃಷ್ಟಿಸುವ ಸಂಚು ಕೂಡಾ ಮಾಡಲಾಗಿತ್ತು ಎನ್ನಲಾಗಿದೆ. ಇದರ ಬಗ್ಗೆ ಈಗ ೧೧ ದಿನಗಳ ಪೊಲೀಸ್‌ ಕಸ್ಟಡಿ ವಿಚಾರಣೆ ಸಂದರ್ಭ ಹೆಚ್ಚಿನ ಮಾಹಿತಿ ತಿಳಿದುಬರಲಿದೆ.

ಇದನ್ನೂ ಓದಿ | PFIಗೆ ಸಿಸಿಬಿ ಶಾಕ್‌ | ದುಷ್ಕೃತ್ಯಕ್ಕೆ ಸಂಚು ಹೂಡಿದ್ದ 14 ಪಿಎಫ್‌ಐ ನಾಯಕರು ವಶಕ್ಕೆ, 7 ಜಿಲ್ಲೆಗಳಲ್ಲಿ ಆಪರೇಷನ್‌

Exit mobile version