ಪ್ರತಾಪ್ ಹಿರೀಸಾವೆ, ಹಾಸನ
1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬೇಲೂರು ಕ್ಷೇತ್ರಕ್ಕೆ ಒಳಪಟ್ಟಿದ್ದ ಸಕಲೇಶಪುರ-ಆಲೂರು ಪ್ರದೇಶಗಳು 1962ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಸಕಲೇಶಪುರ-ಆಲೂರು ಕ್ಷೇತ್ರವಾಗಿ ಮಾರ್ಪಟ್ಟಿತು. 2008ರಲ್ಲಿ ಹಾಸನ ತಾಲೂಕಿನ ಕಟ್ಟಾಯ ಹೋಬಳಿ ಸೇರ್ಪಡೆಗೊಂಡು ಮತ್ತೆ ಕ್ಷೇತ್ರ ಪುನರ್ ವಿಂಗಡಣೆಯೊಂದಿಗೆ ಮೀಸಲು(ಪರಿಶಿಷ್ಟ ಜಾತಿ) ಕ್ಷೇತ್ರವಾಗಿದೆ. ವೀರಶೈವ ಲಿಂಗಾಯತರ ಪ್ರಾಬಲ್ಯ ಹೊಂದಿದ ಕ್ಷೇತ್ರ ಘಟಾನುಘಟಿ ನಾಯಕರನ್ನು ಕಂಡರೂ, ಬಿ.ಡಿ. ಬಸವರಾಜ್ ಮಾತ್ರ ಸಚಿವ ಸ್ಥಾನ ದಕ್ಕಿಸಿಕೊಂಡರು. ಆದರೆ, ಕ್ಷೇತ್ರಕ್ಕೆ ಕಾಲಿಡುವಷ್ಟರಲ್ಲಿ ಅಧಿಕಾರ ವಂಚಿತವಾಗಿದ್ದು ಮಾತ್ರ ದುರ್ದೈವದ ಸಂಗತಿ. ಇನ್ನು ಬಿಜೆಪಿಯನ್ನು ರಾಜ್ಯದೆಲ್ಲೆಡೆ ಸಂಘಟಿಸಿ ಹೋರಾಟ ಮಾಡಿದ ದಿವಂಗತ ಬಿ.ಬಿ. ಶಿವಪ್ಪ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರೂ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ನಡೆಸಿದ ಎಲ್ಲ ಪ್ರಯತ್ನಗಳೂ ಕೈಕೊಟ್ಟವು.
ರಾಜಕೀಯ ಹಿನ್ನೆಲೆ
1952 ರಿಂದ ಈವರೆಗೆ (2018) ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಜೆ.ಡಿ. ಸೋಮಪ್ಪ (1978 ಮತ್ತು 1983), ಬಿಜೆಪಿಯಿಂದ ಬಿ.ಬಿ. ಶಿವಪ್ಪ(1994 ಮತ್ತು 99) ಹಾಗೂ ಜೆಡಿಎಸ್‌ನಿಂದ(2008, 2013 ಹಾಗೂ 2018) ಎಚ್.ಕೆ. ಕುಮಾರಸ್ವಾಮಿ(ಹಾಲಿ ಶಾಸಕ) ಸೇರಿ ಮೂವರಲ್ಲಿ ಇಬ್ಬರು ಅಭ್ಯರ್ಥಿಗಳು ಸತತ ಎರಡು ಬಾರಿ, ಒಬ್ಬರು ಮೂರು ಬಾರಿ ಆಯ್ಕೆಯಾಗಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಎಚ್.ಕೆ. ಕುಮಾರಸ್ವಾಮಿ ನಾಲ್ಕನೇ ಬಾರಿ ಚುನಾವಣೆ ಕಣಕ್ಕಿಳಿದಿದ್ದು ನಾಲ್ಕನೇ ಗೆಲುವಿನ ಸಾಧನೆಯ ಅದೃಷ್ಟ ಪರೀಕ್ಷೆಯ ಹಾದಿಯಲ್ಲಿದ್ದಾರೆ. ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಪ್ರಮುಖ ನಾಯಕ ಹಾಗೂ ಸಜ್ಜನ ರಾಜಕಾರಣಿ ಎನಿಸಿಕೊಂಡಿದ್ದ ದಿವಂಗತ ಬಿ.ಬಿ.ಶಿವಪ್ಪ ಅವರು ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದರು. ಸಚಿವ ಸ್ಥಾನಕ್ಕೇರಲು ಕೊನೆಗೂ ಸಾಧ್ಯವಾಗಲಿಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹಾಗೂ ಜನರ ಒತ್ತಡ ಇದ್ದರೂ ಇವರಿಗೆ ಅವಕಾಶ ಸಿಗದಿರುವುದು ಈ ಕ್ಷೇತ್ರದ ದೌರ್ಭಾಗ್ಯ.
