ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಯಕ ಎಂದು ವಿಶ್ವವೇ ಒಪ್ಪಿಕೊಂಡಿದೆ. ನಮ್ಮ ದೇಶದವರು ಮಾತ್ರವಲ್ಲದೆ, ಮಿತ್ರ ದೇಶಗಳ ಸಹಿತ ವಿರೋಧಿ ದೇಶಗಳವರೂ ಮೋದಿಯವರನ್ನು ಒಪ್ಪಿಕೊಂಡಿದ್ದಾರೆ. ಕಟ್ಟಾ ವಿರೋಧಿ ಪಾಕಿಸ್ತಾನದಲ್ಲಿಯೂ ಸಮಸ್ಯೆ ಬಗೆಹರಿಸಲು ಮೋದಿಯವರೇ ಬೇಕು ಎಂದು ಅಲ್ಲಿನವರು ಹೇಳುತ್ತಾರೆ. ಇನ್ನು ಚೀನಾ ದೇಶದ ನಾಗರಿಕರು ಮೋದಿಯವರನ್ನು ಅತ್ಯಂತ ಬುದ್ಧಿವಂತ ನಾಯಕರು ಎಂದು ಹೊಗಳಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿಯನ್ನು (Modi in Karnataka) ಹಾಡಿಹೊಗಳಿದರು.
ಮಂಡ್ಯದ ಗೆಜ್ಜಲಗೆರೆಯಲ್ಲಿ ಆಯೋಜನೆ ಮಾಡಿದ್ದ, 12 ಸಾವಿರ ಕೋಟಿ ರೂ. ಮೊತ್ತದ 210 ಕಿಲೋಮೀಟರ್ ಉದ್ದದ ಎರಡು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೊಡ್ಡಣ್ಣ ಅಮೆರಿಕದವರೂ ಸಹ ಮೋದಿಯವರನ್ನು ಅತ್ಯುತ್ತಮ ಆಡಳಿತಗಾರರು ಎಂದು ಹೊಗಳಿದ್ದಾರೆ. ಜಿ20ಯ ನಾಯಕತ್ವವು ಇಂದು ಭಾರತಕ್ಕೆ ಬಂದಿರುವುದು ನರೇಂದ್ರ ಮೋದಿಯವರೇ ಕಾರಣ ಎಂದು ಹೇಳಿದರು.
2019ರಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಯಿತು. ಈಗ 2023ರಲ್ಲಿ ಕಾಮಗಾರಿ ಮುಗಿದು ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಘಾಟನೆ ಮಾಡುತ್ತಿದ್ದಾರೆ. ಅಂದರೆ ಡಿಪಿಆರ್ ಕೆಲಸದಿಂದ ಹಿಡಿದು ಇಲ್ಲಿಯವರೆಗೂ ಕೆಲಸ ಮಾಡಿಸಿದ್ದು ಮೋದಿ ಮಾತ್ರವೇ. ಆದರೆ, ಪತ್ರಿಕೆಯಲ್ಲಿ ಹಲವರು ನಾನು ಮಾಡಿದೆ, ನಾನು ಮಾಡಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ನಮ್ಮ ಕಡೆಯ ಗಾಧೆ ಮಾತಾದ, “ಪಕ್ಕದ ಮನೆಯವನು ಗಂಡು ಹಡೆದರೆ, ಈತ ಪೇಡೆ ಕೊಡುತ್ತಾನೆ” ಎಂಬಂತೆ ಇದು ಕಥೆಯಾಗಿದೆ. ಇದಕ್ಕೆ ಅಡಿಗಲ್ಲು ಹಾಕಿದ್ದು, ಉದ್ಘಾಟನೆ ಮಾಡುತ್ತಿರುವುದು ನರೇಂದ್ರ ಮೋದಿಯವರು ಎಂಬ ಸತ್ಯವನ್ನು ನಾನೀಗ ಹೇಳುತ್ತಿದ್ದೇನೆ. ಇದು ಮೋದಿ ಅವರು ಕೆಲಸ ಮಾಡುವ ಪದ್ಧತಿಯಾಗಿದೆ ಎಂದು ಹೇಳಿದರು.