ಬಳ್ಳಾರಿ: ಬೆಂಗಳೂರಿನ ಸಿಸಿಬಿ ಮತ್ತು ಪೂರ್ವ ಠಾಣಾ ಪೊಲೀಸರು ದಾಳಿ ಮಾಡಿ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದ ಬೆನ್ನಲ್ಲೇ ಗುರುವಾರ ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಪಿಎಫ್ಐ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅರುಣ್ ರೆಡ್ಡಿ ಎಂಬ ಯುವಕ ಪ್ರತಿಭಟನಾನಿರತನ್ನು ಪ್ರಶ್ನಿಸಿದ್ದಕ್ಕೆ ಆತನ ಮೇಲೆ ಎಲ್ಲರ ಎದುರೇ ಹಲ್ಲೆ ನಡೆಸುವ ಮೂಲಕ ಪುಂಡಾಟಿಕೆ ಮೆರೆದಿದ್ದಾರೆ. ಪಿಎಫ್‌ಐ ಕಾರ್ಯಕರ್ತರು ಯುವಕನನ್ನು ತಮ್ಮ ಗುಂಪಿನ ಮಧ್ಯೆ ಎಳೆದುಕೊಂಡು ಹೋಗಿ ಥಳಿಸಿದ ವಿಡಿಯೊ ವೈರಲ್ ಆಗಿದ್ದು, ಕಾರ್ಯಕರ್ತರ ವರ್ತನೆಗೆ ವ್ಯಾಪಕ ವಿರೋಧಕ್ಕೆ ವ್ಯಕ್ತವಾಗಿದೆ.
ಗುರುವಾರ ಬೆಳಿಗ್ಗೆ ೧೫ ರಾಜ್ಯದ ೯೩ ಕಡೆಗಳಲ್ಲಿ ಪಿಎಫ್ಐ ಕಚೇರಿ ಮತ್ತು ಮುಖಂಡರ ಮನೆಗಳ ಮೇಲೆ ದಾಳಿ ಮಾಡಿದ್ದನ್ನು ಖಂಡಿಸಿ ಪೊಲೀಸರ ಅನುಮತಿ ಇಲ್ಲದೆ ಏಕಾಏಕಿ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಟವರ್ ಕ್ಲಾಕ್ ಕಾಮಗಾರಿ ನಡೆಯುತ್ತಿರುವುದರಿಂದ ಈ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿ, ವಾಹನ ಸವಾರರಿಗೆ ಸಮಸ್ಯೆಯಾಗಿದೆ.
ಯುವಕನನ್ನು ಥಳಿಸಿದ ಪಿಎಫ್‌ಐ ಕಾರ್ಯಕರ್ತರು
ಏಕಾಏಕಿ ಕಾರ್ಯಕರ್ತರು ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದ್ದರಿಂದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಈ ಸಂದರ್ಭದಲ್ಲಿ ಅಲ್ಲಿಗೆ ಅರುಣ್ ರೆಡ್ಡಿ ಎಂಬ ಯುವಕ ಬಂದಿದ್ದಾನೆ, ಟ್ರಾಫಿಕ್ ಜಾಮ್ ಆಗಿದ್ದರಿಂದ ಪ್ರತಿಭಟನಾನಿರತರನ್ನು ಪ್ರಶ್ನಿಸಿದ್ದಾನೆ, ಕೋಪಗೊಂಡ ಪ್ರತಿಭಟನಾ ನಿರತರು ಅರುಣ್ ರೆಡ್ಡಿಯನ್ನು ಗುಂಪಿನ ಮಧ್ಯೆ ಎಳೆದುಕೊಂಡು ಥಳಿಸಿದ್ದಾರೆ. ಕೂಡಲೇ ಅಲ್ಲಿಯೇ ಇದ್ದ ಪೊಲೀಸರು ಅರುಣ್ ರೆಡ್ಡಿಯನ್ನು ಕರೆದುಕೊಂಡು ಹೋಗುವ ಮೂಲಕ ಪರಿಸ್ಥಿತಿಯನ್ನು ತಿಳಿಸಿದರು.
ನಾಲ್ವರನ್ನು ವಶಕ್ಕೆ ಪಡೆದು, ಮುಚ್ಚಳಿಕೆ ಬರೆಸಿಕೊಂಡ ಪೊಲೀಸರು
ಯಾವುದೇ ಪರ್ಮಿಷನ್ ಇಲ್ಲದೆ ಪ್ರತಿಭಟನೆ ಮಾಡಿ, ಸಾರ್ವಜನಿಕರಿಗೆ ಕಿರಿಕಿರಿ ಮಾಡಿರುವ ಹಿನ್ನಲೆಯಲ್ಲಿ ಪಿಎಫ್ಐ ಸಂಘಟನೆಯ ನೂರ್ ಮಹಮ್ಮದ್, ರೆಹಮತ್ ಖಾನ್, ಅಕ್ರಮ ಭಾಷಾ, ಅಬುಬಕರ್ ಎನ್ನುವವರನ್ನು ವಶಕ್ಕೆ ಪಡೆದು, ನೋಟೀಸ್ ಜಾರಿ ಮಾಡಿದ್ದಾರೆ, ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಡಿಯೊ ವೈರಲ್ ವ್ಯಾಪಕ ಖಂಡನೆ
ಶುಕ್ರವಾರ ಬೆಳಿಗ್ಗೆ ಅರುಣ್ ರೆಡ್ಡಿಯನ್ನು ಥಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದರಿಂದ ಪಿಎಫ್ಐ ಕಾರ್ಯಕರ್ತರ ವರ್ತನೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸಾಮಾಜಿಕ ಜಾಲ ತಾಣದಲ್ಲೂ ಖಂಡನೆಗಳು ವ್ಯಕ್ತವಾಗುತ್ತಿವೆ.
ಇದನ್ನೂ ಓದಿ |PFIಗೆ CCB ಶಾಕ್ | ಕೆ.ಜಿ. ಹಳ್ಳಿ ಕೇಸಿನಲ್ಲಿ ವಶಕ್ಕೆ ಪಡೆದ 19 ಪಿಎಫ್‌ಐ ನಾಯಕರು ಇವರು, 9 ಮಂದಿ ಮಂಗಳೂರಿನವರು!