Site icon Vistara News

PFI | ಪಿಎಫ್‌ಐ ಕಾರ್ಯಕರ್ತರ ಬಂಧನಕ್ಕೆ ಕುಟುಂಬಸ್ಥರ ವಿರೋಧ; ಠಾಣೆ ಎದುರು ಜಮಾವಣೆ

ಬೆಂಗಳೂರು: ರಾಜ್ಯದಲ್ಲಿ ಪಿಎಫ್‌ಐ (PFI) ಸಂಘಟನೆಗೆ ಪೊಲೀಸರು ಮಾಸ್ಟರ್‌ ಸ್ಟ್ರೋಕ್‌ ನೀಡಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಪಿಎಫ್‌ಐ ಸಂಘಟನೆಯ ರಾಜ್ಯಾಧ್ಯಕ್ಷರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಇತ್ತ ಬಂಧನದಿಂದ ಭೀತಿಗೆ ಒಳಗಾದ ಕುಟುಂಬಸ್ಥರು ಠಾಣೆ ಎದುರು ಪ್ರತಿಭಟನೆ ನಡೆಸಿದರು.

ರಾಮನಗರದ ಐಜೂರು ಠಾಣೆಗೆ ಹಿಂಡಾಗಿ ಬಂದ ಮಹಿಳೆಯರು

ಪಿಎಫ್ಐ ಕಾರ್ಯಕರ್ತರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ 9 ಕಾರ್ಯಕರ್ತರನ್ನು ಐಜೂರು ಪೊಲೀಸರು ವಶಕ್ಕೆ ಪಡೆದಿದ್ದರು. ಕಾರ್ಯಕರ್ತರನ್ನು ವಶಕ್ಕೆ ಪಡೆಯುತ್ತಿದ್ದಂತೆ ಠಾಣೆ ಮುಂಭಾಗ ಕುಟುಂಬಸ್ಥರು ಜಮಾಯಿಸಿದರು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ, ಯಾಕಾಗಿ ವಶಕ್ಕೆ ಪಡೆದಿದ್ದೀರಿ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದರು. ಈ ವೇಳೆ ಗುಂಪು ಚದುರಿಸಲು ಹೋದಾಗ ಪೊಲೀಸರ ಜತೆ ಮಾತಿನ ಚಕಮಕಿ ನಡೆಯಿತು.

ಪೊಲೀಸರ ವಾಹನ ತೆಡೆದು ಆಕ್ರೋಶ

ಯಾದಗಿರಿಯಲ್ಲಿ ಪಿಎಫ್ಐ ಜಿಲ್ಲಾ ಕಾರ್ಯದರ್ಶಿ ಮಹ್ಮದ್ ಮಹೆಬೂಬ್ ಜರ್ಮನ್ ಹಾಗೂ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಬಂದೇನವಾಜ್ ಅವರನ್ನು ವಶಕ್ಕೆ ಪಡೆಯಲಾಯಿತು. ಈ ವೇಳೆ ಸಂಘಟನೆಯ ಕಾರ್ಯಕರ್ತರು ಪೊಲೀಸರ ವಾಹನ ತಡೆದು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಯಾಕೆ ಕರೆದುಕೊಂಡು ಹೋಗುತ್ತಿದ್ದಿರಿ ಎಂದು ವಾಹನ ತಡೆದ ಬೆಂಬಲಿಗರು, ಪಿಎಫ್ಐ ಜಿಂದಾಬಾದ್ ಪೊಲೀಸ ವಾಲೆ ಮುರ್ದಾಬಾದ್ ಎಂದು ಕಿಡಿಕಾರಿದರು. ಪೊಲೀಸರ ಭದ್ರತೆಯಲ್ಲಿ ಬಂಧಿತರನ್ನು ಶಹಾಪುರ ತಹಶಿಲ್ದಾರ ಕಚೇರಿಗೆ ವಿಚಾರಣೆಗೆ ಕರೆದುಕೊಂಡು ಹೋಗಬೇಕಾಯಿತು.

ಪಿಎಫ್‌ಐ ಸಂಘಟನೆಯ 108 ಮಂದಿ ವಶ

ಮಂಗಳವಾರದ ಪೊಲೀಸರ ಕಾರ್ಯಾಚರಣೆಯಲ್ಲಿ 22 ಜಿಲ್ಲೆಗಳಲ್ಲಿ 108ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಸಂಘಟನೆಯ ಅಧ್ಯಕ್ಷರನ್ನು ವಶಕ್ಕೆ ಪಡೆಯಲಾಯಿತು. ಕೆಲವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಯಾದಗಿರಿ, ಹುಬ್ಬಳ್ಳಿ, ಗದಗ, ಕೊಪ್ಪಳ, ಮೈಸೂರು ಸೇರಿದಂತೆ ಮಂಡ್ಯ, ಬೆಳಗಾವಿ, ಚಿಕ್ಕಮಗಳೂರು, ಚಿತ್ರದುರ್ಗದಲ್ಲಿ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಇದನ್ನೂ ಓದಿ | PFI | ಮುಂಜಾನೆ ಪೊಲೀಸರ ವಶಕ್ಕೆ; ಮಧ್ಯಾಹ್ನ ನ್ಯಾಯಾಂಗ ಬಂಧನಕ್ಕೆ ಪಿಎಫ್‌ಐ ಅಧ್ಯಕ್ಷರು, ಕಾರ್ಯಕರ್ತರು

Exit mobile version