Site icon Vistara News

Karnataka Election 2023: ಏಳು ಸುತ್ತಿನ ಕೋಟೆಯಂತೆ ಬಿಜೆಪಿಯ ಏಳು ಸುರಕ್ಷತೆಯ ಯೋಜನೆಗಳು; ಪ್ರಧಾನಿ ಮೋದಿ ಬಣ್ಣನೆ

PM Narendra Modi compares his government welfare schemes to chitradurga fort

ಚಿತ್ರದುರ್ಗ, ಕರ್ನಾಟಕ: ಚಿತ್ರದುರ್ಗವನ್ನು ಏಳು ಸುತ್ತಿನ ಕೋಟೆ ಎಂದು ಕರೆಯುತ್ತೇವೆ. ಏಳು ಸುತ್ತಿನ ಕೋಟೆ ಎಂದರೆ ಏಳು ಸುತ್ತಿನ ಸುರಕ್ಷತೆ ಎಂದರ್ಥ. ಹಾಗೆಯೇ, ಬಿಜೆಪಿ ಸರ್ಕಾರವು ಸಮಾಜಕ್ಕೆ ಏಳು ಸುತ್ತಿನ ಸರಕ್ಷತೆಯ ಯೋಜನೆಗಳನ್ನು ಜಾರಿಗೆ ತಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು(Karnataka Election 2023).

ಚಿತ್ರದುರ್ಗದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಬಿಜೆಪಿ ಸರ್ಕಾರದ ಯೋಜನೆಗಳು ಹೇಗೆ ಏಳು ಸುತ್ತಿನ, ಏಳು ಸುರಕ್ಷತೆಯ ಯೋಜನೆಗಳಾಗಿವೆ ಎಂದು ವಿವರಿಸಿದರು. ಮೊದಲನೆಯದು ಎಲ್ಲರಿಗೂ ಆಶ್ರಯ ಕಲ್ಪಿಸುವ ಪಿಎಂ ಆವಾಸ್ ಯೋಜನೆ ಜಾರಿ, ಎರಡನೆಯದು ಬಡವರಿಗೆ ಉಚಿತ ರೇಷನ್ ವಿತರಣೆ, ಮೂರನೆಯದು ಆರೋಗ್ಯ ಸುಧಾರಣೆಗಾಗಿ ಆಯುಷ್ಮಾನ್ ಭಾರತ್ ಜಾರಿ, ಉಚಿತ ಲಸಿಕೆ ವಿತರಣೆ. ನಾಲ್ಕನೆಯದು ಆರ್ಥಿಕ ಭದ್ರತೆ. ಮುದ್ರಾ ಯೋಜನೆಯ ಮೂಲಕ ಸಾಲ ವಿತರಣೆ. ಐದನೆಯದು ವಿಮಾ ಯೋಜನೆಗಳ ಜಾರಿ. ಜೀವನಜ್ಯೋತಿ, ಅಟಲ್ ವಿಮಾ ಯೋಜನೆಗಳಿಂದ ಜನರಿಗೆ ಲಾಭ. ಆರನೆಯದು ಕಾನೂನು ವ್ಯವಸ್ಥೆ ಜಾರಿ. ಮಹಿಳೆಯರಿಗೆ ಭದ್ರತೆಯನ್ನು ಒದಗಿಸಲಾಗಿದೆ. ಏಳನೆಯದು ಎಲ್ಲರಿಗೂ ಸಾಮಾಜಿಕ ಭದ್ರತೆ. ಎಲ್ಲ ಸಮುದಾಯಗಳಿಗೆ ಅವರ ಹಕ್ಕು ನೀಡಿದ್ದೇವೆ… ಹೀಗೆ ಡಬಲ್ ಎಂಜಿನ್ ಸರ್ಕಾರವು ಏಳು ಸುತ್ತಿನ, ಸುರಕ್ಷತೆಯ ಯೋಜನೆಗಳನ್ನು ಜಾರಿ ಮಾಡಿದೆ ಎಂದು ಪ್ರಧಾನಿ ಮೋದಿ ನರೇಂದ್ರ ಮೋದಿ ಹೇಳಿದರು.

