ಬೆಂಗಳೂರು: ರಾಜ್ಯಾದ್ಯಂತ ಪೊಲೀಸರು ಪಿಎಫ್‌ಐ ಕಾರ್ಯಕರ್ತರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯುತ್ತಿದ್ದಾರೆ.
ಈ ಕುರಿತು ಕಾಂಗ್ರೆಸ್, ಬಿಜೆಪಿ ಸೇರಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸರ್ಕಾರದ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಪಿ.ಎಫ್.ಐ ಕಾರ್ಯಕರ್ತರ ಮೇಲೆ ಪೊಲೀಸ್ ನಡೆಸಿರುವುದು ದಾಳಿಯಲ್ಲ. ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ತಹಸೀಲ್ದಾರರ ಮೂಲಕ ಕೈಗೊಂಡಿದ್ದಾರೆ. ಪೊಲೀಸರು ಹತ್ತು ಹಲವಾರು ಮಾಹಿತಿಯ ಆಧಾರದ ಮೇಲೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅದನ್ನೇ ಕರ್ನಾಟಕ ಹಾಗೂ ಎಲ್ಲಾ ರಾಜ್ಯಗಳ ಪೊಲೀಸರು ಮಾಡಿದ್ದಾರೆ. ಎಷ್ಟು ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸರ ಬಳಿ ಮಾಹಿತಿ ಪಡೆಯಲಾಗುವುದು.
ಯು.ಟಿ. ಖಾದರ್, ಕಾಂಗ್ರೆಸ್ ಶಾಸಕ
ಸಮಾಜದಲ್ಲಿ ಅಶಾಂತಿ ಮತ್ತು ದ್ವೇಷ ಸೃಷ್ಟಿಸಿದ್ರೆ ಕ್ರಮ ಆಗಬೇಕು. ಅಂತಹ ಯಾವುದೇ ಸಂಘಟನೆ ವಿರುದ್ದ ಕ್ರಮಕ್ಕೆ ಎಲ್ಲಾ ಧರ್ಮದ ಸಹಮತ ಇದೆ. ಕಾನೂನು ಕೈಗೆತ್ತಿಕೊಳ್ಳುವವರನ್ನು ಹದ್ದುಬಸ್ತಿನಲ್ಲಿಡುವುದು ಸರ್ಕಾರದ ಜವಾಬ್ದಾರಿ. ಶಾಂತಿ ಸೌಹಾರ್ದದ ವಾತಾವರಣ ಸರ್ಕಾರ ನಿರ್ಮಾಣ ಮಾಡಬೇಕು. ಯಾವುದೇ ತಾರತಮ್ಯ ಮಾಡದೇ ಸರ್ಕಾರ ಕ್ರಮ ತೆಗೆದುಕೊಳ್ಳಲಿ. ಎಲ್ಲರಿಗೂ ಒಂದೇ ರೀತಿಯ ನ್ಯಾಯ ಕೊಟ್ಟರೆ, ನಿರಪರಾಧಿಗಳಿಗೆ ತೊಂದರೆ ಆಗದಿದ್ದರೆ ಎಲ್ಲರೂ ಬೆಂಬಲಿಸುತ್ತಾರೆ.
ನಮ್ಮ ರಾಜ್ಯದಲ್ಲಿ ಧಾರ್ಮಿಕ ಗುರುಗಳು, ಉಲೇಮಾಗಳು ಈ ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ. ನಮ್ಮ ಧರ್ಮದ ಜತೆ ಎಲ್ಲಾ ಧರ್ಮದವರ ಕುರಿತೂ ನ್ಯಾಯಯುತ ತನಿಖೆಗೆ ಬೆಂಬಲ ಕೊಡಲಾಗುತ್ತದೆ.ಯಾವ ಸಂಸ್ಥೆ ಬ್ಯಾನ್ ಮಾಡಬೇಕು ಎನ್ನುವುದು ತನಿಖೆಯಲ್ಲಿ ಗೊತ್ತಾಗುತ್ತದೆ. ಆದರೆ ಎಲ್ಲ ಸಂಘಟನೆಗಳಿಗೂ ಸಮಾನತೆಯ ಕಾನೂನು ತರಬೇಕು. ದ್ವೇಷಾಧಾರಿತ ಮತ್ತು ಗಲಭೆ ಸೃಷ್ಟಿಸುವ ಕೆಲಸ ಆಗಿದ್ದರೆ ಎಲ್ಲ ಸಂಘಟನೆಗಳಿಗೂ ಸಮಾನ ಕಾನೂನನು ಜಾರಿಯಾಗಲಿ.
