ಮಂಗಳೂರು: ಬೆಳ್ಳಾರೆಯಲ್ಲಿ ಹತ್ಯೆಯಾಗಿರುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಂಧನಕ್ಕೊಳಗಾಗಿರುವ ಶಫೀಕ್ ಮತ್ತು ಝಾಕೀರ್ ತಪ್ಪೊಪ್ಪಿಕೊಂಡಿದ್ದು, ಈ ಹಿನ್ನೆಲೆಯಲ್ಲಿಯೇ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಪ್ರವೀಣ್ ಕೊಲೆ ಪ್ರಕರಣದ ತನಿಖೆಗೆ ಐದು ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡಗಳು ಕೇರಳ ಸೇರಿದಂತೆ ಇನ್ನಿತರ ಕಡೆ ಮಾಹಿತಿಯನ್ನು ಕಲೆ ಹಾಕುತ್ತಿದೆ. ಅಲ್ಲದೆ, ಮೂರು ಆಯಾಮದಲ್ಲಿ ತನಿಖೆಯನ್ನು ಕೈಗೊಳ್ಳಲಾಗಿದ್ದು, ಈಗಾಗಲೇ 30ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಈ ವೇಳೆ ಶಫೀಕ್ ಹಾಗೂ ಝಾಕೀರ್ ಎಂಬಿಬ್ಬರ ಮೇಲೆ ತೀವ್ರ ಅನುಮಾನ ಮೂಡಿದ್ದರಿಂದ ಅವರನ್ನು ತೀವ್ರ ವಿಚಾರಣೆ ನಡೆಸಲಾಗಿದೆ. ಆಗ ಅವರು ಈ ವೇಳೆ ಕೃತ್ಯವನ್ನು ಒಪ್ಪಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಝಾಕೀರ್ ಎಸ್‌ಡಿಪಿಐ ಕಾರ್ಯಕರ್ತ
ಬಂಧಿತ ಝಾಕೀರ್ ಎಸ್‌ಡಿಪಿಐ ಕಾರ್ಯಕರ್ತನಾಗಿದ್ದಾನೆ ಎನ್ನಲಾಗಿದೆ. ಇನ್ನು ಶಫೀಕ್ ಕೆಲಸಕ್ಕಾಗಿ ಅಲೆದಾಡುತ್ತಿದ್ದ ಎಂದು ಹೇಳಲಾಗಿತ್ತಾದರೂ ಆತ ಗುತ್ತಿಗಾರಿನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.
ಪ್ರವೀಣ್ ಅಂಗಡಿಯಲ್ಲಿ ಶಫೀಕ್ ತಂದೆ ಕೆಲಸ
ಶಫೀಕ್ ತಂದೆ ಈ ಹಿಂದೆ ಪ್ರವೀಣ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೋಳಿ ಅಂಗಡಿಯನ್ನು ಇಟ್ಟುಕೊಂಡಿದ್ದ ಪ್ರವೀಣ್ ನೆಟ್ಟಾರು ಅವರಿಗೆ ಶಫೀಕ್ ತಂದೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಶಫೀಕ್ ಸಹ ಪ್ರವೀಣ್ ಜತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ ಎಂದು ಹೇಳಲಾಗಿದೆ.
ಬುಧವಾರ ಬೆಳ್ಳಾರೆಯಲ್ಲಿದ್ದ ಶಫೀಕ್
ಬುಧವಾರ (ಜುಲೈ 27) ಮಧ್ಯಾಹ್ನದವರೆಗೂ ಬೆಳ್ಳಾರೆಯಲ್ಲಿಯೇ ಶಫೀಕ್ ಇದ್ದ. ಅಲ್ಲದೆ, ಪ್ರತಿಭಟನೆಯನ್ನು ದೂರದ ಕಟ್ಟಡದಿಂದ ವೀಕ್ಷಿಸಿದ್ದ ಎಂದು ಹೇಳಲಾಗಿದೆ. ನಿನ್ನೆ ಸಂಜೆ ಆತನನ್ನು ವಶಕ್ಕೆ ಪಡೆದಿದ್ದ ಪೊಲೀಸರ ತಂಡ ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ.
ಶುಕ್ರವಾರ ನ್ಯಾಯಾಲಯಕ್ಕೆ ಆರೋಪಿಗಳು
ಶುಕ್ರವಾರ (ಜು.29) ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಬಳಿಕ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯುವ ಸಾಧ್ಯತೆ ಇದೆ.