ಚಿತ್ರದುರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಡಬಲ್ ಎಂಜಿನ್ ಸರ್ಕಾರದ ಯೋಜನೆಗಳ ಲಾಭ ದೊರೆತಿದೆ. ಬಿಜೆಪಿ ಸರ್ಕಾರವು ಆದಿವಾಸಿಗಳಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಬಂಜಾರ-ಲಂಬಾಣಿ ಸಮುದಾಯಕ್ಕೆ ಆಸ್ತಿ ಹಕ್ಕು ನೀಡಿದ್ದೇ ಬಿಜೆಪಿ ಸರ್ಕಾರವಾಗಿದೆ. ಅವರು ವಾಸಿಸುವ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ. ಪಹಣಿ ನೀಡಿದ್ದೇವೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ನಿಧಿ ಆರಂಭಿಸಿದ್ದೇವೆ. ಮನೆಗಳನ್ನು ನಿರ್ಮಾಣ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ಭಾರತೀಯ ಜನತಾ ಪಾರ್ಟಿಯನ್ನು ಎದುರಿಸಲು ಸಾಧ್ಯವೇ ಇಲ್ಲ. 2014ಕ್ಕಿಂತ ಮುಂಚೆ ಕಾಂಗ್ರೆಸ್ ಸರ್ಕಾರವು 10 ವರ್ಷಗಳಲ್ಲಿ ಎಷ್ಟು ಮೆಡಿಕಲ್ ಕಾಲೇಜ್‌ಗಳನ್ನು ನಿರ್ಮಾಣ ಮಾಡಿತ್ತೋ ಅದಕ್ಕಿಂತ ಎರಡುಪಟ್ಟು ಹೆಚ್ಚು ವೈದ್ಯಕೀಯ ಕಾಲೇಜ್‌ಗಳನ್ನು ಬಿಜೆಪಿ ಸರ್ಕಾರ ಕೇವಲ ಒಂಭತ್ತು ವರ್ಷದಲ್ಲೇ ಮಾಡಿದೆ. ಚಿತ್ರದುರ್ಗದಲ್ಲೂ ಹೊಸ ವೈದ್ಯಕೀಯ ಮೆಡಿಕಲ್ ಕಾಲೇಜ್ ಆರಂಭವಾಗಲಿದೆ. ಇದರಿಂದ ಆರೋಗ್ಯ ಸೇವೆಗಳು ಎಲ್ಲರಿಗೂ ದೊರೆಯಲಿವೆ. ಯುವಕರಿಗೆ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ನರ್ಸಿಂಗ್ ಕಾಲೇಜು‌ಗಳು ಕೂಡ ಸ್ಥಾಪನೆ ಮಾಡಿರುವುದರಿಂದ ನಮ್ಮ ಯುವಕ-ಯುವತಿಯರು ಉದ್ಯೋಗಕ್ಕಾಗಿ ವಿದೇಶಗಳಿಗೆ ಹೋಗಲು ಶಕ್ತಿ ತುಂಬಲಿವೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಎಂಜಿನಿಯರಿಂಗ್, ಮೆಡಿಕಲ್

