ಬೆಂಗಳೂರು: ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಮತ್ತು ಅದರ ಎಂಟು ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿದ ಬೆನ್ನಿಗೇ ಅವುಗಳಿಗೆ ಸೇರಿದ ಕಚೇರಿಗಳಿಗೆ ಬೀಗ ಜಡಿಯುವ ಪ್ರಕ್ರಿಯೆ ವೇಗ ಪಡೆದಿದೆ. ಜತೆಗೆ ಹಲವಾರು ನಾಯಕರ ಬಂಧನವೂ ನಡೆದಿದೆ. ಈ ನಡುವೆ ಕೆಲವು ನಾಯಕರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ.
ಕೇಂದ್ರ ಸರಕಾರದಿಂದ ಅಧಿಕೃತ ಸೂಚನೆಯನ್ನು ಪಡೆದಿರುವ ರಾಜ್ಯ ಪೊಲೀಸ್ ಇಲಾಖೆ ಈಗ ರಾಜ್ಯಾದ್ಯಂತ ಕಾರ್ಯಾಚರಣೆ ಚುರುಕುಗೊಳಿಸಿದೆ. ಬುಧವಾರ ಸಂಜೆಯಿಂದಲೇ ಆರಂಭಗೊಂಡಿದ್ದ ಕಚೇರಿ ಬಂದ್, ತಪಾಸಣೆ, ದಾಖಲೆ ಸಂಗ್ರಹ ಕಾರ್ಯಾಚರಣೆ ಗುರುವಾರ ಬೆಳಗ್ಗೆ ಮತ್ತಷ್ಟು ವೇಗ ಪಡೆಯಿತು. ಅದರಲ್ಲೂ ಬೆಂಗಳೂರಿನಲ್ಲಿ ಪ್ರಮುಖ ಕಚೇರಿಗಳಿಗೆ ಗುರುವಾರ ಸೀಲು ಹಾಕುವ ಮೂಲಕ ಕ್ರಮ ಕೈಗೊಳ್ಳಲಾಯಿತು.
ಬೆಂಗಳೂರಿನಲ್ಲಿ ಎಂಟು ಕಡೆ ಪಿಎಫ್ ಐ ಹಾಗೂ ಅದರ ಅಂಗಸಂಸ್ಥೆಗಳನ್ನು ಸೀಲ್ ಮಾಡಲಾಗಿದೆ. ನಗರದ ಬೆನ್ಸನ್ ಟೌನ್, ಟ್ಯಾನರಿ ರಸ್ತೆ, ಕ್ವೀನ್ಸ್ ರೋಡ್, ಬಿಎಸ್ ಎ ರಸ್ತೆ, ಕಬ್ಬನ್ ಪೇಟೆ, ಪೀಣ್ಯ ಮುಖ್ಯ ರಸ್ತೆ, ಕೆಆರ್ ಪುರಂ, ಪುಲಿಕೇಶಿ ನಗರ ಭಾಗದಲ್ಲಿರುವ ಪಿಎಫ್ ಐ ಹಾಗೂ ಉಳಿದ ಅಂಗ ಸಂಸ್ಥೆಗಳ ಕಚೇರಿಗಳನ್ನು ಮುಚ್ಚಲಾಗಿದೆ. ಪಿಎಫ್ಐ, ಎಂಪವರ್ ಇಂಡಿಯಾ ಫೌಂಡೇಶನ್, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಸೇರಿದಂತೆ ಹಲವು ಸಂಸ್ಥೆಗಳ ಕಚೇರಿ ಮುಚ್ಚಲಾಗಿದೆ.
