ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗಾವಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಐವರು ಜನಸಾಮಾನ್ಯರು ಅವರನ್ನು ಸ್ವಾಗತಿಸಲಿರುವು ಈ ಭೇಟಿಯ ವಿಶೇಷವಾಗಿದೆ.
ಶಿವಮೊಗ್ಗ ಭೇಟಿ ಬಳಿಕ ಮಧ್ಯಾಹ್ನ 2.30ಕ್ಕೆ ಬೆಳಗಾವಿಗೆ ಬರಲಿರುವ ನಮೋ ಮಾಲಿನಿ ಸಿಟಿ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮಾಲಿನಿ ಸಿಟಿ ಮೈದಾನದಲ್ಲಿ ಹತ್ತು ಎಕರೆ ಜಾಗದಲ್ಲಿ ಬೃಹದಾಕಾರದ ಟೆಂಟ್ ನಿರ್ಮಿಸಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಏನೇನು ಯೋಜನೆ ಉದ್ಘಾಟನೆ?
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತು ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ, 8 ಕೋಟಿಗೂ ಹೆಚ್ಚು ರೈತರ ಖಾತೆಗೆ ತಲಾ 2000 ರೂ. ಜಮಾವಣೆ ಮಾಡಲಿದ್ದಾರೆ. ನವೀಕೃತ ಬೆಳಗಾವಿ ರೇಲ್ವೆ ನಿಲ್ದಾಣ ಉದ್ಘಾಟನೆ, ಬೆಳಗಾವಿ ಕಿತ್ತೂರು ಧಾರವಾಡ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ, ಬೆಳಗಾವಿ ಲೋಂಡಾ ರೈಲು ಮಾರ್ಗ ಡಬ್ಲಿಂಗ್ ಕಾಮಗಾರಿ, ಬಹುಗ್ರಾಮ ಕುಡಿಯುವ ನೀರು ಯೋಜನೆ ಲೋಕಾರ್ಪಣೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಮಾಲಿನಿ ಸಿಟಿ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಆಗಮಿಸುವ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಬೆಳಗಾವಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯಿಂದ ಒಂದು ಸಾವಿರಕ್ಕೂ ಅಧಿಕ ಬಸ್ ವ್ಯವಸ್ಥೆ ಮಾಡಲಾಗಿದೆ. ಮಾಲಿನಿ ಸಿಟಿ ಮೈದಾನದ ಅರ್ಧ ಕಿಮೀ ಅಂತರದಲ್ಲಿ ಮೂರು ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ 50 ಎಕರೆ ಜಾಗ ಮೀಸಲಿಡಲಾಗಿದೆ.
ಹತ್ತು ಕಿಲೋಮೀಟರ್ ರೋಡ್ ಶೋ
ಮೋದಿಯವರು ನಗರದಲ್ಲಿ 10.7 ಕಿಮೀ ರೋಡ್ ಶೋ ನಡೆಸಲಿದ್ದಾರೆ. ಎಪಿಎಂಸಿ ಬಳಿಯ ಕೆಎಸ್‌ಆರ್‌ಪಿ ಮೈದಾನದಿಂದ ರೋಡ್ ಶೋ ಆರಂಭಿಸಲಿದ್ದು, ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ ಬೀದಿ, ಕಪಿಲೇಶ್ವರ ಮಂದಿರ ಬಳಿ ಮೇಲ್ಸೆತುವೆ, ಶಹಾಪುರ ರಸ್ತೆ, ಶಿವಚರಿತ್ರೆ ಮುಂಭಾಗದ ರಸ್ತೆ, ಹಳೆಯ ಪಿಬಿ ರಸ್ತೆ, ಬಿ.ಎಸ್.ಯಡಿಯೂರಪ್ಪ ಮಾರ್ಗವಾಗಿ ಮಾಲಿನಿ ಸಿಟಿ ಮೈದಾನವರೆಗೆ ಚಲಿಸಲಿದ್ದಾರೆ.
ಪ್ರಧಾನಿ ರೋಡ್ ಶೋ ಐತಿಹಾಸಿಕ ಮಾಡಲು ಬಿಜೆಪಿ ಕಾರ್ಯಕರ್ತರ ಭರ್ಜರಿ ಸಿದ್ಧತೆ ನಡೆದಿದ್ದು, ಲೈವ್ ಶೋ ನಡೆಸಲು ಸ್ಥಳೀಯ ಶಾಸಕರ ನಿರ್ಧರಿಸಿದ್ದಾರೆ. 10.7 ಕಿಮೀ ಮಾರ್ಗದ ಎರಡು ಬದಿಗಳಲ್ಲಿ 90 ಪಾಯಿಂಟ್ಸ್ ಗುರುತಿಸಿ ಲೈವ್ ಶೋ ನೀಡಲಿದ್ದು, ದೇಶದ 29 ರಾಜ್ಯ 8 ಕೇಂದ್ರಾಡಳಿತ ಪ್ರದೇಶಗಳ ವೇಷಭೂಷಣ ಧರಿಸಿ, ಜೊತೆಗೆ ಮಹನೀಯರ ಸಾಹಸಗಾಂಥೆ ಬಿಂಬಿಸುವ ಲೈವ್ ಪರ್ಫಾಮೆನ್ಸ್ ನೀಡಲಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಶಿವಾಜಿ ಮಹಾರಾಜರ ಸಾಹಸಗಾಥೆ ಪ್ರದರ್ಶನವಾಗಲಿದೆ. ಬೆಳಗಾವಿ ದಕ್ಷಿಣ ಕ್ಷೇತ್ರ ಪ್ರವೇಶಿಸುತ್ತಿದ್ದಂತೆ ಕೇಸರಿ ಪೇಟ ತೊಟ್ಟು, ಪೂರ್ಣಕುಂಭ ಹೊತ್ತು 10 ಸಾವಿರ ಮಹಿಳೆಯರು ಸ್ವಾಗತಿಸಲಿದ್ದಾರೆ.
