Site icon Vistara News

NIA RAID | PFI ಸಿಮಿಯ ಇನ್ನೊಂದು ರೂಪ, ನಿಷೇಧಕ್ಕೆ ಸಾಕ್ಷ್ಯಗಳ ಸಂಗ್ರಹ ನಡೆಯುತ್ತಿದೆ ಎಂದ ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಬಹುಹಿಂದಿನಿಂದಲೇ ಹೇಳಿಕೊಂಡು ಬರುತ್ತಿದ್ದೇವೆ. ಅವುಗಳ ನಿಷೇಧಕ್ಕೆ ಪೂರಕವಾಗಿ ದಾಖಲೆಗಳನ್ನು ಸಂಗ್ರಹಿಸುತ್ತಿರುವುದಾಗಿ ನಮಗೆ ತಿಳಿಸಲಾಗಿದೆ. ಈಗ ನಡೆಯುತ್ತಿರುವ ದಾಳಿಗಳು ಕೂಡಾ ಅದರದ್ದೇ ಒಂದು ಭಾಗ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಪಿಎಫ್‌ಐ ೨೦೦೬ರಲ್ಲಿ ನಿಷೇಧಗೊಂಡಿರುವ ಸಿಮಿ ಸಂಘಟನೆಯ ಇನ್ನೊಂದು ರೂಪ. ಇದನ್ನು ನಿಷೇಧ ಮಾಡಬೇಕು ಎಂದು ನಾವು ಆಗ್ರಹಿಸುತ್ತಲೇ ಇದ್ದೇವೆ. ಎನ್‌ಐಎ ಈ ನಿಟ್ಟಿನಲ್ಲಿ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದೆ ಎಂದರು.

ʻʻಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳು ದೇಶದ್ರೋಹದ ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ನಡೆದ ಹಲವು ಹತ್ಯೆಗಳ ಹಿಂದೆ ಸಂಘಟನೆಯ ಕೈವಾಡವಿದೆ. ದೇಶಾದ್ಯಂತ ಭಯೋತ್ಪಾದನೆ ಚಟುವಟಿಕೆಯಲ್ಲಿ ಸಂಘಟನೆಯವರು ತೊಡಗಿಕೊಂಡಿದ್ದಾರೆ. ಧರ್ಮಗಳ ಮಧ್ಯೆ ಸಂಘರ್ಷ ತರುವ ಕೆಲಸ ಮಾಡುತ್ತಿದ್ದಾರೆʼʼ ಎಂದ ಅವರು ಈ ಎನ್‌ಐಎ ತನಿಖೆ ವೇಳೆ ಈ ದೇಶದ್ರೋಹದ ಕೆಲಸಗಳ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿವೆ ಎಂದರು.

ʻʻಈ ಸಂಘಟನೆಗಳಿಗೆ ವಿದೇಶದಿಂದ ಹಣ ಬರುತ್ತಿದೆ. ಸಂಘಟನೆ ಬಾಂಬ್ ತಯಾರಿಕೆ ಮಾಡುತ್ತಿರುವುದು, ಸ್ಫೋಟ ಮಾಡಿರುವ ಬಗ್ಗೆ ತನಿಖೆಯಲ್ಲಿ ಮಾಹಿತಿ ಸಿಕ್ಕಿದೆ. ಧಾರ್ಮಿಕ ಮುಖಂಡರು, ರಾಜಕಾರಣಿಗಳು, ಸಂಘಟನೆಯ ಮುಖಂಡರು ಇದರ ಜತೆ ಶಾಮೀಲಾಗಿರುವುದು ಸ್ಪಷ್ಟಗೊಂಡಿದೆʼʼ ಎಂದರು ಶೋಭಾ ಕರಂದ್ಲಾಜೆ.

ʻʻಕೇರಳದಲ್ಲಿ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿದೆ. ಅಲ್ಲಿ ಎನ್ಐಎ ದಾಳಿ ಖಂಡಿಸಿ ಪೊಲೀಸರು, ಮಾಧ್ಯಮದವರ ಮೇಲೆ ದಾಳಿ ಮಾಡಲಾಗುತ್ತಿದೆʼʼ ಎಂದ ಅವರು, ʻʻಸಂಘಟನೆಗಳ ನಿಷೇಧಕ್ಕೆ ಸಾಕ್ಷಿಗಳು ಬೇಕು, ಎನ್.ಐ‌.ಎ. ಸಾಕ್ಷಿಗಳನ್ನು ಕಲೆ ಹಾಕುವ ಕೆಲಸ ಮಾಡುತ್ತಿದೆʼʼ ಎಂದು ಹೇಳಿದರು.

ಇದನ್ನೂ ಓದಿ| Terror activity | ಉನ್ನತ ಶಿಕ್ಷಣ ಪಡೆದವರೇ ಯಾಕೆ ಉಗ್ರ ಸಂಘಟನೆಗಳ ಬಲೆಗೆ ಬೀಳುತ್ತಾರೆ? ಇಲ್ಲಿದೆ ಸ್ಪಷ್ಟ ಕಾರಣ

Exit mobile version