Site icon Vistara News

Praveen Nettarru: ಗೃಹ ಸಚಿವರ ಮೇಲೆ ಮಾತ್ರವಲ್ಲ ಇಡೀ ರಾಜ್ಯ ಬಿಜೆಪಿ ಮೇಲೆ ಬೇಸರವಿದೆ ಎಂದ ಸಿ.ಟಿ. ರವಿ

CT RAVI

ಬೆಂಗಳೂರು: ಬಿಜೆಪಿ ಕಾರ್ಯಕರ್ತರಿಗೆ ಕೇವಲ ಗೃಹ ಸಚಿವರ ಮೇಲೆ ಮಾತ್ರವಲ್ಲ, ಇಡೀ ರಾಜ್ಯದ ಬಿಜೆಪಿ ವ್ಯವಸ್ಥೆ ಮೇಲೆ ಬೇಸರವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಅವರು, ʻʻಹಿಂದುತ್ವದ ವಿಚಾರದಲ್ಲಿ ರಾಜಿ ಇಲ್ಲ. ಬಿಜೆಪಿ ಮಾತ್ರ ಹಿಂದುತ್ವ ಮತ್ತು ಹಿಂದೂಗಳನ್ನು ರಕ್ಷಣೆ ಮಾಡಲು ಸಾಧ್ಯʼʼ ಎಂದು ಹೇಳಿದರು.

ʻʻನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅಂಥವರನ್ನು ಕೊಟ್ಟಿದ್ದು ಬಿಜೆಪಿ, ಕಾಂಗ್ರೆಸ್‌ ಅಥವಾ ಇತರ ಪಕ್ಷಗಳಲ್ಲ. ರಾಜ್ಯದಲ್ಲೂ ಕೆಲವು ವ್ಯವಸ್ಥೆ ಬದಲಾಗಬೇಕಾಗಿದೆ.. ಅದನ್ನು ಬಿಜೆಪಿ ಮಾಡುತ್ತದೆʼʼ ಎಂದು ಹೇಳಿದರು ಸಿ.ಟಿ ರವಿ.

ಸಮೂಹ ಸನ್ನಿಗೆ ಒಳಗಾಗಬೇಡಿ
ʻʻನಮ್ಮ ಕಾರ್ಯಕರ್ತರು ಬೇಸರದಲ್ಲಿರುವುದು ನಿಜ. ಅವರನ್ನು ಸಮಾಧಾನ ಮಾಡುತ್ತೇವೆ. ನಾವು ಬಿಜೆಪಿಯನ್ನೇ ನಂಬೇಕು. ಕಾರ್ಯಕರ್ತರು ಬಿಜೆಪಿಯನ್ನು ನಂಬದೆ ಕಾಂಗ್ರೆಸ್‌ನ್ನು ನಂಬಲು ಸಾಧ್ಯವೇ? ಹೀಗಾಗಿ ಸಮೂಹ ಸನ್ನಿಗೆ ಒಳಗಾಗಬೇಡಿ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆʼʼ ಎಂದು ಸಿ.ಟಿ. ರವಿ ಹೇಳಿದರು.

ʻʻಸಿದ್ದರಾಮಯ್ಯ ಅವರು ಕೇಸರಿ ಕಂಡರೆ ಓಡುತ್ತಾರೆ. ಅವರ ಹೇಳಿಕೆಯನ್ನು ಗಮನಿಸಿದ್ದೀರಾ? ನಾವು ಗೋ ಹತ್ಯೆ ನಿಷೇಧ ಅಂದ್ರೆ, ಗೋ ಹತ್ಯೆಗೆ ಅವಕಾಶ ಅಂದ್ರು. ಈ ರೀತಿ‌ ಹೇಳುವವರು ಅಧಿಕಾರಕ್ಕೆ ಬರಬೇಕಾ? ಕೇಸರಿಯೇ ಜೀವನ ಅನ್ನೋರು ಅಧಿಕಾರಕ್ಕೆ ಬರಬೇಕ ಎನ್ನುವುದನ್ನು ಕಾರ್ಯಕರ್ತರು ಯೋಚಿಸಬೇಕುʼʼ ಎಂದು ಸಿ.ಟಿ. ರವಿ ಕಿವಿ ಮಾತು ಹೇಳಿದರು.

