ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವದ ಆದೇಶಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಬಿಜೆಪಿ ನಾಯಕರು ಪಿಎಫ್‌ಐ ನಿಷೇಧವನ್ನು (PFI BANNED) ಸ್ವಾಗತಿಸಿದ್ದಾರೆ. ಜತೆಗೆ ದೇಶದ್ರೋಹಿ ಸಂಘಟನೆಗಳು ಯಾವ ರೀತಿ ಹಿಂದು ಕಾರ್ಯಕರ್ತರ ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿದ್ದವು, ರಾಷ್ಟ್ರದ್ರೋಹಿಗಳ ಸಂಪರ್ಕದಿಂದ ಏನೇನಾಗುತ್ತಿತ್ತು ಎಂಬಿತ್ಯಾದಿ ವಿಷಯಗಳ ಕುರಿತು ಪ್ರತಿಕ್ರಿಯಿಸಿದ್ದಾರೆ.
ಹಿಂದು ಕಾರ್ಯಕರ್ತರ ಟಾರ್ಗೆಟ್ ಮಾಡಿ ಹತ್ಯೆ; ಸಚಿವ ಸುನಿಲ್ ಕುಮಾರ್
ಪಿಎಫ್ಐ ನಿಷೇಧ ಕುರಿತು ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯಿಸಿದ್ದು, ಕಠಿಣ ನಿರ್ಧಾರ ತೆಗೆದುಕೊಂಡ ಪ್ರಧಾನ ಮಂತ್ರಿ ಮತ್ತು ಕೇಂದ್ರ ಗೃಹ ಸಚಿವರಿಗೆ ಅಭಿನಂದನೆಗಳು. ಬಹಳ ವರ್ಷಗಳಿಂದ ಕರ್ನಾಟಕ ಮತ್ತು ದೇಶದ ವಿವಿಧ ಭಾಗಗಳಲ್ಲಿ ಪಿಎಫ್ಐ ಹಿಂಸೆಯನ್ನು ಪ್ರಚೋದಿಸಿದೆ. ಭಾರತವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಅವರು ಮಾಡುತ್ತಿದ್ದರು. ಹಿಂದು ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ನಿರಂತರವಾಗಿ ಹತ್ಯೆ ಮಾಡುತ್ತಿದ್ದರು. ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂಬ ಮಾತುಗಳನ್ನು ಹೇಳುತಿದ್ದರು.
ಪಿಎಫ್ಐ ಕಾರ್ಯಕರ್ತರನ್ನು ಕಾಂಗ್ರೆಸ್ ಪೋಷಿಸಿದೆ. ಈ ಸಂಘಟನೆಯು ಇಷ್ಟು ದೊಡ್ಡ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಬೆಳೆಯಲು ಆ ಪಕ್ಷವೇ ಕಾರಣ. 175 ಜನರ ಮೇಲೆ ಇದ್ದ ಕೇಸ್ ಅನ್ನು ಸಿದ್ದರಾಮಯ್ಯ ಕಾಲದಲ್ಲಿ ವಾಪಸ್ ಪಡೆಯಲಾಗಿತ್ತು. ನಮ್ಮ ಸರ್ಕಾರ ಇವತ್ತು ಬದ್ಧತೆ ಪ್ರದರ್ಶಿಸಿದೆ. ಮಂಗಳೂರು, ಶಿವಮೊಗ್ಗ ಘಟನೆಯಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಆಗಿತ್ತು. ಈ ಹಿಂದೆ ಬಿಜೆಪಿ ಸಿಮಿ ಸಂಘಟನೆಯನ್ನು ನಿಷೇಧಿಸಿತ್ತು. ಅದರ ಇನ್ನೊಂದು ರೂಪದಲ್ಲಿ ಪಿಎಫ್ಐ ಹುಟ್ಟಿಕೊಂಡಿತು. ಇದಕ್ಕೆ ಹಣಕಾಸು ನೆರವು, ಬೆಂಬಲ ನೀಡಿದವರ ಬಗ್ಗೆಯೂ ತನಿಖೆ ಆಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ | PFI BANNED | ಪಿಎಫ್‌ಐ ಸಂಘಟನೆ ವಿದೇಶಿ ರಿಮೋಟ್ ಕಂಟ್ರೋಲ್: ಸಿಎಂ ಬೊಮ್ಮಾಯಿ
ಹರ್ಷ ಕೊಲೆ, ಪ್ರೇಮಸಿಂಗ್ ಚೂರಿ ಇರಿತ ಪ್ರಕರಣದಲ್ಲಿ ರಾಷ್ಟ್ರದ್ರೋಹಿಗಳ ಸಂಪರ್ಕ; ಕೆ.ಎಸ್. ಈಶ್ವರಪ್ಪ
ಭಗತ್ ಸಿಂಗ್ ಆತ್ಮಕ್ಕೆ ಶಾಂತಿ ಸಿಗುವ ನಿಟ್ಟಿನಲ್ಲಿ ಇಂದು ಪಿಎಫ್ಐ ನಿಷೇಧಿಸಲಾಗಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಪಿಎಫ್ಐ ದೇಶದ್ರೋಹಿ ಚಟುವಟಿಕೆ ನಡೆಸುತ್ತಿತ್ತು, ಇವರಿಗೆ ವಿದೇಶದಿಂದ ಫಂಡಿಂಗ್ ಆಗುತ್ತಿತ್ತು. ಪಾಕಿಸ್ತಾನ ನಮ್ಮದು, ಹೋರಾಟ ಮಾಡಿ ಈಗ ಭಾರತವನ್ನು ಪಡೆಯುತ್ತೇವೆ ಎಂಬ ಘೋಷಣೆ ಅವರದ್ದಾಗಿದೆ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ ಎಂದರು.