ತಮ್ಮ ಭಾಷಣದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಹಳ್ಳಿಯ ಮತ್ತು ಬಡವರ್ಗದ ಮಕ್ಕಳಿಗೆ ನೆರವಾಗವುದಕ್ಕೆ ಕೇಂದ್ರ ಸರ್ಕಾರವು ಎಂಜಿನಿಯರಿಂಗ್‌ನಿಂದ ಹಿಡಿದ ಮೆಡಿಕಲ್‌ವರೆಗೆ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು. ರೈತರ ಮಕ್ಕಳ ಶಿಕ್ಷಣಕ್ಕೆ ನೆರವು ಒದಗಿಸುವುದಕ್ಕೆ ಬಿಜೆಪಿ ಸರ್ಕಾರ ರೈತ ವಿದ್ಯಾ ನಿಧಿ ಜಾರಿಗೆ ತಂದಿದೆ. ಆದಿವಾಸಿ ಸಮುದಾಯ ಮಕ್ಕಳಿಗೆ ನೂರು ಏಕಲವ್ಯ ಶಾಲೆಗಳನ್ನು ಆರಂಭಿಸಿದೆ. ಅದೇ ಕಾಂಗ್ರೆಸ್ ಸರ್ಕಾರ ಮಕ್ಕಳು ಸಮವಸ್ತ್ರದಲ್ಲೂ ಹಗರಣ ಮಾಡಿತ್ತು ಆದಿವಾಸಿಗಳ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ 1.5 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ. ಇದು ಕಾಂಗ್ರೆಸ್ ವೆಚ್ಚ ಮಾಡುತ್ತಿದ್ದ ಹಣಕ್ಕಿಂತಲೂ ಐದು ಪಟ್ಟು ಹೆಚ್ಚು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಇದನ್ನೂ ಓದಿ: Karnataka Election: ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ನನಗೆ ಕಾಂಗ್ರೆಸ್ ಧಮ್ಕಿ ಹಾಕುತ್ತಿದೆ; ಪ್ರಧಾನಿ ನರೇಂದ್ರ ಮೋದಿ

ಭಯೋತ್ಪಾದನೆಗೆ ಕಾಂಗ್ರೆಸ್, ಜೆಡಿಎಸ್ ಉತ್ತೇಜನ

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಗೆ ಭಯೋತ್ಪಾದನೆ ಮತ್ತು ಉಗ್ರರಿಗೆ ಪ್ರಚೋದನೆ ಮಾಡುವ ಕೆಲಸವನ್ನು ಮಾಡಿಕೊಂಡು ಬಂದಿವೆ. ಈ ಸಂಬಂಧ ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಾ ಬಂದಿದೆ. ಈ ಹಿಂದೆ ಬಾಟ್ಲಾ ಎನ್‌ಕೌಂಟರ್‌ನಲ್ಲಿ ಉಗ್ರ ಮೃತಪಟ್ಟಾಗ ಕಾಂಗ್ರೆಸ್‌ನ ನಾಯಕರೊಬ್ಬರು ಕಣ್ಣೀರು ಹಾಕಿದ್ದೇನೆ ಮರೆಯಲು ಸಾಧ್ಯವೇ. ಕೇಂದ್ರ ಸರ್ಕಾರ ಉಗ್ರರ ವಿರುದ್ಧ ಏರ್ ಸ್ಟ್ರೈಕ್ ಮತ್ತು ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಸೇನೆಯನ್ನು ಹೊಗಳುವುದರ ಬದಿಲಗೆ ಕಾಂಗ್ರೆಸ್ ಸೇನೆಯ ಸಾಮರ್ಥ್ಯವನ್ನು ಅವಮಾನಿಸಿತು. ಕರ್ನಾಟಕದಲ್ಲೂ ಕಾಂಗ್ರೆಸ್ ಭಯೋತ್ಪಾದನೆಗೆ ಕುಮ್ಮುಕ್ಕು ನೀಡುವ ಕೆಲಸ ಮಾಡಿದೆ. ಆದರೆ, ಈ ಭಯೋತ್ಪಾದನೆ ಮತ್ತು ಉಗ್ರರ ಸೊಂಟ ಮುರಿಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ. ಕಾಂಗ್ರೆಸ್ ತುಷ್ಟೀಕರಣಕ್ಕೆ ಅಂತ್ಯ ಹಾಡಿದೆ ಎಂದು ಮೋದಿ ಅವರು ಹೇಳಿದರು.

Exit mobile version