ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆಗಾಗಿ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ಭಾನುವಾರ (ಮಾ. 12) ಬೆಳಗ್ಗೆ ಆಗಮಿಸಿದ್ದರು. ಈ ವೇಳೆ ಅವರ ರೋಡ್ ಶೋಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ರಸ್ತೆಯುದ್ದಕ್ಕೂ ಸಾರ್ವಜನಿಕರು ಹೂಮಳೆಯನ್ನೇ ಸುರಿಸಿದರು. ಹೂವಿನಿಂದ ಮಿಂದೆದ್ದ ಮೋದಿ ಅವರು ಅಲ್ಲಿಂದ ವಾಪಸ್ ತೆರಳುವಾಗ ಮಂಡ್ಯದ ಜನತೆಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ಇಷ್ಟು ಅದ್ಧೂರಿಯಾಗಿ ಸ್ವಾಗತ ಕೋರಿದ ನಿಮ್ಮೆಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಸೇರಿದಂತೆ ಅನೇಕ ಯೋಜನೆಗಳ ಚಾಲನೆ ಹಾಗೂ ಶಂಕುಸ್ಥಾಪನೆಗೆ ಆಗಮಿಸಿದ್ದ ಮೋದಿ ಅವರು ಅದಕ್ಕೂ ಮೊದಲು ಭರ್ಜರಿ ರೋಡ್ ಶೋ ನಡೆಸಿದರು. 11.30ರ ಸುಮಾರಿಗೆ ಮಂಡ್ಯದ ಪ್ರವಾಸಿ ಮಂದಿರ ವೃತ್ತಕ್ಕೆ ಮೋದಿ ಆಗಮಿಸುತ್ತಿದ್ದಂತೆ ಕಿವಿಗಡಚುವಂತೆ ಮೋದಿ… ಮೋದಿ.. ಘೋಷಣೆಗಳು ಮೊಳಗಿದವು. ಮೋದಿಯವರನ್ನು ಸ್ವಾಗತಿಸಲು ರಸ್ತೆಯುದ್ದಕ್ಕೂ ಜನರು ಸಾಲುಗಟ್ಟಿ ನಿಂತಿದ್ದರು.
ಇದನ್ನೂ ಓದಿ: Modi in Karnataka: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು: ಪ್ರಧಾನಿ ನರೇಂದ್ರ ಮೋದಿ ಉಲ್ಲೇಖ
ಮಂಡ್ಯದಲ್ಲಿ ಬಿಜೆಪಿಯ ಸಂಘಟನೆ ಹೆಚ್ಚು ಪ್ರಬಲವಾಗಿಲ್ಲದೇ ಹೋದರೂ, ರೋಡ್ ಶೋ ಏರ್ಪಡಿಸಿದ್ದ ರಸ್ತೆಯ ಇಕ್ಕೆಲಗಳಲ್ಲೂ ಮಕ್ಕಳು, ಮಹಿಳೆಯರೆನ್ನದೆ ಮಂಡ್ಯದ ನಾಗರಿಕರು ಕಿಕ್ಕಿರಿದು ಸೇರಿದ್ದರು. ಎಂದಿನಂತೆ ಮೋದಿ ತಮ್ಮ ಕಾರಿನ ದ್ವಾರದಲ್ಲಿ ನಿಂತು ನಗುಮೊಗದಿಂದ ಕೈಬೀಸುತ್ತಾ ಸಾಗಿದ್ದರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಪ್ರಧಾನಿ ಕಾರಿನ ಮೇಲೆ ಹೂಮಳೆಯನ್ನೇ ಸುರಿಸಿದರು. ಪ್ರಧಾನಿಯೂ ಇದನ್ನು ಸ್ವಾಗತಿಸುತ್ತ ಅನೇಕ ಬಾರಿ ಹೂಗಳನ್ನು ಮತ್ತೆ ಜನಗಳ ಮೇಲೆಯೇ ಹಾಕಿ ಸಂಭ್ರಮಿಸಿದರು.
ಟ್ವೀಟ್ ಮೂಲಕ ಮಂಡ್ಯ ಜನತೆಗೆ ಧನ್ಯವಾದ ಅರ್ಪಿಸಿದ ಮೋದಿ
ದಾರಿಯುದ್ದಕ್ಕೂ ಜನರು ಪ್ರಧಾನಿ ನರೇಂದ್ರ ಮೋದಿಯವರಿಗೆ ಜೈಕಾರ ಹಾಕಿದರು. ನೆಚ್ಚಿನ ನಾಯಕನನ್ನು ನೋಡಿ ಕಣ್ತುಂಬಿಕೊಂಡರು. ರೋಡ್ ಶೋ ಆರಂಭಕ್ಕೂ ಮುನ್ನ ಕರ್ನಾಟಕದ ಕಲಾ ತಂಡಗಳಾದ ವೀರಗಾಸೆ, ಸೋಮನ ಕುಣಿತ, ಡೊಳ್ಳು ಕುಣಿತ, ಪೂಜಾ ಕುಣಿತ, ನಂದಿ ಧ್ವಜ ಕುಣಿತ ಕಲಾ ತಂಡಗಳ ಬಳಿಗೆ ತೆರಳಿದ ಮೋದಿ ಅವರು ಕಲಾವಿದರಿಗೆ ಕೈಬೀಸಿದರು.
ಇದನ್ನೂ ಓದಿ: Modi in Karnataka: ಕಾಂಗ್ರೆಸ್‌ನಿಂದ ಬಸವೇಶ್ವರರಿಗೆ ಅವಮಾನ: ರಾಹುಲ್ ಭಾಷಣ ಉಲ್ಲೇಖಿಸಿದ ಮೋದಿ
ಇಷ್ಟೆಲ್ಲ ಗೌರವವನ್ನು ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನಸ್ಸು ತುಂಬಿದ ಮಂಡ್ಯದ ಜನತೆಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. “ಅದ್ಭುತ ಸ್ವಾಗತ ಕೋರಿದ ಮಂಡ್ಯದ ಜನತೆಗೆ ನನ್ನ ಧನ್ಯವಾದ” ಎಂದು ಹೇಳಿದ್ದಾರೆ.