ಆರಗ ಜ್ಞಾನೇಂದ್ರ, ಗೃಹಸಚಿವ
ಮುಂಜಾನೆಯಿಂದ ರಾಜ್ಯಾದ್ಯಂತ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಯ ಪದಾಧಿಕಾರಿಗಳು ಸೇರಿ ಹಲವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದು ತಹಶೀಲ್ದಾರ್ ಮುಂದೆ ಹಾಜರುಪಡಿಸಿದ್ದಾರೆ. ಎನ್‌ಐಎ ದಾಳಿ ಹಾಗೂ ಉಗ್ರರ ಮನೆ ಮೇಲೆ ಪೊಲೀಸರ ದಾಳಿ ವೇಳೆ ಇವರು ಆತಂಕ ಉಂಟು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುಂದೆಯೂ ಶಾಂತಿಭಂಗ ಉಂಟುಮಾಡಬಹುದು ಎಂಬ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ.
ನಳಿನ್ ಕುಮಾರ್ ಕಟೀಲ್, ರಾಝ್ಯ ಬಿಜೆಪಿ ಅಧ್ಯಕ್ಷ
PFI, SDPI ಬೆಳೆಯಲು ಕಾರಣವೇ ಸಿದ್ದರಾಮಯ್ಯ. ಸಿದ್ದರಾಮಯ್ಯರಿಂದಲೇ ಪರಿಸ್ಥಿತಿ ಗಂಭೀರವಾಗಿದೆ. ಸಿದ್ದರಾಮಯ್ಯ ಅವಧಿಯಲ್ಲೇ ದೇಶ ವಿರೋಧಿ ಸಂಘಟನೆ ಬೆಳೆದಿವೆ. ನಮ ಸರ್ಕಾರ ಈಗ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. ದೇಶಾದ್ಯಂತ NIA ದಾಳಿ ನಡೆಸಿದೆ, ಅತಿ ಹೆಚ್ಚು ನಮ್ಮ ರಾಜ್ಯದವರನ್ನೇ ಬಂಧಿಸಿದ್ದಾರೆ.
PFI ನಿಷೇಧಕ್ಕೆ ದೇಶಭಕ್ತರ ಬೇಡಿಕೆ ಇದೆ. ಅದಕ್ಕೆ ಸಾಕ್ಷ್ಯಾಧಾರಗಳ ಸಂಗ್ರಹ ನಡೆಯುತ್ತಿದೆ. ಕಟ್ಟುನಿಟ್ಟಿನ ಕ್ರಮದ ಜತೆಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿದೆ. ಎಲ್ಲ ದಾಳಿಗಳನ್ನೂ ರಾಜಕೀಯ ಪ್ರೇರಿತ ಎಂದು ಕೆಲವರು ಹೇಳುತ್ತಾರೆ. ಆದರೆ ಭಯೋತ್ಪಾದನೆಗೆ ರಾಜಕೀಯ ಪ್ರೇರಣೆ ನೀಡಿದವರು ಯಾರು?
ಶಿವರಾಮ್ ಹೆಬ್ಬಾರ್, ಕಾರ್ಮಿಕ ಸಚಿವ
ಪಿಎಫ್‌ಐ ಸಂಘಟನೆ ಮಾತ್ರವಲ್ಲ, ದೇಶದ್ರೋಹಿ ಸಂಘಟನೆಗಳು ಯಾವುದೇ ಇರಲಿ ಅವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸುವುದು ಸರ್ಕಾರದ ಕರ್ತವ್ಯ. ಕಾಂಗ್ರೆಸ್‌ನವರಿಗೆ ಒಂದು ಕಡೆ ಜೋಡೋ ಯಾತ್ರೆ ಶುರುವಾಗಿದೆ ಮತ್ತೊಂದು ಕಡೆ ತೋಡೋ ಯಾತ್ರೆ ಶುರುವಾಗಿದೆ. ಕಾಂಗ್ರೆಸ್‌ನವರಿಗೆ ನಡುಕ ಆರಂಭವಾಗಿದೆ. ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪನವರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಗಟ್ಟಿಯಾಗಿ ಎದುರಿಸುತ್ತೇವೆ. 2023ಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ.