ಬೇಲೂರು ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ಎಚ್.ಕೆ. ಕುಮಾರಸ್ವಾಮಿ ಅವರು ಸಚಿವ ಸ್ಥಾನಕ್ಕೇರಿದ್ದ ಅಭ್ಯರ್ಥಿಯಾಗಿದ್ದರೂ, ಸಕಲೇಶಪುರ-ಆಲೂರು ಮೀಸಲು ಕ್ಷೇತ್ರದಿಂದ ಆಯ್ಕೆಗೊಂಡ ನಂತರ ಈ ಸ್ಥಾನ ದೊರೆತಿಲ್ಲ. ಈ ಕ್ಷೇತ್ರಕ್ಕೆ(ಸಕಲೇಶಪುರ-ಬೇಲೂರು-ಆಲೂರು ಕ್ಷೇತ್ರ ಒಳಗೊಂಡಂತೆ) ಇದುವರೆಗೆ ನಡೆದಿರುವ ಒಟ್ಟು 14 ವಿಧಾನಸಭೆ ಚುನಾವಣೆಯಲ್ಲಿ ಇದುವರೆಗೆ ಒಮ್ಮೆಯೂ ಮಹಿಳಾ ಅಭ್ಯರ್ಥಿ ಕಣಕ್ಕಿಳಿಯದಿರುವುದು ವಿಶೇಷ. 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬೇಲೂರಿನ ಬಿ.ಎನ್.ಬೋರಣ್ಣಗೌಡ ಅವರು (ಬೇಲೂರು-ಸಕಲೇಶಪುರ-ಆಲೂರು ಕ್ಷೇತ್ರ) ಆಯ್ಕೆಯಾದರು.
1962ರಲ್ಲಿ(ಸಕಲೇಶಪುರ-ಆಲೂರು) ಆಲೂರು ತಾಲೂಕಿನ ದೊಡ್ಡಕಣಗಾಲ್ ಕೆ.ಪಿ.ಚಿಕ್ಕೇಗೌಡ ಅವರು ಆಯ್ಕೆಯಾದ ನಂತರ, ವೀರಶೈವ ಮತ್ತು ಒಕ್ಕಲಿಗರ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ 1972ರಿಂದ ಜೆ.ಡಿ.ಸೋಮಪ್ಪ, ಬಿ.ಡಿ.ಬಸವರಾಜು, ಬಿ.ಆರ್.ಗುರುದೇವ್, ಬಿ.ಬಿ.ಶಿವಪ್ಪ ಅವರನ್ನೊಳಗೊಂಡಂತೆ, 2004 ರವರೆಗೆ ವೀರಶೈವ ಜನಾಂಗದ ಅಭ್ಯರ್ಥಿಗಳು ಗೆಲುವು ಸಾಧಿಸುವುದರೊಂದಿಗೆ ಸುಮಾರು 32 ವರ್ಷ ಪ್ರಾಬಲ್ಯ ಸಾಧಿಸಿದ್ದರು.
