ಪ್ರತಾಪ್ ಹಿರೀಸಾವೆ, ಹಾಸನ
ರಾಜ್ಯಾದ್ಯಂತ ಪ್ರಸಿದ್ಧವಾಗಿರುವ, ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಹಾಸನಾಂಬಾ ದೇವಾಲಯವಿರುವ ಕ್ಷೇತ್ರ ಹಾಸನ. ಜೆಡಿಎಸ್ ಭದ್ರಕೋಟೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಬೆಜೆಪಿ ಬಾವುಟ ಹಾರಾಡುತ್ತಾ ಇದ್ದು, ಪ್ರೀತಂ ಗೌಡ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ಈ ಹಿಂದೆಯೂ ಬಿಜೆಪಿಯ ಬಾವುಟ ಹಾರಿತ್ತು, 1999ರಲ್ಲಿ ಕೆ.ಹೆಚ್. ಹನುಮೇಗೌಡ ಅವರು ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಗೆಲುವು ಪಡೆದಿದ್ದರು. ಬಿಜೆಪಿಯಲ್ಲಿ ಗೆಲುವನ್ನು ಪಡೆಯುವುದಕ್ಕೂ ಮುನ್ನ ಕಾಂಗ್ರೆಸ್‌ನಿಂದ ಎರಡು ಬಾರಿ ಹಾಗೂ ಪಕ್ಷೇತರವಾಗಿ ಒಂದು ಬಾರಿ ಗೆಲುವು ಸಾಧಿಸಿದ್ದರು.
1994ರಲ್ಲಿ ಜನತಾದಳದಿಂದ ಗೆದ್ದಿದ್ದ ಹೆಚ್.ಎಸ್. ಪ್ರಕಾಶ್, 1999ರಲ್ಲಿ ಕೆ.ಹೆಚ್. ಹನುಮೇಗೌಡರ ವಿರುದ್ದ ಸೋಲೊಪ್ಪಿಕೊಳ್ಳಬೇಕಾಯಿತು. ಆ ಚುನಾವಣೆಯಾದ ಬಳಿಕ ಮತ್ತೆ ಜೆಡಿಎಸ್ ತನ್ನ ಕ್ಷೇತ್ರವನ್ನು ಭದ್ರಮಾಡಿಕೊಂಡಿತು. ಬಳಿಕ 2004, 2008 ಹಾಗೂ 2013ರಲ್ಲಿ ಜೆಡಿಎಸ್‌ನ ಎಚ್.ಎಸ್. ಪ್ರಕಾಶ್ ಹ್ಯಾಟ್ರಿಕ್ ಗೆಲುವನ್ನು ಪಡೆದುಕೊಂಡರು. ಎಚ್.ಎಸ್. ಪ್ರಕಾಶ್ 2018ರ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂ ಗೌಡ ವಿರುದ್ಧ ಸೋಲೊಪ್ಪಿಕೊಳ್ಳಬೇಕಾಯಿತು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಹೆಚ್. ಹನುಮೇಗೌಡ ಹಾಗೂ ಎಚ್.ಎಸ್.ಪ್ರಕಾಶ್ ಇಬ್ಬರಿಗೂ ತಲಾ ನಾಲ್ಕು ಬಾರಿ ಕ್ಷೇತ್ರದ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ನಾಲ್ಕು ಅವಧಿಗೆ ಶಾಸಕರಾಗಿದ್ದ ಎಚ್.ಎಸ್. ಪ್ರಕಾಶ್‌ಗೆ ಒಂದು ಬಾರಿಗೂ ಮಂತ್ರಿ ಭಾಗ್ಯ ದೊರೆಯಲಿಲ್ಲ. ನಾಲ್ಕು ಬಾರಿ ಅವಕಾಶ ಕೊಟ್ಟ ಕ್ಷೇತ್ರದ ಜನ ಹೊಸ ಮುಖಕ್ಕೆ ಅವಕಾಶ ಕೊಟ್ಟು ಪ್ರೀತಂ ಗೌಡರನ್ನು ಗೆಲ್ಲಿಸಿದರು.
2023ರ ಚುನಾವಣಾ ತಯಾರಿ
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿಯ ಪ್ರೀತಂ ಗೌಡ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯಿಂದಲೇ ಸ್ಪರ್ಧೆ ಮಾಡಲಿದ್ದು, ಹಾಲಿ ಶಾಸಕರಾಗಿರುವುದರಿಂದ ಟಿಕೆಟ್ ಬಹುತೇಕ ಖಚಿತವಾಗಿದೆ. ಇನ್ನು ಇವರ ಎದುರು ಸ್ಪರ್ಧಿಸುವ ಅಭ್ಯರ್ಥಿಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಹುಡುಕಾಟ ನಡೆಸುತ್ತಿದೆ. ಜೆಡಿಎಸ್‌ನಿಂದ ಪ್ರಬಲವಾಗಿ ಇಬ್ಬರು ಹಾಗೂ ಕಾಂಗ್ರೆಸ್‌ನಿಂದ ಪ್ರಬಲವಾಗಿ ಇಬ್ಬರು ಟಿಕೆಟ್‌ಗಾಗಿ ಫೈಟ್ ಮಾಡುತ್ತಿದ್ದಾರೆ.