ಬಿ.ಸಿ. ಪಾಟೀಲ್, ಕೃಷಿ ಸಚಿವ
ಮುಂಜಾಗ್ರತಾ ಕ್ರಮವಾಗಿ ಪಿಎಫ್‌ಐ ಸಂಘಟಕರನ್ನು ಬಂಧನ ಮಾಡುತ್ತಿದ್ದಾರೆ. ಬ್ಯಾನ್ ಮಾಡುವ ವಿಚಾರವನ್ನು ಮುಂದೆ ಸರ್ಕಾರ ತೀರ್ಮಾನ ಮಾಡುತ್ತದೆ. ಇಲ್ಲಿ ಲಾಭ ನಷ್ಟದ ಪ್ರಶ್ನೆಯಿಲ್ಲ. ದೇಶವನ್ನು ಉಳಿಸುವಂತಹದ್ದು, ಶಾಂತಿ ಕಾಪಾಡುವ ವ್ಯವಸ್ಥೆ ಮುಖ್ಯ.
ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ
ಸಿಮಿಯ ಮತ್ತೊಂದು ಪ್ರತಿರೂಪ ಪಿಎಫ್ಐ. ಪಿಎಫ್ಐ, ಎಸ್‌ಡಿಪಿಐ ಬ್ಯಾನ್ ಮಾಡಬೇಕು. ಇವೆರಡೂ ದೇಶ ವಿರೋಧಿ ಚಟುವಟಿಕೆ ಮಾಡುತ್ತವೆ. ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾರ್ವಜನಿಕ ಪ್ರದೇಶದಲ್ಲಿ ಬಾಂಬ್ ಹಾಕುವಂತಹ ಪ್ರಯತ್ನ ಮಾಡಿದ್ದರು. ಅನೇಕ ಗಂಭೀರ ಆರೋಪಗಳು ದೇಶದಲ್ಲಿ ಸಾಕಷ್ಟು ಚರ್ಚೆಗೊಳಪಟ್ಪಿದ್ದವು. ಕೇಂದ್ರ ಸರ್ಕಾರ ಅತ್ಯಂತ ದೃಢ ನಿಲುವು ತೆಗೆದುಕೊಂಡು ಇಡೀ ದೇಶದ ಇತಿಹಾಸದಲ್ಲಿ ಒಂದೇ ರಾತ್ರಿ 200 ಕಡೆಗಳಲ್ಲಿ ದಾಳಿ ಮಾಡಿದಾಗ ವಿದೇಶಿ ಹಣದ ದಾಖಲೆ ಸಿಕ್ಕಿವೆ.
ಎರಡೂ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ದೇಶಭಕ್ತರ ಆಗ್ರಹವಿದೆ. ಪ್ರಧಾನಿ, ಗೃಹಮಂತ್ರಿಗಳು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಿಶ್ಚಿತವಾಗಿ ಶೀಘ್ರದಲ್ಲೇ ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳು ಬ್ಯಾನ್ ಆಗುತ್ತವೆ ಎನ್ನುವ ವಿಶ್ವಾಸವಿದೆ. ಸಿಮಿ ಸಂಘಟನೆಯ ದೇಶ ವಿರೋಧಿ ಚಟುವಟಿಕೆ ಮೊದಲು ಆರಂಭವಾಗಿದ್ದೇ ವಿಜಯಪುರದಲ್ಲಿ. ಅದು ಇಡೀ ದೇಶದಲ್ಲಿ ಬೆಳೆದು ಸಿಮಿ ಆಗಿತ್ತು. ನಂತರ ಇದು ಪಿಎಫ್ಐ ಆಗಿ ಪರಿವರ್ತನೆ ಆಗಿದೆ. ಯಾರೇ ಇದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.
ಕೆ. ಗೋಪಾಲಯ್ಯ, ಅಬಕಾರಿ ಸಚಿವ
ದೇಶದ ವಿದ್ವಂಸಕ ಕೃತ್ಯಗಳಲ್ಲಿ ಯಾರು ಭಾಗಿಯಾಗಿದ್ದಾರೆಯೋ ಅಂಥವರ ವಿರುದ್ಧ ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ತನಿಖೆ ಮಾಡುತ್ತಿವೆ. ದೇಶದಲ್ಲಿ ಯಾವುದೇ ಕೃತ್ಯಗಳು ಆಗಬಾರದು ಎಂದು ಹೀಗೆ ಮಾಡಿದ್ದಾರೆ. ಭಾಗಿಯಾಘಿರುವವೆ ಮೇಲೆ ಕಠಿಣವಾದ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತದೆ. ಸಂಘಟನೆಗಳ ನಿಷೇಧದ ಕುರಿತು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಇದನ್ನೂ ಓದಿ | NIA Raid | ಮುಂಜಾನೆಯಿಂದಲೇ ಎನ್‌ಐಎ ದಾಳಿ; ಬೆಚ್ಚಿ ಬಿದ್ದ ಪಿಎಫ್‌ಐ, ವಿಚಾರಣೆ ತೀವ್ರ