Site icon Vistara News

Praveen Nettaru Murder: ಐವರು ಆರೋಪಿಗಳು ಇನ್ನೂ ನಾಪತ್ತೆ, ಎನ್‌ಐಎ ವಾಂಟೆಡ್‌ ಪಟ್ಟಿ

praveen nettaru murderers

ಬೆಂಗಳೂರು: ದಕ್ಷಿಣ ಕನ್ನಡದ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ (Praveen Nettaru Murder) ಪ್ರಕರಣದಲ್ಲಿ ಇನ್ನೂ ಐವರು ಆರೋಪಿಗಳು ನಾಪತ್ತೆಯಾಗಿದ್ದು, ಇವರಿಗಾಗಿ ಎನ್‌ಐಎ ವಾಂಟೆಡ್‌ ಲಿಸ್ಟ್‌ (NIA Wanted List) ಹೊರಡಿಸಿದೆ.

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ವಾಂಟೆಡ್‌ ಲಿಸ್ಟ್‌ಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ನಿಷೇಧಿತ ಪಿಎಫ್ಐ ಪ್ರಕರಣಗಳಲ್ಲಿ ನಾಪತ್ತೆಯಾಗಿರುವ ಆರೋಪಿಗಳಿದ್ದು, ಕರ್ನಾಟಕದ ಐವರು ಸೇರಿ 24 ಮಂದಿ ಆರೋಪಿಗಳ ಪಟ್ಟಿಯನ್ನು ಎನ್‌ಐಎ ಪ್ರಕಟಿಸಿದೆ. ಆರೋಪಿಗಳ ಪೋಟೊ ಸಹಿತ ಮಾಹಿತಿಯನ್ನು ಪ್ರಕಟಿಸಲಾಗಿದೆ.

ಆಂಧ್ರ ಹಾಗೂ ತೆಲಂಗಾಣದ ಮೂವರು, ಕೇರಳದ 11, ಕರ್ನಾಟಕದ ಐವರು ಹಾಗೂ ತಮಿಳುನಾಡಿನ ಐವರು ಎನ್‌ಐಎಗೆ ಬೇಕಾಗಿದ್ದಾರೆ. ಪಿಎಫ್ಐ ಪ್ರಕರಣಗಳಲ್ಲದೆ ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದರು. ಪಿಎಫ್ಐ ಬ್ಯಾನ್ ಆದ ಬಳಿಕ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಎನ್ಐಎಗೆ ಮಾಹಿತಿ ನೀಡುವಂತೆ ಮನವಿ‌ ಮಾಡಲಾಗಿದೆ. ಮಾಹಿತಿ ಹೊಂದಿದ್ದವರು ವಾಟ್ಸ್ಯಾಪ್ ಸಂದೇಶ ಅಥವಾ ಕರೆ ಮಾಡಿ ಹೇಳಬಹುದು.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳು ಇನ್ನೂ ಹಲವು ಪಿಎಫ್ಐ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪವಿದೆ. ಬೆಳ್ಳಾರೆ ಮುಸ್ತಫಾ, ಮಸೂಧ್ ಅಗ್ನಾಡಿ, ಮೊಹಮ್ಮದ್ ಷರೀಫ್ ಕೊಡಾಜೆ, ಉಮ್ಮರ್ ಅಲಿಯಾಸ್ ಉಮರ್ ಫಾರೂಕ್ ಮತ್ತು ಅಬೂಬ್ಬಕ್ಕರ್ ಸಿದ್ದಿಕ್ ಇನ್ನೂ ನಾಪತ್ತೆಯಾದವರು.

ಕುಂಭಕೋಣಂ ರಾಮಲಿಂಗಂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ತಮಿಳುನಾಡಿನ ಐವರು, ಪಾಲಕ್ಕಾಡ್ ಶ್ರೀನಿವಾಸ್ ಎಂಬಾತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕೇರಳದ ನಾಲ್ವರು ಆರೋಪಿಗಳು ಕೂಡ ಪಟ್ಟಿಯಲ್ಲಿದ್ದಾರೆ. ಪಿಎಫ್ಐಗೆ ನೇಮಕ, ಒಳಸಂಚು, ಸರ್ಕಾರದ ವಿರುದ್ಧ ಪಿತೂರಿ, ದೇಶದ ಸಮಗ್ರತೆ, ಏಕತೆಗೆ ಧಕ್ಕೆ ತರಲು ಯತ್ನಿಸಿದ ಆರೋಪಗಳನ್ನು ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಮಾಹಿತಿಯನ್ನು ಎನ್ಐಎ ಕಲೆ ಹಾಕುತ್ತಿದೆ.

ಇದನ್ನೂ ಓದಿ: Praveen Nettaru: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇನ್ನೊಂದು ಚಾರ್ಜ್‌ಶೀಟ್‌ ಸಲ್ಲಿಕೆ

Exit mobile version