ರಾಷ್ಟ್ರದ್ರೋಹವನ್ನು ಯಾರೂ ಸಹಿಸಬಾರದು. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು. ಪಿಎಫ್‌ಐ ಬ್ಯಾನ್ ಮಾಡಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದರು. ನಿಮ್ಮದೇ ಸರ್ಕಾರ ಕೇಂದ್ರದಲ್ಲಿದೆ ಬ್ಯಾನ್ ಮಾಡಿ ಎಂದು ಅಧಿವೇಶನದಲ್ಲಿ ಹೇಳಿದ್ದರು. ಹೀಗಾಗಿ ರಾಜ್ಯದಲ್ಲಿ ದಾಖಲೆ ಸಂಗ್ರಹ ಮಾಡಿ, ದಾಖಲೆ ಸಮೇತ ಮನವಿ ಮಾಡಿದ್ದೆವು. ಎಲ್ಲ ರಾಜ್ಯಗಳಿಂದ ಸಾಕ್ಷ್ಯ ಸಂಗ್ರಹಿಸಿ ಕೇಂದ್ರ ಸರ್ಕಾರ ಪಿಎಫ್‌ಐ ಅನ್ನು ಬ್ಯಾನ್ ಮಾಡಿದೆ ಎಂದು ಹೇಳಿದರು.
ಹರ್ಷ ಕೊಲೆ, ಪ್ರೇಮಸಿಂಗ್ ಚೂರಿ ಇರಿತ ಪ್ರಕರಣ ಶಿವಮೊಗ್ಗದಲ್ಲಿ ನಡೆದಿತ್ತು. ಪ್ರಕರಣದ ತನಿಖೆ ವೇಳೆ ರಾಷ್ಟ್ರದ್ರೋಹಿಗಳ ಸಂಪರ್ಕಿತರು ಇದರ ಹಿಂದಿರುವುದು ತಿಳಿದುಬಂದಿತ್ತು. ರಾಷ್ಟ್ರದ್ರೋಹಿಗಳಿಗೆ ಭಾರತದಲ್ಲಿ ಅವಕಾಶ ಇಲ್ಲ ಎಂದು ಕಿಡಿಕಾರಿದರು.
ಮುಸಲ್ಮಾನರು ಶಾಂತಿ ಬಯಸುತ್ತಾರೆ. ಆದರೆ, ಕೆಲವರು ಅಶಾಂತಿ ಸೃಷ್ಟಿಸುತ್ತಿದ್ದಾರೆ. ಅವರ ಮನಸ್ಥಿತಿ ಬದಲಾಗದಿದ್ದರೆ ಅಶಾಂತಿ ಮುಂದುವರಿಯುತ್ತದೆ. ಸಿದ್ದರಾಮಯ್ಯ ಕಾಲದಲ್ಲಿ 22 ಹಿಂದುಗಳ ಕಗ್ಗೊಲೆಯಾಗಿತ್ತು. ಮುಸಲ್ಮಾನರನ್ನು ಕಾಂಗ್ರೆಸ್ಸಿಗರು ಬೆಳೆಸಿಕೊಂಡು ಬಂದರು. ಆದರೆ ಮೋದಿ ಸರ್ಕಾರ ಇದಕ್ಕೆಲ್ಲ ತಡೆಯೊಡ್ಡಿದೆ. ಉಗ್ರವಾದಕ್ಕೆ ನಿರುದ್ಯೋಗ ಸಮಸ್ಯೆಯೇ ಕಾರಣ ಎಂಬ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ನಲಪಾಡ್ ಹೇಳಿಕೆಗೆ ತಿರುಗೇಟು ಕೊಟ್ಟ ಈಶ್ವರಪ್ಪ, ನಲಪಾಡ್ ಮೈಮೇಲೆ ಜ್ಞಾನ ಇಟ್ಟು ಮಾತನಾಡಬೇಕು. ಬೇರೆ ಬೇರೆ ಹೆಸರು ಇಟ್ಟುಕೊಂಡು ಮತ್ತೆ ಉಗ್ರ ಚಟುವಟಿಕೆ ನಡೆಸುವ ಸಾಧ್ಯತೆ ಇದೆ. ಆದರೆ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದರು.