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಯೋಜನೆ ಆಗಬೇಕು ಎಂಬ ಬಗ್ಗೆ 90ರ ದಶಕಗಳಿಂದ ಬೇಡಿಕೆ ಇತ್ತು. ಆದರೆ, ನೈಸ್ ರಸ್ತೆ ಬರಲಿದೆ ಎಂಬ ಕಾರಣ ನೀಡಿ ಈ ಯೋಜನೆಯನ್ನು ಪಕ್ಕಕ್ಕೆ ಇಡಲಾಯಿತು. ಕೊನೆಗೆ ಈ ಪ್ರಸ್ತಾವನೆಯೇ ಇರಲಿಲ್ಲ. ಆದರೆ, 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಬಳಿಕ ಡಿಪಿಆರ್ ಅನ್ನು ಸಿದ್ಧಪಡಿಸಿ ಯೋಜನೆಯ ಪ್ರಕ್ರಿಯೆ ಚುರುಕುಗೊಂಡಿತು. 2015ರಲ್ಲಿ ಇದಕ್ಕೆ ಡಿಪಿಆರ್ ಆಯ್ತು. ಆಗ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಸಹಕಾರ ನೀಡುತ್ತಾ ಬಂದರು. 2016ರಲ್ಲಿ ನ್ಯಾಷನಲ್ ಹೈವೇ ಅಥಾರಿಟಿಗೆ ವರ್ಗಾವಣೆಯೂ ಆಯಿತು ಎಂದು ತಿಳಿಸಿದರು.
ಇದನ್ನೂ ಓದಿ: Modi in Karnataka: ಕರ್ನಾಟಕದಲ್ಲಿ 2 ಲಕ್ಷ ಕೋಟಿ ರೂ. ಮೊತ್ತದ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ: ನಿತಿನ್ ಗಡ್ಕರಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಂದಾಜು ಪ್ರಕ್ರಿಯೆ ನಡೆಯಿತು. ಆಗ ಹೆಚ್ಚುವರಿ ಅನುದಾನ ಬೇಕಾಗಲಿದೆ ಎಂಬ ವಿಷಯ ತಿಳಿಯಿತು. 4000 ಕೋಟಿ ಹೆಚ್ಚುವರಿ ಅನುದಾನವು ಬೇಕಿರುವ ವಿಷಯ ತಿಳಿದ ಪ್ರಧಾನಿ ನರೇಂದ್ರ ಮೋದಿಯವರು ಅಷ್ಟೂ ಹಣವನ್ನು ಬಿಡುಗಡೆ ಮಾಡಿಸಿದರು ಎಂದು ಅಭಿನಂದಿಸಿದರು.
ಮಂಡ್ಯ ಈಸ್ ಇಂಡಿಯಾ ಎಂದ ಸಿಎಂ
ಇಲ್ಲಿದೆ ನೋಡಿ ಡಬಲ್ ಎಂಜಿನ್ ಸರ್ಕಾರದ ಸಾಧನೆ- ಸಿಎಂ
ಡಬಲ್ ಎಂಜಿನ್ ಸರ್ಕಾರ ಇದ್ದಿದ್ದರಿಂದ ಈ ಎಲ್ಲವನ್ನೂ ಮಾಡಲು ಸಾಧ್ಯವಾಗಿದೆ. ಡಬಲ್ ಎಂಜಿನ್ ಸರ್ಕಾರ ಏನು ಮಾಡಿದೆ ಎಂದು ಕೆಲವರು ಕೇಳುತ್ತಾರೆ. ಇಂದು ಕಿಸಾನ್ ಸಮ್ಮಾನ್ ಯೋಜನೆಯಡಿ ಇದುವರೆಗೆ 53 ಲಕ್ಷ ರೈತರಿಗೆ 16500 ಕೋಟಿ ರೂಪಾಯಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ 4000 ಕೋಟಿ ರೂಪಾಯಿಯನ್ನು ನೀಡಿದ್ದೇವೆ. ಇದು ಸಾಧ್ಯವಾಗಿದ್ದು ನಮ್ಮ ಡಬಲ್ ಎಂಜಿನ್ ಸರ್ಕಾರದಿಂದ ಎಂದು ತಿಳಿಸಿದರು.