ವಿರೋಧಿಗಳಿಗೆ ಅವಕಾಶ ನೀಡಬೇಡಿ
ʻʻಆವೇಶದ ಭರದಲ್ಲಿ ಸಮೂಹ ಸನ್ನಿ ಪ್ರದರ್ಶಿಸಿದರೆ ಹಿಂದುತ್ವದ ವಿರೋಧಿಗಳಿಗೆ ಪ್ಲಸ್ ಆಗಲಿದೆ. ಅವರಿಗೆ ಬೇಕಾಗಿರುವುದು ಕೂಡಾ ಅದೇ. ಅದಕ್ಕೆ ಅವಕಾಶ ನೀಡಬೇಡಿʼʼ ಎಂದು ಅವರು ಮನವಿ ಮಾಡಿದರು.

ʻʻನಾವು ಈಗ ಅಧಿಕಾರಕ್ಕೆ ಬಂದಿರಬಹುದು. ಆದರೆ, ನಾವು ಕೂಡಾ ಹಿಂದೆ ಬೀದಿಯಲ್ಲೇ ಹೋರಾಟ ಮಾಡಿಯೇ ಬಂದಿದ್ದೇವೆ. ಗೋಲಿಬಾರ್‌ ಆದಾಗ ನಾನು ಬದುಕಿ ಬಂದಿದ್ದೇನೆ. ಇಸ್ಲಾಂ ಭಯೋತ್ಪಾದನೆಯನ್ನು ಸಮಾಜ ಒಗ್ಗಟ್ಟಾಗಿ ಎದುರಿಸಬೇಕುʼʼ ಎಂದ ಸಿ.ಟಿ. ರವಿ, ಬುಲ್ಡೋಜರ್‌ ಹರಿಸಬೇಕು ಅಂತ ನಮಗೂ ಬಯಕೆ ಇದೆ. ನಿಮ್ಮ ಭಾವನೆಗೆ ನಮ್ಮ ವಿರೋಧವೇನೂ ಇಲ್ಲ. ನಾವೂ ಪರವಾಗಿಯೇ ಇದ್ದೇವೆ. ನಮ್ಮ ಮೇಲೆ ವಿಶ್ವಾಸವಿಡಿ. ಸಿಎಂ ಜತೆ ಚರ್ಚೆ ಮಾಡಿದ್ದೇವೆʼʼ ಎಂದರು.

ನಾವು ಹೆದರಿದರೆ ಹೆದರಿಸುತ್ತಾರೆ
ʻʻನಾವು ಹೆದರಿದರೆ ಅವರು ನಮ್ಮನ್ನು ಹೆದರಿಸುತ್ತಾರೆ. ಹೆದರುತ್ತಿರೋದಕ್ಕೇ ಅವರು ನಮ್ಮನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ. ಹೀಗಾಗಿ ಸರಕಾರ ಪ್ರೋಆಕ್ಟಿವ್‌ ಆಗಿ ಬಂಧಿಸಲು ಮುಂದಾಗಿದೆ. ಈಗಾಗಲೇ ೧೫ ಮಂದಿಯನ್ನು ವಶಕ್ಕೆ ಪಡೆಯಲಾಗಿದೆʼʼ ಎಂದರು ಸಿ.ಟಿ. ರವಿ.
Praveen nettaru | ತಾಲಿಬಾನ್‌ ಮಾದರಿಯಲ್ಲಿ ನಾವು ಗಲ್ಲಿಗೇರಿಸಲಾಗದು: ಗೃಹ ಸಚಿವ ಆರಗ ಹೇಳಿಕೆ

Exit mobile version