Site icon Vistara News

PM Narendra Modi: ಬೆಂಗಳೂರಿನಲ್ಲಿ ತೇಜಸ್‌ ಯುದ್ಧ ವಿಮಾನದಲ್ಲಿ ಹಾರಾಡಿದ ಪ್ರಧಾನಿ ನರೇಂದ್ರ ಮೋದಿ

pm modi in Tejas

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಇಂದು ಬೆಂಗಳೂರಿನಲ್ಲಿ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌ನಲ್ಲಿ (Light Combat Aircraft Tejas) ಹಾರಾಟ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಶನಿವಾರ ಭೇಟಿ ನೀಡಿ, ಅದರ ಉತ್ಪಾದನಾ ಘಟಕದಲ್ಲಿ ನಡೆಯುತ್ತಿರುವ ಕೆಲಸವನ್ನು ಪರಿಶೀಲಿಸಿದರು. ನಂತರ ತೇಜಸ್‌ನಲ್ಲಿ ಕುಳಿತು ಒಂದು ರೌಂಡ್‌ ಹಾರಾಟ ನಡೆಸಿದರು.

“ತೇಜಸ್‌ನಲ್ಲಿ ವಿಹಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅನುಭವವು ನಂಬಲಾಗದಷ್ಟು ಶ್ರೀಮಂತವಾಗಿತ್ತು. ನಮ್ಮ ದೇಶದ ಆಂತರಿಕ ಉತ್ಪಾದನಾ ಸಾಮರ್ಥ್ಯದಲ್ಲಿ ನನ್ನ ವಿಶ್ವಾಸವನ್ನು ಇದು ಗಮನಾರ್ಹವಾಗಿ ಹೆಚ್ಚಿಸಿದೆ ಮತ್ತು ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆ ನನಗೆ ಹೊಸ ಹೆಮ್ಮೆ ಮತ್ತು ಆಶಾವಾದವನ್ನು ನೀಡಿದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

tejas pm modi

ತೇಜಸ್ ಸ್ಥಳೀಯವಾಗಿ ತಯಾರಿಸಲಾದ ಒಂದೇ ಆಸನದ ಯುದ್ಧ ವಿಮಾನ. ಆದರೆ ವಾಯುಪಡೆ ಮತ್ತು ನೌಕಾಪಡೆಯು ನಿರ್ವಹಿಸುವ ಅವಳಿ- ಆಸನದ ತರಬೇತುದಾರ ರೂಪಾಂತರಿ ವಿಮಾನದಲ್ಲಿ ಪ್ರಧಾನಮಂತ್ರಿ ವಿಹಾರ ನಡೆಸಿದರು.

ಲಘು ಯುದ್ಧ ವಿಮಾನ ತೇಜಸ್ 4.5 ಪೀಳಿಗೆಯ ಬಹು-ಪಾತ್ರಗಳ ಯುದ್ಧ ವಿಮಾನವಾಗಿದೆ. ಆಕ್ರಮಣಕಾರಿ ವಾಯುದಾಳಿಗೆ ಬೆಂಬಲ ನೀಡಲು, ನೆಲದ ಮೇಲಿನ ಕಾರ್ಯಾಚರಣೆಗಳಿಗೆ ನಿಕಟ ಯುದ್ಧ ಬೆಂಬಲವನ್ನು ಒದಗಿಸಲು ಇವನ್ನು ವಿನ್ಯಾಸಗೊಳಿಸಲಾಗಿದೆ.

tejas pm modi

LCA ತೇಜಸ್‌ ಅನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಿಸಿದೆ. ಇದನ್ನು ಪ್ರಾಥಮಿಕವಾಗಿ ಭಾರತೀಯ ವಾಯುಪಡೆಗಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ತೇಜಸ್‌ನ ಇನ್ನೊಂದು ರೂಪಾಂತರಿಯನ್ನು ಸಾಗರ ಕಾರ್ಯಾಚರಣೆಗಳಿಗಾಗಿ ನೌಕಾಪಡೆಗೆ ತೆಗೆದುಕೊಳ್ಳಲು ಪರೀಕ್ಷಿಸಲಾಗುತ್ತಿದೆ.

tejas pm modi

ಪ್ರಧಾನಿ ಮೋದಿಯವರ ಅಮೇರಿಕಾ ಪ್ರವಾಸದ ಸಂದರ್ಭದಲ್ಲಿ, ಹೊಸದಿಲ್ಲಿ ಮತ್ತು ವಾಷಿಂಗ್ಟನ್ HAL ಮತ್ತು ಜನರಲ್ ಎಲೆಕ್ಟ್ರಿಕ್ (GE) ನಡುವೆ ಒಪ್ಪಂದ ಮಾಡಿಕೊಂಡಿದ್ದವು. ತೇಜಸ್ ಮಾರ್ಕ್ 2 ಫೈಟರ್ ಜೆಟ್‌ಗಳಿಗೆ ಶಕ್ತಿ ತುಂಬಲು F414 ಫೈಟರ್ ಎಂಜಿನ್‌ಗಳನ್ನು ತಯಾರಿಸುವ ಐತಿಹಾಸಿಕ ಒಪ್ಪಂದಕ್ಕೆ ಇವು ಸಹಿ ಹಾಕಿವೆ. ಇದು ತೇಜಸ್ ಮಾರ್ಕ್ 1Aನ ಮುಂದುವರಿದ ಮತ್ತು ಶಕ್ತಿಯುತ ರೂಪಾಂತರಿ. F404 GE ಎಂಜಿನ್ ತೇಜಸ್‌ನ ಮಾರ್ಕ್ 1 ರೂಪಾಂತರವನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಸ್ಸಾಂನ ತೇಜ್‌ಪುರ್ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ Su-30MKI ಫೈಟರ್ ಜೆಟ್‌ನಲ್ಲಿ ತಮ್ಮ ಮೊದಲ ವಿಹಾರ ನಡೆಸಿದ್ದರು.

Exit mobile version