ಮಂಗಳೂರು/ಮೈಸೂರು: ದೇಶದಲ್ಲಿ ಶಾಂತಿ ಸಾಮರಸ್ಯ ಹದಗೆಡುವ ಯಾವುದೇ ಸಂಘಟನೆಯಾದರೂ (PFI BANNED) ಅದರ ವಿರುದ್ಧ ಕ್ರಮ ಆಗಬೇಕು. ಇದು ಸರ್ಕಾರದ ಜವಾಬ್ದಾರಿ ಆಗಿದ್ದು, ಎಲ್ಲ ಸಂಘ-ಸಂಸ್ಥೆಗಳ ಮೇಲೆ ಕ್ರಮವಹಿಸಲಿ ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.
ಪಿಎಫ್‌ಐ ಬ್ಯಾನ್ ಸಂಬಂಧ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವರು ಹಲ್ಲೆ, ಅಶಾಂತಿ, ಕೋಮುದ್ವೇಷದ ಸಂಘಟನೆ ವಿರುದ್ಧ ತಾರತಮ್ಯ ಮಾಡದೆ ಸದುದ್ದೇಶದಿಂದ ಕ್ರಮಕೈಗೊಳ್ಳಬೇಕು. ಒಂದು ಕ್ರಮವನ್ನು ತೆಗೆದುಕೊಂಡರೆ ಭವಿಷ್ಯದಲ್ಲಿ ಅಶಾಂತಿ ಕಡಿಮೆಯಾಗಬೇಕು. ಸಮಾಜ ಒಡೆಯುವ ಯಾವುದೇ ಸಂಘಟನೆಗಳಾದರೂ ಶಿಸ್ತಿನ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಾಕ್ಷ್ಯಾಧಾರ ಇದ್ದಲ್ಲಿ ತಾರತಮ್ಯ ಮಾಡದೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಚಾರ್ಜ್‌ಶೀಟ್‌ನಲ್ಲಿ ಪಿಎಫ್‌ಐ ವಿಚಾರವೇ ಪ್ರಸ್ತಾಪವಿಲ್ಲ; ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್
ಯಾವ ಆಧಾರದ ಮೇಲೆ ಪಿಎಫ್‌ಐ ಸಂಘಟನೆ ಬ್ಯಾನ್ ಮಾಡಿದ್ದಾರೋ ತಿಳಿದಿಲ್ಲ. ಆದರೆ, ರಾತ್ರೋರಾತ್ರಿ ನಿಷೇಧ ಮಾಡಿ ಆದೇಶ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯಿಸಿದ್ದಾರೆ. ನಾನು ನಿಷೇಧ ಆದೇಶದ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ. ರಾಜಕೀಯ ಉದ್ದೇಶದಿಂದ ಚುನಾವಣೆ ಹೊಸ್ತಿಲಲ್ಲಿ ನಿಷೇಧ ಮಾಡಿದ್ದಾರೆ. ದೇಶದ ತುಂಬೆಲ್ಲ ಪಿಎಫ್‌ಐ ಮುಖಂಡರನ್ನು ಬಂಧಿಸಿದ್ದಾರೆ.
ಆದರೆ ಬಂಧನದ ನಂತರ ಏನಾಯಿತು? ಬಂಧಿಸುವುದಕ್ಕೆ ಕಾರಣ ಏನು ಎಂಬುದನ್ನು ಹೇಳಲೇ ಇಲ್ಲ. ಬಿಜೆಪಿಯವರು ಹಲವು ವರ್ಷಗಳಿಂದ ನಿಷೇಧ ಮಾಡಬೇಕು ಎಂದು ಹೇಳುತ್ತಲೇ ಬಂದಿದ್ದರು. ಪಿಎಫ್‌ಐ, ಎಸ್‌ಡಿಪಿಐ ಹಲ್ಲೆ ಮಾಡಿದೆ ಎಂದು ಮುಖ್ಯಮಂತ್ರಿ, ಗೃಹ ಸಚಿವರ ಆದಿಯಾಗಿ ಎಲ್ಲರೂ ಹೇಳಿದ್ದಾರೆ. ಆದರೆ, ತನಿಖಾಧಿಕಾರಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಪಿಎಫ್‌ಐ ವಿಚಾರವೇ ಪ್ರಸ್ತಾಪ ಆಗಿಲ್ಲ. ಯಾವುದನ್ನು ನಂಬಬೇಕು ನಾನು? ಎಂದು ತನ್ವೀರ್ ಸೇಠ್ ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ | PFI BANNED | ರಾಷ್ಟ್ರದ್ರೋಹಕ್ಕೆ ಹಣ ಕೊಟ್ಟವರ ತನಿಖೆ ಅಂದ್ರು ಸಚಿವ ಸುನಿಲ್; ಭಗತ್ ಸಿಂಗ್ ಆತ್ಮಕ್ಕೆ ಶಾಂತಿ ಅಂದ್ರು ಈಶ್ವರಪ್ಪ