ಸದ್ಯ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇರಬಹುದಾದದ್ದು ದರೆ ಅದು ಪ್ರೀತಂ ಗೌಡಗೆ ಎಂಬ ಮಾತುಗಳಿವೆ. ಶಾಸಕರಾಗಿದ್ದು ಸಾಕಷ್ಟು ಕೆಲಸಗಳನ್ನು ಮಾಡಿರುವ ಕ್ರೆಡಿಟ್ ಅವರಿಗಿದೆ. ದೇವೇಗೌಡರ ಕುಟುಂಬವನ್ನು ವಿರೋಧಿಸುತ್ತಾ ಬಂದಿರುವ ಪ್ರೀತಂಗೌಡ, ಜೆಡಿಎಸ್ ವಿರುದ್ಧದ, ಕುಟುಂಬ ರಾಜಕಾರಣದ ವಿರುದ್ಧದ ಮತಗಳನ್ನು ತಮ್ಮತ್ತ ಸೆಳೆಯುವಲ್ಲಿ ಸಫಲರಾಗಬಹುದು. ಪ್ರೀತಂ ಗೌಡ ವಿರುದ್ಧವಾಗಿ ಒಂದು ವೇಳೆ ಭವಾನಿ ರೇವಣ್ಣ ಸ್ಪರ್ಧಿಸಿದರೆ ಕುಟುಂಬ ರಾಜಕಾರಣ ಕಾರ್ಡ್ ಪ್ಲೇ ಮಾಡುವುದರಲ್ಲಿ ಎರಡು ಮಾತಿಲ್ಲ. ಗ್ರಾಮಗಳಲ್ಲಿ ಪ್ರಮುಖವಾಗಿ ಯುವಕರ ನಡುವೆ ಹೆಚ್ಚಿನ ಪ್ರಭಾವ ಹೊಂದಿರುವ ಪ್ರೀತಂ ಗೌಡ, ಬಿ.ವೈ. ವಿಜಯೇಂದ್ರ ಅವರ ಜತೆಗೆ ಗುರುತಿಸಿಕೊಂಡು ಉಪಚುನಾವಣೆಗಳಲ್ಲಿ ಗೆಲುವಿನ ಸೂತ್ರ ಹೆಣೆದವರು ಎಂಬ ಹೆಗ್ಗಳಿಕೆಯೂ ಇದೆ. ಈಗಾಗಲೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಪ್ರೀತಂ ಗೌಡ ಅವರ ಸರ್ವಾಧಿಕಾರಿ ನಡೆ, ಸ್ವಲ್ಪ ಮಟ್ಟಿಗೆ ಆರ್‌ಎಸ್‌ಎಸ್ ಜತೆಗೆ ಅಷ್ಟೊಂದು ಉತ್ತಮವಾದ ಸಂಬಂಧ ಹೊಂದಿಲ್ಲದೆ ಇರುವುದು ಹಾಗೂ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಜತೆಗೂ ಚೆನ್ನಾಗಿದ್ದಾರೆ ಎನ್ನುವ ವಿಚಾರಗಳು ನೆಗೆಟಿವ್ ಆಗುವ ಸಾಧ್ಯತೆಗಳಿವೆ.
ಜೆಡಿಎಸ್‌ನಿಂದ ನಾಲ್ಕು ಬಾರಿ ಗೆದ್ದಿದ್ದ ಎಚ್.ಎಸ್. ಪ್ರಕಾಶ್ ಕಳೆದ ಬಾರಿ ಪ್ರೀತಂ ಗೌಡ ಎದುರು ಸೋತಿದ್ದರು, ಸೋತ ಬಳಿಕ ಅಕಾಲಿಕ ಹೊಂದಿದ್ದಾರೆ. ಅವರ ಮಗ ಸ್ವರೂಪ್ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಾಸನ ಜಿಲ್ಲೆಯ ಕೇಂದ್ರ ಕ್ಷೇತ್ರವನ್ನೇ ಕಳೆದುಕೊಂಡ ಕೋಪ, ಜೆಡಿಎಸ್ ಪಕ್ಷಕ್ಕೆ, ನಿರ್ದಿಷ್ಟವಾಗಿ ದೇವೇಗೌಡರ ಕುಟುಂಬಕ್ಕಿದೆ. ತಮ್ಮ ಅಧಿಕಾರಾವಧಿಯಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯ ನಡೆಸಿದರೂ ಕ್ಷೇತ್ರವನ್ನು ಕಳೆದುಕೊಳ್ಳುವಂತಾಯಿತಲ್ಲ ಎಂದು ಮುಖ್ಯವಾಗಿ ಎಚ್.