ದೇಶದ ಐಕ್ಯತೆ ವಿರುದ್ಧ ಕೆಲಸ ಮಾಡುವವರ ವಿರುದ್ಧ ಕ್ರಮ; ಸಚಿವ ಅಶ್ವತ್ಥ್ ನಾರಾಯಣ
ಕೇಂದ್ರ ಸರ್ಕಾರದಿಂದ ಪಿಎಫ್ಐ ಸಂಘಟನೆ ಬ್ಯಾನ್ ವಿಚಾರವಾಗಿ ರಾಮನಗರದಲ್ಲಿ ಸಚಿವ ಅಶ್ವತ್ಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ದೇಶದ ಐಕ್ಯತೆ ವಿರುದ್ಧವಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿ, ಸಂಘಟನೆ ವಿರುದ್ಧ ಕ್ರಮ ವಹಿಸುವ ಕೆಲಸ ಆಗಬೇಕಿತ್ತು. ಪಿಎಫ್ಐ ಸಂಘಟನೆ ಬ್ಯಾನ್ ಮಾಡುವಂತೆ ಬಹುಕಾಲದ ಬೇಡಿಕೆ ಆಗಿತ್ತು. ಈಗ ಕೇಂದ್ರ ಸರ್ಕಾರ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ ಎಂದರು.
ದೇಶ ದೊಡ್ಡದ್ದು- ಸಚಿವ ಸೋಮಣ್ಣ
ಪಿಎಫ್ಐ ಹಾಗೂ ಸಹ ಸಂಘಟನೆಗಳಿಗೆ ಐದು ವರ್ಷ ನಿಷೇಧ ಮಾಡಿರುವ ಕೇಂದ್ರದ ಕ್ರಮವನ್ನು ವಸತಿ ಸಚಿವ ವಿ.ಸೋಮಣ್ಣ ಸ್ವಾಗತಿಸಿದ್ದಾರೆ. ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ಕೇಂದ್ರದ ನಿರ್ಧಾರವನ್ನು ಇಡೀ ದೇಶ ಸ್ವಾಗತಿಸಿದೆ. ದೇಶ ದೊಡ್ಡದು, ದೇಶದ ಜಾತ್ಯತೀತ ಭಾವನೆಗಳು, ಇತಿಹಾಸ ದೊಡ್ಡದು. ಇಂತಹ ಸಂಘಟನೆಗಳನ್ನು ಮಟ್ಟ ಹಾಕುವ ಕೆಲಸ ಆಗಬೇಕು. ಎಷ್ಟೇ ದೊಡ್ಡ ಶಕ್ತಿಗಳಿದ್ದರೂ ಬೆಳೆಯಲು ಅವಕಾಶ ನೀಡಬಾರದು. ಕೇಂದ್ರ ಸರ್ಕಾರ ತನ್ನ ಕರ್ತವ್ಯವನ್ನು ಸಮಪರ್ಕವಾಗಿ ನಿರ್ವಹಿಸಿದೆ ಎಂದು ತಿಳಿಸಿದರು.
ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ; ಮಾಜಿ ಸಚಿವ ಅಪ್ಪಾಸಾಹೇನ ಪಟ್ಟಣಶೆಟ್ಟಿ
ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವುದನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸ್ವಾಗತಿಸಿದ್ದಾರೆ. ಪಿಎಫ್ಐ ಹಾಗೂ ಎಸ್‌ಡಿಪಿಐ ಭಯೋತ್ಪಾದಕರಿಗೆ ಪ್ರಚೋದನೆ ನೀಡುವ ಸಂಘಟನೆ ಎಂದು ತನಿಖೆಯಿಂದ ಸಾಬೀತಾಗಿದೆ. ಆ ಸಂಘಟನೆಯ ಕಾರ್ಯಕರ್ತರು ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗವಹಿಸಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಪಿಎಫ್ಐ ನಿಷೇಧ ದಿಟ್ಟ ಕ್ರಮ: ಸಚಿವ ಸಿ ಸಿ ಪಾಟೀಲ ಪ್ರಶಂಸೆ
ಭಾರತದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ಇಲ್ಲಿಯ ಪ್ರತಿಯೊಬ್ಬರ ಕರ್ತವ್ಯ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅಭಿಪ್ರಾಯಪಟ್ಟಿದ್ದಾರೆ. ಈ ದೇಶದ ಸಮಗ್ರತೆಗೆ ಧಕ್ಕೆ ತರಲು ಪಿಎಫ್‌ಐ ಸಂಘಟನೆಯ ಹೆಸರಿನಲ್ಲಿ ವಿಚ್ಛಿದ್ರಕಾರಿ ಚಟುವಟಿಕೆಯನ್ನು ನಡೆಸುತ್ತಾ ಶಾಂತಿಭಂಗ ಉಂಟು ಮಾಡುತ್ತಿರುವವರನ್ನು ನಿಗ್ರಹಿಸಲು ಪಿಎಫ್‌ಐಯನ್ನು ನಿಷೇಧಿಸುವಂತಹ ದೃಢ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ | PFI BANNED | ಪಿಎಫ್‌ಐ ಸಂಘಟನೆ ನಿಷೇಧ: ಯಾವ ರಾಜಕೀಯ ಮುಖಂಡರು ಏನು ಹೇಳಿದರು?