ಐವರು ಜನಸಾಮಾನ್ಯರ ಸ್ವಾಗತ
ಪ್ರಧಾನಿ ಮೋದಿ ಸ್ವಾಗತಿಸಲು ಸಾಮಾನ್ಯ ಕಾರ್ಮಿಕರಿಗೆ ಅವಕಾಶ ನೀಡಲಾಗಿದೆ. ಆಟೋ ಚಾಲಕ, ಪೌರಕಾರ್ಮಿಕ ಮಹಿಳೆ, ನೇಕಾರ, ರೈತ ಮಹಿಳೆ ಹಾಗೂ ಕಟ್ಟಡ ಕಾರ್ಮಿಕನಿಗೆ ಅವಕಾಶ ಕೊಡಲಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಐವರು ಕಾಯಕಯೋಗಿಗಳ ಆಯ್ಕೆಯಾಗಿದ್ದು, ಇವರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಆಟೋ ಚಾಲಕ ಮಯೂರ ಚವಾಣ್, ಪೌರ ಕಾರ್ಮಿಕ ಮಹಿಳೆ ಮೀನಾಕ್ಷಿ ತಳವಾರ, ಕಟ್ಟಡ ಕಾರ್ಮಿಕ ಮಂಗೇಶ ಬಸ್ತವಾಡಕರ್, ರೈತ ಮಹಿಳೆ ಶೀಲಾ ಬಾಬಾರುವಾಕ್ ಖನ್ನುಕರ್, ನೇಕಾರ ಕಲ್ಲಪ್ಪ ಟೋಪಗಿರಿಂದ ಸ್ವಾಗತ ನೆರವೇರಲಿದೆ.
ಇದನ್ನೂ ಓದಿ: PM Modi: ಇಂದು ರಾಜ್ಯಕ್ಕೆ ಮೋದಿ; ಎಲ್ಲೆಲ್ಲಿ, ಏನೇನು ಕಾರ್ಯಕ್ರಮ? ಇಲ್ಲಿದೆ ಸಂಪೂರ್ಣ ಮಾಹಿತಿ
ಬಿಗಿ ಭದ್ರತೆ
ಭದ್ರತೆಗೆ 5 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯಿದ್ದು, ರೋಡ್ ಶೋ ವೇಳೆ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿಗಾ ಇಡಲಿದ್ದಾರೆ. ಬೆಳಗಾವಿ ಜಿಲ್ಲಾ ಎಸ್ಪಿ ಡಾ.ಸಂಜೀವ್ ಪಾಟೀಲ ಸೇರಿ ಹಲವು ಹಿರಿಯ ಪೊಲೀಸ್ ಅಧಿಕಾರಿಗಳಿದ್ದಾರೆ.
ಊಟದ ವ್ಯವಸ್ಥೆ
ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಲಕ್ಷಾಂತರ ಜನರಿಗೆ ಉತ್ತರ ಕರ್ನಾಟಕ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಹಾಲುಗ್ಗಿ, ಬದನೆಕಾಯಿ ಪಳ್ಯ, ಅನ್ನ-ಸಾಂಬಾರು ವ್ಯವಸ್ಥೆ ಮಾಡಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಜನರಿಗೆ ನಾಲ್ಕು ಕಡೆಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಯಡಿಯೂರಪ್ಪ ಮಾರ್ಗದ ಎಡಗಡೆ, ಬಲಗಡೆ, ಅಲಾರವಾಡ ರಸ್ತೆ ಹಾಗೂ ಹಲಗಾ ರಸ್ತೆಯಲ್ಲಿ ಊಟದ ವ್ಯವಸ್ಥೆಯಿದೆ. ಒಟ್ಟು 30 ಅಡುಗೆ ತಯಾರಕರು ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: PM Modi: ಶಿವಮೊಗ್ಗದಲ್ಲಿ ಇಂದು ಪ್ರಧಾನಿ ಮೋದಿ: ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಹೈ ಅಲರ್ಟ್