ಡಿ. ರೇವಣ್ಣ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಕ್ಷೇತ್ರವನ್ನು ಶತಾಯಗತಾಯ ದಕ್ಕಿಸಿಕೊಳ್ಳಲೇ ಬೇಕು ಎಂಬ ಉಮೇದಿನಲ್ಲಿ ಎಲ್ಲ ಪ್ರಯತ್ನಗಳನ್ನೂ ನಡೆಸುವುದು ನಿಶ್ಚಿತ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಿಂದ ರೇವಣ್ಣ ಪತ್ನಿ ಭವಾನಿ ರೇವಣ್ಣ ಕೂಡಾ ಸ್ಪರ್ಧೆಗೆ ರೆಡಿಯಾಗುತ್ತಿದ್ದಾರೆ. ಸ್ವರೂಪ್‌ಗೆ ಟಿಕೆಟ್ ನೀಡಿದರೆ ಅನುಕಂಪದ ಮತಗಳು, ಕ್ಷೇತ್ರದಲ್ಲಿ ಹೆಚ್ಚಿರುವ, ಒಕ್ಕಲಿಗ ಸಮುದಾಯದ ಉಪಪಂಗಡವಾದ ದಾಸಗೌಡರ ಮತಗಳು ಹಾಗೂ ಜೆಡಿಎಸ್ ಪಕ್ಷದ ಮತಗಳು ಜೆಡಿಎಸ್‌ಗೆ ಲಭಿಸುವ ಸಾಧ್ಯತೆ ಇದೆ. ಸ್ವರೂಪ್ ಸ್ಪರ್ಧಿಸಿ, ಹೆಚ್.ಡಿ. ರೇವಣ್ಣ ಸಂಪೂರ್ಣ ತೊಡಗಿಸಿಕೊಂಡರೆ ಜಯಿಸುವ ಸಾಧ್ಯತೆ ಹೆಚ್ಚಾಗಿದೆ. ಇಷ್ಟೊಂದು ಕಷ್ಟ ಪಟ್ಟು ಸ್ವರೂಪ್ ಅವರನ್ನು ಗೆಲ್ಲಿಸುವುದಕ್ಕಿಂತ ಭವಾನಿ ರೇವಣ್ಣ ಅವರನ್ನೇ ಗೆಲ್ಲಿಸಿಕೊಳ್ಳೋಣ ಎಂಬ ಮತ್ತೊಂದು ಆಲೋಚನೆಯೂ ರೇವಣ್ಣ ಕುಟುಂಬದಲ್ಲಿದೆ ಎನ್ನಲಾಗಿದೆ.
ಕಾಂಗ್ರೆಸ್ ಪರಿಸ್ಥಿತಿ ಸದ್ಯದ ಮಟ್ಟಿಗೆ ಮೂರನೇ ಸ್ಥಾನದಲ್ಲಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ಎಚ್.ಕೆ. ಮಹೇಶ್ ಮತ್ತೊಂದು ಬಾರಿ ಸ್ಪರ್ಧಿಸುವ ಮನಸ್ಸು ಮಾಡಿ, ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕಳೆದ ಬಾರಿ ಹೊಳೆನರಸೀಪುರದಲ್ಲಿ ರೇವಣ್ಣ ಎದುರು ಸ್ಪರ್ಧಿಸಿದ್ದ ಬಾಗೂರು ಮಂಜೇಗೌಡ, ಟಿಕೆಟ್ ಸಿಕ್ಕರೆ ಹಾಸನದಿಂದಲೇ ಸ್ಪರ್ಧಿಸುವೆ ಎಂದು ಪ್ರಯತ್ನಿಸುತ್ತಿದ್ದಾರೆ. ಇವರಿಬ್ಬರೇ ಅಲ್ಲದೇ ಬನವಾಸೆ ರಂಗಸ್ವಾಮಿಯೂ ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದಲ್ಲಿ, ಕಾಂಗ್ರೆಸ್ ಗೆಲುವು ಅಸಾಧ್ಯವೇನಲ್ಲ. ಆದರೆ, ಯಾರಿಗೆ ಟಿಕೆಟ್ ಸಿಕ್ಕರೂ, ಉಳಿದೆಲ್ಲರೂ ಮುನಿಸಿಕೊಳ್ಳುತ್ತಾರೆ ಎನ್ನುವುದು ಕ್ಷೇತ್ರದಾದ್ಯಂತ ಜಗಜ್ಜಾಹೀರು.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಪ್ರೀತಂ ಜೆ ಗೌಡ (ಬಿಜೆಪಿ)
2. ಸ್ವರೂಪ್, ಭವಾನಿ ರೇವಣ್ಣ, ಪ್ರಸಾದ್ ಗೌಡ (ಜೆಡಿಎಸ್)
3. ಹೆಚ್.ಕೆ. ಮಹೇಶ್, ಬಾಗೂರು ಮಂಜೇಗೌಡ (ಕಾಂಗ್ರೆಸ್)
ಇದನ್ನೂ ಓದಿ | ಎಲೆಕ್ಷನ್ ಹವಾ | ಬೇಲೂರು | ಐತಿಹಾಸಿಕ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಅಭ್ಯರ್ಥಿಗೇ ಮಣೆ