ರೈತ ಸಂಘದ ಹೋರಾಟದ ಮುಂಚೂಣಿಯಲ್ಲಿದ್ದ ಎಚ್.ಎಂ. ವಿಶ್ವನಾಥ್ ಅವರು 1999 ರಲ್ಲಿ ಜೆಡಿಎಸ್ ನಿಂದ ಚುನಾವಣೆ ಕಣಕ್ಕಿಳಿದಿದ್ದರು. ಆದರೆ ಅಂದು ಸೋಲು ಕಂಡು 2004ರ ಚುನಾವಣೆಯಲ್ಲಿ ಮತ್ತೆ ಅಖಾಡಕ್ಕಿಳಿದು ಜನ ಮನ್ನಣೆ ಗಳಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಚಿಕ್ಕೇಗೌಡ ಅವರ ನಂತರ ಸುದೀರ್ಘ ಕಾಲ ವೀರಶೈವರ ಪ್ರಾಬಲ್ಯದಲ್ಲಿದ್ದ ಈ ಕ್ಷೇತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. 2008ರ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡ ನಂತರ, ಬೇಲೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಎಚ್.ಕೆ. ಕುಮಾರಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಮತ್ತೆ 2013 ರಲ್ಲಿ ಗೆಲುವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡರು. ಬಳಿಕ 2018 ರಲ್ಲಿ ಮೂರನೇ ಬಾರಿ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಈಗ 2023 ರಲ್ಲಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
2023ರಲ್ಲಿ ಹಣಾಹಣಿ
ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದು, ಮೀಸಲು ಕ್ಷೇತ್ರವಾದಾಗಿನಿಂದಲೂ ಜೆಡಿಎಸ್ ನ ಹಿರಿಯ ನಾಯಕ ಹೆಚ್.ಕೆ. ಕುಮಾರಸ್ವಾಮಿ ಕ್ಷೇತ್ರದ ಶಾಸಕರಾಗಿದ್ದಾರೆ. ಕಳೆದ ಬಾರಿ ಬಿಜೆಪಿಯ ನಾರ್ವೆ ಸೋಮಶೇಖರ್ ಹಾಗೂ ಕುಮಾರಸ್ವಾಮಿ ನಡುವೆ ಬಿಗ್ ಫೈಟ್ ಏರ್ಪಟ್ಟರೂ ಅಂತಿಮವಾಗಿ ಕುಮಾರಸ್ವಾಮಿ ಗೆದ್ದಿದ್ದರು. ಚುನಾವಣೆ ಮುಗಿದ ನಾಲ್ಕು ವರ್ಷ ನಾಪತ್ತೆಯಾಗಿದ್ದ ನಾರ್ವೇ ಸೋಮಶೇಖರ್ ಈಗ ಕ್ಷೇತ್ರಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಬಿಜೆಪಿಗೆ ಮುಳುವಾಗುವ ಸಾಧ್ಯತೆಯಿದೆ. ಇದೇ ಕಾರಣ, ಸೋಮಶೇಖರ್‌ಗೆ ಟಿಕೆಟ್ ತಪ್ಪುವ ಸಾಧ್ಯತೆ ಕೂಡಾ ಇದೆ. ಸಿಮೆಂಟ್ ಮಂಜುನಾಥ್ ಕೂಡಾ ಬಿಜೆಪಿಯಿಂದ ಪ್ರಯತ್ನ ಮಾಡುತ್ತಿದ್ದು, ಕಾಂಗ್ರೆಸ್‌ನಿಂದಲೂ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗೆ ಹುಡುಕಾಟ ನಡೆಸುತ್ತಿದೆ. ಕಾಂಗ್ರೆಸ್ ನಾಯಕಿ ಪುಷ್ಪಾ ಅಮರನಾಥ್ ಟಿಕೆಟ್ ಆಕಾಂಕ್ಷೆಯಲ್ಲಿದ್ದಾರೆ. ಹಾಲಿ ಶಾಸಕರು ಕಾಡಾನೆ ಸಮಸ್ಯೆ, ರಸ್ತೆ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವುದನ್ನು ಮತದಾರ ಗಂಭೀರವಾಗಿ ತೆಗೆದುಕೊಂಡರೆ, ಇದೇ ಕಾರಣಗಳು ಗೆಲುವಿನಲ್ಲಿ ವ್ಯತ್ಯಾಸ ಮಾಡುವುದರಲ್ಲಿ ಅನುಮಾನವಿಲ್ಲ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಎಚ್.ಕೆ. ಕುಮಾರಸ್ವಾಮಿ (ಜೆಡಿಎಸ್)
2. ಮುರಳಿ ಮೋಹನ್, ಪುಷ್ಪಾ ಅಮರನಾಥ್, ಡಿ.ಸಿ. ಸಣ್ಣಸ್ವಾಮಿ (ಕಾಂಗ್ರೆಸ್)
3. ನಾರ್ವೇ ಸೋಮಶೇಖರ್, ಸಿಮೆಂಟ್ ಮಂಜು (ಮಂಜು)
ಇದನ್ನೂ ಓದಿ | ಎಲೆಕ್ಷನ್ ಹವಾ | ಹೊಳೆನರಸೀಪುರ | ಎಚ್.ಡಿ. ರೇವಣ್ಣ ವಿರುದ್ಧ ಪಂಚೆ ಕಟ್ಟಿ ನಿಲ್ಲುವವರಿಗಾಗಿ ಹುಡುಕಾಟ ಜಾರಿಯಲ್ಲಿದೆ !