Site icon Vistara News

Modi in Karnataka | ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಮೈಸೂರಿಗೆ ಬಂದಿದ್ದೇನೆ : ಪ್ರಧಾನಿ ಮೋದಿ

ನರೇಂದ್ರ ಮೋದಿ

ಮೈಸೂರು: ರಾಜ್ಯದಲ್ಲಿ ಮೈಸೂರಿನ ಸುತ್ತೂರು ಮಠ, ತುಮಕೂರಿನ ಸಿದ್ಧಗಂಗಾ ಮಠ, ಚಿತ್ರದುರ್ಗದ ಮುರುಘಾ ಮಠ, ಕೂಡಲ ಸಂಗಮ ಬಸವ ಧರ್ಮ ಪೀಠ ಹೀಗೆ ಹಲವು ಮಠಗಳು ಅಕ್ಷರ, ಅನ್ನ ದಾಸೋಹದ ಜತೆಗೆ ಸಮಾಜ ಸೇವೆ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೈಸೂರಿನ ಸುತ್ತೂರು ಮಠದ ಆವರಣದಲ್ಲಿ ಸಂಸ್ಕೃತ ವೇದಪಾಠ ಶಾಲೆ ಉದ್ಘಾಟನೆ ಹಾಗೂ ಯೋಗ ಸೂತ್ರ, ಶಿವಸೂತ್ರ, ನಾರದ ಸೂತ್ರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀಮಠದ ಜ್ಞಾನ ಮತ್ತು ಧ್ಯಾನ ಪರಂಪರೆಗೆ ನನ್ನ ನಮನಗಳು. ಈ ಕಾರ್ಯಕ್ರಮದಿಂದ ನಾನು ಧನ್ಯತೆ ಅನುಭವಿಸಿದ್ದೇನೆ. ಈ ಸಂಸ್ಥಾನ ಭವ್ಯ ಭವಿಷ್ಯ ನಿರ್ಮಾಣದ ಗುರಿ ಹೊಂದಿದೆ. ವಿದೇಶದಲ್ಲೂ ಮಠದ ಸಂಸ್ಥೆಗಳಿವೆ. ಮೈಸೂರು ಅಭಿವೃದ್ಧಿ ಕಾರ್ಯಕ್ರಮ ಮಾಡುವ ಅವಕಾಶ ದೊರೆತಿದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಇಲ್ಲಿಗೆ ಬಂದಿದ್ದೇನೆ. ಚಾಮುಂಡಿ ಬೆಟ್ಟಕ್ಕೆ ಹೋಗಿ ದರ್ಶನ ಪಡೆದು, ಮೈಸೂರು ಅಭಿವೃದ್ಧಿಗೆ ಪ್ರಾರ್ಥಿಸುತ್ತೇನೆ ಎಂದರು.

ಪ್ರಧಾನಿ ಮೋದಿ ಅವರಿಗೆ ಅವರ ತಾಯಿ ಜತೆಗಿರುವ ಫೋಟೋ ಕಾಣಿಕೆಯಾಗಿ ನೀಡಲಾಯಿತು. ರುದ್ರಾಕ್ಷಿ ಮಾಲೆ, ಶಾಲು ಹೊದಿಸಿ ಪ್ರಧಾನಿ ಅವರನ್ನು ಸನ್ಮಾನಿಸಿ, ಬಸವಣ್ಣನ ಮೂರ್ತಿ ಸ್ಮರಣಿಕೆ ನೀಡಿ ಮಾತನಾಡಿದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಸವಣ್ಣ ಅವರ ಕಾಯಕವೇ ಕೈಲಾಸ ತತ್ವದಡಿ ಶ್ರೀಮಠ ಸೇವೆ ಸಲ್ಲಿಸುತ್ತಿದೆ. ಪ್ರಧಾನಿ ಮೋದಿ ಅವರು ಮಠಕ್ಕೆ ಮೂರನೇ ಬಾರಿ ಭೇಟಿ ನೀಡಿದ್ದಾರೆ. ಪ್ರಾಚೀನ ಸಂಸ್ಕೃತಿಯನ್ನು ಗೌರವಿಸಿ ಅವರು ಬಂದಿದ್ದಾರೆ. ದಿನದಲ್ಲಿ 18 ಗಂಟೆ ದುಡಿಯುವ ಅವರು ಪ್ರಧಾನಿಯಾದ ಎಂಟು ವರ್ಷಗಳಲ್ಲಿ ಒಂದು ದಿನವೂ ರಜೆಯಿಲ್ಲದೆ ಕೆಲಸ ಮಾಡಿದ್ದಾರೆ ಎಂದರು.

ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಪ್ರಧಾನಿ ಮೋದಿ ಅವರನ್ನು ನೋಡುವುದೇ ಸೌಭಾಗ್ಯ. ಇಂತಹ ಪ್ರಧಾನಿ ದೊರೆತಿರುವುದು ನಮ್ಮೆಲ್ಲರ ಅದೃಷ್ಟ. ತಮ್ಮ ಜೀವನವನ್ನು ದೇಶದ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಜೇಬು ಇದ್ದರೂ ಅದನ್ನು ತುಂಬಿಸಿಕೊಳ್ಳುವ ಮನಸ್ಸು ಅವರಿಗಿಲ್ಲ ಎಂದು ದುಡ್ಡು ಮಾಡಲು ರಾಜಕಾರಣಕ್ಕೆ ಬರುವ ರಾಜಕಾರಣಿಗಳ ನಡುವೆ ಮೋದಿ ಅವರು ಅಪರೂಪ ಎಂಬುದಾಗಿ ಪರೋಕ್ಷವಾಗಿ ಹೇಳಿದರು.

ನಾಡದೇವತೆ ದರ್ಶನ ಪಡೆದ ನಮೋ
ಸುತ್ತೂರು ಮಠದಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಶಕ್ತಿದೇವತೆ ಚಾಮುಂಡೇಶ್ವರಿ ದೇವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಗರ್ಭಗುಡಿ ಸುತ್ತ ಪ್ರದಕ್ಷಿಣೆ ಹಾಕಿದ ಬಳಿಕ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್‌ ಸಮ್ಮುಖದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ಸಂಕಲ್ಪ ಪೂಜೆ ನೆರವೇರಿಸಿದರು.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧ ಹೇರಲಾಗಿತ್ತು. ಮಂಗಳವಾರ ಬೆಳಗ್ಗೆ 10.30ರವರೆಗೆ ನಿಷೇಧ ಮುಂದುವರಿಯಲಿದೆ. ದೇವಸ್ಥಾನದ ಬಳಿ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿತ್ತು. ಇದೇ ಮೊದಲ ಬಾರಿ ಚಾಮುಂಡಿ ಬೆಟ್ಟಕ್ಕೆ ನರೇಂದ್ರ ಮೋದಿ ಅವರು ಭೇಟಿ ನೀಡಿರುವುದು ವಿಶೇಷವಾಗಿದೆ.

ರ‍್ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ
ಮೈಸೂರಿಗೆ ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಆಗಮಿಸಿರುವ ಪ್ರಧಾನಿ ಮೋದಿ ಅವರಿಗೆ ನಗರದ ರ‍್ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರಿಗಾಗಿ ಶುದ್ಧ ಸಸ್ಯಾಹಾರಿ ಊಟ ತಯಾರಿಸಲಾಗಿದೆ. ಮೈಸೂರು ಶೈಲಿಯ ವೆಜಿಟೇಬಲ್‌ ಸೂಪ್‌, ಮಸಾಲ ಮಜ್ಜಿಗೆ, ರೋಟಿ, ಜೀರಾ ರೈಸ್‌, ದಾಲ್‌ ಹಾಗೂ ಮಿಕ್ಸ್‌ ಫ್ರೂಟ್‌ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಪರ್ಯಾಯವಾಗಿ ಪ್ರಧಾನಿ ಇಷ್ಟ ಪಟ್ಟರೆ ಮತ್ತೊಂದು ಮೆನು ಸಿದ್ಧತೆ ಮಾಡಲಾಗಿದೆ. ಗುಜರಾತಿ ಕರಿ, ಕಿಚಡಿ, ಎರಡು ಬಗೆಯ ಸಬ್ಜಿ, ದಾಲ್‌, ರೈಸ್‌ ಕೂಡ ತಯಾರಿ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ 6.30ಕ್ಕೆ ಅರಮನೆ ಆವರಣದಲ್ಲಿ ಏರ್ಪಡಿಸಿರುವ ಯೋಗ ದಿನಾಚರಣೆಯಲ್ಲಿ ಅವರು ಭಾಗವಹಿಸಲಿದ್ದಾರೆ. 8.30ಕ್ಕೆ ಯೋಗ ವಿಶೇಷ ವಸ್ತು ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ 9.30ಕ್ಕೆ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಇದನ್ನೂ ಓದಿ | Modi in Karnataka | ರಾಜ್ಯದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಪ್ರಧಾನಿ ನರೇಂದ್ರ ಮೋದಿ ಭರವಸೆ

Exit mobile version