ಮಂಗಳೂರು: ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ 27 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರೆಲ್ಲರನ್ನೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಹತ್ಯೆ ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ವಶಕ್ಕೆ ಪಡೆದವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಅನುಮಾನ ಬಂದವರ ಮೇಲೆ ತೀವ್ರ ವಿಚಾರಣೆ ಕೈಗೊಳ್ಳುತ್ತಿದ್ದಾರೆ. ಆದರೆ, ಇದೇ ವೇಳೆ ವಶಕ್ಕೆ ಪಡೆದವರ ಕುಟುಂಬಸ್ಥರು ಮಂಗಳೂರು ಸಿಸಿಬಿ ಠಾಣೆ ಎದುರು ಜಮಾಯಿಸುತ್ತಿದ್ದಾರೆ.
ಮಂಗಳೂರು ಸಿಸಿಬಿ ಠಾಣೆ ಎದುರು ಹಲವಾರು ಮಂದಿ ಜಮಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲರನ್ನೂ ವಾಪಸ್ ಹೋಗುವಂತೆ ಹೇಳುತ್ತಿದ್ದಾರೆ. ಆದರೂ ಕೇಳದೆ ಕೆಲವರು ಅಲ್ಲಿಯೇ ನಿಂತಿದ್ದರಿಂದ ಎಲ್ಲರನ್ನೂ ಬೈದು ವಾಪಸ್ ಕಳಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.
ಹಳೇ ಕೃತ್ಯಗಳಲ್ಲಿ ಭಾಗಿಯಾದವರ ವಿಚಾರಣೆ
ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ ನೀಡಿದ ಸೂಚನೆಯಂತೆ ದ.ಕ ಜಿಲ್ಲಾ ಪೊಲೀಸರ ಸಮನ್ವಯದಲ್ಲಿ ಕಮಿಷನರೇಟ್‌ನ ಹಿಂದಿನ ಅಪರಾಧಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮತ್ತು ವಿಚಾರಣೆಗೆ ಒಳಪಡಬೇಕಾದ ವ್ಯಕ್ತಿಗಳ ಮೇಲೆ ತನಿಖೆ ನಡೆಸಲಾಗುತ್ತಿದೆ.