ಹೆಬ್ಬಾಳದ ಮನೋರಾಯನ ಪಾಳ್ಯದಲ್ಲಿರುವ ಪಿಎಫ್‌ಐಗೆ ಸೇರಿದ ಇನ್ಫೋಟಿಕ್ ಸೋಷಿಯಲ್ ಮಿಡೀಯಾ ಹೆಸರಿನಲ್ಲಿ ತೆರೆದ ಕಚೇರಿಯನ್ನು ಮುಚ್ಚಲಾಗಿದೆ. ಪಿಎಫ್‌ಐ ಮೇಲೆ ದಾಳಿ ನಡೆದಾಗ ಇಲ್ಲಿರುವ ದಾಖಲೆಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗಿತ್ತು. ಉಳಿದ ದಾಖಲೆಗಳನ್ನು ಬೀಗ ಹಾಕುವ ವೇಳೆ ವಶಪಡಿಸಿಕೊಳ್ಳಲಾಗಿದೆ.
ಕೊಪ್ಪಳದಲ್ಲಿ ಹಲವು ಮನೆಗಳಲ್ಲಿ ತಪಾಸಣೆ
ಬುಧವಾರ ತಡರಾತ್ರಿ ಕೊಪ್ಪಳ ನಗರ ಹಾಗೂ ಗಂಗಾವತಿ ನಗರದಲ್ಲಿನ ತಹಸೀಲ್ದಾರ ನೇತೃತ್ವದಲ್ಲಿ ಪೊಲೀಸರು ಪಿಎಫ್ಐ, ಸಿಎಫ್ಐ ಕಾರ್ಯಕರ್ತರ ಮನೆಗಳಿಗೆ ತೆರಳಿ ತಪಾಸಣೆ ನಡೆಸಿದರು. ಕೊಪ್ಪಳ ನಗರದ ನಿವಾಸಿಯಾಗಿರುವ ಪಿಎಫ್ಐ ತಾಲೂಕು ಅಧ್ಯಕ್ಷ ಅಬ್ದುಲ್ ಖಯ್ಯೂಮ್, ಗಂಗಾವತಿ ನಿವಾಸಿಗಳಾಗಿರುವ ಈಗಾಗಲೇ ಬಂಧಿತರ ಸರ್ಪರಾಜ್, ರಸೂಲ್, ಚಾಂದ್ ಸಲ್ಮಾನ ಎಂಬುವವರ ಮನೆಯಲ್ಲಿ ತಪಾಸಣೆ ನಡೆಸಿದರು. ಅಲ್ಲದೆ ಗಂಗಾವತಿಯ ಭೈರೂನ್ ಮಸೀದಿಯ ಬಳಿಯ ಸಭೆ ನಡೆಸುತ್ತಿದ್ದ ಸ್ಥಳವನ್ನೂ ಪೊಲೀಸರು ಪರಿಶೀಲನೆ ನಡೆಸಿದರು. ಆದರೆ ತಪಾಸಣೆಯ ವೇಳೆ ಯಾವುದೇ ವಸ್ತುಗಳು ದೊರೆತಿಲ್ಲ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಗಳಿಗೆ ನೋಟೀಸ್: ಇನ್ನು ಕೆಜೆಹಳ್ಳಿ ಪೊಲೀಸರಿಂದ ಕಳೆದ ಸೆಪ್ಟಂಬರ್ 22 ರಂದು ಬಂಧಿತನಾಗಿರುವ ಪಿಎಫ್ಐ ಜಿಲ್ಲಾಧ್ಯಕ್ಷ ಗಂಗಾವತಿಯ ಅಬ್ದುಲ್ ಫಯಾಜ್ ನ ಬ್ಯಾಂಕ್ ಖಾತೆಗಳನ್ನು ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ. ಹೀಗಾಗಿ ಫಯಾಜ್ ನ ಬ್ಯಾಂಕ್ ಅಕೌಂಟ್ ಡಿಟೈಲ್ಸ್ ನೀಡುವಂತೆ ಪೊಲೀಸರು ಬ್ಯಾಂಕ್ ಗಳಿಗೆ ನೋಟೀಸ್ ನೀಡಿದ್ದಾರೆ.
