Site icon Vistara News

Prajwal Revanna Case: ಹೈಕೋರ್ಟ್‌ಗೆ ಮತ್ತೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ಭವಾನಿ ರೇವಣ್ಣ

Prajwal Revanna Case

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿ ಕೆ.ಆರ್.ನಗರ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ನಲ್ಲಿ ಬಂಧನ ಭೀತಿಯಲ್ಲಿರುವ ಭವಾನಿ ರೇವಣ್ಣ, ಮತ್ತೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಭವಾನಿ ರೇವಣ್ಣ ಪರ ವಕೀಲ ಗಿರೀಶ್ ಕುಮಾರ್ ಬಿ.ಎಂ. ಅರ್ಜ ಸಲ್ಲಿಸಿದ್ದಾರೆ. ಸದ್ಯ ಕೇಸ್ ಸ್ವೀಕರಿಸಿ ಕೋರ್ಟ್‌ ಎಫ್ಆರ್ ನಂಬರ್ ನೀಡಿದೆ. ಇನ್ನು ಕೇಸ್ ನಂಬರ್ ನೀಡಿದ ಬಳಿಕ ಪೀಠಕ್ಕೆ ಅರ್ಜಿ ರವಾನೆಯಾಗುತ್ತದೆ. ಸೋಮವಾರ ಬೆಳಗ್ಗೆ 11:30ಕ್ಕೆ ಭವಾನಿ ರೇವಣ್ಣ ಪರ ಅರ್ಜಿ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ | Food Poisoning : ಮೈಸೂರಲ್ಲಿ ಗೃಹ ಪ್ರವೇಶದ ಊಟ ತಿಂದ ವೃದ್ಧೆ ಸಾವು; 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಭವಾನಿ ರೇವಣ್ಣ ಕಣ್ಣಾಮುಚ್ಚಾಲೆ ಆಟ

ಪ್ರಜ್ವಲ್ ರೇವಣ್ಣ (Prajwal Revanna) ಸೆಕ್ಸ್ ಸ್ಕ್ಯಾಂಡಲ್‌ಗೆ ಸಂಬಂಧಿಸಿ ಮಹಿಳೆಯೊಬ್ಬಳ ಅಪಹರಣಕ್ಕೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಭವಾನಿ ರೇವಣ್ಣ ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಭವಾನಿಯನ್ನು (Bhavani Revanna) ವಶಕ್ಕೆ ಪಡೆಯಲು ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಅವರ ವಿರುದ್ಧ ಅರೆಸ್ಟ್ ವಾರಂಟ್ ಕೂಡ ಜಾರಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿ ನಿಯಮದ 41a ಅಡಿ ಭವಾನಿ ರೇವಣ್ಣಗೆ ಎಸ್ ಐ ಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಪ್ರಜ್ವಲ್‌ಗೂ 41a ಅಡಿ ನೊಟೀಸ್ ನೀಡಿದ್ದ ಎಸ್ಐಟಿ ಆ ಬಳಿಕ ಬಂಧಿಸಿತ್ತು. ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಈಗ ಭವಾನಿ ರೇವಣ್ಣಗೂ ಅರೆಸ್ಟ್ ವಾರೆಂಟ್ ಜಾರಿ ಮಾಡುವ ಸಾಧ್ಯತೆ ಇದೆ. ತಾವೇ ಎಸ್ ಐ ಟಿ ಕಚೇರಿಗೆ ಬರುವುದಾಗಿ ಹೇಳಿದ್ದ ಭವಾನಿ ರೇವಣ್ಣ ಆ ಬಳಿಕ ಬರದೇ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಭವಾನಿ ರೇವಣ್ಣ ವಿರುದ್ಧ ಜನಾಕ್ರೋಶವೂ ಹೆಚ್ಚುತ್ತಿದೆ. ಭವಾನಿ ರೇವಣ್ಣಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಮೂರು ಜಿಲ್ಲೆ, ನಾಲ್ಕು ತಂಡ, ಸತತ ಹುಡುಕಾಟ

