ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ (Karnataka Election 2023) ಕಣ ರಂಗೇರುತ್ತಿದೆ. ಮತದಾನಕ್ಕೆ ಕೇವಲ ಐದು ದಿನ ಮಾತ್ರ ಬಾಕಿ ಇದ್ದು, ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ಸ್ಥಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (Modi in Karnataka) ಮೆಗಾ ಪ್ಲ್ಯಾನ್ ಹಾಕಿದ್ದಾರೆ. ವಾರದ ಹಿಂದಷ್ಟೇ ನಗರಕ್ಕೆ ಬಂದಿದ್ದ ಮೋದಿ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸಿದ್ದರು. ಇದೀಗ ಮತ್ತೊಮ್ಮೆ ಮೇ 6 ಮತ್ತು 7ರಂದು ನಗರದಲ್ಲಿ ನರೇಂದ್ರ ಮೋದಿ (PM Narendra Modi) ಮತ್ತೆ ರೋಡ್ ಶೋ ನಡೆಸಲಿದ್ದು, 18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೋಡಿ ಮಾಡಲು ಪ್ಲ್ಯಾನ್ ಹೊಂದಿದ್ದಾರೆ. ಆದರೆ, ಇದು ಈಗ ಬೀದಿ ನಾಯಿಗಳಿಗೆ ಸಂಕಟ ತಂದೊಡ್ಡಿದೆ.
ಕೋಣನಕುಂಟೆ ಹೆಲಿಪ್ಯಾಡ್ ಸುತ್ತಮುತ್ತ ಇರುವ ಬೀದಿ ನಾಯಿಗಳು, ಕೋತಿಗಳು, ಹಾವು, ಜೇನುಗಳಿಗೂ ಸಂಕಷ್ಟ ಎದುರಾಗಿದೆ. ಇವುಗಳ ನಿಯಂತ್ರಣಕ್ಕೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್ ಶೋ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ಸುತ್ತಮುತ್ತ ಹಾಗೂ ರೋಡ್ ಶೋ ನಡೆಸುವ ರಸ್ತೆ ಮಾರ್ಗಗಳಲ್ಲಿ ಈ ಸೂಚನೆ ಅನ್ವಯವಾಗಲಿದೆ.
ಇದನ್ನೂ ಓದಿ: Karnataka Election 2023: ವೋಟ್ ಮಾಡಿ ಎಂದು ಬೀದಿಗಿಳಿದ ಐಟಿಬಿಟಿ ಮಂದಿ; ವಾರಾಂತ್ಯದ ಮೋಜಿಗೆ ಬ್ರೇಕ್
ಈ ಬಗ್ಗೆ ಕೋಣನಕುಂಟೆ ಇನ್ಸ್‌ಪೆಕ್ಟರ್ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದು, ಲಯೋಲಾ ಶಾಲಾ ಆವರಣದಲ್ಲಿರುವ ಶಾಲೆಯ ಆವರಣದಲ್ಲಿರುವ ಹೆಲಿಪ್ಯಾಡ್ ಸುತ್ತಮುತ್ತ ಹಾಗೂ ಆ ಮಾರ್ಗವಾಗಿ ಸಂಚರಿಸುವ ಪ್ರಮುಖ ರಸ್ತೆಯಲ್ಲಿ ಕಂಡುಬರುವ ಶ್ವಾನಗಳು, ಕೋತಿಗಳು, ಹಾವು, ಜೇನುಗಳನ್ನು ಹಿಡಿದು ಸಂರಕ್ಷಣೆ ಮಾಡಬೇಕು ಎಂದು ಕೋರಿದ್ದಾರೆ.
ಮರಗಳ ರೆಂಬೆ ಕೊಂಬೆಗಳು ಕಟ್
ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಅಲರ್ಟ್ ಆಗಿದ್ದು, ಮೋದಿ ಸಂಚಾರ ಮಾಡುವ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಮತ್ತು ಬ್ಯಾರಿಕೇಡ್ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಇದೇ ವೇಳೆ, ರೋಡ್ ಶೋ ನಡೆಸುವ ಕೆಲ ರಸ್ತೆಗಳಲ್ಲಿ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಮರಗಳ ರೆಂಬೆ ಕೊಂಬೆಗಳ ತೆರವು ಮಾಡಲಾಗುತ್ತಿದೆ. ಮಾಗಡಿ ರೋಡ್ ಬಾಳೆಕಾಯಿ ಮಂಡಿ ರಸ್ತೆಯಲ್ಲಿ ಕೆಲ ಕಾಮಗಾರಿ ನಡೆಸಲಾಗಿದೆ. ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಕೆಲವು ಕಡೆ ಈಗಲೇ ಪೋಲೀಸರು ಬ್ಯಾರಿಕೇಡ್ ಹಾಕಿದ್ದು, ವಾಹನ ಸವಾರರಿಗೆ ತೊಂದರೆಯಾಗಿದೆ.
ಇದನ್ನೂ ಓದಿ: ‘ನಾನೆಂದು ನಿಮ್ಮವನು, ನಿಮಗಾಗಿ ಬಂದವನು’; ವರುಣದಲ್ಲಿ ಸಿದ್ದು ಪರ ಶಿವಣ್ಣ, ರಮ್ಯಾ, ದುನಿಯಾ ವಿಜಯ್ ಪ್ರಚಾರ
ಪೊಲೀಸರು ಹಾಗೂ ಬಿಬಿಎಂಪಿ ಕಾರ್ಯಕ್ಕೆ ಹಲವು ಸಿಟ್ಟಾಗಿದ್ದು, ಸಾರ್ವಜನಿಕರಿಗೆ ಎಂದಿನಂತೆ ಚಲಿಸಲು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.