ಬೆಲ್ಲ ಗಿಫ್ಟ್ ಕೊಟ್ಟ ಸಂಸದೆ ಸುಮಲತಾ
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 17 ಲಕ್ಷ ಮನೆಗಳು ಇಂದು ಮಂಜೂರಾಗಿ ಕೆಲಸಗಳು ನಡೆಯುತ್ತಿವೆ. ಅಲ್ಲದೆ, 1.25 ಕೋಟಿ ಆಯುಷ್ಮಾನ್ ಕಾರ್ಡ್ ಅನ್ನು ಕರ್ನಾಟಕದಲ್ಲಿ ಕೊಡಲಾಗಿದೆ. ಕಳೆದ 6 ವರ್ಷದಲ್ಲಿ 64 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 6 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ಜನ ಕಲ್ಯಾಣ, ರಾಜ್ಯ ಕಲ್ಯಾಣ, ರಾಷ್ಟ್ರ ಕಲ್ಯಾಣವನ್ನು ಮಾಡಿದ್ದೇವೆ. ಇದಕ್ಕೆ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಕಾರಣ. ಸಮೃದ್ಧಿಗಾಗಿ ನಿರಂತರ ಶ್ರಮವಹಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: Modi in Karnataka: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ದೇಶಕ್ಕೆ ಸಮರ್ಪಣೆ ಮಾಡಿದ ನರೇಂದ್ರ ಮೋದಿ
ಮಂಡ್ಯದಲ್ಲಿ ಬಹು ವರ್ಷಗಳ ಬೇಡಿಕೆಯಾದ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭ ಮಾಡಿದ್ದು ನಮ್ಮ ಸರ್ಕಾರ. ಕಟ್ಟಕಡೆಯ ರೈತನಿಗೂ ಸೌಲಭ್ಯ ಕೊಡುವ ಕೆಲಸವನ್ನು ನಾವು ಮಾಡುತ್ತಾ ಬಂದಿದ್ದೇವೆ. ಮಂಡ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ಕಿಸಾನ್ ಸಮ್ಮಾನ್ ಯೋಜನೆ ತಲುಪಿದೆ. ರೈತ ವಿದ್ಯಾನಿಧಿ ಯೋಜನೆಯು ರಾಜ್ಯದ 35 ಸಾವಿರ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ. 4.69 ಲಕ್ಷ ಆಯುಷ್ಮಾನ್ ಕಾರ್ಡ್ ಅನ್ನು ಇಂದು ಮಂಡ್ಯ ಜಿಲ್ಲೆಯ ಜನತೆಗೆ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮೈಸೂರು ಪೇಟ ತೊಡಿಸಿ ಸನ್ಮಾನ
ಮಂಡ್ಯವನ್ನು ದೇಶದಲ್ಲೇ ನಂ.1 ಮಾಡುತೇವೆ: ಸಿಎಂ
ಎಲ್ಲರನ್ನೂ ಮೂವತ್ತು ವರ್ಷದಿಂದ ನೋಡುತ್ತಾ ಬಂದಿದ್ದೀರಿ. ಆದರೆ, ಈ ಬಾರಿ ನಾವು ಬಿಜೆಪಿ ಸರ್ಕಾರದ ವತಿಯಿಂದ ಕಳೆದ 4 ವರ್ಷಗಳಲ್ಲಿ ಮಾಡಿಕೊಂಡು ಬಂದ ಕೆಲಸವನ್ನು ನೋಡಿ ನಮ್ಮನ್ನು ಬೆಂಬಲಿಸಿ. ನಮ್ಮ ರಿಪೋರ್ಟ್ ಕಾರ್ಡ್ ನೋಡಿ ಆಶೀರ್ವಾದ ಮಾಡಿ. ಮುಂದಿನ ದಿನಗಳಲ್ಲಿ ಮಂಡ್ಯವನ್ನು ದೇಶದಲ್ಲಿಯೇ ನಂಬರ್ ಒನ್ ಜಿಲ್ಲೆಯನ್ನಾಗಿ ಮಾಡಲು ನಾವು ಕಂಕಣ ಬದ್ಧರಾಗಿದ್ದೇವೆ ಎಂದು ಸಿಎಂ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರ ಸಮ್ಮುಖದಲ್ಲಿ ಘೋಷಣೆ ಮಾಡಿದರು.