ಬೀದರ್‌ನಲ್ಲಿ ಪಿಎಫ್ ಐ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ಕಂಪ್ಯೂಟರ್ ಅಂಗಡಿ ಮೇಲೆ ಪೊಲೀಸ್ ದಾಳಿ ಮಾಡಿದ್ದು, ಕಂಪ್ಯೂಟರ್ ನಲ್ಲಿರುವ ದಾಖಲೆಗಳ ಪರಿಶೀಲನೆ ನಡೆಸಿದರು. ಮೂರು ದಿನದ ಹಿಂದೆ ಅಬ್ದುಲ್ ಕರೀಂ ಬಂಧನ ನಡೆದಿತ್ತು.
ಚಿಕ್ಕಮಗಳೂರಿನಲ್ಲಿ ಮುಂದುವರಿದ ದಾಳಿ
ಚಿಕ್ಕಮಗಳೂರು ಪೊಲೀಸರು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುನೀರ್ ಹಾಗೂ ಆತನ ಪುತ್ರನ್ನು ಕಳೆದ ಕಳೆದ ಮಂಗಳವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದರು. ಇದೀಗ ಮತ್ತೆ ಎಸ್ ಡಿ ಪಿ ಐ ಕಚೇರಿಯ ಮೇಲೆ ಹಾಗೂ ಜಿಲ್ಲಾಧ್ಯಕ್ಷರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಮುನೀರ್ ಮನೆ ಮೇಲೂ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಕಲೆಹಾಕಿದ್ದಾರೆ. ಇನ್ನು ಪಿ ಎಫ್ ಐ ಕಾರ್ಯಕರ್ತ ಆರಿಫ್ ಮನೆ ಮೇಲೆ ದಿಢೀರ್ ದಾಳಿ ನಡೆಸಿರುವ ಆಲ್ದೂರು ಪೊಲೀಸರು ಆರಿಫ್ ಚಲನವಲನ ಗಮನಿಸಿ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಇದೇ ವೇಳೆ ಪಿಎಫ್ ಐ ಜಿಲ್ಲಾಧ್ಯಕ್ಷ ಚಾಂದ್ ಪಾಷಾ ಪೊಲೀಸರ ಪರಿಶೀಲನೆಗೆ ತಡೆ ಮಾಡಿದ ಘಟನೆಯು ಸಂಭವಿಸಿತು. ಏಕಾಏಕಿ ದಾಳಿ ಮಾಡಲು ನೀವು ಯಾರು..?. ಎಲ್ಲಂದರಲ್ಲಿ ಪರಿಶೀಲನೆ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು..? ಎಂದು ಪೊಲೀಸರಿಗೆ ಮರು ಪ್ರಶ್ನೆ ಮಾಡಿದ ಘಟನೆ ನಡೆಯಿತು. ಜಾಸ್ತಿ ಮಾತನಾಡುವ ಮುನ್ನ ಎಚ್ಚರಿಕೆಯಿಂದ ಪೊಲೀಸರಿಗೆ ಸಹಕಾರ ನೀಡುವಂತೆ ಅಧಿಕಾರಿಗಳು ಸೂಚನೆ ಈ ವೇಳೆ ನೀಡಿದರು.
ಬಾಡಿಗೆ ಮನೆಯನ್ನೇ ಕಚೇರಿ ಮಾಡಿಕೊಂಡಿದ್ದರು
ಬೆಳಗಾವಿ ಪೊಲೀಸರು ಬೆಳಗಾವಿಯ ಸುಭಾಷ್ ನಗರದಲ್ಲಿದ್ದ ನಿಷೇಧಿತ ಪಿಎಫ್ಐ ಕಚೇರಿಯನ್ನು ವಶಕ್ಕೆ ಪಡೆದಿದ್ದಾರೆ. ಸುಭಾಷ್ ನಗರದ ಬಾಡಿಗೆ ಮನೆಯನ್ನೇ ಕಚೇರಿ ಮಾಡಿಕೊಳ್ಳಲಾಗಿತ್ತು.
ಇದನ್ನೂ ಓದಿ | PFI Banned | ಯಾವ ಪಕ್ಷಕ್ಕೆ ಲಾಭ, ಯಾರಿಗೆ ನಷ್ಟ?