ಬೆಂಗಳೂರು: ಹಾಸನ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ (Prajwal Revanna Case) ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್ ಸಿಕ್ಕಿದೆ. ತಮ್ಮ ಮೇಲೆ ಯಾವುದೇ ಆರೋಪವಿಲ್ಲದಿದ್ದರೂ ಕೇಸ್ ದಾಖಲಿಸಲಾಗಿದೆ ಎಂದು ಎಫ್‌ಐಆರ್ ಪ್ರಶ್ನಿಸಿ ಪ್ರೀತಂ ಗೌಡ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಕೋರ್ಟ್, ಪ್ರೀತಂ ಗೌಡರನ್ನು ಬಂಧಿಸದೆ, ತನಿಖೆ ಮುಂದುವರಿಸಲು ಎಸ್ಐಟಿಗೆ ಸೂಚನೆ ನೀಡಿದೆ.
ಅಶ್ಲೀಲ ವಿಡಿಯೊ ಇರುವ ಪೆನ್ಡ್ರೈವ್ ಹಂಚಿಕೆ ಆರೋಪದಲ್ಲಿ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ನಗರದ ಸಿಐಡಿ ಸೈಬರ್ ಠಾಣೆಯಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಕಿರಣ್, ಶರತ್ ಹಾಗೂ ಪ್ರೀತಂ ಗೌಡ ವಿರುದ್ಧ ಐಪಿಸಿ ಸೆಕ್ಷನ್ 354(ಎ), 354 (ಡಿ), 354 ಬಿ, 506 ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಎಫ್‌ಐಆರ್ ಪ್ರಶ್ನಿಸಿ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಮಾಜಿ ಶಾಸಕ ಪ್ರೀತಂ ಗೌಡ ರಿಟ್ ಅರ್ಜಿ ಸಲ್ಲಿಸಿದ್ದರು. ಯಾವುದೇ ಆರೋಪವಿಲ್ಲದಿದ್ದರೂ ರಾಜಕೀಯ ದುರುದ್ದೇಶದಿಂದ ಎಫ್ಐಆರ್ ದಾಖಲಿಸಲಾಗಿದೆ. ಜನ ಮಾತನಾಡುತ್ತಿದ್ದಾರೆಂಬ ಆಧಾರದ ಮೇಲೆ ಕೇಸ್ ಹಾಕಿದ್ದಾರೆ ಎಂದು ಪ್ರೀತಮ್ ಗೌಡ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು.
ಇದಕ್ಕೆ ಎಸ್‌ಪಿಪಿ ರವಿವರ್ಮ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಆರೋಪಿ ವಿರುದ್ಧ ಸಂತ್ರಸ್ತೆಯ ವಿಡಿಯೊ ಹಂಚಿದ ಗಂಭೀರ ಆರೋಪವಿದೆ. ಹೀಗಾಗಿ ಮಧ್ಯಂತರ ಆದೇಶ ನೀಡದಂತೆ ಮನವಿ ಮಾಡಿದರು. ಈ ವೇಳೆ ಪ್ರೀತಮ್ ಗೌಡ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಮಾತನಾಡಿ, ಜನ ಮಾತನಾಡಿಕೊಳ್ಳುತ್ತಿರುವ ಕಾರಣಕ್ಕೆ ದೂರು ನೀಡಿದ್ದಾರೆ. ಸರ್ಕಾರದವರೇ 3 ಲಕ್ಷ ಪೆನ್ ಡ್ರೈವ್ ಹಂಚಿದ್ದಾರೆಂದು ಜನ ಮಾತನಾಡುತ್ತಿದ್ದಾರೆ. ಹಾಗಿದ್ದರೆ ಸರ್ಕಾರದವರ ಮೇಲೂ ಎಫ್ಐಆರ್ ಮಾಡುತ್ತಾರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Road Accident : ಅಂತ್ಯಸಂಸ್ಕಾರ ಮುಗಿಸಿ ಬರುತ್ತಿದ್ದ ದಂಪತಿ ಮೇಲೆ ಮುರಿದು ಬಿದ್ದ ಬೃಹತ್ ಮರ!
ವಾದ-ಪ್ರತಿವಾದ ಆಲಿಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರು, ವಿಡಿಯೊ ಹಂಚುವುದರಿಂದ ಮಹಿಳೆಯ ಗೌರವಕ್ಕೆ ಹಾನಿಯಾಗುತ್ತದೆ. ಇದು ಗಂಭೀರ ಅಪರಾಧವಾಗಿದೆ. ಆದರೆ, ಪ್ರಕರಣದಲ್ಲಿ ಮಾಜಿ ಶಾಸಕ ಪ್ರೀತಮ್ ಗೌಡರನ್ನು ಎಸ್‌ಐಟಿ ಬಂಧಿಸದೇ, ತನಿಖೆ ಮುಂದುವರಿಸಬೇಕು. ಅಲ್ಲದೇ ವಿಚಾರಣೆಗೆ ಸಹಕರಿಸಲು ಅರ್ಜಿದಾರ ಪ್ರೀತಂ ಗೌಡಗೆ ಸೂಚಿಸಿದ್ದಾರೆ.