ಪೊಲೀಸರ ನಾಲ್ಕು ವಿಶೇಷ ತಂಡಗಳಿಂದ ಭವಾನಿ ರೇವಣ್ಣಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬೆಂಗಳೂರು, ಮೈಸೂರು, ಹಾಸನ ಈ ಮೂರು ಜಿಲ್ಲೆಗಳಲ್ಲಿ ಭವಾನಿ ರೇವಣ್ಣಗಾಗಿ ಮುಖ್ಯವಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಮೂರು ಜಿಲ್ಲೆಗಳಲ್ಲಿ ಮೂರು ಪೊಲೀಸ್ ತಂಡಗಳು ಬೀಡುಬಿಟ್ಟಿವೆ. ನಾಲ್ಕನೇ ಟೆಕ್ನಿಕಲ್ ತಂಡದಿಂದಲೂ ಭವಾನಿ ರೇವಣ್ಣ ಬಗ್ಗೆ ಟ್ರ್ಯಾಕಿಂಗ್ ನಡೆಯುತ್ತಿದೆ. ಈ ತಾಂತ್ರಿಕ ತಂಡ ಭವಾನಿ ರೇವಣ್ಣ ಅವರ ಮೊಬೈಲ್ ಟ್ರ್ಯಾಕ್ ಮಾಡುತ್ತಿದೆ. ಟವರ್ ಡಂಪ್ ಲೊಕೇಷನ್, ಸಿಡಿಆರ್ ಪರಿಶೀಲನೆ ನಡೆಸುತ್ತಿದೆ.

ಎಲ್ಲವೂ ಗೊತ್ತಿದ್ದೂ ಕಣ್ಣಾ ಮುಚ್ಚಾಲೆ ಆಡ್ತಿದ್ದಾರಾ ಭವಾನಿ ರೇವಣ್ಣ?

ತನಿಖೆಗೆ ಸಹಕರಿಸ್ತೀವಿ, ನೊಟೀಸ್ ಕೊಟ್ರೆ ವಿಚಾರಣೆಗೆ ಹಾಜರಾಗ್ತೀವಿ ಎಂದಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣ ಪತ್ನಿ ಭವಾನಿ ಈಗ ಕೋರ್ಟ್ ನಲ್ಲಿ ಜಾಮೀನು ಅರ್ಜಿ ತಿರಸ್ಕಾರ ಆಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ. ಅವರ ಮನೆಗೆ ಹೋಗಿ ಭವಾನಿ ರೇವಣ್ಣರನ್ನ ವಿಚಾರಣೆ ‌ನಡೆಸಲು ಎಸ್ ಐ ಟಿ ಮುಂದಾಗಿತ್ತು. ಆದರೆ ಮನೆಯಿಂದ ಹೊರಬಂದು ಅಜ್ಞಾತ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ. ಎಸ್ ಐ ಟಿ ನೊಟೀಸ್ ಗೆ ಉತ್ತರವನ್ನೂ ಕೊಟ್ಟಿಲ್ಲ‌ ಸಂಬಂಧಿಕರೊಬ್ಬರ ಮನೆಯಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆ ಇದೆ.

ಇದನ್ನೂ ಓದಿ | Prajwal Revanna Case: ಇಂದು ರಹಸ್ಯವಾಗಿ ಪುರುಷತ್ವ ಪರೀಕ್ಷೆ, ನಾಳೆ ಎಲೆಕ್ಷನ್‌ ರಿಸಲ್ಟ್:‌ ಪ್ರಜ್ವಲ್‌ಗೆ ಡಬಲ್ ಟೆ‌ನ್ಷನ್!‌

ಯಾವ ಕ್ಷಣದಲ್ಲಾದ್ರೂ ಭವಾನಿ ರೇವಣ್ಣ ವಶ

ಭವಾನಿ ರೇವಣ್ಣ ಎಲ್ಲಿದ್ದಾರೆ ಎಂಬ ಮಾಹಿತಿ ಕಲೆ‌ ಹಾಕುತ್ತಿರುವ ಎಸ್ ಐ ಟಿ ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಅವರನ್ನು ಬಂಧಿಸಲು ಇನ್ಸ್ಪೆಕ್ಟರ್ ಹೇಮಂತ್ ಕುಮಾರ್ ತಂಡ ಸಜ್ಜಾಗಿದೆ.

Exit mobile version